ADVERTISEMENT

ಕೋವಿಡ್-19 ಲಸಿಕೆ ತೆಗೆದುಕೊಳ್ಳುತ್ತಿದ್ದೀರಾ? ಮೊದಲು ಈ ಅಂಶಗಳನ್ನು ಗಮನಿಸಿ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2021, 10:11 IST
Last Updated 24 ಮಾರ್ಚ್ 2021, 10:11 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

45 ವಯಸ್ಸಿಗಿಂತ ಮೇಲ್ಪಟ್ಟವರೆಲ್ಲರಿಗೂ ಏಪ್ರಿಲ್ 1ರಿಂದ ಲಸಿಕೆ ಲಭ್ಯವಾಗಲಿದೆ ಎಂದು ಕೇಂದ್ರ ಸರ್ಕಾರ ಘೋಷಿಸಿರುವ ಹಿನ್ನೆಲೆಯಲ್ಲಿ, ದೇಶದಲ್ಲಿ ಲಭ್ಯವಿರುವ ಕೋವಿಶೀಲ್ಡ್ ಅಥವಾ ಕೋವ್ಯಾಕ್ಸಿನ್ ಲಸಿಕೆ ತೆಗೆದುಕೊಳ್ಳುವುದಕ್ಕೆ ಮುಂಚಿತವಾಗಿ ನೀವು ತಿಳಿದಿರಬೇಕಾದ ಮಾಹಿತಿ ಇಲ್ಲಿದೆ. (20-1-2021ರಂದು ಪ್ರಕಟವಾದ ಲೇಖನವಿದು).

ಕೋವಿಡ್-19 ಲಸಿಕೆ ಎಂದೊಡನೆ ಪ್ರಪಂಚಾದ್ಯಂತ ಅನೇಕ ದೇಶಗಳ ವೈದ್ಯಕೀಯ ಸಂಸ್ಥೆಗಳ ಅವಿರತ ಪರಿಶ್ರಮದಿಂದ ಹೊರಹೊಮ್ಮಿರುವ ಫೈಜರ್, ಮಾಡರ್ನಾ ಹೀಗೆ ಹತ್ತು ಹಲವು ಲಸಿಕೆಗಳನ್ನು ನಾವು ಮಾಧ್ಯಮಗಳಿಂದ ತಿಳಿಯಬಹುದು. ಆದರೆ ನಮ್ಮ ದೇಶದ ಆಕ್ಸ್‌ಫರ್ಡ್ ಆಸ್ಟ್ರಾಜೆನೆಕಾದ 'ಕೋವಿಶೀಲ್ಡ್' ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಕೊಡುಗೆಯಾದರೆ 'ಕೋವ್ಯಾಕ್ಸಿನ್' ಎಂಬ ಲಸಿಕೆಯು ಭಾರತ್ ಬಯೋಟಿಕ್ ಸಂಸ್ಥೆಯ ಕೊಡುಗೆಯಾಗಿದೆ.

ಏನಿದು ಕೋವಿಶೀಲ್ಡ್? ಕೋವಿಶೀಲ್ಡ್‌ನಲ್ಲಿ ಬಳಸಲಾಗಿರುವ ರಾಸಾಯನಿಕ ಪದಾರ್ಥಗಳ ವಿವರ, ಯಾರೆಲ್ಲ ಲಸಿಕೆ ತೆಗೆದುಕೊಳ್ಳಬಹುದು, ಯಾರಿಗೆಲಸಿಕೆ ಸೂಕ್ತವಲ್ಲ, ಲಸಿಕೆಯಿಂದಾಗುವ ಅಡ್ಡ ಪರಿಣಾಮಗಳು ಹೀಗೆ ಹಲವಾರು ಪ್ರಶ್ನೆಗಳ ವಾಸ್ತವ ಚಿತ್ರದ ಬಗ್ಗೆ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ADVERTISEMENT

ಲಸಿಕೆಯನ್ನು ತೆಗೆದುಕೊಳ್ಳುವ ಮುನ್ನ ತಿಳಿದುಕೊಳ್ಳಬೇಕಾದ ವಾಸ್ತವ ಅಂಶಗಳ ಮಾಹಿತಿ:

*ಎಲ್ಲರಿಗೂ ತಿಳಿದಿರುವಂತೆ ಕೋವಿಡ್-19 ಮಹಾಮಾರಿಯು ಒಂದು ವೈರಾಣುವಿನ ಸೋಂಕಾಗಿದ್ದು, ಉಸಿರಾಟದಿಂದ ಅಥವಾ ಕೆಮ್ಮುವುದರಿಂದ ಹೊರಹೊಮ್ಮುವ ಸೋಂಕಿತ ಹನಿಗಳಿಂದ ಹರಡಬಹುದಾಗಿರುತ್ತದೆ. ಕೋವಿಶೀಲ್ಡ್ ಲಸಿಕೆಯು ಇಂತಹ ಸೋಂಕನ್ನು ತಡೆಯಲು 18 ವರ್ಷದ ಮೇಲ್ಪಟ್ಟ ವಯಸ್ಕರಲ್ಲಿ ಬಳಸಬಹುದಾಂತಹ ಲಸಿಕೆಯಾಗಿರುತ್ತದೆ.

*ಈ ಲಸಿಕೆಯನ್ನು ತೆಗೆದುಕೊಳ್ಳುವ ಮುನ್ನ ಆರೋಗ್ಯ ಕಾರ್ಯಕರ್ತರ ಬಳಿ ತಮ್ಮಲ್ಲಿರುವ ವೈದ್ಯಕೀಯ ಸ್ಥಿತಿಗಳ ಬಗ್ಗೆ ಪೂರ್ಣ ಮಾಹಿತಿ ಕೊಡುವುದು ಅವಶ್ಯಕ. ಯಾವುದಾದರೂ ಅಲರ್ಜಿ, ಜ್ವರ, ರಕ್ತದ ಸ್ರಾವದ ತೊಂದರೆ ಅಥವಾ ರಕ್ತವನ್ನು ತೆಳುವಾಗಿಸಲು ಬಳಸುವ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರೆ, ಆಂತರಿಕ ರೋಗನಿರೋಧಕ ಶಕ್ತಿಯನ್ನು ಕುಂದಿಸುವ ಕಾಯಿಲೆಗಳಿದ್ದರೆ, ಗರ್ಭಿಣಿ ಸ್ತ್ರಿಯರು, ಎದೆಹಾಲುಣಿಸುವ ತಾಯಂದಿರು ಅಥವಾ ಬೇರೆ ಯಾವುದಾದರೂ ಕೋವಿಡ್-19 ಲಸಿಕೆಯನ್ನು ಪಡೆದಿದ್ದರೆ ಅದರ ಮಾಹಿತಿಯನ್ನು ನೀಡಬೇಕಾಗುತ್ತದೆ.

*ಬೇರೆ ಯಾವುದಾದರೂ ಲಸಿಕೆಗೆ ಅಲರ್ಜಿ ಇದ್ದರೆ ಅಥವಾ ಲಸಿಕೆಯನ್ನು ತಯಾರಿಸಲು ಬಳಸಿರುವ ರಾಸಾಯನಿಕಗಳಿಗೆ ಅಲರ್ಜಿ ಇದ್ದರೆ ಇದನ್ನು ಬಳಸುವುದು ಸೂಕ್ತವಲ್ಲ.

*ಕೋವಿಶೀಲ್ಡ್ ನಲ್ಲಿ L–ಹಿಸ್ಟಿಡೀನ್, L1-ಹಿಸ್ಟಿಡೀನ್ ಹೈಡ್ರೋಕ್ಲೋರೈಡ್ ಮಾನೋಹೈಡ್ರೇಟ್, ಮೆಗ್ನೀಷಿಯಂ ಕ್ಲೋರೈಡ್ ಹೆಕ್ಸ್ ಹೈಡ್ರೇಟ್, ಪಾಲಿಸಾರ್ಬೆಟ್, ಇತೆನಾಲ್, ಸೋಡಿಯಂ ಕ್ಲೋರೈಡ್, EDTA ಹಾಗೂ ನೀರನ್ನು ಬಳಸಲಾಗಿದೆ.

*ಈ ಲಸಿಕೆಯನ್ನು ತೋಳಿನ ಸ್ನಾಯುಗಳಿಗೆ ಕೊಡಲಾಗುವುದು. 0.5 ml ನಷ್ಟು ಲಸಿಕೆಯನ್ನು ಒಮ್ಮೆಗೆ ಬಳಸಲಾಗುವುದು. ನಾಲ್ಕರಿಂದ ಆರು ವಾರಗಳ ಅಂತರದಲ್ಲಿ ಇನ್ನೊಂದು ಡೋಸ್‌ನ್ನು ನೀಡಲಾಗುವುದು. ಎರಡನೆಯ ಡೋಸ್‌ನ್ನು 12ನೇ ವಾರದ ವರೆಗೂ ಪಡೆಯಬಹುದಾಗಿದೆ. ಅಧ್ಯಯನಗಳ ಪ್ರಕಾರ ಎರಡನೆಯ ಡೋಸ್‌ನ್ನು ತೆಗೆದುಕೊಂಡ 4ನೇ ವಾರದಿಂದ ಈ ಸೋಂಕಿನ ವಿರುದ್ಧ ರಕ್ಷಣೆಯನ್ನು ಪಡೆಯಬಹುದಾಗಿದೆ.

ಲಸಿಕೆಯಿಂದಾಗುವ ಅಡ್ಡ ಪರಿಣಾಮಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ:

*ಸಾಮಾನ್ಯ ಅಡ್ಡ ಪರಿಣಾಮಗಳು: ನೋವು, ಬಿಸಿಯಾಗುವುದು, ಕೆಂಪಾಗುವುದು, ತುರಿಕೆ, ಊತ ಇವುಗಳು ಲಸಿಕೆ ನೀಡಿದ ಸ್ಥಳದಲ್ಲಿ ಕಾಣಿಸಿಕೊಳ್ಳಬಹುದು. ಸ್ವಲ್ಪ ಮಟ್ಟಿನ ಸುಸ್ತು, ಚಳಿ, ಸ್ನಾಯು ಸೆಳೆತ ಸಾಮಾನ್ಯ.

*ಹತ್ತು ಜನರಲ್ಲಿ ಒಬ್ಬರಿಗೆ ಲಸಿಕೆ ನೀಡಿದ ಸ್ಥಳದಲ್ಲಿ ಗಂಟು, ಜ್ವರ, ವಾಂತಿ, ಫ್ಲೂನಂತ ಲಕ್ಷಣಗಳು ಕಾಣಬಹುದು.

*ನೂರರಲ್ಲಿ ಒಬ್ಬರಿಗೆ ತಲೆ ತಿರುಗುವುದು, ಹೊಟ್ಟೆನೋವು, ಗ್ರಂಥಿಗಳ ಊತ, ಬೆವರುವುದು, ಮೈಯಲ್ಲಿ ದದ್ದುಗಳನ್ನು ಕಾಣಬಹುದಾಗಿದೆ.

ಕೋವಿಶೀಲ್ಡ್ ಲಸಿಕೆಯಲ್ಲಿ SARS-COV-2ನ ಬಳಕೆ ಇಲ್ಲದೆ ಇರುವುದರಿಂದ ಸೋಂಕಾಗುವ ಸಂಭವ ಕಡಿಮೆ.

- ಡಾ.ಸ್ಮಿತಾ ಜೆ.ಡಿ
ಓರಲ್ ಮೆಡಿಸಿನ್ ಅಂಡ್ ರೇಡಿಯೋಲಾಜಿ ತಜ್ಞರು, ಹಿರಿಯ ದಂತ ವೈದ್ಯರು,
ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ, ಗುಂಡ್ಲುಪೇಟೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.