
ಚಿತ್ರ: ಗೆಟ್ಟಿ
ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ನಿರ್ದಿಷ್ಟ ಬ್ರಾಂಡ್‌ನ ಮೊಟ್ಟೆಗಳಲ್ಲಿ ಕ್ಯಾನ್ಸರ್ ಉಂಟುಮಾಡಬಲ್ಲ ‘ಜೀನೋಟಾಕ್ಸಿಕ್’ ಕೂಡಿದೆ ಎಂಬ ವೀಡಿಯೋ ಹರಿದಾಡುತ್ತಿದೆ. ಈ ವಿಷಯ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಆತಂಕ ಉಂಟುಮಾಡಿದೆ. ಮೊಟ್ಟೆಗಳಲ್ಲಿ ನಿಷೇಧಿತ ಕ್ಯಾನ್ಸರ್‌ಕಾರಕ ಅಂಶವಿದೆ ಎಂಬ ವದಂತಿಗಳು ಹಬ್ಬಿವೆ. ಹಾಗಾದರೆ ನಿಜಕ್ಕೂ ಮೊಟ್ಟೆಯಲ್ಲಿ ಕ್ಯಾನ್ಸರ್ ಕಾರಕವಿದೆಯಾ?
ಮೊಟ್ಟೆಗಳು ಸ್ವತಃ ಕಾರ್ಸಿನೋಜೆನಿಕ್ ಅಲ್ಲ
ಮೊಟ್ಟೆಗಳು ಕ್ಯಾನ್ಸರ್ ಉಂಟುಮಾಡುತ್ತವೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಅಥವಾ ವೈದ್ಯಕೀಯ ಪುರಾವೆಗಳಿಲ್ಲ. ಮೊಟ್ಟೆಗಳು ಪೌಷ್ಟಿಕಾಂಶದಿಂದ ಸಮೃದ್ಧವಾದ ಆಹಾರವಾಗಿದ್ದು, ಉತ್ತಮ ಗುಣಮಟ್ಟದ ಪ್ರೋಟೀನ್, ಅತ್ಯವಶ್ಯಕ ಅಮೈನೊ ಆಮ್ಲ, ವಿಟಮಿನ್, ಕೋಲಿನ್ ಮತ್ತು ಸೂಕ್ಷ್ಮ ಖನಿಜಗಳನ್ನು ಒಳಗೊಂಡಿರುತ್ತದೆ. ಕೀಮೋಥೆರಪಿ ಅಥವಾ ರೇಡಿಯೊಥೆರಪಿ ಪಡೆಯುತ್ತಿರುವ ರೋಗಿಗಳನ್ನೂ ಒಳಗೊಂಡಂತೆ, ಆಸ್ಪತ್ರೆಯ ಆಹಾರ, ಆಂಕಾಲಜಿ ಪೌಷ್ಟಿಕಾಂಶಗಳು ಮತ್ತು ಶಸ್ತ್ರಚಿಕಿತ್ಸೆಯ ನಂತರದ ರೋಗಿಗಳು ಚೇತರಿಕೆ ಕಾಣಲು ಮೊಟ್ಟೆಯನ್ನು ನಿಯಮಿತವಾಗಿ ಸೇವಿಸಬೇಕು ಎಂದು ವೈದ್ಯರು ಸಲಹೆ ನೀಡುತ್ತಾರೆ.
ಮನುಷ್ಯನ ದೇಹಕ್ಕೆ ಮೊಟ್ಟೆಯಿಂದ ಯಾವುದೇ ಅಪಾಯವಿಲ್ಲ ಎಂದು ಸಂಶೋಧನೆಗಳು ಈಗಾಗಲೇ ದೃಢಪಡಿಸಿವೆ. ಒಂದು ವೇಳೆ ಮೊಟ್ಟೆಯಲ್ಲಿ ಇತರೆ ಹಾನಿಕಾರಕ ವಸ್ತುಗಳು ಸೇರಿದರೆ ಮಾತ್ರ ಮಾನವನಿಗೆ ಹಾನಿಯುಂಟು ಮಾಡುವ ಸಾಧ್ಯತೆ ಇದೆ. ಜೀನೋಟಾಕ್ಸಿಕ್ ಎಂಬ ವಸ್ತು ಕ್ಯಾನ್ಸರ್ ಕಾರಕವಾಗಿದೆ. ಜೀನೋಟಾಕ್ಸಿಕ್ ಮಾನವನ ಡಿಎನ್‌ಎಗೆ ಹಾನಿ ಮಾಡುವ ಸಾಮರ್ಥ್ಯವಿರುವ ರಾಸಾಯನಿಕ. ನಿರಂತರ ಡಿಎನ್‌ಎಯ ಹಾನಿ ಕಾರ್ಸಿನೋಜೆನೆಸಿಸ್‌ಗೆ ಕಾಯಿಲೆಗೆ ಕಾರಣವಾಗಬಹುದು.
ಅಂತರರಾಷ್ಟೀಯ ಸಂಸ್ಥೆಗಳು ನೈಟ್ರೋಫ್ಯೂರಾನ್ ಹಾಗೂ ಮೆಟಾಬಾಲೈಟ್ ಎಂಬ ಪಶು ವೈದ್ಯಕೀಯ ಆ್ಯಂಟಿಬಯೋಟಿಕ್‌ಗಳನ್ನು ಆಹಾರಕ್ಕಾಗಿ ಬಳಕೆ ಮಾಡುವ ಪ್ರಾಣಿಗಳಿಗೆ ನೀಡುವುದು ನಿಷೇಧಿಸಲಾಗಿದೆ. ಏಕೆಂದರೆ ಈ ಔಷಧ ಪ್ರಾಣಿಗಳ ದೇಹದಲ್ಲಿಯೇ ಉಳಿಯಬಹುದು. ಈ ಆ್ಯಂಟಿಬಯೋಟಿಕ್ ನೀಡಿದ ಪ್ರಾಣಿಗಳಲ್ಲಿ ಧೀರ್ಘಕಾಲದವರೆಗೆ ಈ ಅಂಶ ಉಳಿದಿರುವ ನಿದರ್ಶನಗಳಿವೆ. ಅಲ್ಲದೇ ಕೆಲವು ಪ್ರಾಯೋಗಿಕ ಮಾದರಿಗಳಲ್ಲಿ ಜೀನೋಟಾಕ್ಸಿಕ್ ಮತ್ತು ಕಾರ್ಸಿನೋಜೆನಿಕ್ ಪ್ರಾಣಿಗಳ ದೇಹದಲ್ಲಿ ಉಳಿದಿರುವ ಬಗ್ಗೆ ಸ್ಪಷ್ಟಪಡಿಸಿವೆ.
ಕಾರ್ಸಿನೋಜೆನೆಸಿಸ್ ಕ್ಯಾನ್ಸರ್‌ನ ಬಹು ಹಂತದ ಪ್ರಕ್ರಿಯೆಯಾಗಿದೆ. ಮೊಟ್ಟೆಗಳಲ್ಲಿ ಈ ಅಂಶವಿದೆ ಎಂದಿಟ್ಟುಕೊಂಡರೂ ತಕ್ಷಣದ ಕ್ಯಾನ್ಸರ್ ಅಪಾಯ ಉಂಟು ಮಾಡುವುದಿಲ್ಲ. ಸಮತೋಲಿತ ಆಹಾರದೊಳಗೆ ಮಿತವಾಗಿ ಮೊಟ್ಟೆಗಳನ್ನು ತಿನ್ನುವುದು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುವುದಿಲ್ಲ ಎಂದು ಸಂಶೋಧನೆಗಳು ಹೇಳಿವೆ.
ಮುನ್ನೆಚ್ಚರಿಕೆಗಳು:
ಮಕ್ಕಳು ಮತ್ತು ಗರ್ಭಿಣಿಯರು ಮೊಟ್ಟೆ ಸೇವನೆಯ ವಿಷಯದಲ್ಲಿ ಕಾಳಜಿವಹಿಸಬೇಕು. ಮೊಟ್ಟೆಗಳನ್ನು ವಿಶ್ವಾಸಾರ್ಹ ಉತ್ಪಾದಕರಿಂದ ಮಾತ್ರ ಕೊಂಡುಕೊಳ್ಳುವುದು ಉತ್ತಮ.
ವೈದ್ಯಕೀಯ ಆಂಕಾಲಜಿ ಮತ್ತು ಸಾರ್ವಜನಿಕ ಆರೋಗ್ಯ ಸಂಸ್ಥೆಗಳು ಹೇಳುವಂತೆ ಕಾರ್ಸಿನೋಜೆನಿಕ್ ಬಹು ಮೂಲಗಳಿಂದ ಬರುತ್ತದೆ. ಈ ಅಂಶ ಮನುಷ್ಯನ ದೇಹ ಸೇರುವುದು ಹಾನಿಕಾರಕವಾಗಿದೆ. ಈ ಅಂಶ ಮಾನವನ ದೇಹ ಸೇರುವ ಮೂಲಗಳು ಯಾವುವು ಎಂದರೆ.
ಸಂಸ್ಕರಿಸಿದ ಮಾಂಸ
ಸಂಯೋಜಕಗಳು ಮತ್ತು ಬಣ್ಣಗಳು
ತಂಬಾಕು ಮತ್ತು ಮದ್ಯ
ಪರಿಸರ ಮಾಲಿನ್ಯ
ಸೌಂದರ್ಯವರ್ಧಕಗಳು ಮತ್ತು ಕೂದಲು ಬಣ್ಣ
ಒಟ್ಟಾರೆ ಮೊಟ್ಟೆ ಸೇವನೆ ಕ್ಯಾನ್ಸರ್ ವ್ಯಕ್ತಿಗಳೂ ಸೇರಿದಂತೆ ಸೇವಿಸಬಹುದಾದ ಪೋಟೀನ್‌ಯುಕ್ತ ಆಹಾರದ ಮೂಲವಾಗಿದೆ. ಮೊಟ್ಟೆಯಿಂದ ಕ್ಯಾನ್ಸರ್ ಬರುತ್ತದೆ ಎಂಬುದರ ಕುರಿತು ಯಾವುದೇ ಪುರಾವೆಗಳಿಲ್ಲ. ಆದರೆ ನಿಯಮಿತ ಸೇವನೆ ಆರೋಗ್ಯಕ್ಕೆ ಒಳ್ಳೆಯದು. ಒಂದು ವೇಳೆ ಮೊಟ್ಟೆಯಲ್ಲಿ ಇತರೆ ಹಾನಿಕಾರಕ ವಸ್ತುಗಳು ಸೇರಿದರೆ ಮಾತ್ರ ಅಪಾಯ, ಇಲ್ಲದಿದ್ದರೆ ಯಾವುದೇ ಅಪಾಯವಿಲ್ಲ.
ಲೇಖಕರು : ಡಾ. ಸ್ನೇಹಾ ಕೊಮ್ಮಿನೇನಿ, ಸಲಹೆಗಾರ, ವೈದ್ಯಕೀಯ ಆಂಕಾಲಜಿ, ಆಸ್ಟರ್ ಆರ್‌ವಿ ಆಸ್ಪತ್ರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.