
ಹೀಗೊಂದು ಸಂದರ್ಭವನ್ನು ಕಲ್ಪಿಸಿಕೊಳ್ಳಿ: ಯಾವುದೋ ಮಹತ್ವಪೂರ್ಣ ಕೆಲಸವೊಂದನ್ನು ಮಾಡುವುದಿರುತ್ತದೆ, ಹೊರಗಿನಿಂದ ಯಾವ ಒತ್ತಡವೂ, ಸಮಯದ ಮಿತಿಯೂ ಇರುವುದಿಲ್ಲ, ‘ಇಂತಹ ಕೆಲಸವನ್ನು ಮಾಡಿದೆಯೋ ಬಿಟ್ಟೆಯೋ’ ಎಂದು ಕೇಳುವವರೂ ಇರುವುದಿಲ್ಲ; ಆದರೆ ನಮ್ಮ ಪಾಲಿಗೆ ಆ ಕೆಲಸ ಮುಖ್ಯವಾಗಿರುತ್ತದೆ, ಅದು ಸೃಜನಶೀಲ ಬರವಣಿಗೆ, ಕಲೆ ಇರಬಹುದು, ಆತ್ಮೀಯರೊಂದಿಗೆ ಆಡಲೇಬೇಕಾದ ಮುಖ್ಯವಾದ ಮಾತುಕತೆಯಿರಬಹುದು, ಯಾವುದೋ ಒಂದು ಪ್ರಮುಖ ನಿರ್ಧಾರ ಕೈಗೊಳ್ಳುವುದಿರಬಹುದು ಅಥವಾ ಯಾವುದೋ ಕಷ್ಟದ ಸಂದರ್ಭಕ್ಕೊಂದು ಪರಿಹಾರವನ್ನು ಹುಡುಕುವುದಿರಬಹುದು, ಯಾವುದೋ ದುಃಖಕ್ಕೆ ಸಮಾಧಾನವನ್ನು ಅರಸುತ್ತಿರಬಹುದು- ಒಟ್ಟಿನಲ್ಲಿ ಯಾವ ಕೆಲಸದ ಫಲಿತಾಂಶ ಅನಿಶ್ಚಿತವೋ, ಯಾವುದರ ಪರಿಣಾಮವನ್ನು ಊಹಿಸುವುದು ಕಷ್ಟವೋ, ಯಾವುದನ್ನು ಹೇಗೆ ನಿರ್ವಹಿಸಬೇಕೆಂಬುದೇ ತಿಳಿಯದೋ ಅಂತಹ ಸಂದರ್ಭದಲ್ಲಿ ಏನು ಮಾಡಬೇಕೆಂಬುದೇ ತೋಚದ ವಿಹ್ವಲ ಘಳಿಗೆಗಳಲ್ಲಿ ನಿಷ್ಕ್ರಿಯರಾಗಿರುವಾಗ ಕೈಗೆ ಸ್ಮಾರ್ಟ್ ಫೋನೊಂದು ಸಿಗುತ್ತದೆ.
ಏನೂ ತೋಚದೆ ತಲೆಕೆಟ್ಟುಹೋದಾಗ ದೇಹಕ್ಕೆ ಬೇಡದಿದ್ದರೂ ಏನನ್ನಾದರೂ ತಿನ್ನಬೇಕೆಂಬ ಬಯಕೆ ಉಂಟಾಗಿ ತಿಂದಾಗ ತಾತ್ಕಾಲಿಕ ಸಮಾಧಾನವಾಗುತ್ತದಲ್ಲ, ಅಂತಹದ್ದೇ ಮಿಧ್ಯ–ಸಮಾಧಾನವೊಂದು ಸ್ಮಾರ್ಟ್‌ಫೋನನ್ನು ಕೈಯಲ್ಲಿ ಹಿಡಿದು ಸ್ಕ್ರಾಲ್ ಮಾಡುವಾಗಲೂ ಆಗುತ್ತದೆ.
ಅಂತರ್ಜಾಲವೇನು ಸಣ್ಣ ಪ್ರಪಂಚವೇ? ನೋಡಿದಷ್ಟೂ ಹೆಚ್ಚಾಗುತ್ತಲೇ ಹೋಗುವ ಕಟೆಂಟ್‌ಗಳು, ಏನನ್ನು ಬೇಕಾದರೂ, ಯಾರ ವೈಯಕ್ತಿಕ ಜೀವನವನ್ನಾದರೂ ಇಣುಕಿನೋಡಿಬಿಡಬಲ್ಲೆ ಎಂಬ ಭ್ರಮೆ ಹುಟ್ಟಿಸುವ ಸಾಮಾಜಿಕ ಜಾಲತಾಣಗಳು, ನೂರಾರು ಅಭಿಪ್ರಾಯಗಳು, ಸಾವಿರಾರು ಬಗೆಬಗೆಯ ರೀಲ್‌ಗಳು, ಯೂಟ್ಯೂಬ್ ಚಾನಲ್‌ಗಳು, ರೋಚಕ ಸುಳ್ಳುಸುದ್ಧಿಗಳು, ಕೊಳ್ಳಲು, ತಿನ್ನಲು ಪ್ರೇರೇಪಿಸುವ ಹತ್ತಾರು ಆ್ಯಪ್‌ಗಳು, ಬೇಕೆಂದಾಗ ಬೇಕೆನಿಸಿದ್ದೆಲ್ಲಾ ಸಿಕ್ಕೇಬಿಡಬಹುದು ಎನಿಸುವ ಸುಖದ ಅಮಲು ಹುಟ್ಟಿಸುವ ಸಾವಿರಾರು ದಾರಿಗಳು ತೆರೆದುಕೊಳ್ಳುವ ಮಾಯಾಲೋಕದ ಹೆಬ್ಬಾಗಿಲು ಈ ಸ್ಮಾರ್ಟ್ ಫೋನ್.
ನಮ್ಮನ್ನು ಸ್ವಲ್ಪ ಕಾಲವಾದರೂ ನಮ್ಮ ಕಗ್ಗಂಟಾದ ಜೀವನದಿಂದ ಬಿಡುಗಡೆಗೊಳಿಸುವ ಈ ಫೋನನ್ನು ಕೆಳಗಿಟ್ಟರೆ ಮತ್ತದೇ ಖಾಲಿತನ, ಬೇಜಾರು, ಸಪ್ಪೆ ಬದುಕು, ಹಾಗಾಗಿ ಫೋನನ್ನು ದೂರದಲ್ಲಿಡಲು ಮನಸ್ಸಿಲ್ಲ. ವಾಟ್ಸ್ ಆ್ಯಪ್, ಇನ್‌ಸ್ಟಾಗ್ರಾಂ, ಫೇಸ್ಬುಕ್ ನೋಟಿಫಿಕೇಶನ್ನುಗಳನ್ನು ಕಂಡಕೂಡಲೇ ಚಾಕಲೇಟನ್ನು ಕಂಡ ಮಕ್ಕಳಂತೆ ಸಂಭ್ರಮಿಸುತ್ತದೆ ಮನಸ್ಸು; ಲೈಕುಗಳು, ಕಮೆಂಟುಗಳು ಕೊಡುವ ಮನ್ನಣೆಯ ಕಾತರ. ಏನೋ ಹುಡುಕಾಟ, ಯಾವುದೋ ಬಾರದ ಸಂದೇಶಕ್ಕಾಗಿ ಕಾಯುವುದು, ಯಾವುದೋ ಅತೃಪ್ತಿಯನ್ನು ಶಮನಗೊಳಿಸಿಕೊಳ್ಳುವ ಪ್ರಯತ್ನ ಯಾವ ಮೆಸೇಜ್ ಬಂದಿರದೇ ಇದ್ದರೂ ಫೋನನ್ನು ಪದೇಪದೇ ಚೆಕ್ ಮಾಡುವುದು.
ಊಟ ಮಾಡುವಾಗಲೂ ಏನನ್ನಾದರೂ ನೋಡುತ್ತಿರಬೇಕು ಆ ಪುಟ್ಟಪರದೆಯಲ್ಲಿ, ಕೆಲವು ಬಾರಿಯಂತೂ ಇನ್ನೂ ನೋಡುವ ಭರದಲ್ಲಿ ಹೆಚ್ಚು ತಿನ್ನುವುದೂ ಉಂಟು. ಟ್ರಾಫಿಕ್ ಸಿಗ್ನಲ್‌ನಲ್ಲಿ ಏನೋ ಚಡಪಡಿಕೆ. ಯಾರ ಸಂದೇಶ ಹೊತ್ತುತಂದಿರಬಹುದು ಈ ಇ–ಮೇಲ್? ‘ಅಯ್ಯೋ ತೆರೆಯುತ್ತಿಲ್ಲವಲ್ಲ ಈ ಫೈಲು’! ನಾನು ಸಂತೋಷವಾಗಿರಲು ಬೇಕಾದ ಎಲ್ಲವನ್ನೂ ನಿಜಕ್ಕೂ ಪಡೆದಿದ್ದೇನಾ? ಬೇರೆಯವರ ಜೀವನದಲ್ಲಿ ನಡೆಯುತ್ತಿರುವುದೇನು ನೋಡೋಣ – ಎಂಬ ಕೆಟ್ಟ ಕುತೂಹಲ ಕೂಗಿ ಕರೆಯುತ್ತದೆ ಯಾವುದೋ ಕೆಲಸದ ಮಧ್ಯೆಯೂ ಫೋನನ್ನು ತೆರೆಯಲು. ರಾತ್ರಿ ದಿಂಬಿಗೆ ತಲೆಯಿಟ್ಟಾಗ ನಿದ್ರೆ ಬರದಿದ್ದರೆ, ಅರ್ಧ ನಿದ್ರೆಯಲ್ಲಿ ಎಚ್ಚರವಾದರೆ ಎಂಬ ಎಲ್ಲಾ ಆತಂಕಕ್ಕೂ ಸುಲಭ ಪರಿಹಾರ ‘ನಿದ್ರೆ ಬರುವವರೆಗೂ ಫೋನ್ ನೋಡುವೆ’ ಎಂಬ ನಮಗೆ ನಾವೇ ಹೇಳಿಕೊಳ್ಳುವ ಸುಳ್ಳು.
ಇನ್ನು ಆಸ್ಪತ್ರೆಯಲ್ಲೋ ಮತ್ತೆಲ್ಲೋ ಕಾಯಬೇಕಾದಾಗಂತೂ ಫೋನೇ ಆತ್ಮೀಯ ಸ್ನೇಹಿತ. ಬಸ್ಸು, ರೈಲು, ಪಾರ್ಕು, ರಸ್ತೆಯಬದಿ, ಕೊನೆಗೆ ದೇವಸ್ಥಾನದ ಕಟ್ಟೆಯ ಮೇಲೂ ಪ್ರಪಂಚವನ್ನು ಮರೆತು, ಪಕ್ಕದಲ್ಲಿರುವವರ ನಿದ್ರೆ, ನೆಮ್ಮದಿ, ವಿಶ್ರಾಂತಿ, ಮೌನಕ್ಕೆ ತೊಂದರೆಯಾದೀತೆಂಬ ಸಣ್ಣ ಅಳುಕೂ ಇರದೇ, ಇಯರ್ ಫೋನ್ ಬಳಸಬೇಕೆಂಬ ಕನಿಷ್ಠ ಪ್ರಜ್ಞೆಯೂ ಇರದೇ ಜೋರಾಗಿ ಹಾಡುಗಳನ್ನು, ರೀಲುಗಳನ್ನು ಕೇಳುವ, ನೋಡುವ ದುರಭ್ಯಾಸ. ಒಟ್ಟಿನಲ್ಲಿ ಸ್ವ ನಿಯಂತ್ರಣ ಮೀರಿದರೆ ಆಹಾರ, ವಿಶ್ರಾಂತಿ, ನಿದ್ರೆ, ನೆಮ್ಮದಿ, ಅರ್ಥಪೂರ್ಣ ಬಾಂಧವ್ಯ, ಆಳವಾದ ಆಲೋಚನೆ – ಎಲ್ಲದಕ್ಕೂ ಮಾರಕವಾಗಬಹುದು, ಈ ಫೋನ್ ಗೀಳು.
ಇಂತಹ ಫೋನ್ ವ್ಯಸನದ ಕಾಲದಲ್ಲಿ ನಿಜವಾಗಲೂ ಸಂತೋಷವಾಗಿರುವವರು ಯಾರು ಎಂದು ಕೇಳಿದರೆ ‘ಅತ್ಯಗತ್ಯ ಕರೆಗಳಿಗೆ, ಸಂದೇಶಗಳಿಗೆ ಬಿಟ್ಟರೆ ಬೇರೆ ಯಾವುದಕ್ಕೂ ಒಂದು ಕ್ಷಣವೂ ಫೋನ್ ನೋಡಬೇಕೆಂಬ ಆಸಯೇ ಆಗದಷ್ಟು ತಮ್ಮ ಕೆಲಸದಲ್ಲೋ ಹವ್ಯಾಸದಲ್ಲೋ ಬಾಂಧವ್ಯದಲ್ಲೋ ತಲ್ಲೀನರಾಗಿಬಿಟ್ಟಿರುವವರು’ ಎಂದು ಸುಲಭವಾಗಿ ಹೇಳ ಬಹುದೇನೋ? ಇಡೀ ದಿನ ಫೋನಿನಲ್ಲಿ ಅಡಗಿಕೊಂಡಿರದೇ, ದಿನದ ಪ್ರತಿಕ್ಷಣವೂ ಜೀವನದಲ್ಲಿ ತೊಡಗಿಕೊಂಡಿರುವುದೇ ನಿಜವಾದ ಸಂತೋಷದ ಸೂತ್ರ ಎಂದರೆ ತಪ್ಪಾಗದು! ಮುಕ್ತವಾಗಲು ದುಸ್ಸಾಧ್ಯವಾದ ಈ ಫೋನ್ ಗೀಳನ್ನು ನಿಯಂತ್ರಣದಲ್ಲಿಡಲು
ಕೆಲ ಉಪಾಯಗಳು ಇಲ್ಲಿವೆ:
ಫೋನ್ ಗೀಳನ್ನು ಚಾಲ್ತಿಯಲ್ಲಿರಿಸುವುದು ‘ನಾನು ಬೇಡದ್ದನ್ನು ನೋಡುತ್ತಾ ಆರೋಗ್ಯ, ಸಮಯ ಹಾಳು ಮಾಡಿಕೊಳ್ಳುತ್ತಿದ್ದೇನೆ’ ಎಂಬ ಅರಿವು ಉಂಟಾಗದೇ ಇರುವುದು, ಈ ಗಮನಹೀನ ಸ್ಥಿತಿಯೇ ಫೋನಿಗೆ ಅಂಟಿಕೊಂಡಿರುವುದಕ್ಕೆ ಪ್ರಮುಖ ಕಾರಣ. ಜೀವನದಲ್ಲಿ ಏನೋ ಕಾಣೆಯಾಗಿದೆಯೇ? ಖಾಲಿತನವೇ? ಹಾಗಿದ್ದರೆ ಆ ಖಾಲಿತನವೇತಕ್ಕೆ, ಅದನ್ನು ಹೋಗಲಾಡಿಸಲು ಮಾಡುವುದೇನು ಎಂದು ಯೋಚಿಸಬಹುದು, ಆ ಖಾಲಿತನವನ್ನು ಮರೆಮಾಚುವ ಫೋನ್ ಗೀಳನ್ನೇಕೆ ಹಚ್ಚಿಕೊಂಡಿದ್ದೇವೆ ಎಂದು ಪ್ರಶ್ನಿಸಿಕೊಳ್ಳಬಹುದು. ಯಾವ ಕಾರಣಕ್ಕಾಗಿ ನಾನು ಸ್ಕ್ರಾಲ್ ಮಾಡುತ್ತಿದ್ದೇನೆ, ಎಷ್ಟು ಸಮಯ ಎನ್ನುವುದು ಸ್ಪಷ್ಟವಿದ್ದರೆ ಒಳಿತು. ಉದಾಹರಣೆಗೆ ‘ಕೆಲಸದ ದಣಿವಿನಿಂದ ಪಾರಾಗಲು ಇಪ್ಪತ್ತು ನಿಮಿಷ ಸ್ಕ್ರಾಲ್ ಮಾಡಿ ಬಂದಿದ್ದೆಲ್ಲವನ್ನೂ ನೋಡುವೆ' ಎನ್ನುವ ಪ್ರಜ್ಞಾಪೂರ್ವಕ ನಡೆ ಉತ್ತಮ, ಆಗ ದಣಿವಾರಿದ ಮೇಲೆ ನಾವೇ ಫೋನನ್ನು ಪಕ್ಕಕ್ಕಿಟ್ಟು ಬೇರೆ ಕೆಲಸ ಮಾಡುತ್ತೇವೆ.
ಫೋನ್ ಗೀಳಿನಿಂದ ಹೊರಬರಲು ಈ ‘ಗಮನಹೀನ’ (mindless) ಸ್ಕ್ರಾಲಿಂಗನ್ನು ಅರಿವಿನ / ಗಮನದ ಮುನ್ನೆಲೆಗೆ ತರುವಲ್ಲಿ ಈ ಕೆಳಕಂಡ ಕೆಲವು ಪ್ರಶ್ನೆಗಳಿಗೆ ಉತ್ತರಿಸಿಕೊಳ್ಳುವುದು ಸಹಕಾರಿ. ಬೇಕಿದ್ದರೆ ಇದನ್ನು ಒಂದು ಜರ್ನಲ್ ನಲ್ಲಿಯೂ ದಾಖಲಿಸಬಹುದು.
‘ನಾನು ಯಾವಾಗ ಫೋನ್ ನೋಡುವುದು ಹೆಚ್ಚಾಗುತ್ತದೆ? ಆಗ ನನ್ನ ಅಂತರಂಗದಲ್ಲಿ ನಡೆಯು ತ್ತಿರುವುದೇನು? ಫೋನ್ ನೋಡುವುದನ್ನು ನಿಲ್ಲಿಸಿದ ಕೂಡಲೇ ಹೇಗನಿಸುತ್ತದೆ? ಆಗ ಹುಟ್ಟುವ ಭಾವಗಳು ಯಾವುವು? ಫೋನಿನಿಂದ ಬಿಡುಗಡೆ ಹೊಂದಲು ನಾನು ಆಶ್ರಯಿಸುವುದೇನನ್ನು? ಫೋನಿನೊಂದಿಗಿನ ನನ್ನ ಸಂಬಂಧವನ್ನು ನಾನು ಒಂದು ಸಾಲಿನಲ್ಲಿ ಹೇಗೆ ಬಣ್ಣಿಸಬಹುದು? ಆನ್‌ಲೈನ್‌ನಲ್ಲಿ ನಾನು ನೋಡುವ ಕಂಟೆಂಟ್ ಗಳಲ್ಲಿ ಬೇಕಾದ್ದು, ಬೇಡದ್ದು ಎಂಬ ಪಟ್ಟಿ ತಯಾರಿಸಬಲ್ಲೆನೆ? ಆ ಪಟ್ಟಿ ಹೇಗಿರಬಹುದು?’
ಫೋನ್ ಗೀಳು ನಮ್ಮನ್ನು ನಿಷ್ಕ್ರಿಯಗೊಳಿಸದೆ ಇರಬೇಕಾದಲ್ಲಿ: ಫೋನಿನಲ್ಲಿ ನೋಡಿದ ಯಾವುದಾದರೂ ವಿಷಯದಿಂದ ಪ್ರಭಾವಿತರಾಗಿ ಅದನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಯಶಸ್ವಿಯಾಗಿರುವುದು ಏನಾದರೂ ಇದೆಯೇ ಎಂಬ ಮನನ ಆಗಾಗ ಮಾಡುತ್ತಿರಬೇಕು. ಉದಾಹರಣೆಗೆ ಇನ್‌ಸ್ಟಾಗ್ರಾಂ ನೋಡಿ ಹೊಸ ಅಡುಗೆ ಕಲಿತಿದ್ದು, ಉತ್ತಮವಾದ ಹವ್ಯಾಸ ರೂಢಿಸಿಕೊಂಡು ಚಿಂತನೆಯಲ್ಲಿ ಬದಲಾವಣೆ ತಂದುಕೊಂಡಿದ್ದು ಹೀಗೆ.
ನಿಜವಾದ ಸ್ನೇಹ, ಸಂಬಂಧ, ಬಾಂಧವ್ಯಗಳು ಬೇಕಾದರೆ ಜನರನ್ನು ಭೇಟಿಮಾಡಿ, ಕಣ್ಣಲ್ಲಿ ಕಣ್ಣಿಟ್ಟು ನೋಡಿ, ಜೊತೆಗೆ ಸುತ್ತಾಡಿ ಜಗಳವಾಡಿ, ಒಟ್ಟಿಗೆ ಅಡುಗೆಮಾಡಿ ಊಟಮಾಡಿ, ಭಿನ್ನಾಭಿಪ್ರಾಯಗಳನ್ನು ಹತ್ತಿರ ಕುಳಿತು ಮಾತನಾಡಿ ಬಗೆಹರಿಸಿಕೊಳ್ಳಬಹುದು; ಬಾಂಧವ್ಯಕ್ಕೆ ಸಾಮಾಜಿಕ ಜಾಲತಾಣಗಳನ್ನು ಊಟಕ್ಕೆ ಉಪ್ಪಿನಕಾಯಿಯಂತೆ ಮಾತ್ರ ಬಳಸುವುದೊಳಿತು.
ಆತಂಕ, ಭಯಗಳನ್ನು ಉಂಟುಮಾಡುವ ದುರಂತದ ಸುದ್ಧಿಗಳು, ವಿಡಿಯೊಗಳು; ಮನಸ್ಸನ್ನು ಪ್ರಕ್ಷುಬ್ಧಗೊಳಿಸುವ ಪೋಸ್ಟ್‌ಗಳು, ಚರ್ಚೆಗಳು, ಚಿತ್ರಗಳು; ಏನೇನೂ ಉಪಯೋಗವಿರದ ಯಾರನ್ನೋ ಟೀಕಿಸುವ, ಆಡಿಕೊಂಡು ನಗುವ ನಿಸ್ಸಾರ ರೀಲ್‌ಗಳು – ಇಂಥವನ್ನೆಲ್ಲಾ ಕಂಡಾಗ ‘ನನ್ನ ಒಳಿತಿಗಾಗಿ ಸ್ವ–ಆರೈಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ನಾನು ಈ ವಿಷಯವನ್ನು ನೋಡುವುದಿಲ್ಲ/ಕೇಳುವುದಿಲ್ಲ’ ಎಂಬ ಗಟ್ಟಿ ನಿರ್ಧಾರವನ್ನು ಮಾಡಿ, ಸ್ವಪ್ರೇಮವನ್ನು ಬೆಳೆಸಿಕೊಳ್ಳಬಹುದು. ಅದೇ ಫೋನ್ ಗೀಳಿನಿಂದ ತಪ್ಪಿಸಿಕೊಳ್ಳುವ ಪರಿಣಾಮಕಾರಿ ಮಾರ್ಗ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.