ADVERTISEMENT

ಆರೋಗ್ಯ | ಟೀಕೆ ಜೋಕೆ!

ರಘು ವಿ
Published 26 ಮೇ 2025, 23:30 IST
Last Updated 26 ಮೇ 2025, 23:30 IST
   

‘ಟೀಕೆಗಳು ನಮಗೆ ಒಪ್ಪಿಗೆಯಾಗದಿರಬಹುದು. ಆದರೆ ಅವು ಬಹಳ ಆವಶ್ಯಕ. ಏಕೆಂದರೆ ದೇಹದಲ್ಲಿನ ನೋವು ಹೇಗೆ ದೇಹದ ಆರೋಗ್ಯ ರಕ್ಷಣೆಯತ್ತ ಗಮನಸೆಳೆಯುತ್ತದೋ ಹಾಗೆ ಟೀಕೆ ಅನಾರೋಗ್ಯಕಾರಿ ಅಂಶಗಳ ಕಡೆಗೆ ನಮ್ಮ ಗಮನವನ್ನು ಸೆಳೆಯುತ್ತದೆ’ – ಎಂದು ಹೇಳಿದ್ದಾನೆ, ಚರ್ಚಿಲ್.

ಮಾನವಸಂಬಂಧದ ಸೂಕ್ಷ್ಮತೆಯಲ್ಲಿ ಸಂವಹನದ, ಅಂದರೆ ನಮ್ಮ ನಡುವಿನ ಮಾತುಕತೆಯ ಮೊನಚು ಸಂಬಂಧವನ್ನು ಕೆಡಿಸಿಬಿಡಬಲ್ಲದು. ಮಾತನಾಡುವ ಭರದಲ್ಲಿ ನಮ್ಮ ಅಭಿಪ್ರಾಯಗಳನ್ನು ತಿಳಿಸುವ ಆವೇಗದಲ್ಲಿ, ವಿಮರ್ಶೆ ಮಾಡುವ ನೆಪದಲ್ಲಿ ಕಟುವಾದ ಟೀಕೆಗಳನ್ನು ಮಾಡಿದಾಗ ಎದುರುಗಿನವರ ಮನಸ್ಸು ಮುರಿದುಬೀಳುತ್ತದೆ. ಪರಸ್ಪರ ವಿಚಾರವಿಮರ್ಶೆ ಮಾಡುವಾಗ ಸಮತೋಲನದಿಂದ ಮಾಡಬೇಕು. ನಾವೆಲ್ಲರೂ ನಮ್ಮ ಬದುಕಿನಲ್ಲಿ ಬಂದಿಲ್ಲೊಂದು ಹಂತದಲ್ಲಿ ಅಥವಾ ಸಂದರ್ಭದಲ್ಲಿ ಟೀಕೆಗಳನ್ನು ಎದುರಿಸಿಯೇ ಇರುತ್ತೇವೆ. ಟೀಕೆಗಳು ನಮಗೆ ಸಹಕಾರಿಯಾಗುತ್ತವೆ. ಅತಿಯಾದರೆ ಅಮೃತವೂ ವಿಷ – ಎಂಬಂತೆ ಹರಿತವಾದ ಟೀಕೆ ಬದುಕನ್ನೇ ಹಾಳುಗೆಡವಬಲ್ಲದು, ಸಂಸ್ಥೆಗಳನ್ನು ಮುಳುಗಿಸಬಲ್ಲದು. ‘ಪರಸ್ಪರ ಟೀಕೆಯೆ ಎಲ್ಲ ಅವಘಡಕ್ಕೆ ಕಾರಣ. ಸಂಘಟನೆಗಳನ್ನು ಕೂಡ ಮುರಿದಿಕ್ಕಲು ಅದೇ ಮೂಲ’ ಎನ್ನುತ್ತಾರೆ, ಸ್ವಾಮಿ ವಿವೇಕಾನಂದರು.

ಅತಿಯಾದ ಟೀಕೆ ಎಂದರೇನು? ವ್ಯಕ್ತಿಯ ಪ್ರತಿಯೊಂದು ನಡೆಯಲ್ಲಿಯೂ ತಪ್ಪುಗಳನ್ನು ಕಂಡು ಹಿಡಿದು ಅವರು ಮಾಡಿದ ಎಲ್ಲವನ್ನು ಸರಿಪಡಿಸುವ ಕ್ರಮ ಕೈಗೊಳ್ಳುವುದು ಮತ್ತು ಅನವಶ್ಯಕ ವಾಗ್ದಂಡನೆಯನ್ನು ನಡೆಸುವುದು. ಈ ಬಗೆಯ ಟೀಕೆಯಿಂದ ಉಂಟಾಗುವ ದುಷ್ಪರಿಣಾಮಗಳೆಂದರೆ: ಮೊದಲನೆಯದಾಗಿ, ಆತ್ಮವಿಶ್ವಾಸದ ನಾಶ; ವ್ಯಕ್ತಿಯ ಸ್ವಗೌರವವನ್ನು ಕುಗ್ಗಿಸಿ ಆತ್ಮವಿಶ್ವಾಸವನ್ನು ನಾಶಪಡಿಸುತ್ತದೆ. ಎರಡನೆಯದಾಗಿ, ಆತಂಕ ಮತ್ತು ಒತ್ತಡವನ್ನು ಉಂಟುಮಾಡುತ್ತದೆ; ಅತಿಯಾದ ಟೀಕೆಗಳು ಕಟುಕಿಗಳು ವ್ಯಕ್ತಿಯನ್ನು ಆತಂಕ ಮತ್ತು ಒತ್ತಡಕ್ಕೆ ಗುರಿಪಡಿಸಿ ಪ್ರತಿಯೊಂದು ಹೆಜ್ಜೆಯನ್ನು ಅವರು ಅತಿ ಎಚ್ಚರದಿಂದ ಇಡುವಂತಾಗುತ್ತದೆ. ಮೂರನೆಯದಾಗಿ, ಅವರು ಸೋಲಿನ ಭಯ ಹೊಂದುತ್ತಾರೆ; ಯಾವ ಕಾರ್ಯದಲ್ಲಿ ತೊಡಗಲೂ ಹಿಂಜರಿಯುತ್ತಾರೆ. ನಾಲ್ಕನೆಯದಾಗಿ, ಅತಿಯಾದ ಟೀಕೆಗೆ ಒಳಗಾದವರಲ್ಲಿ ರಕ್ಷಣಾತ್ಮಕ ಮನೋಭಾವ ಹೆಚ್ಚಿ ಅವರು ಯಾವುದೇ ಬಗೆಯ ವಿಮರ್ಶೆಯನ್ನು ತಮ್ಮ ಮೇಲಾಗುವ ಅಕ್ರಮಣದಂತೆ ಭಾವಿಸುವ ಹಂತಕ್ಕೆ ಮುಟ್ಟುತ್ತಾರೆ. ಇವೆಲ್ಲದರಿಂದ ಸಂಬಂಧಗಳು ಹಾಳಾಗುತ್ತವೆ. ಇಂತಹ ಟೀಕಾಕಾರರನ್ನು ಅವರು ದೂರ ಮಾಡುತ್ತಾರೆ. ಇದು ಟೀಕೆಯನ್ನು ಎದುರಿಸಿದವರ ಮೇಲಾಗುವ ಪರಿಣಾಮ.

ADVERTISEMENT

ಆದರೆ ಈ ಬಗೆಯ ಟೀಕೆಯನ್ನು ಯಾರಾದರೂ ಏಕಾದರೂ ಮಾಡುತ್ತಾರೆ ಎಂಬುದನ್ನೂ ಗಮನಿಸಿದಾಗ ಈ ಕೆಳಗಿನ ಕಾರಣಗಳನ್ನು ಪಟ್ಟಿ ಮಾಡಬಹುದು. ಅಂತಃಕರಣದ ಕೊರತೆ ಮತ್ತು ಭಯ ಈ ಬಗೆಯ ನಡವಳಿಕೆಗೆ ಕಾರಣ. ತಾವೇ ಅಭದ್ರತೆಯಂತೆ ತೊಳಲುತ್ತಿರುವುದರಿಂದ ಬೇರೆಯವರನ್ನು ಟೀಕಿಸಿ ತಾವು ಅವರಿಗಿಂತ ಹೆಚ್ಚಿನವರೆಂದು ತೋರಿಸಿಕೊಳ್ಳುವುದು ಇಂತಹವರ ಸ್ವಭಾವ. ಜೊತೆಗೆ ಬೇರೆಯವರ ಬಗ್ಗೆ ತಮ್ಮ ಮಾತುಗಳು ಎಷ್ಟರ ಮಟ್ಟಿಗೆ ಹಾನಿಕಾರಕವೆಂದು ಅವರು ಊಹಿಸಿಕೊಳ್ಳಲಾರರು. ಇತರರು ತಮ್ಮನ್ನು ಟೀಕಿಸುವ ಮೊದಲೇ ತಾವೇ ಅವರನ್ನು ಟೀಕಿಸಿ ಆ ಭಯದಿಂದ ಮುಕ್ತರಾಗುವುದು ಇಂಥವರ ಉದ್ದೇಶ.

ಹಾಗಾದರೆ ಅತಿಯಾದ ಟೀಕೆಯಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳುವುದು ಹೇಗೆ ಎಂಬುದನ್ನು ಗಮನಿಸೋಣ. ಮೊದಲನೆಯದಾಗಿ, ಶಾಂತಿಯಿಂದ ಇರುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ತಕ್ಷಣದ ಪ್ರತಿಕ್ರಿಯೆ ನೀಡದೆ ಒಂದು ದೀರ್ಘ ಉಸಿರನ್ನು ಎಳೆದುಕೊಂಡು ಪ್ರತಿಕ್ರಿಯೆಗೆ ಮುನ್ನ ಆಳವಾಗಿ ಆಲೋಚಿಸಬೇಕು. ಎರಡನೆಯದಾಗಿ, ನಮ್ಮನ್ನು ಟೀಕಿಸುವವರ ಮಾತಿನಿಂದ ನಮಗಾಗುತ್ತಿರುವ ತೊಂದರೆಯನ್ನು ಅವರಿಗೆ ಮನವರಿಕೆ ಮಾಡಿಕೊಟ್ಟು ವೈಯಕ್ತಿಕ ನಿಂದನೆಯನ್ನು ಕೈಬಿಡುವಂತೆ ಸೂಚಿಸಬೇಕು. ನಮ್ಮ ಬಗ್ಗೆ ನಾವೇ ಅರಿವಿನ ಆರೈಕೆ ಮಾಡಿಕೊಂಡು ದೈಹಿಕ, ಭಾವನಾತ್ಮಕ ಮತ್ತು ಮಾನಸಿಕ ಸಮತೋಲನವನ್ನು ಕಾಯ್ದುಕೊಳ್ಳಬೇಕು. ಯಾವ ಚಟುವಟಿಕೆಯಿಂದ ನಮ್ಮ ಬಗ್ಗೆ ನಮಗೆ ಒಳ್ಳೆ ಅಭಿಪ್ರಾಯ ಮತ್ತು ವಿಶ್ವಾಸ ಮೂಡುತ್ತದೊ ಅಂತಹ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು. ಕೊನೆಯದಾಗಿ, ಸ್ನೇಹಿತರೊಂದಿಗೆ ಮಾತನಾಡಿ ನಮ್ಮ ನೋವನ್ನು ಅವರೊಂದಿಗೆ ಹಂಚಿಕೊಂಡು ಬೇಕಾದ ಒತ್ತಾಸೆ ಮತ್ತು ಸಲಹೆಯನ್ನು ಪಡೆದುಕೊಳ್ಳಬೇಕು.

ಮಾತನಾಡುವ ಮುನ್ನ ಮಾತಿನ ಹಿಂದಿರುವ ಆವೇಗವನ್ನು ಗುರುತಿಸಿಕೊಳ್ಳುವುದು, ಅಂದರೆ ಅನವಶ್ಯಕವಾಗಿ ದನಿ ಎತ್ತರಿಸುವುದಾಗಲೀ ಅಥವಾ ಕಟುಪದಗಳನ್ನು ಪ್ರಯೋಗಿಸುವುದಾಗಲಿ ಮಾಡಬಾರದು. ರೂಮಿ, ‘ಪದಗಳನ್ನು ಎತ್ತರಿಸು, ನಿನ್ನ ದನಿಯನ್ನಲ್ಲ. ಹೂವುಗಳನ್ನು ಅರಳಿಸುವುದು ಮಳೆಯೇ ಹೊರತು ಗುಡುಗಲ್ಲ’ ಎಂದು ಹೇಳಿದ್ದಾನೆ. ಸಕಾರಾತ್ಮಕ ಟೀಕೆಯಿಂದ ಅಥವಾ ಸಮತೋಲನದ ವಿಮರ್ಶೆಯಿಂದ ನಾವು ಆರೋಗ್ಯಕರ ಮತ್ತು ಪ್ರೋತ್ಸಾಹದಾಯಕ ವಾತಾವರಣವನ್ನು ಸೃಷ್ಟಿಸಿಕೊಳ್ಳಬಹುದು. ಇಷ್ಟೆಲ್ಲ ವಿಚಾರಗಳು ತಿಳಿದಿದ್ದರೂ ಟೀಕೆಯ ಎದುರು ನಾವು ಕೆಲವೊಮ್ಮೆ ಅಸಹಾಯಕತೆಯನ್ನು ಅನುಭವಿಸುವ ಪ್ರಸಂಗ ಬಂದಾಗ ಕಗ್ಗದ ಈ ಪದ್ಯವನ್ನು ನೆನಪು ಮಾಡಿಕೊಳ್ಳಬೇಕು: ‘ಕಳವಳವ ನೀಗಿಬಿಡು; ತಳಮಳವ ದೂರವಿಡು, ಕಳೆ; ತಳ್ಳು ಗಲಭೆ ಗಾಬರಿಯ ಮನದಿಂದ, ಅಲೆದಾಡುತಿರೆ ದೀಪ ಕಣ್ಗೆ ಗುರಿ ತಪ್ಪುವುದು, ತಿಳಿತಿಳಿವು ಶಾಂತಿಯಲಿ – ಮಂಕುತಿಮ್ಮ.’

ವಿಚಲಿತರಾಗದೆ ನಮ್ಮ ತಪ್ಪುಗಳನ್ನು ತಿದ್ದಿಕೊಂಡು, ವಿಮರ್ಶೆ ಸರಿ ಇದ್ದರೆ ಅದನ್ನು ಪಾಲಿಸಿ ಜೀವನದಲ್ಲಿ ಮುಂದಡಿ ಇಡುತ್ತ ಮತ್ತೊಬ್ಬರ ಬಗ್ಗೆ ನಮ್ಮ ಅಭಿಪ್ರಾಯಗಳನ್ನು ಬಹಳ ಸೌಜನ್ಯದಿಂದ ತಿಳಿಸುತ್ತ ಮುಂದುವರಿಯುವುದೇ ಸಹಬಾಳ್ವೆಯ ಸೂತ್ರ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.