
ಗೆಟ್ಟಿ ಚಿತ್ರ
ಮಧುಮೇಹದ ಸಮಸ್ಯೆ ಇರುವವರು ಹಣ್ಣು ಸೇವಿಸಬಾರದು ಎಂದು ಹೇಳಲಾಗುತ್ತದೆ. ಆದರೆ, ಯಾವ ಹಣ್ಣನ್ನು ಸೇವಿಸಬಹುದು ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಹಣ್ಣುಗಳಿಂದ ದೇಹಕ್ಕೆ ಅಗತ್ಯ ಪೋಷಕಾಂಶಗಳಾದ ಫೈಬರ್, ವಿಟಮಿನ್, ಖನಿಜ ಹಾಗೂ ಆ್ಯಂಟಿ ಆಕ್ಸಿಡೆಂಟ್‌ಗಳನ್ನು ಒದಗಿಸುತ್ತವೆ. ಹಾಗಾಗಿ ಹಣ್ಣುಗಳ ಸೇವನೆ ಸದೃಢ ದೇಹಕ್ಕೆ ಅಗತ್ಯ.
ಸೂಕ್ತವಾದ ಹಣ್ಣುಗಳನ್ನು, ಸರಿಯಾದ ಪ್ರಮಾಣದಲ್ಲಿ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣದಲ್ಲಿಡಲು ಸಹಕಾರಿಯಾಗುತ್ತದೆ. ಹಾಗಾಗಿ ಮಧುಮೇಹವಿರುವ ರೋಗಿಗಳು ಯಾವ ಹಣ್ಣುಗಳನ್ನು ಸೇವಿಸಬೇಕು ಎಂಬುದರ ಕುರಿತು ಆಹಾರ ಮತ್ತು ಪೌಷ್ಟಿಕಾಂಶ ತಜ್ಞೆ ಡಾ. ಭಾರತಿ ಕುಮಾರ್ ತಿಳಿಸಿದ್ದಾರೆ.
ಮಧುಮೇಹ ರೋಗಿಗಳು ತಿನ್ನಬಹುದಾದ ಹಣ್ಣುಗಳು:
ಮಧ್ಯಮ ಹಾಗೂ ಕಡಿಮೆ ಪ್ರಮಾಣದ ಗ್ಲೈಸೆಮಿಕ್ ಇಂಡೆಕ್ಸ್ (ಜಿಐ) ಹೊಂದಿರುವ ಹಣ್ಣುಗಳನ್ನು ಮಧುಮೇಹ ರೋಗಿಗಳು ಸೇವಿಸಬಹುದು. ಇಂತಹ ಹಣ್ಣುಗಳಲ್ಲಿ ಫೈಬರ್ ಅಂಶ ಸಮೃದ್ಧವಾಗಿದ್ದು, ರಕ್ತದಲ್ಲಿ ಸಕ್ಕರೆ ನಿಯಂತ್ರಣ ಪ್ರಕ್ರಿಯೆಗೆ ಸಹಕಾರಿಯಾಗಿದೆ.
ಸೇಬು: ಸೇಬಿನಲ್ಲಿ ‘ಫೈಬರ್’ ಹಾಗೂ ‘ವಿಟಮಿನ್ ಸಿ’ ಸಮೃದ್ಧವಾಗಿರುತ್ತದೆ. ಇದನ್ನು ಜೀರ್ಣಿಸಲು ದೇಹ ಹೆಚ್ಚು ಸಮಯ ತೆಗೆದುಕೊಳ್ಳುವುದರಿಂದ ಸಕ್ಕರೆ ಪ್ರಮಾಣ ಕಡಿಮೆ ಮಾಡಲು ಸಹಕಾರಿಯಾಗಿದೆ.
ಪೇರಳೆ: ರಕ್ತದಲ್ಲಿನ ಸಕ್ಕರೆ ಪ್ರಮಾಣದ ನಿಯಂತ್ರಣಕ್ಕೆ ಪೇರಳೆ ಅತ್ಯುತ್ತಮ ಹಣ್ಣಾಗಿದೆ. ಕಡಿಮೆ ‘ಜಿಐ’ ಮತ್ತು ಹೆಚ್ಚು ‘ಫೈಬರ್’ ಹೊಂದಿದೆ.
ಪಪ್ಪಾಯಿ: ‘ಆಂಟಿ ಆಕ್ಸಿಡೆಂಟ್’ಗಳಿಂದ ಸಮೃದ್ಧವಾಗಿರುವುದರಿಂದ ಜೀರ್ಣಕ್ರಿಯೆಗೆ ಉಪಯುಕ್ತವಾಗಿದೆ.
ಕಿತ್ತಳೆ ಮತ್ತು ಇತರ ಸಿಟ್ರಸ್ ಹಣ್ಣುಗಳು: ಸಿಟ್ರಸ್ ಹಣ್ಣುಗಳಲ್ಲಿ ‘ವಿಟಮಿನ್ ಸಿ’ ಸಮೃದ್ಧವಾಗಿರುತ್ತದೆ. ಕಡಿಮೆ ಜಿಐ ಇರುವುದರಿಂದ ಮಿತ ಪ್ರಮಾಣದಲ್ಲಿ ಸೇವಿಸಿದರೆ ಸುರಕ್ಷಿತ.
ಪಿಯರ್ಸ್: ಈ ಹಣ್ಣು ಕರಗುವ ಫೈಬರ್ ಹೊಂದಿದ್ದು, ಸಕ್ಕರೆಯನ್ನು ತ್ವರಿತವಾಗಿ ಹೀರಿಕೊಳ್ಳುತ್ತದೆ ಎಂದು ವೈದ್ಯರು ಹೇಳುತ್ತಾರೆ.
ಬೆರ್ರಿ ಹಣ್ಣುಗಳು (ಸ್ಟ್ರಾಬೆರ್ರಿ, ಬ್ಲೂಬೆರ್ರಿ, ಬ್ಲ್ಯಾಕ್‌ಬೆರ್ರಿ): ‘ಆಂಟಿಆಕ್ಸಿಡೆಂಟ್’ಗಳಿಂದ ತುಂಬಿರುವ ಈ ಹಣ್ಣುಗಳಲ್ಲಿ ಸಕ್ಕರೆ ಅಂಶ ಕಡಿಮೆ ಪ್ರಮಾಣದಲ್ಲಿರುತ್ತದೆ.
ದಾಳಿಂಬೆ: ಇದು ಹೃದಯದ ಆರೋಗ್ಯಕ್ಕೆ ಉತ್ತಮ ಹಣ್ಣಾಗಿದೆ. ಇದು ಉರಿಯೂತ ನಿವಾರಕ ಗುಣಗಳನ್ನು ಹೊಂದಿದೆ.
ಕಿವಿ ಹಣ್ಣು: ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸಲು ಸಹಾಯ ಮಾಡುವುದರ ಜೊತೆಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಜ್ಯೂಸ್ ಕುಡಿಯುವುದಕ್ಕಿಂತ ಹಣ್ಣುಗಳನ್ನು ತಿನ್ನುವುದು ಉತ್ತಮ. ಏಕೆಂದರೆ ಜ್ಯೂಸ್ ಮಾಡುವಾಗ ಫೈಬರ್ ಅಂಶ ನಷ್ಟವಾಗುತ್ತದೆ ಎಂದು ವೈದ್ಯರಾದ ಡಾ.ಭಾರತಿ ಕುಮಾರ್ ಅವರು ಹೇಳುತ್ತಾರೆ.
(ಡಾ.ಭಾರತಿ ಕುಮಾರ್, ನ್ಯೂಟ್ರಿಷನಿಸ್ಟ್, ಫೋರ್ಟಿಸ್ ಆಸ್ಪತ್ರೆ, ಬೆಂಗಳೂರು)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.