
ಇನ್ಸುಲಿನ್
ಐಸ್ಟಾಕ್ ಚಿತ್ರ
ಮನುಷ್ಯನ ಚಟುವಟಿಕೆಗೆ ಅತಿ ಅಗತ್ಯವಾದ, ಜೀವಕೋಶಗಳ ರಚನೆಗೆ ಬೇಕಾದ ಗ್ಲೂಕೋಸ್ ಉತ್ಪಾದನೆಯ ನಿರ್ವಹಣೆಗೆ ಅಗತ್ಯವಾದ ಗ್ಲೂಕೋಸ್ ನಿರ್ವಹಣೆಗೆ ಹಾರ್ಮೋನುಗಳ ಬಿಡುಗಡೆಯಲ್ಲಿನ ಏರುಪೇರು ಮಧುಮೇಹಕ್ಕೆ ಕಾರಣ. ಮಧುಮೇಹದ ತೀರಾ ಉಲ್ಬಣಿಸಿದರೆ ಬಾಹ್ಯವಾಗಿ ಇನ್ಸುಲಿನ್ ನೀಡುವ ಪದ್ಧತಿ ವೈದ್ಯಲೋಕಕ್ಕೆ ಕಾಲಿಟ್ಟು 104 ವರ್ಷಗಳು ಸಂದಿವೆ.
ಕೆನಡಾದ ವಿಜ್ಞಾನಿ ಫ್ರೆಡ್ರಿಕ್ ಬಂಟಿಂಗ್ ಮತ್ತು ಚಾರ್ಲ್ಸ್ ಬೆಸ್ಟ್ ಅವರು ಟೊರೆಂಟೊ ವಿಶ್ವವಿದ್ಯಾಲಯದಲ್ಲಿ ನಡೆಸಿದ ಪ್ರಯೋಗ ಯಶಸ್ವಿಯಾಯಿತು. ಇವರಿಗೆ ಜಾನ್ ಜೆ.ಆರ್. ಮೆಕ್‌ಲೋಡ್ ಮತ್ತು ಜೇಮ್ಸ್ ಕೊಲಿಪ್ ನೆರವಾದರು.
ಮಧುಮೇಹದಿಂದ ಬಳಲುತ್ತಿದ್ದ 14 ವರ್ಷದ ಲಿಯೊನಾರ್ಡ್ ಥಾಂಪ್ಸನ್ ಎಂಬ ಬಾಲಕ, ಟೊರೆಂಟೊದ ಆಸ್ಪತ್ರೆಯಲ್ಲಿ ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದ. 1922ರ ಜ. 11ರಂದು ಇನ್ಸುಲಿನ್ ದ್ರಾವಣವನ್ನು ಚುಚ್ಚುಮದ್ದು ರೂಪದಲ್ಲಿ ಈ ಬಾಲಕನಿಗೆ ವಿಜ್ಞಾನಿಗಳು ನೀಡಿದರು. ಇದಾಗಿ 24 ಗಂಟೆಯೊಳಗೆ ಬಾಲಕನ ದೇಹದಲ್ಲಿನ ಸಕ್ಕರೆ ಪ್ರಮಾಣ ಸಾಮಾನ್ಯ ಸ್ಥಿತಿಗೆ ತಲುಪಿತ್ತು. ನೂರು ವರ್ಷಗಳ ಹಿಂದೆ ಪರಿಚಯಗೊಂಡ ಇನ್ಸುಲಿನ್ ಮಧುಮೇಹಿಗಳ ಪಾಲಿಗೆ ಈಗಲೂ ಜೀವರಕ್ಷಕವೇ ಆಗಿ ಉಳಿದಿದೆ.
ಆಧುನಿಕ ಯುಗದಲ್ಲಿ ಬದಲಾದ ಜೀವನಶೈಲಿಯಿಂದ ಮಧುಮೇಹ ಹೊಂದಿರುವವರ ಪ್ರಮಾಣ ಹೆಚ್ಚಾಗುತ್ತಿದೆ ಎಂಬುದು ಎಷ್ಟು ಸತ್ಯವೋ, ಹಿಂದೆಯೂ ಮಧುಮೇಹಿಗಳು ಇದ್ದರು ಎಂಬುದೂ ಅಷ್ಟೇ ಸತ್ಯ. ರಕ್ತದಲ್ಲಿನ ಸಕ್ಕರೆ ಅಂಶ ಪತ್ತೆ ಮಾಡಲು ಆಗ ಗ್ಲೂಕೊ ಮೀಟರ್ ಇರಲಿಲ್ಲ. ಸಕ್ಕರೆ ಅಂಶ ಹೆಚ್ಚಾದರೆ ಅದನ್ನು ನಿಯಂತ್ರಿಸಲು ಇನ್ಸುಲಿನ್ ಇರಲಿಲ್ಲ. ಏನಿದ್ದರೂ ಆಹಾರದಲ್ಲಿ ಕಾರ್ಬೊಹೈಡ್ರೇಟ್ ಪ್ರಮಾಣ ನಿಯಂತ್ರಿಸುವುದಷ್ಟೇ ಇದಕ್ಕಿದ್ದ ಮದ್ದು. ಆದರೆ ಬಹುತೇಕ ಸಂದರ್ಭಗಳಲ್ಲಿ ಈ ಪಥ್ಯವೇ ಸಾವಿಗೆ ನೂಕುತ್ತಿತ್ತು ಎಂದು ಕೆಲ ತಜ್ಞರು ಹಿಂದೆ ಹೇಳಿದ್ದಾರೆ.
ಈ ಹಂತದಲ್ಲೇ ಬಂದ ಇನ್ಸುಲಿನ್ ಮಧುಮೇಹಿಗಳ ಪಾಲಿಗೆ ವರವಾಯಿತು. 1923ರಲ್ಲಿ ‘ಬೆಂಟಿಂಗ್ ಅಂಡ್ ಬೆಸ್ಟ್’ ಸಂಸ್ಥೆಯು ಇನ್ಸುಲಿನ್‌ಗೆ ಅಮೆರಿಕದ ಪೇಟೆಂಟ್ ಹಕ್ಕನ್ನು ಪಡೆಯಿತು. ಇನ್ಸುಲಿನ್ ಪ್ರತಿಯೊಬ್ಬರಿಗೂ ಲಭ್ಯವಾಗಬೇಕು ಎಂಬ ಉದ್ದೇಶದಿಂದ ಅದನ್ನು ಟೊರೆಂಟೊ ವಿಶ್ವವಿದ್ಯಾಲಯಕ್ಕೆ ಮಾರಿತು. ನಂತರ ಯಾವುದೇ ರಾಯಧನವನ್ನೂ ಪಡೆಯದೇ ಇನ್ಸುಲಿನ್ ಉತ್ಪಾದಿಸುವ ಪರವಾನಗಿಯನ್ನು ವಿಶ್ವವಿದ್ಯಾಲಯವು ಕಂಪನಿಗಳಿಗೆ ನೀಡಿತು. ಅಂದಿನಿಂದ ಇಂದಿನವರೆಗೂ ಮಧುಮೇಹ ಚಿಕಿತ್ಸೆಯಲ್ಲಿ ಚಾಲ್ತಿಯಲ್ಲಿರುವ ಇನ್ಸುಲಿನ್, ಕಾಲಕಾಲಕ್ಕೆ ಪರಿಷ್ಕರಣೆಗೊಳಪಡುತ್ತಾ, ಚಿಕಿತ್ಸೆ ಮತ್ತು ಸ್ವರೂಪದಲ್ಲೂ ಬದಲಾವಣೆಗಳನ್ನು ಕಂಡಿದೆ.
'ಮಧುಮೇಹ ತೀರಾ ವೇಗವಾಗಿ ಬೆಳೆಯುತ್ತಿದೆ. 20ರಿಂದ 79 ವರ್ಷದವರೆಗಿನವರಲ್ಲಿ ಮಧುಮೇಹ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ಭಾರತವನ್ನು ಜಗತ್ತಿನ ಮಧುಮೇಹ ರಾಜಧಾನಿ ಎಂದೇ ಕರೆಯಲಾಗುತ್ತಿದೆ. ಇದು ವಂಶಪಾರಂಪರ್ಯವಾಗಿಯೂ ಬರಬಹುದು ಅಥವಾ ಜೀವನ ಶೈಲಿಯಲ್ಲಿನ ಬದಲಾವಣೆಯೂ ಇದಕ್ಕೆ ಕಾರಣ ಇರಬಹುದು. ಆದರೆ ಸಕ್ಕರೆ ಕಾಯಿಲೆ ಎಂದಾಕ್ಷಣ ‘ಇನ್ಸುಲಿನ್’ ಎಂಬ ಪರಿಹಾರದ ಮಾತುಗಳು ಸಾಮಾನ್ಯ. ಇನ್ಸುಲಿನ್ ಚುಚ್ಚಿಕೊಳ್ಳಬೇಕೇ? ಜೀವನ ಪರ್ಯಂತ ಇದನ್ನು ಪಡೆಯಬೇಕೇ? ಇನ್ಸುಲಿನ್ ಎಂದರೆ ಕೊನೆಯ ಹಂತವೇ? ಎಂಬಿತ್ಯಾದಿ ಪ್ರಶ್ನೆಗಳು ಮಧುಮಹಿಗಳನ್ನು ಕಾಡುವುದೂ ಇದೆ. ಆದರೆ ಅದು ನಿಜವಲ್ಲ’ ಎಂದೆನ್ನುತ್ತಾರೆ ಬೆಂಗಳೂರಿನ ಸಪ್ತಗಿರಿ ವೈದ್ಯಕೀಯ ವಿಜ್ಞಾನಗಳ ಕಾಲೇಜಿನ ಪ್ರಾಧ್ಯಾಪಕ ಡಾ. ಜಿ.ಬಾಲಚಂದ್ರ.
‘ಟೈಪ್–1 ಡಯಾಬಿಟಿಸ್‌ನವರಿಗೆ ಬೇರೆ ಯಾವುದೇ ವೈದ್ಯಕೀಯ ಮಾರ್ಗೋಪಾಯ ಇಲ್ಲದ ಕಾರಣ ಇನ್ಸುಲಿನ್ ಕೊಡಬೇಕು. ಟೈಪ್–2 ಡಯಾಬಿಟಿಸ್‌ನಲ್ಲಿ ಅಗತ್ಯವಿದ್ದರೆ ಮಾತ್ರ ನೀಡಲಾಗುತ್ತದೆ. ಮಧುಮೇಹ ಇರುವವರಲ್ಲಿ ದೇಹದ ತೂಕ ಗಣನೀಯವಾಗಿ ಕುಸಿಯುತ್ತದೆ. ಆದರೆ ಕೊಬ್ಬಿನಂಶ ಕರಗುವುದಿಲ್ಲ. ಮಧುಮೇಹಿಗಳ ದೇಹದಲ್ಲಿ ಗ್ಲೂಕೋಸ್ ಅನ್ನು ದೇಹ ಹೀರಿಕೊಳ್ಳದ ಕಾರಣ, ಜೀವಕೋಶಗಳ ಬೆಳವಣಿಗೆ ಕ್ಷೀಣಿಸಿರುತ್ತದೆ. ಪ್ರೊಟೀನ್ ಅಂಶ ಕುಸಿಯುವುದರಿಂದ ದೇಹದ ತೂಕ ಕುಸಿಯುತ್ತದೆ. ಆದರೆ, ಇನ್ಸುಲಿನ್ ಪಡೆಯಲು ಆರಂಭಿಸಿದಾಗ, ದೇಹದ ತೂಕ ಹೆಚ್ಚಾಗುತ್ತದೆ. ಇದೊಂದು ದೇಹದ ಸಾಮಾನ್ಯ ಪ್ರಕ್ರಿಯೆ’ ಎಂದೆನ್ನುತ್ತಾರೆ ಡಾ. ಬಾಲಚಂದ್ರ.
ಡಾ. ಜಿ. ಬಾಲಚಂದ್ರ
‘ಇನ್ಸುಲಿನ್ ಕಂಡುಹಿಡಿಯುವ ಮೊದಲು ಮಧುಮೇಹಕ್ಕ ಸೂಕ್ತ ಚಿಕಿತ್ಸೆ ಎಂಬುದೇ ಇರಲಿಲ್ಲ. ಮಕ್ಕಳು ತೀರಿಹೋಗುತ್ತಿದ್ದರು. ಆದರೆ ಇನ್ಸುಲಿನ್ ಆವಿಷ್ಕಾರದಿಂದ ಜೀವಿತಾವಧಿ ಹೆಚ್ಚಳವಾಗಿದೆ. ಆದರೆ ಇನ್ಸುಲಿನ್ ಹೇಗೆ ಚಿಕಿತ್ಸೆ ರೂಪದಲ್ಲಿ ವರವಾಗಿದೆಯೋ, ಹಾಗೆಯೇ ಇದನ್ನು ಯಾವಾಗ ಆರಂಭಿಸಬೇಕು ಎಂಬ ಜ್ಞಾನವೂ ಮುಖ್ಯ. ಯಕೃತ್, ಮೂತ್ರಪಿಂಡ ಸಮಸ್ಯೆ ಉಲ್ಬಣಿಸಿದ ನಂತರ ಇನ್ಸುಲಿನ್ ಆರಂಭಿಸಿದರೆ, ಅಡ್ಡಪರಿಣಾಮಗಳೂ ಹೆಚ್ಚು. ಇನ್ಸುಲಿನ್ ಪಡೆದಾಕ್ಷಣ ಪಥ್ಯ ಬಿಟ್ಟು, ಎಲ್ಲಾ ಬಗೆಯ ಆಹಾರ ಸೇವಿಸುವುದು ತಪ್ಪು’ ಎಂದು ತಿಳಿಸಿದರು.
‘ವೈದ್ಯರು ಶಿಫಾರಸು ಮಾಡಿದ ಅಗತ್ಯ ಔಷಧಗಳನ್ನು ಸೇವಿಸಿ, ಸಹಜ ಊಟವನ್ನು ಮಾಡಿದ ಮರುದಿನ ಖಾಲಿ ಹೊಟ್ಟೆಯಲ್ಲಿರುವಾಗ ನಡೆಸುವ ರಕ್ತ ತಪಾಸಣೆಯಲ್ಲಿ ದೇಹದಲ್ಲಿನ ಸಕ್ಕರೆ ಅಂಶ 250ರ ಮೇಲಿದ್ದರೆ ಇನ್ಸುಲಿನ್ ಆರಂಭಿಸುವುದು ಮಾರ್ಗಸೂಚಿ. ಕ್ಷಯ ಅಥವಾ ಇನ್ನಿತರ ದೀರ್ಘಕಾಲಿಕ ಸೋಂಕಿನಿಂದ ಬಳಲುತ್ತಿರುವವರಿಗೂ ಇನ್ಸುಲಿನ್ ಬೇಕಾಗುತ್ತದೆ. ಶಸ್ತ್ರಚಿಕಿತ್ಸೆ ಮುನ್ನ ದೇಹದಲ್ಲಿನ ಸಕ್ಕರೆ ಅಂಶ ನಿಯಂತ್ರಣಕ್ಕೆ ಇನ್ಸುಲಿನ್ ಅಗತ್ಯ. ಹಾಗೆಂದ ಮಾತ್ರಕ್ಕೆ ಇದು ಜೀವನಪರ್ಯಂತ ತೆಗೆದುಕೊಳ್ಳುವುದಲ್ಲ. ಇದು ಆ ವ್ಯಕ್ತಿಯು ತನ್ನ ಜೀವನಶೈಲಿಯನ್ನು ಎಷ್ಟು ಉತ್ತಮವಾಗಿಟ್ಟುಕೊಳ್ಳುವರೋ ಅಷ್ಟು ಬೇಗ, ಇನ್ಸುಲಿನ್‌ನಿಂದ ಮಾತ್ರೆಗೆ ಬದಲಾಗಬಹುದು’ ಎನ್ನುವುದು ಅವರ ವಿಶ್ವಾಸದ ಮಾತು.
‘ದೇಹದಲ್ಲಿನ ಸಕ್ಕರೆ ಅಂಶದ ಮೂರು ತಿಂಗಳ ಸರಾಸರಿ ಮಟ್ಟ ಅರಿಯಲು ಎಚ್‌ಬಿಎ1ಸಿ ಪರೀಕ್ಷೆ ಇತ್ತೀಚಿನ ದಿನಗಳಲ್ಲಿ ನಡೆಸಲಾಗುತ್ತಿದೆ. ಇದನ್ನು ಆಧರಿಸಿ ಇನ್ಸುಲಿನ್ ಪ್ರಮಾಣ ಅಗತ್ಯವಿದ್ದಲ್ಲಿ, ಎಷ್ಟು ಎಂಬುದನ್ನು ಮಾರ್ಗಸೂಚಿ ಆಧರಿಸಿ ತಜ್ಞ ವೈದ್ಯರೇ ನಿರ್ಧರಿಸುತ್ತಾರೆ. ಈ ಹಿಂದೆ ಚುಚ್ಚು ಮದ್ದು ರೂಪದಲ್ಲಿ ಇನ್ಸುಲಿನ್ ಪಡೆಯಬೇಕಾಗಿತ್ತು. ವಿಜ್ಞಾನ ಲೋಕದಲ್ಲಿನ ನಿರಂತರ ಆವಿಷ್ಕಾರದಂತೆ ಇನ್ಸುಲಿನ್ ಪಡೆಯುವ ರೀತಿಯಲ್ಲೂ ಸಾಕಷ್ಟು ಬದಲಾವಣೆಗಳಾಗಿವೆ. ಅವುಗಳಲ್ಲಿ ಪ್ರಮುಖವಾಗಿ ಚುಚ್ಚು ಮದ್ದು ಬದಲು ‘ಪೆನ್’ ರೂಪದಲ್ಲಿ ಈಗ ಇನ್ಸುಲಿನ್ ಸಾಧನ ಬಂದಿದ್ದು, ಇದನ್ನು ಪಡೆಯುವುದು ಸುಲಭ’ ಎಂದು ಡಾ. ಬಾಲಚಂದ್ರ ವಿವರಿಸಿದರು.
ಇನ್ಸುಲಿನ್ ಶೇಖರಿಸಿಡಲು ರೆಫ್ರಿಜರೇಟರ್ ಬೇಕು ಎಂದೇನೂ ಇಲ್ಲ. ಮನೆಯಲ್ಲಿ 15ರಿಂದ 20 ಡಿಗ್ರಿ ಸೆಲ್ಸಿಯಸ್ ತಾಪಮಾನ ಇದ್ದಲ್ಲಿ ಮತ್ತು ಇನ್ಸುಲಿನ್ ವಯಲ್ ನೇರವಾಗಿ ಸೂರ್ಯನ ಬೆಳಕಿಗೆ ಸೋಕದಿದ್ದಲ್ಲಿ 21 ದಿನಗಳವರೆಗೆ ಇದನ್ನು ಇಡಬಹುದು. ಸಾಮಾನ್ಯವಾಗಿ ಒಂದು ವಯಲ್ 400 ಯೂನಿಟ್ ಹೊಂದಿರುತ್ತದೆ. ದಿನಕ್ಕೆ 20ರಿಂದ 25 ಯೂನಿಟ್ ಪಡೆಯುವುದಾದರೆ, 20 ದಿನಗಳ ಒಳಗಾಗಿ ಒಂದು ಪೆನ್ ಖಾಲಿಯಾಗುತ್ತದೆ. ಹೀಗಾಗಿ ಫ್ರಿಜ್ ಬೇಕೇಬೇಕು ಎಂಬ ಅನಿವಾರ್ಯವಿಲ್ಲ.
ಕಾರಿನಲ್ಲಿ ಪ್ರಯಾಣಿಸುವಾಗ ಇನ್ಸುಲಿನ್ ಇರುವ ಪೆನ್ ಅನ್ನು ಡ್ಯಾಶ್ ಬೋರ್ಡ್‌ನಲ್ಲಿ ಅಥವಾ ಮೇಲೆ ಇಡಬಾರದು. ಅಲ್ಲಿ ಸೂರ್ಯನ ಶಾಖ ಸೋಕುತ್ತದೆ. ಬದಲಿಗೆ ಫ್ಲಾಸ್ಕ್‌ನಲ್ಲಿ ಐಸ್ ಹಾಕಿ ತೆಗೆದುಕೊಂಡು ಹೋಗಬಹುದು ಅಥವಾ ಚೀಲದಲ್ಲಿ ಬಟ್ಟೆಯ ನಡುವೆ ಇಟ್ಟೂ ತೆಗೆದುಕೊಂಡು ಹೋಗಬಹುದು ಎನ್ನುವುದು ಅವರ ಸಲಹೆ.
ಇನ್ಸುಲಿನ್‌ನಲ್ಲಿ ಶಾರ್ಟ್ ಆ್ಯಕ್ಟಿಂಗ್, ಅಲ್ಟ್ರಾ ಶಾರ್ಟ್ ಆ್ಯಕ್ಟಿಂಗ್, ಲಾಂಗ್ ಆ್ಯಕ್ಟಿಂಗ್ ಮತ್ತು ಅಲ್ಟ್ರಾ ಲಾಂಗ್ ಆ್ಯಕ್ಟಿಂಗ್ ಅಂತ ಇದೆ. ಇನ್ಸುಲಿನ್ ತೆಗೆದುಕೊಳ್ಳುವುದರಿಂದ ನರ, ಕಣ್ಣು, ಮೂತ್ರಪಿಂಡಗಳಿಗೆ ಆಗುವ ಹಾನಿಯನ್ನು ತಪ್ಪಿಸಬಹುದು. ಎಚ್‌ಬಿಎ1ಸಿ ಪರೀಕ್ಷೆಯಲ್ಲಿ ಮಧುಮೇಹಿಗಳಲ್ಲಿನ ಸಕ್ಕರೆ ಅಂಶ 7ರ ಒಳಗಿರಬೇಕು. ಆದರೆ ಇನ್ಸುಲಿನ್ ಅನ್ನು ವೈದ್ಯರು ಶಿಫಾರಸು ಮಾಡಿದ್ದರೆ, ನಿಗದಿತ ಸಮಯದಲ್ಲೇ ತೆಗೆದುಕೊಳ್ಳುವುದು ಸೂಕ್ತ.
ಇದನ್ನು ತೊಡೆಗಾದರೂ ಅಥವಾ ಹೊಕ್ಕಳ ಸುತ್ತ ಒಂದು ಸೆಂಟಿ ಮೀಟರ್ ಹೊರಗೆ ಗಡಿಯಾರದ ಆಕಾರದಲ್ಲಿ ತೆಗೆದುಕೊಳ್ಳಬಹುದು.
ಇನ್ಸುಲಿನ್ ವಯಲ್ ಇಟ್ಟಾಗ ಕೆಳಗೆ ಬಿಳಿ ಬಣ್ಣದ ಹಾಲಿನಂತೆ ಹಾಗೂ ಮೇಲೆ ನೀರು ಸಂಗ್ರಹವಾಗಿರುವಂತೆ ಕಂಡುಬರುತ್ತದೆ. ಆಗ ಅದನ್ನು ಜೋರಾಗಿ ಅಲ್ಲಾಡಿಸಬಾರದು. ಬದಲಿಗೆ ಇಡೀ ವಯಲ್ ಅನ್ನು ನಿಧಾನಕ್ಕೆ ತಿರುಗಿಸಬೇಕು. ಅದು ಸರಿಯಾಗಿ ಬೆರೆತ ನಂತರ ತೆಗೆದುಕೊಳ್ಳುವುದು ಉತ್ತಮ. ಹಾಗೆಯೇ ಫ್ರಿಜ್‌ನಲ್ಲಿಟ್ಟಿದ್ದರೆ ಅರ್ಧ ಗಂಟೆ ಮೊದಲು ಹೊರಗಿಟ್ಟು ನಂತರ ತೆಗೆದುಕೊಳ್ಳುವುದು ಸೂಕ್ತ.
ಆದರೆ ನಾವು ಸೇವಿಸುವ ಊಟಕ್ಕೆ ತಕ್ಕಂತೆ ಇನ್ಸುಲಿನ್ ಪ್ರಮಾಣವನ್ನು ವ್ಯಕ್ತಿಗಳು ಸ್ವಯಂ ಪ್ರೇರಣೆಯಿಂದ ಬದಲಿಸಬಾರದು. ಡೋಸೇಜ್ ಹೆಚ್ಚಿಸುವುದು ಅಥವಾ ಕಡಿಮೆ ಮಾಡಲು ವೈದ್ಯರ ಶಿಫಾರಸು ಅತ್ಯಗತ್ಯ.
ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಅರಿಯಲು ಮನೆಯಲ್ಲೇ ಗ್ಲೂಕೊ ಮೀಟರ್ ಬಳಸುವುದಾದರೆ, ಮೊದಲು ಕೈಯನ್ನು ಬಿಸಿ ನೀರಿನಲ್ಲಿ ತೊಳೆದುಕೊಳ್ಳಬೇಕು. ಬೆರಳ ತುದಿಯ ಬದಲು, ಪಕ್ಕದಲ್ಲಿ ಚುಚ್ಚಿಕೊಳ್ಳಬೇಕು. ರಕ್ತ ಬಾರದಿದ್ದಾಗ ಬೆರಳನ್ನು ಒತ್ತಿ ರಕ್ತ ಹೊರಬರುವಂತೆ ಮಾಡಬಾರದು ಎಂಬುದೂ ಡಾ. ಬಾಲಚಂದ್ರ ಅವರ ಸಲಹೆ.
ಮೊದಲು 40ಐಯು ಹಾಗೂ 100ಐಯು ಎಂಬ ಇನ್ಸುಲಿನ್ ಬಾಟಲಿಗಳು ಬರುತ್ತಿದ್ದವು. ಇವುಗಳು ಕ್ರಮವಾಗಿ ಕೆಂಪು ಹಾಗೂ ಖಾವಿ ಬಣ್ಣದಲ್ಲಿವೆ. ಈಗ ಪೆನ್ ರೂಪದಲ್ಲಿ ಇನ್ಸುಲಿನ್ ವಯಲ್ ಲಭ್ಯ. ಬಾಯಿಯಿಂದ ಸೇವಿಸುವ, ಪ್ಯಾಚ್ ರೂಪದಲ್ಲಿ ದೇಹಕ್ಕೆ ಅಂಟಿಸಿಕೊಳ್ಳುವ, ಚರ್ಮದ ಅಡಿಯಲ್ಲಿ ಪಡೆಯುವ ಇನ್ಸುಲಿನ್‌ಗಳನ್ನು ಕೆಲ ಕಂಪನಿಗಳು ಅಭಿವೃದ್ಧಿಪಡಿಸಿದವು. ಆದರೆ ಅವು ಅಷ್ಟಾಗಿ ಬಳಕೆಗೆ ಬರಲಿಲ್ಲ.
ಸದ್ಯ ಬಾಯಿಯ ಮೂಲಕ ಒಳಗೆ ಎಳೆದುಕೊಳ್ಳುವ ಇನ್ಸುಲಿನ್ ಮಾರುಕಟ್ಟೆ ಪ್ರವೇಶಿಸಿದೆ. ಆದರೆ ಇದು ದೀರ್ಘಕಾಲ ಪರಿಣಾಮ ಬೀರುವುದಲ್ಲ. ದಿನಕ್ಕೆ 2ರಿಂದ 3 ಬಾರಿ ತೆಗೆದುಕೊಳ್ಳಬೇಕು. ಅಸ್ತಮಾ, ಬ್ರಾಂಕೈಟಿಸ್, ಶಾಸ್ವಕೋಶ ಸಂಬಂಧಿತ ಸಮಸ್ಯೆ ಇದ್ದರೆ ಇದು ಹೆಚ್ಚು ಪರಿಣಾಮಕಾರಿಯಲ್ಲ. ಪುಡಿ ರೂಪದಲ್ಲಿ ಇರುವುದರಿಂದ ಮತ್ತು ಅದು ಶ್ವಾಸಕೋಶಕ್ಕೆ ತಲುಪಿ ಅಲ್ಲಿಂದ ತನ್ನ ಕೆಲಸ ಆರಂಭಿಸುವುದರಿಂದಲೂ ಪ್ರತಿ ಆರು ತಿಂಗಳಿಗೊಮ್ಮೆ ಶ್ವಾಸಕೋಶ ಪರೀಕ್ಷೆಗೆ ಒಳಪಡಬೇಕಾದ್ದು ಕಡ್ಡಾಯ ಎಂದು ಡಾ. ಬಾಲಚಂದ್ರ ತಿಳಿಸಿದರು.
ಇನ್ಸುಲಿನ್ ಎಂಬುದು ಅಂತಿಮವಲ್ಲ. ಆದರೆ ಮಧುಮೇಹಿಗಳು ಕಾಲಕಾಲಕ್ಕೆ ತಪಾಸಣೆಗೆ ಒಳಪಟ್ಟು ವೈದ್ಯರ ಶಿಫಾರಸಿನ ಮೇರೆಗೆ ಸೂಕ್ತ ಸಮಯದಲ್ಲಿ ಆರಂಭಿಸಿದರೆ ಯಕೃತ್, ಮೂತ್ರಪಿಂಡ, ಕಣ್ಣನ್ನೂ ಒಳಗೊಂಡಂತೆ ಅಂಗಾಂಗಗಳನ್ನು ರಕ್ಷಿಸಲು ಸಾಧ್ಯ.
ಮಧುಮೇಹ ತೀರಾ ಉಲ್ಬಣಿಸಿದಾಗ ಇನ್ಸುಲಿನ್, ಅದೂ ಕೆಲಸ ಮಾಡದಿದ್ದಾಗ ಪ್ಯಾಂಕ್ರಿಯಾಸ್ ಕಸಿಯೊಂದೇ ಇರುವ ಪರಿಹಾರ. ಆದರೆ ಅಂಗಾಂಗ ಕಸಿಗೆ ದಾನಿಗಳು ಸಿಗಬೇಕೆನ್ನುವ ಸವಾಲೂ ಇದೆ. ಹೀಗಾಗಿ ಜೀವನಶೈಲಿಯನ್ನೇ ಉತ್ತಮಪಡಿಸಿಕೊಳ್ಳುವುದು ಹಾಗೂ ರೋಗಗಳು ಬಂದಾಗ ಸ್ವಯಂ ವೈದ್ಯರಾಗದೆ, ತಜ್ಞ ವೈದ್ಯರ ಶಿಫಾರಸಿನಂತೆ ಸೂಕ್ತ ಔಷಧೋಪಚಾರ ಪಾಲಿಸುವುದು ಅತಿ ಮುಖ್ಯ ಎನ್ನುವುದು ಅವರ ಸಲಹೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.