ADVERTISEMENT

ಹೋಳಿ ಬಣ್ಣ ಆರೋಗ್ಯದ ಮೇಲೆ ಬೀಳದಿರಲಿ ಪರಿಣಾಮ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2026, 12:54 IST
Last Updated 3 ಮಾರ್ಚ್ 2026, 12:54 IST
   

ಹೋಳಿ ಹಬ್ಬ ಬಣ್ಣಗಳ ಹಬ್ಬ. ಸಂಗೀತ ಮತ್ತು ಸಂಭ್ರಮಾಚರಣೆಗಳ ಹಬ್ಬವೂ ಹೌದು. ಆದರೆ, ಹೋಳಿ ಹಬ್ಬದಲ್ಲಿ ಇಎನ್‌ಟಿ (ಕಿವಿ, ಮೂಗು, ಗಂಟಲು) ಕಿವಿ ಕಟ್ಟುವಿಕೆ, ಮೂಗಿನ ಕಿರಿಕಿರಿ ಮತ್ತು ಸೈನಸ್ ಸೋಂಕಿನ ಕಾರಣವಾಗಬಹುದು.

ಬಣ್ಣಗಳ ಜೊತೆ ಹಬ್ಬವನ್ನು ಸಂಭ್ರಮಿಸುವುದು ಒಳ್ಳೆಯದು. ಆದರೆ, ಈ ವೇಳೆ ಜನರು ವಿವಿಧ ರಾಸಾಯನಿಕ ಮಿಶ್ರಣಗಳು ಮತ್ತು ಬಣ್ಣಗಳನ್ನು ಒಳಗೊಂಡಿರುವ ಪುಡಿಗಳನ್ನು ಬಳಸಿದಾಗ ಅದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

ಕೃತಕ ಬಣ್ಣಗಳನ್ನು ನೇರವಾಗಿ ಬಳಸುವುದು ಅಥವಾ ನೀರಿಗೆ ಮಿಶ್ರಣ ಮಾಡಿ ಹಾಕುವುದರಿಂದ ಅದರಲ್ಲಿರುವ ಸೂಕ್ಷ್ಮ ಕಣಗಳು ಚರ್ಮ, ಕಣ್ಣು, ಕಿವಿ ಮತ್ತು ಮೂಗಿನ ಹೋಗಿ ನೇರ ಪರಿಣಾಮ ಉಂಟಾಗುತ್ತದೆ. ಇದರಿಂದ ಕಿರಿಕಿರಿ, ಉರಿಯೂತ ಮತ್ತು ಸೋಂಕುಗಳಿಗೆ ಕಾರಣವಾಗುತ್ತದೆ. ಈ ಕೃತಕ ಬಣ್ಣಗಳು ಚರ್ಮ ಮತ್ತು ಕಣ್ಣುಗಳ ಮೇಲೆ ಪರಿಣಾಮ ಬೀರಿದಾಗ ಅಲರ್ಜಿ ಅಥವಾ ಕಣ್ಣಿನ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

ADVERTISEMENT

ಆರೋಗ್ಯದ ಬಗ್ಗೆ ಎಚ್ಚರವಿರಲಿ

ಮುಖಕ್ಕೆ ಹಚ್ಚುವ ಬಣ್ಣದ ಪುಡಿಯು ಕಿವಿ ಮತ್ತು ಮೂಗಿಗೆ ತಗುಲಿದಂತೆ ಎಚ್ಚರವಹಿಸಬೇಕು. ಬಣ್ಣಗಳನ್ನು ನೇರವಾಗಿ ಮುಖಕ್ಕೆ ಹಾಕುವುದರಿಂದ ಅದರಲ್ಲಿನ ಸೂಕ್ಷ್ಮ ಕಣಗಳು ಕಿವಿಯ ನಳಿಕೆಯ ಮೂಲಕ ಒಳಗೆ ಪ್ರವೇಶಿಸುವ ಸಾಧ್ಯತೆ ಇರುತ್ತದೆ. ಕಿವಿ ತನ್ನನ್ನು ತಾನು ರಕ್ಷಿಸಿಕೊಳ್ಳಲು ಒಂದು ನೈಸರ್ಗಿಕ ವ್ಯವಸ್ಥೆಯನ್ನು ಹೊಂದಿದೆ. ಹೊರ ಕಿವಿಯ ನಳಿಕೆಯಲ್ಲಿ ಸ್ರವಿಸುವ ಸೆರುಮೆನ್ (ಕಿವಿ ಮೇಣ) ಧೂಳು ಮತ್ತು ಸೂಕ್ಷ್ಮ ಕಣಗಳನ್ನು ತಡೆಯುತ್ತದೆ. ಇದು ತೇವಾಂಶ ಮತ್ತು ಬಣ್ಣದ ಪುಡಿಯ ಜೊತೆಗೆ ಬೆರೆತು ದಪ್ಪನೆಯ, ಅಂಟಂಟಾದ ಪದರವನ್ನು ರೂಪಿಸುತ್ತದೆ. ಇದು ಕಿವಿಯ ನಳಿಕೆಯನ್ನು ಮುಚ್ಚಿ, ಕಿವಿ ತುಂಬಿದಂತಹ ಅನುಭವವನ್ನು ನೀಡುತ್ತದೆ. ಇದರಿಂದ ಸಹಜವಾಗಿಯೇ ಕೇಳುವ ಸಾಮರ್ಥ್ಯ ಕಡಿಮೆಯಾಗುತ್ತದೆ.

ಜನರು ಇಯರ್ ಬಡ್ಸ್, ಪಿನ್ ಅಥವಾ ಇತರ ಚೂಪಾದ ವಸ್ತುಗಳನ್ನು ಬಳಸಿ ಕಿವಿ ಸ್ವಚ್ಛಗೊಳಿಸಲು ಪ್ರಯತ್ನಿಸಿದಾಗ, ಆ ಅಂಟಂಟಾದ ಮೇಣದಂತಹ ವಸ್ತುವು ಕಿವಿಯ ಆಳಕ್ಕೆ ತಳ್ಳಲ್ಪಡುತ್ತದೆ. ಇದು ಕಿವಿಯ ನಳಿಕೆಯಲ್ಲಿ ಸವೆತ ಅಥವಾ ಗಾಯಗಳಿಗೆ ಕಾರಣವಾಗುತ್ತದೆ.

ಈ ಸಣ್ಣ ಗಾಯಗಳು ಸೋಂಕು ಹರಡಲು ಕಾರಣವಾಗುತ್ತವೆ. ಕಿವಿಯ ನಳಿಕೆಯಲ್ಲಿ ಸಿಲುಕಿರುವ ತೇವಾಂಶ ಹಾಗೂ ಕಿವಿ ಒಳಗೆ ಸೇರಿರುವ ಬಣ್ಣದ ಪುಡಿಯಲ್ಲಿ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳು ವೇಗವಾಗಿ ಬೆಳೆಯುತ್ತವೆ. ಈ ಸ್ಥಿತಿಯನ್ನು ‘ಓಟಿಟಿಸ್ ಎಕ್ಸ್ಟರ್ನಾ’ ಎಂದು ಕರೆಯಲಾಗುತ್ತದೆ. ಇದು ಕಿವಿಯನ್ನು ಮುಟ್ಟಿದಾಗ ಅಥವಾ ಎಳೆದಾಗ ತೀವ್ರವಾಗುವ ನೋವನ್ನು ಉಂಟುಮಾಡುತ್ತದೆ. ಈ ನೋವಿನ ಜೊತೆಗೆ ಊತ ಮತ್ತು ತುರಿಕೆ ಕಾಣಿಸಿಕೊಳ್ಳಬಹುದು. ಕಿವಿಯ ದುರ್ವಾಸನೆ ಹಾಗೂ ಸೋರಿಕೆಗೆ ಕಾರಣವಾಗಬಹುದು.

ಇಂತಹ ಸೋಂಕಿನಿಂದ ಕಿವಿಯ ನಳಿಕೆ ಕಿರಿದಾಗಬಹುದು ಮತ್ತು ಕೇಳುವ ಸಾಮರ್ಥ್ಯ ಕುಂಠಿತಗೊಳ್ಳಬಹುದು. ಮಧುಮೇಹಿಗಳು ಮತ್ತು ರೋಗನಿರೋಧಕ ಶಕ್ತಿ ಕಡಿಮೆ ಇರುವ ವ್ಯಕ್ತಿಗಳಲ್ಲಿ ಇಂತಹ ಸೋಂಕುಗಳು ಗಂಭೀರ ಸಮಸ್ಯೆಗಳನ್ನು ಉಂಟುಮಾಡುವ ಅಪಾಯ ಹೆಚ್ಚಿರುತ್ತದೆ. ಹೋಳಿ ಹಬ್ಬದಲ್ಲಿ ಬಳಸುವ ಬಣ್ಣದ ನೀರು ಕಿವಿಯ ತಮಟೆಗೆ ಸೇರಿ ಅದರಲ್ಲಿ ರಂಧ್ರವಿದ್ದರೆ ಅದರ ಮೂಲಕ ಮಧ್ಯ ಕಿವಿಯನ್ನು ಪ್ರವೇಶಿಸಿ, ಗಂಭೀರವಾದ ಸೋಂಕುಗಳಿಗೆ ದಾರಿ ಮಾಡಿಕೊಡಬಹುದು.

ಮೂಗು ಕೂಡ ಅಪಾಯಕ್ಕೆ ಒಳಗಾಗಬಹುದು

ಕಿವಿಗಳಷ್ಟೇ ಅಲ್ಲದೆ, ಮೂಗು ಮತ್ತು ಸೈನಸ್‌ಗಳು ಕೂಡ ಸೋಂಕಿಗೆ ತುತ್ತಾಗುವ ಸಾಧ್ಯತೆ ಇರುತ್ತದೆ. ಮೂಗಿನ ಕುಳಿಯು ಲೋಳೆಯ ಪೊರೆ ಮತ್ತು ‘ಸಿಲಿಯಾ’ ಎಂದು ಕರೆಯಲ್ಪಡುವ ಸಣ್ಣ ಕೂದಲಿನಂತಹ ರಚನೆಗಳಿಂದ ಕೂಡಿರುತ್ತದೆ. ಹೋಳಿ ಆಚರಣೆಯ ಸಮಯದಲ್ಲಿ ಹೆಚ್ಚಿನ ಪ್ರಮಾಣದ ಬಣ್ಣದ ಪುಡಿ ಗಾಳಿಯ ಮೂಲಕ ಮೂಗು ಹಾಗೂ ದೇಹದ ಒಳಗೆ ಸೇರುವ ಸಾಧ್ಯತೆ ಇರುತ್ತದೆ.

ಈ ರಾಸಾಯನಿಕಯುಕ್ತ ಸೂಕ್ಷ್ಮ ಧೂಳು ಮೂಗಿನ ಹಾದಿಯಲ್ಲಿ ಕಿರಿಕಿರಿ ಉಂಟುಮಾಡಿ, ಉರಿಯೂತ ಮತ್ತು ಊತಕ್ಕೆ ಕಾರಣವಾಗಬಹುದು. ಮೂಗಿನ ಒಳಪದರದ ಊತವು ಸೈನಸ್‌ಗಳಿಂದ ದ್ರವ ಹೊರಹೋಗುವ ಸಣ್ಣ ದ್ವಾರಗಳನ್ನು ಮುಚ್ಚಿಹಾಕುತ್ತದೆ. ಇದು ಲೋಳೆಯ ಸಹಜ ಹರಿವನ್ನು ತಡೆದು, ಸೈನಸ್‌ಗಳಲ್ಲಿ ದ್ರವವು ನಿಂತುಹೋಗುವಂತೆ ಮಾಡುತ್ತದೆ.

ಸಾಮಾನ್ಯವಾಗಿ ಬಣ್ಣಗಳು ದೇಹ ಸೇರಿದ ಎರಡು ದಿನಗಳ ನಂತರ ದೇಹವು ಪ್ರತಿಕ್ರಿಯಿಸಲು ಪ್ರಾರಂಭಿಸುತ್ತದೆ. ಇದರಿಂದಾಗಿ ಒತ್ತಡ ಮತ್ತು ತಲೆನೋವು, ಮೂಗು ಕಟ್ಟುವುದು ಮತ್ತು ಗಟ್ಟಿಯಾದ ಲೋಳೆ ಸ್ರವಿಸುವುದು ಸಾಮಾನ್ಯ ಸಮಸ್ಯೆಗಳಾಗಿವೆ. ಕೆಲವು ಜನರಲ್ಲಿ ವಾಸನೆ ಗ್ರಹಿಸುವ ಸಾಮರ್ಥ್ಯ ಕಡಿಮೆಯಾಗಬಹುದು ಅಥವಾ ಜ್ವರ ಕಾಣಿಸಿಕೊಳ್ಳಬಹುದು.

ಕೃತಕ ಬಣ್ಣಗಳು ಕಿರಿಕಿರಿ ಉಂಟುಮಾಡುವ ಅಂಶವಿರುವುದರಿಂದ ಈಗಾಗಲೇ ಅಲರ್ಜಿಕ್ ರೈನೈಟಿಸ್ ಅಥವಾ ಆಸ್ತಮಾ ಇರುವವರಲ್ಲಿ ತೀವ್ರವಾದ ಉರಿಯೂತದ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಹೋಳಿ ಬಣ್ಣಗಳೊಂದಿಗೆ ಜಾಸ್ತಿ ಆಟವಾಡಿದರೂ ಅಥವಾ ಅಲ್ಪಾವಧಿಯಲ್ಲಿ ಬಣ್ಣ ದೇಹಕ್ಕೆ ತಾಗಿದರೂ ಜನರು ಮೂಗು ಕಟ್ಟುವುದು ಮತ್ತು ನಿಯಂತ್ರಿಸಲಾಗದ ಸೀನುವಿಕೆ ಸಮಸ್ಯೆಗೆ ಕಾರಣವಾಗಬಹುದು.

ಹೋಳಿ ಹಬ್ಬದಲ್ಲಿ ಬಳಸುವ ಬಣ್ಣಗಳ ರಾಸಾಯನಿಕ ಅಂಶವೇ ದೊಡ್ಡ ಸಮಸ್ಯೆಯಾಗಿದೆ. ಭಾರತದಲ್ಲಿ ಕಳೆದ ಕೆಲವು ವರ್ಷಗಳಿಂದ ನಡೆಸಲಾದ ಅಧ್ಯಯನಗಳ ಪ್ರಕಾರ, ಬಣ್ಣದ ಪುಡಿಗಳಿಗೆ ಅವು ಹೆಚ್ಚು ಪ್ರಕಾಶಮಾನವಾಗಿ ಕಾಣಲು ಅವುಗಳಲ್ಲಿ ಕೈಗಾರಿಕಾ ಡೈಗಳು ಮತ್ತು ಸೀಸದ ಸಂಯುಕ್ತ ಕಣಗಳು, ತಾಮ್ರದ ಸಲ್ಫೇಟ್, ಕ್ರೋಮಿಯಂ ಮತ್ತು ಮೈಕಾ ಧೂಳಿನಂತಹ ಅಂಶಗಳನ್ನು ಬಳಸಲಾಗುತ್ತದೆ ಎಂದು ತಿಳಿದುಬಂದಿದೆ. ಈ ರಾಸಾಯನಿಕಗಳು ಮೂಗು ಅಥವಾ ಕಿವಿಯ ನಳಿಕೆಗಳನ್ನು ಪ್ರವೇಶಿಸಿದಾಗ ತೀವ್ರ ಕಿರಿಕಿರಿಯನ್ನು ಉಂಟುಮಾಡುತ್ತದೆ. ಇಂತಹ ಪುಡಿಗಳು ಪದೇ ಪದೇ ದೇಹವನ್ನು ಸೇರಿದಾಗ ಅದು ದೀರ್ಘಕಾಲದ ಸೈನಸೈಟಿಸ್ ಮತ್ತು ಕಿವಿಯ ನಳಿಕೆಯಲ್ಲಿ ಸೂಕ್ಷ್ಮಗ್ರಾಹಿ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ಪ್ರಾತಿನಿಧಿಕ ಚಿತ್ರ

ಮಕ್ಕಳ ಕಿವಿಯ ನಳಿಕೆ ಮತ್ತು ಮೂಗಿನ ಒಳಪದರಗಳು ಇನ್ನೂ ಬೆಳವಣಿಗೆಯ ಹಂತದಲ್ಲಿರುವುದರಿಂದ ಹಾಗೂ ಅವರ ರೋಗನಿರೋಧಕ ಶಕ್ತಿಯು ಪೂರ್ಣ ಪ್ರಮಾಣದಲ್ಲಿ ವಿಕಸನಗೊಳ್ಳದ ಕಾರಣ, ಅವರು ಇಂತಹ ಸೋಂಕುಗಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚು. ಮಕ್ಕಳು ಮತ್ತು ವಯಸ್ಕರಿಬ್ಬರಲ್ಲೂ ಆರಂಭಿಕ ಅಸ್ವಸ್ಥತೆಯು ಸೋಂಕಿನ ಕಾಯಿಲೆಯಾಗಿ ಉಲ್ಬಣಗೊಳ್ಳಲು ಅವಕಾಶ ಮಾಡಿಕೊಟ್ಟಂತಾಗುತ್ತದೆ.

ಹೋಳಿ ಆಚರಣೆಯ ನಂತರ, ಜನರು ತಮ್ಮ ಚರ್ಮ, ಕಿವಿ ಮತ್ತು ಮೂಗನ್ನು ಸ್ವಚ್ಛಗೊಳಿಸಲು ಕೆಲವು ಒರಟಾದ ಉತ್ಪನ್ನಗಳನ್ನು ಬಳಸುತ್ತಾರೆ. ಕಿವಿಯಲ್ಲಿ ಸಂಗ್ರಹವಾಗಿರುವ ಪುಡಿಯನ್ನು ಸ್ವಚ್ಛಗೊಳಿಸಲು ನೀರು ಹಾಯಿಸಿ ಅಥವಾ ವಸ್ತುಗಳನ್ನು ಬಳಸಿ ಬಲವಂತವಾಗಿ ತೆಗೆಯಲು ಪ್ರಯತ್ನಿಸಿದರೆ, ಅದರಿಂದ ಕಿವಿಯ ರಕ್ಷಣಾತ್ಮಕ ಪೊರೆಗೆ ಹಾನಿಯಾಗಬಹುದು.

ಅದೇ ರೀತಿ ಹೋಳಿ ಬಣ್ಣ ಹೋಗಿಸಲು ಮೂಗನ್ನು ಅತಿಯಾಗಿ ಅಥವಾ ಜೋರಾಗಿ ಉಜ್ಜುವುದರಿಂದ ಮೂಗಿನ ಉರಿಯೂತದ ಲಕ್ಷಣಗಳನ್ನು ಮತ್ತಷ್ಟು ಉಲ್ಬಣಗೊಳಿಸಬಹುದು. ಇದರಿಂದ ಎಡೆಬಿಡದ ಕಿವಿ ನೋವಿನ ಜೊತೆಗೆ ಕಿವಿಯಿಂದ ದ್ರವ ಸೋರುವುದು, ಶ್ರವಣ ಸಾಮರ್ಥ್ಯ ಕಡಿಮೆಯಾಗುವುದು, ಮುಖದ ಭಾಗದಲ್ಲಿ ತೀವ್ರ ನೋವು ಅಥವಾ ಹೆಚ್ಚಿನ ಜ್ವರ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ತಕ್ಷಣವೇ ವೈದ್ಯಕೀಯ ಸಹಾಯ ಪಡೆಯುವುದು ಉತ್ತಮ.

ಬಣ್ಣಗಳಿಂದ ಉಂಟಾಗುವ ಹಾನಿಯನ್ನು ತಡೆಗಟ್ಟಲು ಸಲಹೆಗಳು

ಹೋಳಿ ಬಣ್ಣಗಳ ಸಡಗರದ ಹಬ್ಬ. ಈ ಸಂದರ್ಭದಲ್ಲಿ ಸ್ವಲ್ಪ ಎಚ್ಚರಿಕೆ ವಹಿಸುವುದರಿಂದ ಕಿವಿ ಅಥವಾ ಮೂಗಿಗೆ ಯಾವುದೇ ಹಾನಿಯಾಗದಂತೆ ಸುರಕ್ಷಿತವಾಗಿ ಹಬ್ಬವನ್ನು ಆನಂದಿಸಬಹುದು. ಹಬ್ಬ ಆಚರಿಸುವವರು ಪಾಲಿಸಬಹುದಾದ ಕೆಲವು ಸಲಹೆಗಳು ಇಲ್ಲಿವೆ:

  • ಪರಿಸರ ಸ್ನೇಹಿ ಮತ್ತು ರಾಸಾಯನಿಕ ಮುಕ್ತ ಬಣ್ಣಗಳನ್ನು ಬಳಸಬಹುದು.

  • ಮುಖ, ಕುತ್ತಿಗೆ, ಕಿವಿಯ ಹಿಂಭಾಗ, ಹೊರ ಕಿವಿ ಮತ್ತು ಮೂಗಿನ ಹೊಳ್ಳೆಗಳಿಗೆ ಬಾದಾಮಿ ಎಣ್ಣೆ, ತೆಂಗಿನ ಎಣ್ಣೆ ಅಥವಾ ಪೆಟ್ರೋಲಿಯಂ ಜೆಲ್ಲನ್ನು ಹಚ್ಚಿ ಸ್ವಚ್ಛ ಮಾಡಿಕೊಳ್ಳಬಹುದು.  

  • ಅಸ್ತಮಾ ಅಥವಾ ಅಲರ್ಜಿಯ ಸಮಸ್ಯೆ ಇದ್ದರೆ, ಅಂತವರು ಸಾಧ್ಯವಾದಷ್ಟು ಮಾಸ್ಕ್ ಬಳಸಿ ಹೋಳಿಯಲ್ಲಿ ಭಾಗಿಯಾಗಬಹುದು. ಇನ್ಹೇಲರ್ ಅನ್ನು ನಿಮ್ಮೊಂದಿಗೇ ಇಟ್ಟುಕೊಳ್ಳಿ.

  • ಮೂಗು ಕಟ್ಟುವಿಕೆಯನ್ನು ಕಡಿಮೆ ಮಾಡಲು ‘ಸಲೈನ್ ನೇಸಲ್ ಸ್ಪ್ರೇ’ ಅಥವಾ ಸ್ಟೀಮ್ ತೆಗೆದುಕೊಳ್ಳಬಹುದು.

  • ಕಿವಿ ಅಥವಾ ಮೂಗಿನಿಂದ ಯಾವುದೇ ವಸ್ತುವನ್ನು ಬಲವಂತವಾಗಿ ಹೊರತೆಗೆಯಲು ಪ್ರಯತ್ನಿಸಬೇಡಿ.

  • ಉಸಿರಾಟ ಅಥವಾ ಶ್ರವಣ ಸಾಮರ್ಥ್ಯದಲ್ಲಿ ಅಥವಾ ಮೂಗಿನಲ್ಲಿ ಯಾವುದೇ ಸಮಸ್ಯೆ ಅಥವಾ ನೋವು ಕಾಣಿಸಿಕೊಂಡರೆ ತಕ್ಷಣ ವೈದ್ಯಕೀಯ ಸಹಾಯ ಪಡೆಯಿರಿ.

ಮಾಹಿತಿ: ಡಾ. ಸೌಮ್ಯ ಎಂ.ಎಸ್, ಸೀನಿಯರ್ ಕನ್ಸಲ್ಟೆಂಟ್, ಇಎನ್‌ಟಿ ಸರ್ಜನ್, ನಾರಾಯಣ ಹೆಲ್ತ್ ಸಿಟಿ, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.