ADVERTISEMENT

ನಿಮಗಿದು ಗೊತ್ತೇ? ಅತಿಸಾರ, ವಾಂತಿಗೆ ದಾಳಿಂಬೆ ಸಿಪ್ಪೆಯ ಕಷಾಯವೇ ರಾಮಬಾಣ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಫೆಬ್ರುವರಿ 2026, 11:17 IST
Last Updated 5 ಫೆಬ್ರುವರಿ 2026, 11:17 IST
<div class="paragraphs"><p>ದಾಳಿಂಬೆ </p></div>

ದಾಳಿಂಬೆ

   

ದಾಳಿಂಬೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಆಯುರ್ವೇದದಲ್ಲಿ ದಾಳಿಂಬೆ ಹಣ್ಣಿಗೆ ಬಹುಮುಖ್ಯವಾದ ಸ್ಥಾನವಿದೆ. ಅಜೀರ್ಣ ಸಮಸ್ಯೆ ಇದ್ದಲ್ಲಿ ದಾಳಿಂಬೆ ಬಹು ಉಪಯುಕ್ತ. ಇದು ಅಗ್ನಿಯನ್ನು ದೀಪ್ತಿಗೊಳಿಸಿ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರವರೆಗೂ ದಾಳಿಂಬೆಯನ್ನು ಮಿತವಾಗಿ ತಿನ್ನುವುದರಿಂದ ಆರೋಗ್ಯಕ್ಕೆ ಪೋಷಕಾಂಶ ದೊರಕುತ್ತದೆ.

ದಾಳಿಂಬೆ

ADVERTISEMENT

ಬಾಯಿಯ ಅರುಚಿಯನ್ನು ಕಡಿಮೆ ಮಾಡುತ್ತದೆ. ಅತಿಸಾರ ಅಥವಾ ವಾಂತಿ ಸಮಸ್ಯೆಗೆ ದಾಳಿಂಬೆ ಸಿಪ್ಪೆಯ ಕಷಾಯ ರಾಮಬಾಣ. ಇದು ದೇಹದ ದ್ರವಾಂಶವನ್ನು ಸಮತೋಲನದಲ್ಲಿ ಇಡುತ್ತದೆ. ಮಧುರ ರಸ ಪ್ರಧಾನ ದಾಳಿಂಬೆಯು ಪಿತ್ತ ವಿಕಾರಗಳಲ್ಲಿ ಉಪಯೋಗಿಸಬಹುದು. ನಿಯಮಿತವಾಗಿ ದಾಳಿಂಬೆ ಸೇವನೆಯಿಂದ ರಕ್ತಹೀನತೆ ಕಡಿಮೆಯಾಗಲು ಸಹಕಾರಿಯಾಗುತ್ತದೆ.

ಇದರಲ್ಲಿ ಇರುವ ಕಬ್ಬಿಣ, ವಿಟಮಿನ್ B9 ಹಾಗೂ ಆ್ಯಂಟಿ ಆಕ್ಸಿಡೆಂಟ್‌ಗಳು ರಕ್ತದ ಗುಣಮಟ್ಟವನ್ನು ಸುಧಾರಿಸುತ್ತವೆ. ಹೃದಯ ಆರೋಗ್ಯಕ್ಕೂ ದಾಳಿಂಬೆ ಲಾಭಕಾರಿ. ರಕ್ತದೊತ್ತಡವನ್ನು ನಿಯಂತ್ರಿಸಲು ಮತ್ತು ಹೃದಯ ಸಂಬಂಧಿ ರೋಗಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ದಾಳಿಂಬೆ

ಮತ್ತೊಂದು ಪ್ರಮುಖ ಉಪಯೋಗವೆಂದರೆ, ದಾಳಿಂಬೆಯು ರೋಗನಿರೋಧಕ ಶಕ್ತಿಯನ್ನು ವೃದ್ಧಿಸುವಲ್ಲಿ ಸಹಕಾರಿ. ದಾಳಿಂಬೆಯಲ್ಲಿ ವಿಟಮಿನ್‌ ಸಿ ಹೇರಳವಾಗಿದ್ದು, ಸೋಂಕುಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. ಈ ಎಲ್ಲ ಬಹುಪ್ರಯೋಜನಗಳಿಂದ ದಾಳಿಂಬೆಯನ್ನು ನಿತ್ಯ ಸೇವನೀಯ ದ್ರವ್ಯ ಎಂದೇ ಪರಿಗಣಿಸಬಹುದು. ಒಟ್ಟಾರೆ, ದಾಳಿಂಬೆ ಒಂದು ಸಮತೋಲನಯುತ ಆಹಾರವಾಗಿ ದೈನಂದಿನ ಆಹಾರಕ್ರಮದಲ್ಲಿ ಸೇರಿಸಿದರೆ, ದೇಹದ ಸಮಗ್ರ ಆರೋಗ್ಯವನ್ನು ಕಾಪಾಡುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ.

ದಾಳಿಂಬೆ ಸಿಪ್ಪೆಯ ಕಷಾಯ

ದಾಳಿಂಬೆ ಸಿಪ್ಪೆಯ ಕಷಾಯವು ಅತಿಸಾರ, ವಾಂತಿ, ಕೆಮ್ಮು, ಗಂಟಲು ನೋವು ಮತ್ತು ಜೀರ್ಣಕ್ರಿಯೆ ಸಮಸ್ಯೆಗಳಿಗೆ ಅತ್ಯುತ್ತಮ ಆಯುರ್ವೇದ ಮನೆಮದ್ದಾಗಿದೆ. ದಾಳಿಂಬೆ ಸಿಪ್ಪೆಯನ್ನು ಚೆನ್ನಾಗಿ ತೊಳೆದು ಬಿಸಿಲಿನಲ್ಲಿ ಒಣಗಿಸಿ. ಒಣಗಿದ ದಾಳಿಂಬೆ ಸಿಪ್ಪೆಯನ್ನು ಪುಡಿಮಾಡಿಕೊಳ್ಳಿ. ಒಂದು ಕಪ್ ನೀರಿಗೆ 1 ಚಮಚ ದಾಳಿಂಬೆ ಸಿಪ್ಪೆಯ ಪುಡಿ ಹಾಕಿ 3-5 ನಿಮಿಷಗಳ ಕಾಲ ಚೆನ್ನಾಗಿ ಕುದಿಸಿ. ನಂತರ ಅದನ್ನು ಸೋಸಿಕೊಳ್ಳಿ. ಸೋಸಿದ ನೀರಿಗೆ ಜೇನುತುಪ್ಪ ಅಥವಾ ಶುಂಠಿ ರಸ ಸೇರಿಸಿ ಉಗುರು ಬೆಚ್ಚಗಿದ್ದಾಗಲೇ ಸೇವಿಸಿ.

(ಲೇಖಕರು: ಡಾ. ಸಂಹಿತಾ ಉಲ್ಲೋಡು, ಸಹಾಯಕ ಪ್ರಾಧ್ಯಾಪಕಿ, ಸಂಹಿತಾ ಸಿದ್ಧಾಂತ ವಿಭಾಗ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು, ಅಂಚೆಪಾಳ್ಯ, ಬೆಂಗಳೂರು.)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.