ADVERTISEMENT

ಆರೋಗ್ಯ | ಪರೀಕ್ಷೆ ಒತ್ತಡ ಬೇಡ: ಒತ್ತಾಸೆ ಇರಲಿ

ಪ್ರಜಾವಾಣಿ ವಿಶೇಷ
Published 3 ಮಾರ್ಚ್ 2025, 23:30 IST
Last Updated 3 ಮಾರ್ಚ್ 2025, 23:30 IST
   
ವಿದ್ಯಾರ್ಥಿಗಳು ಪರೀಕ್ಷೆಗೆ ತಯಾರಾಗುತ್ತಿರುವಾಗ ಮನೆಯ ವಾತಾವರಣ ಅವರ ಓದಿಗೆ ಪೂರಕವಾಗಿರತಕ್ಕದ್ದು. ಶಾಂತಿಯುತ, ಸಹಕಾರಪೂರ್ಣ ವಾತಾವರಣವು ವಿದ್ಯಾರ್ಥಿಯ ಆತ್ಮವಿಶ್ವಾಸವನ್ನು ಹೆಚ್ಚಿಸಿ, ಪರೀಕ್ಷಾ ಆತಂಕವನ್ನು ಕಡಿಮೆಗೊಳಿಸಿ, ಏಕಾಗ್ರತೆಯನ್ನು ವೃದ್ಧಿಸುತ್ತದೆ. ಮನೆಯೆಂಬುದು ಶಾಂತಿಧಾಮವಾಗಬೇಕು. ಪರೀಕ್ಷಾ ಸಮಯದಲ್ಲಿ ವಾತಾವರಣ ತಿಳಿಯಾಗಿರಬೇಕು. ವಿದ್ಯಾರ್ಥಿಗಳು ಬೇರೆ ಬೇರೆ ಕಾರಣಗಳಿಂದ ಅದಾಗಲೇ ಒತ್ತಡಕ್ಕೆ ಒಳಗಾಗಿರುತ್ತಾರೆ. ನಿರೀಕ್ಷೆಗಳು, ಸಹಪಾಠಿಗಳ ಸ್ಪರ್ಧೆ, ಸೋಲಿನ ಭಯ – ಇವೆಲ್ಲ ಅವರನ್ನು ಕಾಡುತ್ತಿರುತ್ತವೆ. ಈ ಸಂದರ್ಭದಲ್ಲಿ ಮನೆಯವರ ಮನೋಭಾವ ಈ ಒತ್ತಡಗಳನ್ನು ಹೆಚ್ಚಿಸಲೂಬಹುದು ಅಥವಾ ಕಡಿಮೆ ಮಾಡಲೂಬಹುದು. ವ್ಯವಸ್ಥಿತ ಕುಟುಂಬ ಮತ್ತು ಶಾಂತಿಯುತ ಮನೆಯ ವಾತಾವರಣ ವಿದ್ಯಾರ್ಥಿಯ ಏಕಾಗ್ರತೆಯನ್ನು ಹೆಚ್ಚಿಸುತ್ತದೆ ಮತ್ತು ಗ್ರಹಣ ಸಾಮರ್ಥ್ಯವನ್ನು ವೃದ್ಧಿಸುತ್ತದೆ. ಜೊತೆಗೆ ಪರೀಕ್ಷೆಯನ್ನು ಸಮಾಧಾನ ಚಿತ್ತದಿಂದ ಎದುರಿಸುವ ಧೈರ್ಯವನ್ನು ನೀಡುತ್ತದೆ. ಮನೆಯ ಗದ್ದಲಗಳು, ಅಶಾಂತಿಯ ವಾತಾವರಣ, ಕುಟುಂಬದ ಅತಿ ಹೆಚ್ಚಿನ ನಿರೀಕ್ಷೆಗಳು ವಿದ್ಯಾರ್ಥಿಯಲ್ಲಿ ಬೇಸರವನ್ನು ಮತ್ತು ಅಸಹಾಯಕತೆಯನ್ನು ಮೂಡಿಸಿ ಅಧ್ಯಯನದಲ್ಲಿ ಅವನು/ಅವಳು ಏಕಾಗ್ರತೆಯನ್ನು ಕಳೆದುಕೊಳ್ಳುವ ಸಾಧ್ಯತೆಗಳಿವೆ.

ಜೋರು ದನಿ ಮತ್ತು ಟಿ.ವಿ.

ಟಿ.ವಿ., ಮೊಬೈಲ್ ಫೋನ್ ಸಂಭಾಷಣೆ ಮತ್ತು ಜೋರು ದನಿಯ ಮಾತುಕತೆಗಳು ವಿದ್ಯಾರ್ಥಿಗಳ ಏಕಾಗ್ರತೆಯನ್ನು ಹಾಳುಮಾಡುತ್ತವೆ. ಕೆಲವು ಮನೆಗಳಲ್ಲಿ ಯಾರೇನೇ ಕೆಲಸ ಮಾಡುತ್ತಿದ್ದರೂ ಟಿ.ವಿ. ಜೋರು ದನಿಯಲ್ಲಿ ಮೊಳಗುತ್ತಿರುತ್ತದೆ. ವಾರ್ತೆಗಳು, ಸೀರಿಯಲ್‌ಗಳು, ಕ್ರೀಡಾ ಚಾನೆಲ್‌ಗಳು ಓಡುತ್ತಿರುತ್ತವೆ. ಪರೀಕ್ಷಾ ಸಮಯದಲ್ಲಿ ಹಿರಿಯರು ತಾವೇ ಖುದ್ದಾಗಿ ಇವುಗಳಿಂದ ದೂರ ಉಳಿಯಬೇಕು, ಅಥವಾ ಹೆಡ್‌ಫೋನ್‌ಗಳನ್ನು ಬಳಸಬೇಕು. ವಿದ್ಯಾರ್ಥಿಯೊಬ್ಬ ಕೋಣೆಯಲ್ಲಿ ಓದುತ್ತಿರುವಾಗ ನಡುಮನೆಯಲ್ಲಿ ಜೋರಾಗಿ ಕ್ರಿಕೆಟ್ ಆಟದ ವೀಕ್ಷಣೆ, ಗದ್ದಲ ನಡೆಯುತ್ತಿದ್ದರೆ ಆತ ಓದುವುದಾದರೂ ಹೇಗೆ? ವಿದ್ಯಾರ್ಥಿಯ ಮೇಲೂ ಅತಿ ಒತ್ತಡ ತಾರದೆ ಅವನೂ ಸೇರಿದಂತೆ ದಿನಕ್ಕೆ ಇಂತಿಷ್ಟು ನಿಮಿಷದ ವೀಕ್ಷಣೆ ಎಂಬ ನಿಯಮವನ್ನು ಪಾಲಿಸಬಹುದು. ಇಂದು ಹೇಗಿದ್ದರೂ ರೆಕಾರ್ಡಿಂಗ್ ಸೌಲಭ್ಯವಿದೆ. ತಮಗಿಷ್ಟವಾದ ಎಲ್ಲ ಕಾರ್ಯಕ್ರಮಗಳನ್ನು ರೆಕಾರ್ಡ್ ಮಾಡಿಕೊಂಡು ಪರೀಕ್ಷೆ ಮುಗಿದ ನಂತರ ಎಲ್ಲರೂ ನೋಡಬಹುದು.

ಆರೋಗ್ಯಕರ ಆಹಾರ

ADVERTISEMENT

ಜಂಕ್‌ಫುಡ್‌ಗಳನ್ನು ಪರೀಕ್ಷಾ ಸಮಯದಲ್ಲಿ ಮಕ್ಕಳು ಸೇವಿಸದಂತೆ ಜಾಗ್ರತೆ ವಹಿಸಬೇಕು. ಮೊದಲೇ ಆತಂಕದಲ್ಲಿರುವ ಕಾರಣ ಹೊಟ್ಟೆಯೂ ಆಮ್ಲವನ್ನು ಉತ್ಪತ್ತಿ ಮಾಡುತ್ತಿರುತ್ತದೆ. ಈ ಸಂದರ್ಭದಲ್ಲಿ ಚಿಪ್ಸ್, ಸಾಫ್ಟ್ ಡ್ರಿಂಕ್ಸ್‌, ಕರಿದ ಪದಾರ್ಥಗಳು, ಪಿಜ್ಜಾ ಬರ್ಗರ್ ಜಠರಾಮ್ಲವನ್ನು ಹೆಚ್ಚು ಮಾಡುತ್ತವೆ.ಪೌಷ್ಟಿಕ ಆಹಾರ, ಹಣ್ಣು, ಕಾಳುಗಳು ಮತ್ತು ಮನೆಯಲ್ಲೇ ತಯಾರಿಸಿದ ಆಹಾರ ದೇಹದ ಮತ್ತು ಮಾನಸಿಕ ಶಕ್ತಿಯನ್ನು ಹಾಗೂ ಏಕಾಗ್ರತೆಯನ್ನು ಕಾಪಾಡಿಕೊಳ್ಳಲು ನೆರವಾಗುತ್ತವೆ. ಓದುವ ಸಂದರ್ಭದಲ್ಲಿ ಮಕ್ಕಳಿಗೆ ಮಧ್ಯೆ ಮಧ್ಯೆ ಲಘು ಆಹಾರವನ್ನು ಮತ್ತು ಪಾನೀಯವನ್ನು ಕೊಡುವುದು ಒಳ್ಳೆಯದು. ಹಣ್ಣಿನ ರಸ, ಹರ್ಬಲ್ ಟೀ, ಪೌಷ್ಟಿಕಯುಕ್ತ ಲಘು ಆಹಾರ, ಬಾದಾಮಿ ಅಥವಾ ವಾಲ್ನಟ್‌ಗಳನ್ನು ಕೊಡಬಹುದು.

ವಿಶ್ರಾಂತಿ

ಓದುವ ಸಂದರ್ಭದಲ್ಲಿ ಆಗಾಗ ವಿರಾಮ ಪಡೆಯುವುದರಿಂದ ಸ್ಮರಣಶಕ್ತಿ ಗಟ್ಟಿಯಾಗುತ್ತದೆ. ಜೊತೆಗೆ ವಿದ್ಯಾರ್ಥಿಯು ದಿನಕ್ಕೆ ಕನಿಷ್ಠ ಆರರಿಂದ ಎಂಟು ಗಂಟೆಗಳ ಕಾಲ ನಿದ್ರೆ ಮಾಡಬೇಕು. ಮಧ್ಯರಾತ್ರಿಯನ್ನು ಮೀರಿ ಓದುವ ಸಂದರ್ಭಗಳಲ್ಲಿ ಪೋಷಕರು ಮಕ್ಕಳಿಗೆ ವಿಶ್ರಾಂತಿಯನ್ನು ಪಡೆಯಲು ಪ್ರೇರಣೆ ನೀಡಬೇಕು.

ಪರೀಕ್ಷೆ ಬರೆಯುವುದು ಒಬ್ಬರೇ ಆದರೂ ಮನೆಮಂದಿಯೆಲ್ಲ ಆತಂಕ ಪಡುವುದು ಬೇಡ. ಮನೆಯಲ್ಲಿ ಸಹಜವಾದ ತಿಳಿಯಾದ ವಾತಾವರಣ ಇರಲಿ. ಆಗಾಗ ಒಂದು ನಗೆ ಚಟಾಕಿ ಹಾರಿದರೆ ಮತ್ತೂ ಉತ್ತಮ. ಸಂದರ್ಭಾನುಸಾರ ಹಿರಿಯರು ತಾವು ಪರೀಕ್ಷಾ ದಿನಗಳಲ್ಲಿ ಎದುರಿಸಿದ ಕೆಲವು ಸಮಸ್ಯೆಗಳನ್ನು, ನಡೆದ ಕೆಲವು ಹಾಸ್ಯಪ್ರಸಂಗಗಳನ್ನು ಕಿರಿಯರೊಂದಿಗೆ ಹಂಚಿಕೊಂಡು ವಾತಾವರಣವನ್ನು ತಿಳಿಗೊಳಿಸಬಹುದು.

ಒತ್ತಾಸೆಯ ವಾತಾವರಣ

ವಿದ್ಯಾರ್ಥಿಯನ್ನು ಬೈದು, ಹಂಗಿಸಿ ಅಥವಾ ಪದೇಪದೇ ಪರೀಕ್ಷೆಯ ಬಗ್ಗೆ ನೆನಪಿಸಿ ಅವನ ಆತಂಕವನ್ನು ಹೆಚ್ಚಿಸಬಾರದು. ಪೋಷಕರು ಸಮಾಧಾನ ಚಿತ್ತದಿಂದ ಪ್ರೋತ್ಸಾಹದಾಯಕ ಮಾತುಗಳನ್ನು ಆಡುತ್ತ, ಪ್ರಯತ್ನವೇ ಮುಖ್ಯ ಫಲಿತಾಂಶಗಳ ಬಗ್ಗೆ ಹೆಚ್ಚು ಚಿಂತಿಸಬಾರದು ಎಂಬ ಧೋರಣೆಯನ್ನು ತಳೆಯಬೇಕು. ಜೊತೆಗೆ ಅದೇ ಭರವಸೆಯನ್ನು ವಿದ್ಯಾರ್ಥಿಗೆ ನೀಡಬೇಕು.

ಸಂಭ್ರಮ–ಸುರಕ್ಷತೆ

ಪರೀಕ್ಷಾ ದಿನಗಳಲ್ಲಿ ಆದಷ್ಟು ಸಾಮಾಜಿಕ ಸಮಾರಂಭಗಳಿಂದ ಮತ್ತು ತಡರಾತ್ರಿ ತಿರುಗಾಟದಿಂದ ದೂರವಿರಬೇಕು. ಸಾಮಾಜಿಕ ಜೀವನ ಮುಖ್ಯವೂ ಅಗತ್ಯವೂ ಆದುದಾದರೂ ತಡರಾತ್ರಿಯ ಓಡಾಟಗಳು ವಿದ್ಯಾರ್ಥಿಯ ಸಹಜ ದಿನಚರಿಗೆ ತೊಡಕುಂಟು ಮಾಡುತ್ತವೆ. ಕುಟುಂಬದ ಸಮಾರಂಭಗಳನ್ನು ತಾತ್ಕಾಲಿಕವಾಗಿ ಮುಂದೂಡುವುದು ಒಳ್ಳೆಯದು. ಅಕಸ್ಮಾತ್ ಹತ್ತಿರದ ಬಂಧುಗಳ ಮನೆಯಲ್ಲಿ ಏನಾದರೊಂದು ಕಾರ್ಯಕ್ರಮ ಜರುಗಿದರೆ, ಅದರಲ್ಲಿ ಒಂದಿಬ್ಬರು ಹಿರಿಯರು ಭಾಗವಹಿಸಿ ವಿದ್ಯಾರ್ಥಿಗಳನ್ನು ಮನೆಯಲ್ಲಿ ಕ್ಷೇಮವಾಗಿ ಇರಿಸುವುದು ಉತ್ತಮ.

ಮಾನಸಿಕ ಒತ್ತಾಸೆ

ಪರೀಕ್ಷೆಯ ಹತ್ತಿರದ ದಿನಗಳಲ್ಲಿ ವಿದ್ಯಾರ್ಥಿಯು ಒತ್ತಡಕ್ಕೆ ಒಳಗಾಗುವ ಸಾಧ್ಯತೆಗಳಿವೆ. ಆ ಸಮಯದಲ್ಲಿ ಅವನು/ಅವಳು ಪೋಷಕರ ಅಥವಾ ಒಡಹುಟ್ಟಿದವರ ಜೊತೆ ಮಾತನಾಡಲು ಬಯಸಬಹುದು. ಆಗ ಅಂತಹ ಮಾತುಕತೆಗೆ ಅವಕಾಶ ನೀಡಬೇಕು. ‘ನೀನು ಚೆನ್ನಾಗಿಯೇ ಪರೀಕ್ಷೆಗೆ ತಯಾರಾಗಿದ್ದೀಯ. ನಿನಗೆ ಏನಾದರೂ ಸಹಾಯ ಬೇಕಿದ್ದರೆ ನಾವಿದ್ದೇದ್ದೇವೆ’ ಎಂಬ ಭರವಸೆಯನ್ನು ಕುಟುಂಬದವರು ನೀಡಬೇಕು.

ಒಟ್ಟಿನಲ್ಲಿ ವಿದ್ಯಾರ್ಥಿಯ ಯಶಸ್ಸು ಕೇವಲ ಆತನ ಕಲಿಕೆಯ ಮೇಲೆ ನಿಂತಿರುವುದಿಲ್ಲ; ಸುತ್ತಲಿನವರ ಒತ್ತಾಸೆ ಮತ್ತು ಮನೆಯ ವಾತಾವರಣವು ಅವನ ಸಾಧನೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಮಕ್ಕಳ ಮನಸ್ಸು ವಿಚಲಿತವಾಗುವುದನ್ನು ತಡೆಯುವ,  ಒತ್ತಡವನ್ನು ಕಡಿಮೆ ಮಾಡುವ ಮತ್ತು ಉಲ್ಲಾಸಕರವಾದ ವಾತಾವರಣವನ್ನು ಸೃಷ್ಟಿಸುವ ಜವಾಬ್ದಾರಿ ಇಡೀ ಕುಟುಂಬಕ್ಕೆ ಸೇರಿದ್ದು ಎಂಬುದನ್ನು ಮರೆಯಬಾರದು. ಪರೀಕ್ಷೆ ರಣರಂಗವಲ್ಲ, ಅದು ವ್ಯಕ್ತಿಯ ಸಾಮರ್ಥ್ಯದ ಚಿತ್ತಾರವನ್ನು ಬಿಡಿಸುವ ಮನೋರಂಗ – ಎಂಬುದನ್ನು ಮಕ್ಕಳೂ ಪೋಷಕರೂ ನೆನಪಿನಲ್ಲಿರಿಸಿಕೊಳ್ಳಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.