ದೀಪಾವಳಿ ಅಂದ ತಕ್ಷಣ ತರಹೇವಾರಿ ದೀಪಗಳ ಜೊತೆಗೆ ಚಿತ್ತಾಕರ್ಷಕ ಪಟಾಕಿಗಳು ಕಣ್ಮನ ಸೆಳೆಯುತ್ತವೆ. ಆದರೆ ಅದೇ ಪಟಾಕಿಗಳಿಂದ ನಮ್ಮ ಚರ್ಮಕ್ಕೆ ಆಗುವ ಹಾನಿ ಅದೆಷ್ಟು ಗೊತ್ತಾ? ಪಟಾಕಿಗಳು ಹೊರ ಹಾಕುವ ಸಲ್ಫರ್ ಡೈ ಆಕ್ಸೈಡ್ , ಲೋಹದ ಅಂಶಗಳು, ಹೊಗೆ ಈ ಎಲ್ಲಾ ಅಂಶಗಳು ನಿಮ್ಮ ತ್ವಚೆಯನ್ನು ಹಾಳು ಮಾಡುವುದರಲ್ಲಿ ಮುಂದಿರುತ್ತವೆ.
ಈ ಕಾರಣಕ್ಕೆ ದೀಪಾವಳಿಯ ವೇಳೆ ಪಟಾಕಿಯಿಂದ ತ್ವಚೆಗಾಗುವ ಹಾನಿಯನ್ನು ಹೇಗೆ ತಪ್ಪಿಸಿಕೊಳ್ಳಬೇಕು ಎಂಬುದಕ್ಕೆ ಇಲ್ಲಿವೆ ಉಪಯುಕ್ತ ಸಲಹೆಗಳು.
• ಹೊರಗಡೆಯಿಂದ ಮನೆಗೆ ಬಂದ ತಕ್ಷಣ ಕೂಡಲೇ ಮುಖ ತೊಳೆಯಿರಿ.
• ನಿಮ್ಮ ತ್ವಚೆಗೆ ಹೊಂದುವ ಕ್ಲೆನ್ಸರ್ ಮೂಲಕ ಮುಖ ತೊಳೆದು ನಂತರ ಸೆರಾಮೈಡ್ಸ್ ಅಥವಾ ಅಲೊವೆರಾವುಳ್ಳ ಮಾಯಿಶ್ಚರೈಜರ್ ಬಳಸಿ
• ನಿಮಗೆ ಆಸ್ತಮಾ ಇದ್ದಲ್ಲಿ ಅಥವಾ ಸೂಕ್ಷ್ಮ ತ್ವಚೆಯುಳ್ಳವರಾಗಿದ್ದಲ್ಲಿ ಪಟಾಕಿ ಹೆಚ್ಚಾಗಿ ಸಿಡಿಸುವ ಸಮಯದಲ್ಲಿ ಹೊರಗೆ ಹೋಗುವುದನ್ನ ತಪ್ಪಿಸಿ.
ಡಯಟ್ ಹೀಗಿರಲಿ
• ಅತಿಯಾದ ಸಿಹಿ ಹಾಗೂ ಕರಿದ ಪದಾರ್ಥಗಳು ಮೊಡವೆ ಅಥವಾ ಉರಿಯೂತಕ್ಕೆ ಕಾರಣವಾಗಬಹುದು.
• ಹಬ್ಬದೂಟದಲ್ಲಿ ಆ್ಯಂಟಿ ಆಕ್ಸಿಡೆಂಟ್ ಸಮತೋಲನದಲ್ಲಿರುವಂತೆ ನೋಡಿಕೊಳ್ಳಿ. ಅಂದರೆ ಹಣ್ಣು, ಸೊಪ್ಪು, ತರಕಾರಿ ಸೇವಿಸಿ.
• ಪ್ರತಿದಿನ ಒಂದು ಬಟ್ಟಲು ಮೊಸರು ಹೊಟ್ಟೆಯ ಆರೋಗ್ಯವನ್ನು ಕಾಪಾಡುವುದರ ಜೊತೆಗೆ ನಿಮ್ಮ ಚರ್ಮವನ್ನೂ ಆರೋಗ್ಯಕರವಾಗಿರಿಸುತ್ತದೆ.
ಸಾಮಾನ್ಯವಾಗಿ ಹಬ್ಬ ಅಥವಾ ಸಮಾರಂಭದ ವೇಳೆ ನೀರು ಸೇವನೆ ಕಡಿಮೆ ಮಾಡುತ್ತೇವೆ. ಹಾಗೆಯೇ ಸಿಹಿ ಅಥವಾ ಚಹಾ, ಕಾಫಿಯಂಥಹ ಪಾನೀಯಗಳ ಸೇವನೆ ಹೆಚ್ಚಾಗಿರುತ್ತದೆ. ಇದರ ಪರಿಣಾಮವಾಗಿ ಚರ್ಮವು ಹೊಳಪು ಕಳೆದುಕೊಳ್ಳುತ್ತದೆ. ಹಾಗಾಗಿ ಈ ಕೆಳಗಿನ ಸಲಹೆಗಳನ್ನು ಪಾಲಿಸಿ.
• ಹೆಚ್ಚಿನ ಪ್ರಮಾಣದಲ್ಲಿ ನೀರು ಸೇವಿಸಿ. ನೀರಿಗೆ ಲಿಂಬು ಅಥವಾ ಪುದೀನ ಸೇರಿಸಿ ಕುಡಿದರೆ ಉತ್ತಮ.
• ನೀರಿನ ಪ್ರಮಾಣ ಹೆಚ್ಚಾಗಿರುವ ಸೌತೆಕಾಯಿ, ಕಿತ್ತಳೆ ಮತ್ತು ದಾಳಿಂಬೆ ಹಣ್ಣುಗಳನ್ನ ಹೆಚ್ಚಾಗಿ ಸೇವಿಸಿ.
• ಚರ್ಮರಾತ್ರಿಯ ವೇಳೆಗೆ ಒಣಗಿದಂತಾಗಿರುವುದರಿಂದ ಹೈಲರಾನಿಕ್ ಆ್ಯಸಿಡ್‌ನೊಂದಿಗೆ ಹೈಡ್ರೇಟಿಂಗ್ ಸೀರಮ್ ಬಳಸಿ.
• ಮಾಲಿನ್ಯದಿಂದಾಗಿ ಹಾನಿಕಾರಕ ವಿಕಿರಣಗಳಿಂದ ತಪ್ಪಿಸಿಕೊಳ್ಳಲು ಹಗಲಿನ ವೇಳೆ ಸನ್‌ಸ್ಕ್ರೀನ್ ಲೋಷನ್ (SPF 30 ಅಥವಾ ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿರುವಂತೆ) ಬಳಸಿ.
• ನಿಮಗೆ ದೂಳಿನ ಅಲರ್ಜಿಯಿದ್ದರೆ, ಮೊಡವೆಗಳು, ಇಸುಬು ಅಥವಾ ಎಕ್ಸಿಮಾದಂಥಹ ಚರ್ಮದ ಸಮಸ್ಯೆಗಳಿದ್ದರೆ ಹೊರಗೆ ಹೋಗುವುದನ್ನ ಆದಷ್ಟು ತಪ್ಪಿಸಿ ಮತ್ತು ಆಗಾಗ ಮುಖ ಸ್ಪರ್ಶಿಸಬೇಡಿ.
ಪಟಾಕಿ ಸಿಡಿತದಿಂದ ಸುಟ್ಟಗಾಯಗಳಾಗದಂತೆ ತಡೆಯಲು
• ಕಾಟನ್ ಬಟ್ಟೆಗಳನ್ನ ಧರಿಸಿ – ದೊಗಳೆ ಅಥವಾ ಸಿಂಥೆಟಿಕ್ ಬಟ್ಟೆಗಳನ್ನ ಧರಿಸದಿರಿ
• ಪಟಾಕಿ ಸಿಡಿಸುವ ಸ್ಥಳದ ಹತ್ತಿರ ಒಂದು ಬಕೆಟ್‌ನಲ್ಲಿ ನೀರು ಅಥವಾ ಮರಳು ಇಡಿ
• ಆದಷ್ಟು ಬಯಲಿನಲ್ಲಿ ಪಟಾಕಿ ಸಿಡಿಸಿ – ಇದರಿಂದ ಬೇರೆಯವರಿಗೆ ಹಾನಿಯಾಗುವುದನ್ನ ತಪ್ಪಿಸಬಹುದು
• ಮಕ್ಕಳು ಪಟಾಕಿ ಸಿಡಿಸುವಾಗ ಜೊತೆಯಲ್ಲಿರಿ. ಪಟಾಕಿ ಇರಿಸಿದ ಸ್ಥಳದಿಂದ ದೂರ ಇರುವಂತೆ ನೋಡಿಕೊಳ್ಳಿ
• ಹೊರಗೆ ಹೋಗುವ ಮೊದಲು ಚರ್ಮಕ್ಕೆ ಮಾಯಿಶ್ಚರೈಸರ್ ಲೇಪಿಸಿಕೊಳ್ಳಿ, ಚರ್ಮವು ಜಿಡ್ಡಿನಿಂದ ಕೂಡಿದ್ದರೆ ಸುಟ್ಟ ಗಾಯಗಳಾಗುವುದನ್ನ ತಪ್ಪಿಸಬಹುದು.
ಹಬ್ಬದ ವೇಳೆ ಅಧಿಕ ಸಮಯದ ಮೇಕಪ್ ಮತ್ತು ಸಿಹಿ ಪದಾರ್ಥ ಸೇವನೆ, ಹೊಗೆ ಇದೆಲ್ಲದರಿಂದ ತೊಂದರೆಗೊಳಗಾದ ಚರ್ಮವನ್ನ ಮತ್ತೆ ಮೊದಲಿನಂತಾಗಿಸಲು ಈ ರೀತಿ ಮಾಡಿ
• ನಿಮ್ಮ ಮೇಕಪ್ ಅನ್ನು ಸಂಪೂರ್ಣವಾಗಿ ಮಿಸೆಲ್ಲಾರ್ ಅಥವಾ ಎಣ್ಣೆಯುಕ್ತ ಕ್ಲೆನ್ಸರ್‌ನಿಂದ ಸ್ವಚ್ಛಗೊಳಿಸಿ
• ತ್ವಚೆಗೆ ಹೊಂದುವ ಫೇಸ್‌ವಾಷ್ ಮತ್ತು ಮಾಯಿಶ್ಚರೈಜರ್ ಬಳಸಿ
ತ್ವಚೆಯ ಸಂರಕ್ಷಣೆ ತುಂಬಾ ಮುಖ್ಯವಾದದ್ದು, ಅದರಲ್ಲೂ ನಿಮಗೆ ಮೊಡವೆ, ಇಸುಬು ತರಹದ ಚರ್ಮದ ಸಮಸ್ಯೆಯಿದ್ದಲ್ಲಿ ಅತಿಯಾದ ಮೇಕಪ್ ಬೇಡ. ಹೊಗೆಯಿಂದ ದೂರವಿರಿ. ವೈದ್ಯರು ಸೂಚಿಸಿದ ಕ್ರೀಮ್‌ಗಳನ್ನು ತಪ್ಪದೇ ಬಳಸಿ. ಯಾವುದೇ ಚರ್ಮದ ಸಮಸ್ಯೆಗಳು ಕಂಡ ಬಂದಲ್ಲಿ ಕೂಡಲೇ ಚರ್ಮತಜ್ಞರನ್ನ ಸಂಪರ್ಕಿಸಿ ಸಲಹೆ ಪಡೆದುಕೊಳ್ಳಿ.
ಲೇಖಕರು: ಚರ್ಮರೋಗ ತಜ್ಞರು, ವಾಸವಿ ಆಸ್ಪತ್ರೆ, ಬೆಂಗಳೂರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.