ಬಾದಾಮಿ
ಐಸ್ಟಾಕ್ ಚಿತ್ರ
ನವದೆಹಲಿ: ‘ಭಾರತದ ಶೇ 65ರಷ್ಟು ಜನರು ಬಾದಾಮಿಯನ್ನು ಅಧಿಕ ಪ್ರೊಟೀನ್‌ಯುಕ್ತ ಆಹಾರ ಎಂದು ಬಲ್ಲರು. ಅದರಲ್ಲೂ ಲಖನೌನಿಂದ ತಿರುವನಂತಪುರದವರೆಗಿನ 2ನೇ ಹಂತದ ನಗರಗಳ ಜನರಲ್ಲಿ ಈ ಭಾವನೆ ಹೆಚ್ಚು’ ಎಂದು ಯುಗೊವ್ ಎಂಬ ಸಮೀಕ್ಷೆಯೊಂದು ಹೇಳಿದೆ.
ಆಲ್ಮಂಡ್ ಬೋರ್ಡ್ ಆಫ್ ಕ್ಯಾಲಿಫೋರ್ನಿಯಾ ಜತೆಗೂಡಿ ನಡೆಸಿದ ಈ ಸಮೀಕ್ಷೆಗಾಗಿ 17 ನಗರಗಳ 4,300 ಜನರಿಂದ ಮಾಹಿತಿ ಸಂಗ್ರಹಿಸಲಾಗಿದೆ. ಮಹಾನಗರಗಳನ್ನು ಹೊರತುಪಡಿಸಿ ಇತರ ನಗರಗಳ ಜನರು ಬಾದಾಮಿಯನ್ನು ಅತಿ ಹೆಚ್ಚು ಪ್ರೊಟೀನ್‌ಯುಕ್ತ ಪದಾರ್ಥ ಎಂದು ಬಲ್ಲರು ಎಂದು ಸಮೀಕ್ಷಾ ವರದಿಯಲ್ಲಿ ಹೇಳಲಾಗಿದೆ.
ಹೀಗೆ ಹೇಳುವವರಲ್ಲಿ ಕೊಯಮತ್ತೂರು ಹಾಗೂ ಗುವಾಹಟಿಯಲ್ಲಿ ಶೇ 34ರಷ್ಟು ಹಾಗೂ ಇಂದೋರ್‌ನಲ್ಲಿ ಶೇ 31ರಷ್ಟು ಜನರಿದ್ದಾರೆ. ಈ ನಗರಗಳ ಜನರ ಅಭಿಪ್ರಾಯವು ಮಹಾನಗರಗಳಿಗಿಂತಲೂ ಹೆಚ್ಚಿನದ್ದಾಗಿದೆ ಎಂದು ಹೇಳಲಾಗಿದೆ. ಉತ್ತರ ಭಾರತದಲ್ಲಿರುವ ಶೇ 25ರಷ್ಟು ಬಾದಾಮಿ ಪ್ರಿಯರು ಮಾಂಸಖಂಡಗಳ ಬೆಳವಣಿಗಾಗಿ ಸೇವಿಸುತ್ತಿದ್ದಾರೆ. ಪಶ್ಚಿಮ ಭಾರತದ ಶೇ 33ರಷ್ಟು ಜನರು ಹಸಿವು ನಿಗ್ರಹಿಸಲು ಬಾದಾಮಿ ಸೇವಿಸುತ್ತಿದ್ದಾರೆ ಎಂದು ಸಮೀಕ್ಷೆ ಹೇಳಿದೆ.
ನವಯುಗದ ಜೆನ್–ಝೀ ತಲೆಮಾರಿನವರು ತ್ವಚೆಯ ಆರೋಗ್ಯಕ್ಕಾಗಿ ಬಾದಾಮಿ ಸೇವಿಸುತ್ತಿದ್ದರೆ, ಜೆನ್–ಎಕ್ಸ್‌ನವರು ಪ್ರೊಟೀನ್‌ಗಾಗಿ ಇದನ್ನು ಸೇವಿಸುತ್ತಿದ್ದಾರೆ. ಆದರೆ ಶೇ 56ರಷ್ಟು ಜನರು ಅಧಿಕ ಪ್ರೊಟೀನ್‌ಗಾಗಿ ಬಾದಾಮಿಯನ್ನು ಸೇವಿಸುತ್ತಿರುವುದಾಗಿ ಹೇಳಿದ್ದಾರೆ.
ಭಾರತೀಯರು ನಿತ್ಯ ಸರಾಸರಿ 6ರಿಂದ 8 ಬಾದಾಮಿ ಸೇವಿಸುತ್ತಿದ್ದಾರೆ. ಶೇ 43ರಷ್ಟು ಜನರು ಬೆಳಿಗ್ಗೆ ಎದ್ದ ತಕ್ಷಣ ಬಾದಾಮಿ ಸೇವಿಸುವುದನ್ನು ರೂಢಿ ಮಾಡಿಕೊಂಡಿದ್ದಾರೆ. ಶೇ 24ರಷ್ಟು ಜನ ಉಪಾಹಾರದಲ್ಲಿ ಸೇವಿಸುತ್ತಿದ್ದಾರೆ. ಇನ್ನೂ ಕೆಲವರು ಸಂಜೆಯ ಕಾಫಿಯೊಂದಿಗೆ ಸೇವಿಸಲು ಇಷ್ಟಪಡುತ್ತಾರೆ. ಹೀಗೆ ಸ್ನಾಕ್ಸ್ ಆಗಿ ಬಾದಾಮಿಯನ್ನು ಸೇವಿಸುವ ಭಾರತೀಯರ ಸಂಖ್ಯೆ ಶೇ 55ರಷ್ಟಿದೆ.
ಬಾದಾಮಿಯನ್ನು ಅತಿ ಹೆಚ್ಚು ಸೇವಿಸುವ ಪ್ರದೇಶಗಳಲ್ಲಿ ಲೂಧಿಯಾನಾ (ಶೇ 69) ಅಗ್ರಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ಬೆಂಗಳೂರು (ಶೇ 63), ದೆಹಲಿ–ಎನ್‌ಸಿಆರ್ ಹಾಗೂ ಅಹಮದಾಬಾದ್ (ಶೇ 58)ರಷ್ಟಿದೆ ಎಂದು ಸಮೀಕ್ಷೆ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.