ADVERTISEMENT

2050ರ ಹೊತ್ತಿಗೆ ಸ್ಥೂಲಕಾಯ ಸಮಸ್ಯೆಯಿಂದ ಬಳಲುವ ಭಾರತೀಯರ ಸಂಖ್ಯೆ 44 ಕೋಟಿ!: ವರದಿ

ಪಿಟಿಐ
Published 4 ಮಾರ್ಚ್ 2025, 10:00 IST
Last Updated 4 ಮಾರ್ಚ್ 2025, 10:00 IST
<div class="paragraphs"><p>ಸ್ಥೂಲಕಾಯ</p></div>

ಸ್ಥೂಲಕಾಯ

   

ಐಸ್ಟಾಕ್ ಚಿತ್ರ

ನವದೆಹಲಿ: ‘ಭಾರತದಲ್ಲಿ 2050ರ ಹೊತ್ತಿಗೆ 44 ಕೋಟಿ ಭಾರತೀಯರು ಸ್ಥೂಲಕಾಯ ಸಮಸ್ಯೆಯಿಂದ ಬಳಲಲಿದ್ದಾರೆ’ ಎಂದು ಲ್ಯಾನ್ಸೆಟ್‌ ಜರ್ನಲ್‌ ನಡೆಸಿದ ಅಧ್ಯಯನ ವರದಿಯಲ್ಲಿ ಹೇಳಲಾಗಿದೆ.

ADVERTISEMENT

ಹೀಗೆ ದೇಹದ ತೂಕ ಹೆಚ್ಚಿಸಿಕೊಳ್ಳುವವರಲ್ಲಿ ಪುರುಷರ ಸಂಖ್ಯೆ 21.8 ಕೋಟಿ ಹಾಗೂ ಮಹಿಳೆಯರ ಸಂಖ್ಯೆ 23.1ಕೋಟಿಯಷ್ಟಿರಲಿದೆ. ಆ ಮೂಲಕ ಭಾರತವು ಇಡೀ ಜಗತ್ತಿನಲ್ಲೇ ಅತಿ ಹೆಚ್ಚು ಸ್ಥೂಲಕಾಯ ವ್ಯಕ್ತಿಗಳನ್ನು ಹೊಂದಿದ 2ನೇ ರಾಷ್ಟ್ರವಾಗಲಿದೆ. ಚೀನಾ ಅಗ್ರಸ್ಥಾನದಲ್ಲಿದ್ದರೆ, ಅಮೆರಿಕ, ಬ್ರೆಜಿಲ್‌ ಮತ್ತು ನೈಜಿರಿಯಾ ಕ್ರಮವಾಗಿ 3, 4 ಹಾಗೂ 5ನೇ ಸ್ಥಾನದಲ್ಲಿರಲಿವೆ ಎಂದು ಇದೇ ವರದಿ ಹೇಳಿದೆ.‌

ಗ್ಲೋಬಲ್ ಬರ್ಡನ್‌ ಆಫ್‌ ಡಿಸೀಸ್‌ ಎಂಬ 2021ರಿಂದ ಆರಂಭವಾಗಿರುವ ಈ ಅಧ್ಯಯನದಲ್ಲಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಸಂಶೋಧಕರೂ ಭಾಗಿಯಾಗಿದ್ದರು.

ಜಗತ್ತಿನ 25ರ ವಯೋಮಾನದ ಅರ್ಧ ಶತಕೋಟಿ ಪುರುಷ ಹಾಗೂ ಮಹಿಳೆಯರು ಈಗಾಗಲೇ ದೇಹದ ತೂಕ ಹೆಚ್ಚಿಸಿಕೊಂಡವರೇ ಆಗಿದ್ದಾರೆ. ಭಾರತದಲ್ಲಿ ಸದ್ಯ 18 ಕೋಟಿಯಷ್ಟು ಸ್ಥೂಲಕಾಯ ದೇಹ ಹೊಂದಿದವರು ಇದ್ದಾರೆ. ಇವರಲ್ಲಿ 8.1 ಕೋಟಿ ಪುರುಷರು ಹಾಗೂ 9.8 ಕೋಟಿ ಮಹಿಳೆಯರು ಸೇರಿದ್ದಾರೆ.

2050ರ ಹೊತ್ತಿಗೆ ಜಾಗತಿಕ ಮಟ್ಟದಲ್ಲಿ 1.8 ಶತಕೋಟಿ ಪುರುಷರು ಹಾಗೂ 1.9 ಶತಕೋಟಿ ಮಹಿಳೆಯರನ್ನು ಒಳಗೊಂಡು 3.8 ಶತಕೋಟಿ ಜನರು ಅಧಿಕ ದೇಹತೂಕ ಸಮಸ್ಯೆಯಿಂದ ಬಳಲಿದ್ದಾರೆ. ಚೀನಾ, ಭಾರತ ಮತ್ತು ಅಮೆರಿಕದಲ್ಲಿ ಅಧಿಕ ತೂಕದ ವ್ಯಕ್ತಿಗಳು ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಲೇ ಇದೆ. ಮತ್ತೊಂದೆಡೆ ಆಫ್ರಿಕಾದಲ್ಲಿ ಸ್ಥೂಲಕಾಯ ದೇಹವುಳ್ಳವರ ಸಂಖ್ಯೆ ಶೇ 254.8ರಷ್ಟು ಹೆಚ್ಚಳವಾಗಲಿದೆ’ ಎಂದೂ ವರದಿಯಲ್ಲಿ ಹೇಳಲಾಗಿದೆ.

ಮಕ್ಕಳಲ್ಲೂ ಕಾಡಲಿದೆ ಸ್ಥೂಲಕಾಯ ಸಮಸ್ಯೆ

ಇದೇ ಅಧ್ಯಯನ ಸಂಸ್ಥೆಯು ಮಕ್ಕಳ ಕುರಿತು ಅಧ್ಯಯನ ನಡೆಸಿದ್ದು, ಭಾರತದಲ್ಲಿ 5ರಿಂದ 14ರ ವಯೋಮಾನದ 1.6 ಕೋಟಿ ಬಾಲಕರು ಹಾಗೂ 1.4 ಕೋಟಿ ಬಾಲಕಿಯರ ದೇಹದ ತೂಕ 2050ರ ಹೊತ್ತಿಗೆ ಅಗತ್ಯಕ್ಕಿಂತ ಹೆಚ್ಚಾಗಿರಲಿದೆ. ಈ ವಿಭಾಗದಲ್ಲೂ ಚೀನಾ ಮುಂಚೂಣಿಯಲ್ಲಿರಲಿದೆ. ಆದರೆ 15ರಿಂದ 24ರ ವಯೋಮಾನದವರಲ್ಲಿ ಭಾರತವೇ ಮುಂದಿರಲಿದ್ದು, ವಿಶ್ವದ ಹೊರೆ ಇಲ್ಲಿಂದಲೇ ಹೆಚ್ಚಲಿದೆ. ಈ ವಯೋಮಾನದವರಲ್ಲಿ 2.2 ಕೋಟಿ ಯುವಕ ಹಾಗೂ 1.7 ಕೋಟಿ ಯುವತಿಯರು ಅಧಿಕ ದೇಹ ತೂಕ ಹೊಂದಿದವರು ಇರಲಿದ್ದಾರೆ.

ಅಮೆರಿಕದ ವಾಷಿಂಗ್ಟನ್ ವಿಶ್ವವಿದ್ಯಾಲಯದ ಹಿರಿಯ ತಜ್ಞೆ ಇಮ್ಯಾನುಲೆ ಗಾಕಿಡೊ ಮಾಹಿತಿ ನೀಡಿ, ‘ಜಾಗತಿಕ ಮಟ್ಟದಲ್ಲಿ ದೇಹ ತೂಕ ಮತ್ತು ಸ್ಥೂಲಕಾಯ ಸಮಸ್ಯೆಯು ಗಣನೀಯವಾಗಿ ಹೆಚ್ಚಳವಾಗುತ್ತಿರುವುದು ದುರಂತವೂ ಹೌದು ಹಾಗೂ ಸಮಾಜದ ವೈಫಲ್ಯ ಕೂಡಾ. ಇದಕ್ಕೆ ಸರ್ಕಾರ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳು ಆದ್ಯತೆಯ ಮೇರೆಗೆ ಪರಿಗಣಿಸಿ, ಚಿಕಿತ್ಸೆ ಮತ್ತು ಪರಿಹಾರಕ್ಕೆ ಮುಂದಾಗಬೇಕು’ ಎಂದಿದ್ದಾರೆ.

ಸ್ಥೂಲಕಾಯ ವಿರುದ್ಧ ಹೋರಾಡಲು ಪ್ರಧಾನಿ ಮೋದಿ ಕರೆ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮ್ಮ ‘ಮನ್‌ ಕಿ ಬಾತ್’ ರೇಡಿಯೊ ಕಾರ್ಯಕ್ರಮದಲ್ಲಿ ಫೆ. 23ರಂದು ಮಾತನಾಡಿ, ಸ್ಥೂಲಕಾಯದ ವಿರುದ್ಧ ಹೋರಾಡುವಂತೆ ಕರೆ ನೀಡಿದ್ದರು. ಸದೃಢ ಹಾಗೂ ಆರೋಗ್ಯವಂತ ದೇಶವನ್ನು ಕಟ್ಟಲು ಸ್ಥೂಲಕಾಯ ಸಮಸ್ಯೆಯನ್ನು ತ್ವರಿತವಾಗಿ ಪರಿಹರಿಸಬೇಕು ಎಂದಿದ್ದರು.

ಬಾಡಿ ಮಾಸ್‌ ಇಂಡೆಕ್ಸ್‌ (BMI) 30ಕ್ಕಿಂತ ಹೆಚ್ಚಿರಬಾರದು. ಇಂಥ ಸ್ಥೂಲಕಾಯ ದೇಹ ಹೊಂದಿದವರಲ್ಲಿ ಚಯಾಪಚಯ ಪ್ರಕ್ರಿಯೆ ಹಾಗೂ ಹೃದಯ ಸಂಬಂಧಿ ಸಮಸ್ಯೆ ಹೆಚ್ಚಳವಾಗಿರುತ್ತದೆ. ಇದು ಮೂಳೆ ಆರೋಗ್ಯ, ಭಂಜೆತನ ಹಾಗೂ ಕ್ಯಾನ್ಸರ್‌ಗೂ ಕಾರಣವಾಗಬಹುದು ಎಂದು ಅಧ್ಯಯನ ಹೇಳಿದೆ.

ಸ್ಥೂಲಕಾಯವನ್ನು ಪತ್ತೆ ಮಾಡುವ ಮತ್ತೊಂದು ವಿಧಾನದ ಕುರಿತು ಲ್ಯಾನ್ಸೆಟ್ ಕಮಿಷನ್ ವರದಿಯಲ್ಲಿ ಹೇಳಲಾಗಿದ್ದು, ಸೊಂಟದ ಸುತ್ತಳತೆ ಅಥವಾ ಸೊಂಟ ಮತ್ತು ಪೃಷ್ಠದ ಭಾಗದ ಸುತ್ತಳತೆಯ ಅನುಪಾತವನ್ನೂ ಆಧರಿಸಿ ಬಿಎಂಐ ಲೆಕ್ಕ ಮಾಡಬಹುದು ಎಂದೆನ್ನಲಾಗಿದೆ. ಆದರೆ, ಆರೋಗ್ಯ ಮತ್ತು ರೋಗದ ವಿಷಯದಲ್ಲಿ ಬಿಎಂಐನಿಂದ ಸರಿಯಾದ ಮಾಹಿತಿ ಸಿಗದು. ಇದರಿಂದ ತಪ್ಪು ಚಿಕಿತ್ಸೆ ಪಡೆಯುವ ಅಪಾಯವೂ ಹೆಚ್ಚಿದೆ ಎಂದು ಅಧ್ಯಯನ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.