
ಚಿತ್ರ: ಗೆಟ್ಟಿ
ಮೊಡವೆ ಹದಿಹರೆಯದವರ ಸಮಸ್ಯೆ ಮಾತ್ರ ಎಂದು ಪರಿಗಣಿಸಲಾಗಿತ್ತು. ಆದರೆ ಈಗ ಎಲ್ಲಾ ವಯಸ್ಸಿನವರಲ್ಲೂ ಮೊಡವೆ ಸಮಸ್ಯೆ ಹೆಚ್ಚಾಗುತ್ತಿವೆ. ಇದಕ್ಕೆ ಪ್ರಮುಖ ಕಾರಣ ಒತ್ತಡ. ಕೆಲಸ ಮಾಡುವ ವೃತ್ತಿಪರರು, ಗೃಹಿಣಿಯರು ಮತ್ತು ಯುವ ಉದ್ಯೋಗಿಗಳಲ್ಲಿ ಒತ್ತಡ ಪ್ರೇರಿತ ಚರ್ಮದ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತಿವೆ.
ವಯಸ್ಕರಲ್ಲಿ ಮೊಡವೆ: ಇದೊಂದು ಹೊಸ ಸಾಂಕ್ರಾಮಿಕ
ಹದಿಹರೆಯದವರಲ್ಲಿ ಮೊಡವೆಗಳು ಕಾಣಿಸಿಕೊಳ್ಳಲು ಹಲವಾರು ಕಾರಣಗಳಿವೆ. ಮುಖ್ಯವಾಗಿ ಜೀವನಶೈಲಿ ಅದರಲ್ಲಿಯೂ ಜಂಕ್ ಫುಡ್ ಸೇವನೆ, ಹಾರ್ಮೋನುಗಳ ಬದಲಾವಣೆ ಅಥವಾ ಚರ್ಮದ ನೈರ್ಮಲ್ಯ ಕಾಪಾಡಿಕೊಳ್ಳುವಲ್ಲಿ ನಿರ್ಲಕ್ಷ್ಯವಹಿಸುವುದು ಪ್ರಮುಖ ಕಾರಣಗಳಾಗಿವೆ. ಆದರೆ ಪ್ರಸ್ತುತ ದಿನಗಳಲ್ಲಿ ಆರೋಗ್ಯಕರ ಚರ್ಮವನ್ನು ಹೊಂದಿರುವ ವಯಸ್ಕರಲ್ಲೂ ಸಹ ಇದ್ದಕ್ಕಿದ್ದಂತೆ ಮೊಡವೆಗಳು ಕಾಣಿಸಿಕೊಳ್ಳುತ್ತಿವೆ.
ಮೊಡವೆ ಸಮಸ್ಯೆಯಿಂದ ಬಳಲುತ್ತಿರುವವರನ್ನು ಪ್ರಶ್ನಿಸಿದಾಗ ಅವರು ವೈಯಕ್ತಿಕ ಅಥವಾ ವೃತ್ತಿಪರ ಸವಾಲುಗಳಾದ ಕುಟುಂಬ ಸಮಸ್ಯೆ, ಕೆಲಸದ ಒತ್ತಡ, ವ್ಯಾಪಾರ ನಷ್ಟ ಅಥವಾ ಭಾವನಾತ್ಮಕ ಸಮಸ್ಯೆಗಳನ್ನು ಎದುರಿಸುತ್ತಿರುವುದಾಗಿ ಹೇಳುತ್ತಾರೆ. ಮಾನಸಿಕ ಒತ್ತಡ ಮತ್ತು ಚರ್ಮದ ಸಮಸ್ಯೆ ನಡುವಿನ ಸಂಬಂಧವನ್ನು ಅಲ್ಲಗೆಳೆಯುವಂತಿಲ್ಲ. ಹದಿಹರೆಯದವರಲ್ಲಿನ ಮೊಡವೆಗಳು ಆಹಾರ ಮತ್ತು ಸ್ವ ಆರೈಕೆಗೆ ಸಂಬಂಧಿಸಿವೆ. ವಯಸ್ಕರಲ್ಲಿನ ಮೊಡವೆಗಳು ಹೆಚ್ಚಾಗಿ ಒತ್ತಡ ಪ್ರೇರಿತವಾಗಿದ್ದು, ಹಾರ್ಮೋನುಗಳ ಏರುಪೇರು, ಬದಲಾದ ನಿದ್ದೆಯ ಸಮಯ ಮತ್ತು ಮಾನಸಿಕ ಒತ್ತಡದಿಂದ ಪ್ರಚೋದಿಸಲ್ಪಟ್ಟಿರುತ್ತವೆ ಎನ್ನುತ್ತಾರೆ ತಜ್ಞರು.
ಚರ್ಮ ಮತ್ತು ಜೀವನಶೈಲಿ ನಡುವಿನ ಸಂಬಂಧವೇನು ?
ಚರ್ಮದ ಆರೋಗ್ಯ ಕೇವಲ ಮೇಲೆ ಕಾಣುವಂತದ್ದಲ್ಲ, ಕೂದಲು ಮತ್ತು ಉಗುರುಗಳನ್ನು ಸಹ ಒಳಗೊಂಡಿದೆ. ಇವು ನಾವು ಬದುಕುವ ಶೈಲಿಯನ್ನು ಕೂಡ ಪ್ರತಿಬಿಂಬಿಸುತ್ತವೆ. ನಿದ್ದೆ, ಆಹಾರ, ದೈಹಿಕ ಚಟುವಟಿಕೆ ಮತ್ತು ಭಾವನಾತ್ಮಕ ಆರೋಗ್ಯವು ಚರ್ಮದ ಆರೋಗ್ಯದ ಮೇಲೆ ನೇರ ಪ್ರಭಾವ ಬೀರುತ್ತದೆ. ನಮ್ಮ ಚಟುವಟಿಕೆಗಳು ಚರ್ಮದ ಆರೋಗ್ಯಕ್ಕೆ ಪೂರಕವಾಗಿರಬಹುದು ಅಥವಾ ಕೆಲವೊಮ್ಮೆ ಹಾನಿಯನ್ನು ಉಂಟು ಮಾಡಬಹುದು.
ದೀರ್ಘಾವಧಿ ಸಮಯ ಕೆಲಸ ಮಾಡುವುದು, ಏರುಪೇರಾದ ವೇಳಾಪಟ್ಟಿ ಅಥವಾ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರು ಈ ಸಮಸ್ಯೆಗಳಿಗೆ ಒಳಗಾಗುತ್ತಾರೆ. ಕೆಲವೊಮ್ಮೆ ಜೀವನ ಶೈಲಿಯಲ್ಲಿ ದಿಢೀರನೆ ಬದಲಾವಣೆಗಳಾದಾಗ, ಉದಾಹರಣೆಗೆ ನಿದ್ದೆಯ ಕೊರತೆ, ಹೆಚ್ಚಿನ ಕೆಲಸದ ಹೊರೆ ಕೂಡ ಮೊಡವೆಗೆ ಕಾರಣವಾಗಬಹುದು ಅಥವಾ ಚರ್ಮದ ಸಮಸ್ಯೆಗಳನ್ನು ಉಲ್ಬಣಗೊಳಿಸಬಹುದು.
ಒತ್ತಡ ಮತ್ತು ಕೂದಲು ಉದುರುವಿಕೆಗಿದೆ ಸಂಪರ್ಕ
ಒತ್ತಡವು ಕೇವಲ ಚರ್ಮದ ಮೇಲೆ ಮಾತ್ರವಲ್ಲದೆ ಕೂದಲಿನ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಇತ್ತೀಚಿನ ದಿನಗಳಲ್ಲಿ ಐಟಿ ಉದ್ಯೋಗಿಗಳಲ್ಲಿ ಹಠಾತ್ ಬೋಳು ತಲೆ ಅಥವಾ ತೀವ್ರವಾದ ಕೂದಲು ಉದುರುವಿಕೆ ಸಮಸ್ಯೆ ಕಂಡುಬರುತ್ತಿದೆ. ಈ ಸ್ಥಿತಿಯನ್ನು ಟೆಲೊಜೆನ್ ಎಫ್ಲುವಿಯಮ್ ಎಂದು ಕರೆಯಲಾಗುತ್ತದೆ. ಒತ್ತಡದಿಂದ ಕೂದಲು ಉದುರುವಿಕೆ ವೇಗ ಹೆಚ್ಚುತ್ತದೆ.
ಕೆಲವೊಮ್ಮೆ ಸಾಕಷ್ಟು ವಿಶ್ರಾಂತಿ ಇಲ್ಲದಿರುವುದು, ತಡರಾತ್ರಿಯಲ್ಲಿ ಕೆಲಸ, ಹೆಚ್ಚಾದ ಸ್ಕ್ರೀನಿಂಗ್, ಬೆಂಗಳೂರಿನಂತಹ ನಗರಗಳಲ್ಲಿ ಪ್ರಯಾಣದ ಒತ್ತಡವೂ ಸಹ ಅಕಾಲಿಕವಾಗಿ ವಯಸ್ಸಾಗುವಿಕೆ ಮತ್ತು ಕೂದಲು ತೆಳುವಾಗುವಿಕೆಗೆ ಕಾರಣವಾಗುತ್ತದೆ.
ವೇಗವಾಗಿ ವಯಸ್ಸಾದಂತೆ ಕಾಣುವುದೇಕೆ ?
ಚರ್ಮರೋಗ ಅಧ್ಯಯನಗಳ ಪ್ರಕಾರ 40ರ ವಯಸ್ಸಿನ ನಂತರ ವಯಸ್ಸಾದಂತೆ ಕಾಣುತ್ತೇವೆ. ಆದರೆ ಇಂದು 30ನೇ ವಯಸ್ಸಿನಲ್ಲಿರುವಾಗ ಮುಖದಲ್ಲಿ ಸಣ್ಣ ಗೆರೆಗಳು, ಕೊಲಾಜೆನ್ ಕೊರತೆ ಮತ್ತು ಚರ್ಮ ಸಡಿಲಗೊಳ್ಳುವುದನ್ನು ನೋಡುತ್ತಿದ್ದೇವೆ. ಇದಕ್ಕೆ ಬಹುಮುಖ್ಯ ಕಾರಣ ದೀರ್ಘಕಾಲದ ಒತ್ತಡವಾಗಿದೆ. ಇದು ಚರ್ಮದ ಸ್ಥಿತಿ ಮತ್ತು ದೃಢತೆಗೆ ಕಾರಣವಾದ ಪ್ರೋಟೀನ್ ಎಂದು ಕರೆಯಲಾಗುವ ಕೊಲಾಜೆನ್ ಅನ್ನು ಕುಗ್ಗಿಸುತ್ತದೆ. ಅತಿಯಾದ ಕೆಲಸ, ನಿದ್ದೆಯ ಕೊರತೆ, ನಿರಂತರ ಮಾನಸಿಕ ಒತ್ತಡವು ಆನುವಂಶಿಕತೆಗಿಂತಲೂ ಹೆಚ್ಚು ವೇಗವಾಗಿ ವಯಸ್ಸಾದವರಂತೆ ಕಾಣಿಸಲು ಕಾರಣವಾಗುತ್ತದೆ. ವಯಸ್ಸಾಗುವುದನ್ನು ತಡೆಯಲು ಉತ್ಕರ್ಷಣ ನಿರೋಧಕ ಚಿಕಿತ್ಸೆ ಸಹಾಯ ಮಾಡಬಹುದಾದರೂ, ಗುಣಮಟ್ಟದ ನಿದ್ದೆ ಮತ್ತು ಆರೋಗ್ಯಕರ ಜೀವನಶೈಲಿ ಒತ್ತಡವನ್ನು ಕಡಿಮೆ ಮಾಡಲು ಪ್ರಮುಖ ಕ್ರಮವಾಗಿರುತ್ತದೆ.
ಚರ್ಮ ರೋಗಕ್ಕೆ ಪ್ರಚೋದನೆ
ಮೊಡವೆ, ವಯಸ್ಸಾದಂತೆ ಕಾಣುವುದರ ಹೊರತಾಗಿಯೂ ಒತ್ತಡವು, ಇತರೆ ಹಲವಾರು ಚರ್ಮರೋಗಕ್ಕೆ ಕಾರಣವಾಗಬಹುದು. ಒತ್ತಡದಿಂದ ಸೋರಿಯಾಸಿಸ್ ಸಮಸ್ಯೆಯನ್ನು ಅನುಭವಿಸುತ್ತಿರುವವರನ್ನು ನೋಡುತ್ತಿದ್ದೇವೆ. ಅದೇ ರೀತಿ ಒತ್ತಡವು ಅಲೋಪೆಸಿಯಾ ಏರಿಯಾಟಾ ಮತ್ತು ಹರ್ಪಿಸ್ ಸಿಂಪ್ಲೆಕ್ಸ್ ನಂತಹ ವೈರಲ್ ಸೋಂಕುಗಳನ್ನು ಪ್ರಚೋದಿಸುತ್ತದೆ.
ಕೋವಿಡ್ ನಂತರದ ದಿನಗಳಲ್ಲಿ ಸ್ವಯಂ ನಿರೋಧಕ ಚರ್ಮದ ಸಮಸ್ಯೆಗಳ ಹೆಚ್ಚಳ ಕಂಡುಬಂದಿದೆ. ಇದು ನೇರವಾಗಿ ವೈರಸ್‌ಗೆ ಸಂಬಂಧಿಸಿದ್ದಲ್ಲ, ಬದಲಾಗಿ ಜೀವನಶೈಲಿಯ ಬದಲಾವಣೆಯಿಂದಾಗಿರುತ್ತದೆ. ಉದಾಹರಣೆಗೆ ಹೆಚ್ಚಿದ ಸ್ಕ್ರೀನಿಂಗ್ ಸಮಯ, ಪ್ರತ್ಯೇಕವಾಗಿರುವುದು ಮತ್ತು ದೀರ್ಘಕಾಲ ಆತಂಕಕ್ಕೆ ಒಳಗಾಗಿರುವುದು ಕೂಡ ಇದಕ್ಕೆ ಕಾರಣವಾಗಿರಬಹುದು.
ಚರ್ಮದ ಆರೋಗ್ಯಕ್ಕೆ ಒತ್ತಡ ಸೈಲೆಂಟ್ ಕಿಲ್ಲರ್
ಒತ್ತಡವು ವ್ಯಕ್ತಿ ನಿಷ್ಠವಾಗಿದ್ದು, ಕೆಲವರು ಅದನ್ನು ಆರಾಮದಾಯಕವಾಗಿ ಸ್ವೀಕರಿಸಬಹುದು. ಕೆಲವರು ಅದರಿಂದ ಕುಗ್ಗಬಹುದು ಹಾಗಾಗಿ ಅದನ್ನು ಹೇಗೆ ನಿಭಾಯಿಸುತ್ತಾರೆ ಎಂಬುದು ಮುಖ್ಯವಾಗಿರುತ್ತದೆ. ಸಾಕಷ್ಟು ವಿಶ್ರಾಂತಿ ಮತ್ತು ಮಾನಸಿಕ ಆರೋಗ್ಯ ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ.
ಲೇಖಕರು: ಡಾ. ಅಭಿರಾಮ್ ರಾಯಪತಿ, ಚರ್ಮರೋಗ ತಜ್ಞರು, ವಾಸವಿ ಆಸ್ಪತ್ರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.