
ಮಾನಸಿಕ ಮತ್ತು ದೈಹಿಕವಾಗಿ ಆರೋಗ್ಯವಾಗಿರಲು ಉತ್ತಮ ನಿದ್ರೆಯ ಜತೆಗೆ ಒತ್ತಡ ನಿರ್ವಹಣೆ ಬಹಳ ಮುಖ್ಯ.
ಒತ್ತಡ ಎಂಬುದು ಬದುಕಿನಲ್ಲಿ ಸಹಜವಾದರೂ ಅತಿಯಾದರೆ ಭಯ, ಆತಂಕ ಮತ್ತು ಸುಸ್ತು ಉಂಟಾಗುತ್ತವೆ.
ಯಾವೆಲ್ಲಾ ಕಾರಣಗಳಿಂದಾಗಿ ಒತ್ತಡ ಉಂಟಾಗುತ್ತದೆ ಮತ್ತು ಅದನ್ನು ನಿರ್ವಹಿಸುವುದು ಹೇಗೆ ಎಂಬುದನ್ನು ಮೊದಲು ಪಟ್ಟಿ ಮಾಡಿಕೊಳ್ಳಬೇಕು. ಧೂಮಪಾನ, ಅತಿಯಾಗಿ ತಿನ್ನುವುದು, ಅತಿಯಾದ ಸ್ಕ್ರೀನ್ ಟೈಮ್, ಅನಾರೋಗ್ಯಕರ ಅಭ್ಯಾಸಗಳನ್ನು ಮಾಡಿಕೊಳ್ಳುವುದರಿಂದ ಒತ್ತಡ ಮತ್ತು ನಿದ್ರಾಹೀನತೆ ಉಂಟಾಗಬಹುದು. ದೈಹಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದರಿಂದ ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು.
ವ್ಯಾಯಾಮ ಮಾಡುವುದರಿಂದ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ಹೆಚ್ಚಿಸುವ ಮತ್ತು ಉದ್ವೇಗವನ್ನು ಕಡಿಮೆ ಮಾಡುವ ಎಂಡಾರ್ಫಿನ್‌ಗಳು ಬಿಡುಗಡೆಯಾಗುತ್ತವೆ.
ಸಂಪರ್ಕ ಸಾಧಿಸುವುದು, ಸಮಯವನ್ನು ಪರಿಣಾಮಕಾರಿಯಾಗಿ ನಿರ್ವಹಿಸುವುದು ಮತ್ತು ವಿರಾಮ ತೆಗೆದುಕೊಳ್ಳುವುದರಿಂದ ಭಾವನಾತ್ಮಕ ಸಮತೋಲನವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಬಹುದು. ಒತ್ತಡವು ಅತಿಯಾದರೆ ವೃತ್ತಿಪರ ಸಹಾಯವನ್ನು ಪಡೆಯಲು ಎಂದಿಗೂ ಹಿಂಜರಿಯಬಾರದು.
ನಿದ್ರೆ ನಿರ್ವಹಣೆ ಹೀಗಿರಲಿ
ಪ್ರತಿಯೊಬ್ಬರ ಜೀವನಶೈಲಿಯಲ್ಲೂ ನಿದ್ರೆ ಪ್ರಮುಖ ಪಾತ್ರ ವಹಿಸುತ್ತದೆ. ಏಕೆಂದರೆ ಇಡೀ ದಿನ ದೇಹ ದಣಿದಿರುವಾಗ ಚೇತರಿಕೆಗೆ, ರೋಗನಿರೋಧಕ ಶಕ್ತಿಗೆ ಮತ್ತು ಹಾರ್ಮೋನ್ ನಿಯಂತ್ರಣದಲ್ಲಿಡಲು ನಿದ್ರೆ ಬಹಳ ಮುಖ್ಯ. ಏರುಪೇರಿನ ದಿನಚರಿಗಳನ್ನು ಹೊಂದಿರುವವರು ನಿದ್ರೆ ಸಮಸ್ಯೆಯನ್ನು ಹೊಂದಿರುತ್ತಾರೆ.
ಉತ್ತಮ ನಿದ್ರೆಗೆ ಹೀಗೆ ಮಾಡಿ
ನಿದ್ರೆಗೆ ನಿಗದಿತ ವೇಳಾಪಟ್ಟಿಯನ್ನು ಅನುಸರಿಸಬೇಕು. ಹಗಲಿನ ಹೊತ್ತು ನಿದ್ರೆ ಮಾಡುವುದನ್ನು ತಪ್ಪಿಸಬೇಕು ಮತ್ತು ರಾತ್ರಿ ವೇಳೆ ಸರಿಯಾಗಿ ನಿದ್ರೆ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು.
ಮಲಗುವ ಮುನ್ನ ದೀಪಗಳನ್ನು ಮಂದಗೊಳಿಸುವುದು, ವಸ್ತು/ಸಾಧನಗಳ ಬಳಕೆಯಿಂದ ದೂರವಿರುವುದು, ಸಂಜೆ ವೇಳೆ ಕೆಫೀನ್‌ಯುಕ್ತ ಪಾನೀಯಗಳನ್ನು ಸೇವಿಸುವುದು ಮತ್ತು ಭಾರಿ ಊಟ ಮಾಡುವುದನ್ನು ತಪ್ಪಿಸಬೇಕು.
ಮಲಗುವ ಕೋಣೆಯಲ್ಲಿ ಆರಾಮದಾಯಕ ಹಾಸಿಗೆ, ತಂಪಾದ ತಾಪಮಾನ ಮತ್ತು ಕನಿಷ್ಠ ಶಬ್ದದೊಂದಿಗೆ ಕೂಡಿದ ವಾತಾವರಣವನ್ನು ನಿರ್ಮಿಸಿಕೊಳ್ಳಿ.
ಲೇಖಕ: ಮನೋವೈದ್ಯ, ವಾಸವಿ ಆಸ್ಪತ್ರೆ, ಬೆಂಗಳೂರು