
ಚಿತ್ರ:ಗೆಟ್ಟಿ
ಸೋರಿಯಾಸಿಸ್ ಒಂದು ದೀರ್ಘಕಾಲೀನ ಚರ್ಮ ರೋಗ. ಇದು ಸ್ವಯಂ ನಿರೋಧಕ ವ್ಯಾಧಿಯ ವರ್ಗಕ್ಕೆ ಸೇರಿದ್ದಾಗಿದೆ. ಸೋರಿಯಾಸಿಸ್ ಇರುವವರಲ್ಲಿ ಚರ್ಮದ ಜೀವಕೋಶಗಳು ಸಾಮಾನ್ಯಕ್ಕಿಂತ ವೇಗವಾಗಿ ಬೆಳೆಯುತ್ತವೆ. ಇದರಿಂದ ಚರ್ಮದ ಮೇಲೆ ದಪ್ಪದಾದ ಪದರಗಳು ರೂಪುಗೊಳ್ಳುತ್ತವೆ. ಇದು ಸಾಂಕ್ರಾಮಿಕ ರೋಗವಲ್ಲ, ಒಬ್ಬರಿಂದ ಇನ್ನೊಬ್ಬರಿಗೆ ಹರಡುವುದಿಲ್ಲ.
ಸೋರಿಯಾಸಿಸ್ ಪ್ರಮುಖ ಲಕ್ಷಣಗಳು:
ಸೋರಿಯಾಸಿಸ್‌ನ ಅತ್ಯಂತ ಗಮನಾರ್ಹ ಲಕ್ಷಣವೆಂದರೆ, ಚರ್ಮದ ಮೇಲೆ ಕೆಂಪು ಅಥವಾ ಗುಲಾಬಿ ಬಣ್ಣದ ಮಚ್ಚೆಗಳು ಕಾಣಿಸಿಕೊಳ್ಳುತ್ತವೆ. ಈ ಮಚ್ಚೆಗಳ ಮೇಲೆ ಬಿಳಿಯ ಪದರಗಳು ರೂಪುಗೊಳ್ಳುತ್ತವೆ. ಇವು ಸಾಮಾನ್ಯವಾಗಿ ಮೊಣಕೈ, ಮೊಣಕಾಲು, ತಲೆ, ಬೆನ್ನು ಹಾಗೂ ಕೈಗಳ ಮೇಲೆ ಕಂಡುಬರುತ್ತದೆ.
ಇದರಿಂದ ಚರ್ಮವು ಅತಿಯಾಗಿ ಒಣಗಿ, ಬಿರುಕು ಬಿಟ್ಟು ರಕ್ತಸ್ರಾವವಾಗಬಹುದು. ಈ ಸ್ಥಳದಲ್ಲಿ ತೀವ್ರವಾದ ತುರಿಕೆ ಹಾಗೂ ನೋವಿನ ಅನುಭವವಾಗುತ್ತದೆ. ಕೆಲವರಿಗೆ ಕೀಲುಗಳಲ್ಲಿ ನೋವು, ಬಿಗಿತ ಮತ್ತು ಊತ ಉಂಟಾಗುತ್ತದೆ. ಇದನ್ನು ‘ಸೋರಿಯಾಟಿಕ್ ಸಂಧಿವಾತ’ ಎಂದು ಕರೆಯಲಾಗುತ್ತದೆ.
ಪತ್ತೆ ಮಾಡುವುದು ಹೇಗೆ?
ವೈದ್ಯಕೀಯ ಪರೀಕ್ಷೆ: ಸೋರಿಯಾಸಿಸ್ ಅನ್ನು ಪತ್ತೆ ಹಚ್ಚಲು ಚರ್ಮರೋಗ ತಜ್ಞರನ್ನು ಭೇಟಿ ಮಾಡಿ. ಚರ್ಮ, ಉಗುರುಗಳನ್ನು ಪರೀಕ್ಷೆ ನಡೆಸುತ್ತಾರೆ. ರೋಗಿಯ ವೈದ್ಯಕೀಯ ಇತಿಹಾಸ ಮತ್ತು ಕುಟುಂಬದಲ್ಲಿ ಈ ರೋಗದ ಇತಿಹಾಸವಿದೆಯೇ ಎಂಬುದನ್ನು ಪರಿಶೀಲಿಸುತ್ತಾರೆ.
ಪ್ರಯೋಗಾಲಯದ ಪರೀಕ್ಷೆಗಳು: ಕೆಲವು ಸಂದರ್ಭಗಳಲ್ಲಿ ಚರ್ಮದ ಸಣ್ಣ ಮಾದರಿಯನ್ನು ತೆಗೆದುಕೊಂಡು ಸೂಕ್ಷ್ಮ ದರ್ಶಕದ ಮೂಲಕ ಪರೀಕ್ಷಿಸಲಾಗುತ್ತದೆ. ಇದು ಸೋರಿಯಾಸಿಸ್ ಮತ್ತು ಇತರ ಚರ್ಮ ರೋಗಗಳ ನಡುವಿನ ವ್ಯತ್ಯಾಸ ತಿಳಿಯಲು ಸಹಾಯ ಮಾಡುತ್ತದೆ. ಕೀಲುಗಳಲ್ಲಿ ಸಮಸ್ಯೆಗಳಿದ್ದರೆ ಎಕ್ಸ್-ರೇ ಅಥವಾ ರಕ್ತ ಪರೀಕ್ಷೆಗಳನ್ನು ಸಹ ಮಾಡಲಾಗುತ್ತದೆ.
ಚಿಕಿತ್ಸೆ ಮತ್ತು ಪರಿಹಾರ ಕ್ರಮಗಳು:
ಮನೆ ಚಿಕಿತ್ಸೆ: ಸೌಮ್ಯವಾದ ಸೋರಿಯಾಸಿಸ್‌ಗೆ ಚರ್ಮದ ಮೇಲೆ ನೇರವಾಗಿ ಹಚ್ಚುವ ಮುಲಾಮುಗಳನ್ನು ಬಳಸಬಹುದು. ಕಾರ್ಟಿಕೊಸ್ಟೆರಾಯ್ಡ್ ಚುಚ್ಚುಮದ್ದು , ವಿಟಮಿನ್ ಡಿ ಆಧಾರಿತ ಮುಲಾಮು ಮತ್ತು ಮಾಯಿಶ್ಚರೈಸರ್‌ಗಳು ಪರಿಣಾಮಕಾರಿಯಾಗಿವೆ.
ಫೋಟೊಥೆರಪಿ ಮಾಡಿಸುವುದರಿಂದ ರೋಗ ಗುಣವಾಗುತ್ತದೆ.
ಜೀವನಶೈಲಿಯಲ್ಲಿ ಬದಲಾವಣೆಗಳು:
ಒತ್ತಡವನ್ನು ನಿರ್ವಹಿಸುವುದು ಅತ್ಯಗತ್ಯ. ಏಕೆಂದರೆ ಮಾನಸಿಕ ಒತ್ತಡವು ರೋಗವನ್ನು ಉಲ್ಬಣಗೊಳಿಸಬಹುದು. ಧೂಮಪಾನ ಮತ್ತು ಮದ್ಯಪಾನವನ್ನು ತ್ಯಜಿಸುವುದು ಮುಖ್ಯ. ಆರೋಗ್ಯಕರ ಆಹಾರ ಸೇವನೆ, ತೂಕದ ನಿರ್ವಹಣೆಯು ರೋಗದ ತೀವ್ರತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಚರ್ಮವನ್ನು ತೇವವಾಗಿ ಇಟ್ಟುಕೊಳ್ಳಲು ನಿಯಮಿತವಾಗಿ ಮಾಯಿಶ್ಚರೈಸರ್ ಬಳಸಬೇಕು.
ಸೋರಿಯಾಸಿಸ್ ಒಂದು ದೀರ್ಘಕಾಲೀನ ಸ್ಥಿತಿಯಾಗಿದ್ದರೂ, ಸರಿಯಾದ ಚಿಕಿತ್ಸೆ ಮತ್ತು ಜೀವನಶೈಲಿ ಬದಲಾವಣೆಗಳ ಮೂಲಕ ಇದನ್ನು ನಿರ್ವಹಿಸಬಹುದು. ಆರಂಭಿಕ ಹಂತದಲ್ಲಿ ರೋಗ ನಿರ್ಣಯ ಮತ್ತು ಸೂಕ್ತ ಚಿಕಿತ್ಸೆ ಶೀರ್ಘ ಪರಿಹಾರಕ್ಕೆ ಸಹಕಾರಿಯಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.