ADVERTISEMENT

ಆರೋಗ್ಯವೇ ಭಾಗ್ಯ: ದೀರ್ಘಾಯುಷ್ಯಕ್ಕೆ ಸಮತೋಲಿತ ಜೀವನಶೈಲಿಯೇ ಮದ್ದು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಫೆಬ್ರುವರಿ 2026, 9:37 IST
Last Updated 2 ಫೆಬ್ರುವರಿ 2026, 9:37 IST
ಆರೋಗ್ಯಕ್ಕೆ ಮಾನದಂಡ ಆರೋಗ್ಯವೇ!
ಆರೋಗ್ಯಕ್ಕೆ ಮಾನದಂಡ ಆರೋಗ್ಯವೇ!   

ಇತ್ತೀಚಿನ ದಿನಗಳಲ್ಲಿ ನಾವೆಲ್ಲರೂ ಗಮನಿಸುತ್ತಿರುವಂತೆ ಅಕಾಲಿಕ ಮರಣಹೊಂದುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದಕ್ಕೆ ಮೂಲ ಕಾರಣ ಯಾವುದು ಎಂದು ಗಮನಿಸಿದಾಗ ನಮಗೆ ಕಂಡುಬರುವ ಮೊದಲನೇ ಅಂಶವೇ ನಮ್ಮ ಅಸಮತೋಲಿತ ಜೀವನಶೈಲಿ. ಬೆಳಗ್ಗೆ ತಡವಾಗಿ ಏಳುವುದು, ಸರಿಯಾದ ಸಮಯಕ್ಕೆ ಆಹಾರ ಸೇವನೆ ಮಾಡದಿರುವುದು, ಜಂಕ್ ಫುಡ್ ಸೇವನೆ, ಸರಿಯಾಗಿ ನೀರನ್ನು ಕುಡಿಯದಿರುವುದು, ತಡವಾಗಿ ನಿದ್ರಿಸುವುದು, ಹೆಚ್ಚು ಸ್ಕ್ರೀನ್ ಬಳಕೆ ಮಾಡುವುದು, ದೇಹಕ್ಕೆ ಯಾವುದೇ ವ್ಯಾಯಾಮ ಇಲ್ಲದಿರುವುದು ಇತ್ಯಾದಿ.

ಆರೋಗ್ಯವೇ ಭಾಗ್ಯ ಎನ್ನುವ ಮಾತಿನಂತೆ, ಸುದೀರ್ಘವಾಗಿ ಮತ್ತು ಆರೋಗ್ಯಕರವಾಗಿ ಜೀವನ ನಡೆಸಬೇಕು ಎನ್ನುವುದು ಎಲ್ಲರ ಕನಸಾಗಿರುತ್ತದೆ. ಮಾನವನ ದೇಹವು ಪ್ರಕೃತಿಯ ನಿಯಮಗಳೊಂದಿಗೆ ಹೊಂದಿಕೊಂಡು ಕಾರ್ಯನಿರ್ವಹಿಸಿದಾಗ ಮಾತ್ರ ಆರೋಗ್ಯವನ್ನು ದೀರ್ಘಕಾಲ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ‘ಧರ್ಮಾರ್ಥ ಕಾಮ ಮೋಕ್ಷಾಣಾಂ ಆರೋಗ್ಯಂ ಮೂಲಮುತ್ತಮಂ’ ಎನ್ನುವ ಮಾತಿನಂತೆ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ ಎಂಬ ನಾಲ್ಕು ಪುರುಷಾರ್ಥಗಳನ್ನು ಸಾಧಿಸಲು ಆರೋಗ್ಯವೇ ಅತ್ಯಂತ ಶ್ರೇಷ್ಠವಾದ ಮೂಲಾಧಾರವಾಗಿದೆ. ನಮ್ಮ ಆಯಸ್ಸನ್ನು ಹೆಚ್ಚಿಸಿಕೊಳ್ಳುವಲ್ಲಿ ಉತ್ತಮ ಆಹಾರ, ದೈಹಿಕ ಚಟುವಟಿಕೆ, ಉತ್ತಮ ನಿದ್ರೆ, ಮಾನಸಿಕ ಆರೋಗ್ಯ ಮುಖ್ಯ ಪಾತ್ರವಹಿಸುತ್ತದೆ.

ಆರೋಗ್ಯವೇ ಕಂಪೆನಿಗೆ ಲಾಭ!

ಉತ್ತಮ ಆಹಾರ ಸೇವನೆ: ಈ ದೀರ್ಘಾಯುಷ್ಯಕ್ಕೆ ಮೊದಲ ಮೆಟ್ಟಿಲು ಯಾವುದೆಂದರೆ ನಾವು ಸೇವಿಸುವ ಆಹಾರ. ಅಸಮಯದ ಆಹಾರ ಸೇವನೆ ದೇಹ ಮತ್ತು ಮನಸ್ಸಿನ ಆರೋಗ್ಯದ ಅಸಮತೋಲನಕ್ಕೆ ದಾರಿ ಮಾಡಿಕೊಡುತ್ತದೆ. ಒಬ್ಬ ಮನುಷ್ಯನು ತನಗೆ ಹಸಿವಾದಾಗ ಮಾತ್ರ ಆಹಾರವನ್ನು ಸೇವಿಸಬೇಕು ಮತ್ತು ರಾತ್ರಿ ಮಲಗುವ ಕನಿಷ್ಠ ಎರಡರಿಂದ ಮೂರು ಗಂಟೆಯ ಮೊದಲು ಲಘು ಆಹಾರವನ್ನು ಸೇವನೆ ಮಾಡಬೇಕು. ನಮ್ಮ ಜಠರದ ಅರ್ಧ ಪ್ರಮಾಣದಷ್ಟು ಘನ ಆಹಾರವನ್ನು ಮತ್ತು ಕಾಲು ಭಾಗದಷ್ಟು ದ್ರವ ಆಹಾರವನ್ನು ಸೇವಿಸಿ ಉಳಿದ ಭಾಗವನ್ನು ಖಾಲಿ ಬಿಡುವುದರಿಂದ ನಮ್ಮ ಜೀರ್ಣಕ್ರಿಯೆ ಉತ್ತಮವಾಗುತ್ತದೆ ಮತ್ತು ದೇಹದಲ್ಲಿ ವಿಷಕಾರಿ ಅಂಶಗಳು ಶೇಖರಣೆಯಾಗುವುದಿಲ್ಲ. ಆದಷ್ಟು ಸಂಸ್ಕರಿಸಿದ ಆಹಾರ, ನಾರಿನಂಶವಿರುವ ತರಕಾರಿ, ಹಣ್ಣು ಮತ್ತು ಧಾನ್ಯಗಳನ್ನು ಸೇವಿಸಬೇಕು. ಪ್ರತಿನಿತ್ಯದ ಆಹಾರ ಸೇವನೆಯಲ್ಲಿ ಸಮತೋಲನ ಆಹಾರವನ್ನು ಸೇವಿಸುವ ಅಭ್ಯಾಸ ಬಹಳ ಉತ್ತಮ. ಸಕ್ಕರೆ ಪಾನೀಯಗಳನ್ನು ಕಡಿಮೆ ಮಾಡುವುದು ಆರೋಗ್ಯಕ್ಕೆ ಹಿತಕರ.

ADVERTISEMENT

ದೈಹಿಕ ಚಟುವಟಿಕೆ ಮತ್ತು ವ್ಯಾಯಾಮ: ನಾವು ದೀರ್ಘಾಯುಷ್ಯವನ್ನು ಪಡೆಯಲು ಹೆಚ್ಚು ದೈಹಿಕ ಚಟುವಟಿಕೆ ಮತ್ತು ವ್ಯಾಯಾಮದ ಕಡೆಗೆ ಒತ್ತು ನೀಡಬೇಕು. ದಿನಕ್ಕೆ ಕನಿಷ್ಠ ಎಂದರೂ 30 ನಿಮಿಷಗಳ ನಡಿಗೆ ಅಥವಾ ವ್ಯಾಯಾಮ ಮಾಡಬೇಕು. ಇದು ಸ್ನಾಯುಗಳನ್ನು ಬಲಪಡಿಸುತ್ತದೆ ಮತ್ತು ರಕ್ತ ಪರಿಚಲನೆಯನ್ನು ಸುಗಮಗೊಳಿಸುತ್ತದೆ. ಒಂದು ಸಂಶೋಧನೆಯ ಪ್ರಕಾರ ನಿಯಮಿತ ದೈಹಿಕ ಚಟುವಟಿಕೆಯಲ್ಲಿ ನಮ್ಮನ್ನು ತೊಡಗಿಸಿಕೊಳ್ಳುವುದರಿಂದ 2ರಿಂದ 7 ವರ್ಷಗಳ ನಮ್ಮ ಜೀವಿತಾವಧಿ ಹೆಚ್ಚಾಗುತ್ತದೆ ಎಂದು. ಅಧಿಕವಾದ ವ್ಯಾಯಾಮವೂ ಕೂಡ ಆರೋಗ್ಯಕ್ಕೆ ಉತ್ತಮವಲ್ಲ. ಕಾಲಕ್ಕೆ ಅನುಸಾರವಾಗಿ ನಾವು ಮಾಡುವ ವ್ಯಾಯಾಮದ ಸಮಯ ಮತ್ತು ವಿಧಾನವನ್ನು ಬದಲಿಸುವುದು ಕೂಡ ಬಹಳ ಪ್ರಾಮಖ್ಯವಾಗಿದೆ.

ಪ್ರಾಣಾಯಾಮ ಮತ್ತು ಯೋಗಾಭ್ಯಾಸದಲ್ಲಿ ನಮ್ಮನ್ನು ತೊಡಗಿಸಿಕೊಳ್ಳುವುದರಿಂದ ದೈಹಿಕ ಆರೋಗ್ಯವಷ್ಟೇ ಅಲ್ಲದೇ, ಮಾನಸಿಕ ಆರೋಗ್ಯವು ಉತ್ತಮಗೊಳ್ಳುತ್ತದೆ ಮತ್ತು ದೇಹದ ಪ್ರತಿಯೊಂದು ಅಂಗಕ್ಕೂ ಹೊಸ ಚೈತನ್ಯವನ್ನು ನೀಡುತ್ತದೆ. ಆದರೆ ಪ್ರಾಣಾಯಾಮ ಮತ್ತು ಯೋಗಾಭ್ಯಾಸವನ್ನು ನುರಿತ ತಜ್ಜರಲ್ಲಿ ಕಲಿತು ಪಾಲಿಸವುದು ಅತ್ಯಗತ್ಯ.

ಗುಣಮಟ್ಟದ ನಿದ್ರೆ: ದೀರ್ಘಾಯುಷ್ಯ ಹೊಂದಲು ನಮಗೆ ಸಹಾಯ ಮಾಡುವ ಇನ್ನೊಂದು ಮುಖ್ಯ ಅಂಶವೆಂದರೆ, ಗುಣಮಟ್ಟದ ನಿದ್ರೆ. ಬೇಗ ಮಲಗಿ, ಬೇಗ ಏಳುವ ಅಭ್ಯಾಸವನ್ನು ನಾವು ರೂಢಿಸಿಕೊಳ್ಳಬೇಕು. ನಮ್ಮ ದಿನಚರಿ ಸೂರ್ಯೋದಯದೊಂದಿಗೆ ಆರಂಭವಾಗಿ ಸೂರ್ಯಾಸ್ತದೊಂದಿಗೆ ಮುಕ್ತಾಯವಾಗುವಂತೆ ಇರಬೇಕು. ಸಾಮಾನ್ಯವಾಗಿ 6 ರಿಂದ 9 ಗಂಟೆಯ ನಿದ್ರೆ ವ್ಯಕ್ತಿಯ ದೇಹ ಪ್ರಕೃತಿಗೆ ಅನುಸಾರವಾಗಿ ಪಾಲಿಸತಕ್ಕದ್ದು. ಇದು ದೇಹದ ಕೋಶಗಳ ಪುನಶ್ಚೇತನಕ್ಕೆ ಸಹಾಯಮಾಡುತ್ತದೆ. ರೋಗನಿರೋಧಕ ಶಕ್ತಿ ವೃದ್ದಿಸುತ್ತದೆ, ನಮ್ಮಲ್ಲಿನ ಒತ್ತಡದ ಮಟ್ಟವನ್ನು ತಗ್ಗಿಸುತ್ತದೆ. ಹಾರ್ಮೋನಲ್ ಅಸಮತೋಲವನ್ನು ಕಡಿಮೆಮಾಡುತ್ತದೆ. ಹಗಲು ನಿದ್ರೆಯು ಆರೋಗ್ಯದ ಹಿತದೃಷ್ಟಿಯಿಂದ ಉತ್ತಮವಲ್ಲ.

ಮಾನಸಿಕ ಸ್ವಾಸ್ಥ್ಯ: ನಮ್ಮ ದೀರ್ಘಾಯುಷ್ಯಕ್ಕೆ ಮಾನಸಿಕ ಆರೋಗ್ಯವನ್ನು ಸಮತೋಲನದಲ್ಲಿ ಇಟ್ಟುಕೊಳ್ಳುವುದು ಬಹುಮುಖ್ಯ. ನಾವು ಒತ್ತಡಕ್ಕೆ ಒಳಗಾಗುವುದರಿಂದ ಅಥವಾ ಮಾನಸಿಕವಾಗಿ ಚಿಂತೆಗೆ ಒಳಗಾಗುವುದರಿಂದ ಹಾರ್ಮೋನುಗಳಲ್ಲಿ ವ್ಯತ್ಯಯ ಉಂಟಾಗುತ್ತದೆ. ಅದು ಅಕಾಲಿಕ ವ್ಯದ್ದಾಪ್ಯಕ್ಕೆ ದಾರಿಮಾಡಿಕೊಡುತ್ತದೆ. ನಮ್ಮಲ್ಲಿ ಧನಾತ್ಮಕ ಚಿಂತನೆ, ಧ್ಯಾನ, ಯೋಗ ಒತ್ತಡವನ್ನು ಕಡಿಮೆಮಾಡಿ ದೀರ್ಘಾಯುಷ್ಯಕ್ಕೆ ಸಹಾಯಮಾಡುತ್ತದೆ.

ಪ್ರತಿನಿತ್ಯ ಹಾಲು ತುಪ್ಪದ ಸೇವನೆ, ಉತ್ತಮವಾದ ಆಹಾರ ಸೇವನೆ, ನಿಯಮಿತವಾದ ಮತ್ತು ಕ್ರಮಬದ್ಧವಾದ ನಿದ್ರೆ, ಋತುಗಳಿಗೆ ಅನುಸಾರವಾಗಿ ನಮ್ಮ ಆಹಾರ ಮತ್ತು ಚಟುವಟಿಕೆಗಳಲ್ಲಿ ಬದಲಾವಣೆ, ಪ್ರಶಸ್ತವಾದ ದಿನಚರ್ಯದ ಪಾಲನೆ, ಯೋಗ ಹಾಗೂ ಪ್ರಾಣಾಯಾಮದ ಅಭ್ಯಾಸ ನಮ್ಮ ತಾರುಣ್ಯದ ಸಂರಕ್ಷಣೆಗೆ ಭದ್ರ ಬುನಾದಿ. ಹಾಗಾಗಿ ನಾವು ನಮ್ಮ ಜೀವನಶೈಲಿಯಲ್ಲಿ ಅಳವಡಿಸಿಕೊಳ್ಳುವ ಚಿಕ್ಕ, ಚಿಕ್ಕ ಬದಲಾವಣೆಗಳು ನಮಗೆ ಆರೋಗ್ಯ ಮತ್ತು ಹೆಚ್ಚುವರಿ ಆಯಸ್ಸನ್ನು ಸೇರಿಸುವಲ್ಲಿ ನೆರವಾಗುತ್ತದೆ. ಪ್ರಕೃತಿಯ ನಿಯಮದಂತೆ ಬದುಕುವುದು, ನೈಸರ್ಗಿಕ ಚಿಕಿತ್ಸೆಗಳಿಗೆ ಒತ್ತುನೀಡುವುದು ಕೇವಲ ನಮ್ಮ ವಯಸ್ಸಾಗುವಿಕೆಯನ್ನು ಮಾತ್ರವಲ್ಲ ಆರೋಗ್ಯವಂತ ಜೀವನವನ್ನು ನೆಡೆಸಲು ಸಹಕರಿಸುತ್ತದೆ.

(ಲೇಖಕರು: ಡಾ. ಯೋಗೀಶ ಆಚಾರ್ಯ, ಸಹ ಪ್ರಾಧ್ಯಾಪಕರು, ಸ್ವಸ್ಥವೃತ್ತ ವಿಭಾಗ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ವಿಭಾಗ ಕುತ್ಪಾಡಿ ಉಡುಪಿ.)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.