ADVERTISEMENT

ಜೂ.8 ವಿಶ್ವ ಬ್ರೈನ್‌ ಟ್ಯೂಮರ್‌ ದಿನ: ಮಿದುಳಲ್ಲಿ ಗಡ್ಡೆಯಾಗುವುದು ಹೇಗೆ?

ಏಜೆನ್ಸೀಸ್
Published 8 ಜೂನ್ 2021, 7:18 IST
Last Updated 8 ಜೂನ್ 2021, 7:18 IST
ಮಿದುಳು ಕ್ಯಾನ್ಸರ್‌
ಮಿದುಳು ಕ್ಯಾನ್ಸರ್‌   

ಪ್ರತಿ ವರ್ಷ ಜೂನ್ ತಿಂಗಳ 8ನೇ ತಾರೀಖಿನಂದು ವಿಶ್ವ ಬ್ರೈನ್‌ ಟ್ಯೂಮರ್‌ ಡೇ ಅಥವಾ ವಿಶ್ವ ಮಿದುಳು ಕ್ಯಾನ್ಸರ್‌ ದಿನ ಎಂದು ಆಚರಿಸಲಾಗುತ್ತದೆ. ಆರಂಭದಲ್ಲಿ ಜರ್ಮನ್‌ ಬ್ರೈನ್‌ ಟ್ಯೂಮರ್‌ ಅಸೋಸಿಯೇಷನ್‌ ಆರಂಭಿಸಿದ ಬ್ರೈನ್‌ ಟ್ಯೂಮರ್‌ ಡೇ ಅನ್ನು ಇಂದು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ.

ವಿಶ್ವದಾದ್ಯಂತ ಜನರಲ್ಲಿ ಮಿದುಳು ಕ್ಯಾನ್ಸರ್‌ ಬಗ್ಗೆ ಅರಿವು ಮೂಡಿಸುವುದು ಮತ್ತು ಮಾರಣಾಂತಿಕ ಟ್ಯೂಮರ್‌ ಬಗ್ಗೆ ಶಿಕ್ಷಣ ನೀಡುವುದು ಬ್ರೈನ್‌ ಟ್ಯೂಮರ್‌ ಡೇಯ ಪ್ರಮುಖ ಗುರಿಯಾಗಿದೆ.

ಮಿದುಳಿನಲ್ಲಿ ಅನಾರೋಗ್ಯಕರ ಜೀವಕೋಶಗಳು ಗೆಡ್ಡೆಯಾಕಾರದಲ್ಲಿ ಗುಂಪುಗೂಡುವುದನ್ನು ಬ್ರೈನ್‌ ಟ್ಯೂಮರ್‌ ಎನ್ನಲಾಗುತ್ತದೆ. ಇದನ್ನು ಮಿದುಳಿನ ಕ್ಯಾನ್ಸರ್‌ ಎಂದು ಗುರುತಿಸಲಾಗುತ್ತದೆ. ಸಾಮಾನ್ಯವಾಗಿ ಬ್ರೈನ್‌ ಟ್ಯೂಮರ್‌ಗೆ ಒಳಗಾದ ವ್ಯಕ್ತಿ ಬದುಕುಳಿಯಲು ಕಷ್ಟಸಾಧ್ಯ. ಹಲವು ಚಿಕಿತ್ಸೆಗಳು ಲಭ್ಯವಿದ್ದರೂ ಫಲಕಾರಿಯಾಗಿ ಪೂರ್ಣವಾಗಿ ಗುಣಮುಖರಾದವರ ಸಂಖ್ಯೆ ವಿರಳ.

ADVERTISEMENT

ಮಿದುಳಿನ ಯಾವ ಭಾಗದಲ್ಲಿ ಟ್ಯೂಮರ್‌ ಕಾಣಿಸಿಕೊಳ್ಳುತ್ತದೆ ಎಂಬುದರ ಮೇಲೆ ನರಮಂಡಲದ ವ್ಯವಸ್ಥೆ ಮೇಲೆ ಬೀರುವ ಪರಿಣಾಮ ಮತ್ತು ಟ್ಯೂಮರ್‌ ಯಾವ ಪ್ರಮಾಣದಲ್ಲಿ ಉಲ್ಬಣಗೊಳ್ಳುತ್ತದೆ ಎಂಬುದನ್ನು ಪತ್ತೆ ಹಚ್ಚಲು ಸಾಧ್ಯ.

ಸಾಮಾನ್ಯವಾಗಿ ಆರೋಗ್ಯವಂತ ಜೀವಕೋಶಗಳ ಡಿಎನ್‌ಎ ರೂಪಾಂತರಗಳಲ್ಲಿ ವಿಭಿನ್ನತೆ ಕಂಡಾಗ ಪ್ರೈಮರಿ ಬ್ರೈನ್‌ ಟ್ಯೂಮರ್‌ ಉಂಟಾಗುತ್ತದೆ ಎನ್ನಲಾಗಿದೆ. ಹೀಗೆ ಹುಟ್ಟಿಕೊಂಡ ರೂಪಾಂತರಿ ಜೀವಕೋಶಗಳು ವಿಪರೀತ ಬೆಳವಣಿಗೆ ಹೊಂದುತ್ತವೆ ಮತ್ತು ಅಷ್ಟೇ ಪ್ರಮಾಣದಲ್ಲಿ ವಿಭಜನೆಗೊಳ್ಳುತ್ತವೆ. ಇದರಿಂದ ಆರೋಗ್ಯವಂತ ಜೀವಕೋಶಗಳಿಗೆ ಹಾನಿಯಾಗುತ್ತದೆ. ಹೀಗೆ ಕಾಯಿಲೆ ಹೊಂದಿದ ಕೋಶಗಳು ಗೆಡ್ಡೆಯ ಆಕಾರದಲ್ಲಿ ಒಂದೆಡೆ ಸೇರಿಕೊಳ್ಳುತ್ತವೆ.

ಮಿದುಳಿನ ಕ್ಯಾನ್ಸರ್‌ ಸಮಸ್ಯೆಯಲ್ಲಿ ಪ್ರಮುಖವಾಗಿ ನಾಲ್ಕು ವಿಧಗಳಿವೆ.

  1. ಮ್ಯಾಲಿಜ್ಞೆನ್ಟ್‌ ಬ್ರೈನ್‌ ಟ್ಯೂಮರ್‌, ಅಂದರೆ ಕ್ಯಾನ್ಸರ್‌ ಸಹಿತ ಸಮಸ್ಯೆ,
  2. ಬೆನಿಗ್ನ್‌ ಬ್ರೈನ್‌ ಟ್ಯೂಮರ್‌, ಅಂದರೆ ಕ್ಯಾನ್ಸರ್‌ ರಹಿತ ಸಮಸ್ಯೆಯಾಗಿದೆ.
  3. ಪ್ರೈಮರಿ ಬ್ರೈನ್‌ ಟ್ಯೂಮರ್‌: ಇದು ಮೊದಲು ಮಿದುಳಿನಲ್ಲಿ ಆರಂಭವಾಗುವ ಬ್ರೈನ್‌ ಟ್ಯೂಮರ್‌.
  4. ಮೆಟಾಸ್ಟಾಟಿಕ್‌ ಟ್ಯೂಮರ್‌: ಇದು ದೇಹದ ಇತರ ಭಾಗಗಳಲ್ಲಿ ಕ್ಯಾನ್ಸರ್‌ ಒಳಗೊಂಡು ನಂತರ ಮಿದುಳಿಗೆ ಹರಡುವ ಟ್ಯೂಮರ್‌.

ಬ್ರೈನ್‌ ಟ್ಯೂಮರ್‌ ಗುಣಲಕ್ಷಣಗಳು

  • ನಿಧಾನವಾಗಿ ಆರಂಭಗೊಂಡ ತಲೆ ನೋವು ಇದ್ದಕ್ಕಿದ್ದಂತೆ ವಿಪರೀತವಾಗುವುದು,
  • ಕಣ್ಣು ಮಂಜಾಗುವುದು, ಎಲ್ಲವು ಎರಡೆರಡಾಗಿ ಕಾಣಿಸುವುದು, ಕೆಲವೊಮ್ಮೆ ಏನೂ ಕಾಣಿಸದಂತಾಗುವುದು.
  • ಸುಖಾಸುಮ್ಮನೆ ವಾಕರಿಕೆ ಮತ್ತು ವಾಂತಿ ಸಮಸ್ಯೆ ಕಾಣಿಸಿಕೊಳ್ಳುವುದು.
  • ಕೈ ಅಥವಾ ಕಾಲಿನ ಭಾಗದಲ್ಲಿ ನಿಧಾನವಾಗಿ ಸಂವೇದನೆ ಕಳೆದುಕೊಂಡು ಚಲನೆ ಇಲ್ಲದಂತಾಗುವುದು.
  • ನಡೆದಾಡುವಾಗ ಸಮತೋಲನ ತಪ್ಪುವುದು.
  • ಮಾತನಾಡಲು ಕಷ್ಟವಾಗುವುದು ಅಥವಾ ತೊದಲುವುದು.
  • ದಿನದ ಕೆಲಸ ಕಾರ್ಯಗಳಲ್ಲಿ ವಿಪರೀತ ಗೊಂದಲ ಉಂಟಾಗುವುದು.
  • ನಡವಳಿಕೆಯಲ್ಲಿ ತುಂಬ ಬದಲಾವಣೆ ಕಂಡುಬರುವುದು.
  • ಕಿವಿ ಕೇಳಿಸದಂತಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.