
ಚಿತ್ರ: ಗೆಟ್ಟಿ
ಚಳಿಗಾಲ ಪ್ರವಾಸಕ್ಕೆ ಸೂಕ್ತವಾದ ಸಮಯವಾಗಿದೆ. ಆದರೆ, ಅತಿಯಾದ ಚಳಿ ಮಕ್ಕಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಹಾಗಾಗಿ ಚಳಿಗಾಲದಲ್ಲಿ ಮಕ್ಕಳ ಆರೋಗ್ಯದ ರಕ್ಷಣೆ ಬಹಳ ಮುಖ್ಯವಾಗಿದೆ. ಸಾಮಾನ್ಯವಾಗಿ ಚಳಿಗಾಲದಲ್ಲಿ ಮಕ್ಕಳಿಗೆ ಹರಡುವ ಖಾಯಿಲೆಗಳು ಯಾವುವು, ಅವುಗಳ ಆರೈಕೆ ಹೇಗೆ ಎಂಬುದನ್ನು ತಿಳಿಯೋಣ.
ಚಳಿಗಾಲದಲ್ಲಿ ಹರಡುವ ಕಾಯಿಲೆಗಳು:
ಶೀತ ಮತ್ತು ನೆಗಡಿ: ಚಳಿಗಾಲದಲ್ಲಿ ಮಕ್ಕಳಿಗೆ ಬರುವ ಅತ್ಯಂತ ಸಾಮಾನ್ಯ ಕಾಯಿಲೆ ನೆಗಡಿ ಅಥವಾ ಕೆಮ್ಮು. ವೈರಸ್‌ಗಳ ಸೋಂಕಿನಿಂದ ಉಂಟಾಗುವ ಈ ಸಮಸ್ಯೆಯಿಂದಾಗಿ ಮೂಗು ಕಟ್ಟಿಕೊಳ್ಳುವುದು, ಗಂಟಲು ನೋವು ಮತ್ತು ಸ್ವಲ್ಪ ಪ್ರಮಾಣದ ಜ್ವರ ಕಾಣಿಸಿಕೊಳ್ಳುತ್ತದೆ. ಮಕ್ಕಳು ಇತರ ಮಕ್ಕಳೊಂದಿಗೆ ಶಾಲೆ, ಆಟದ ಮೈದಾನಗಳಲ್ಲಿ ಬೆರೆಯುವುದರಿಂದ ಈ ಸೋಂಕು ಬೇಗನೆ ಹರಡುತ್ತದೆ.
ಶ್ವಾಸಕೋಶದ ಸೋಂಕು: ಶ್ವಾಸನಾಳದ ಉರಿಯೂತ (ಬ್ರಾಂಕೈಟಿಸ್), ನ್ಯುಮೋನಿಯಾ ಮತ್ತು ಶ್ವಾಸಕೋಶದ ಸೋಂಕುಗಳು ಚಳಿಗಾಲದಲ್ಲಿ ಹೆಚ್ಚಾಗುತ್ತವೆ. ಇವು ಉಸಿರಾಟದ ತೊಂದರೆ, ಎದೆ ನೋವು, ಹೆಚ್ಚಿನ ಜ್ವರ ಮತ್ತು ಕಫ ಮಿಶ್ರಿತ ಕೆಮ್ಮು ಉಂಟು ಮಾಡುತ್ತವೆ. 5 ವರ್ಷದೊಳಗಿನ ಮಕ್ಕಳಲ್ಲಿ ಈ ಸಮಸ್ಯೆ ಗಂಭೀರವಾಗಬಹುದು.
ಹಕ್ಕಿಜ್ವರ: ಇದು ಹಠಾತ್ ಜ್ವರ, ದೇಹದ ಭಾಗಗಳ ನೋವು, ತಲೆನೋವು, ಬಲಹೀನತೆ ಮತ್ತು ತೀವ್ರ ದಣಿವನ್ನು ಉಂಟುಮಾಡುತ್ತದೆ.
ಆಸ್ತಮಾ ಮತ್ತು ಅಲರ್ಜಿ: ಚಳಿಗಾಲದ ತಂಪಾದ ಗಾಳಿಯು ಆಸ್ತಮಾವಿರುವ ಮಕ್ಕಳಲ್ಲಿ ರೋಗ ಲಕ್ಷಣಗಳನ್ನು ಹೆಚ್ಚಿಸುತ್ತದೆ. ಉಸಿರಾಟದ ತೊಂದರೆ, ಎದೆ ಬಿಗಿತ ಮತ್ತು ಉಬ್ಬಸವು ಹೆಚ್ಚಾಗುತ್ತದೆ. ಧೂಳಿನಿಂದ ಅಲರ್ಜಿಯ ಕೂಡಾ ಹೆಚ್ಚಾಗಬಹುದು.
ಎಚ್ಚರಿಕಾ ಕ್ರಮಗಳು:
ಬೆಚ್ಚಗಿನ ಬಟ್ಟೆ ಧರಿಸುವುದು: ಮಕ್ಕಳಿಗೆ ಸೂಕ್ತವಾದ ಬೆಚ್ಚಗಿನ ಬಟ್ಟೆಗಳನ್ನು ತೊಡಿಸಿ. ಸ್ವೆಟರ್, ಟೋಪಿ ಇತ್ಯಾದಿ ಚಳಿಯಿಂದ ರಕ್ಷಣೆ ಮಾಡುವ ವಸ್ತುಗಳನ್ನು ಬಳಸಿ.
ಪೌಷ್ಟಿಕ ಆಹಾರ: ರೋಗ ನಿರೋಧಕ ಶಕ್ತಿಯನ್ನು ಬಲಪಡಿಸಲು ಪೌಷ್ಟಿಕ ಆಹಾರ ಅತ್ಯಗತ್ಯ. ತಾಜಾ ಹಣ್ಣುಗಳು, ತರಕಾರಿಗಳು, ಹಾಲು, ಮೊಸರು ಮತ್ತು ಶುಷ್ಕ ಹಣ್ಣುಗಳನ್ನು ಆಹಾರದಲ್ಲಿ ಸೇರಿಸಿ.
ಸ್ವಚ್ಛತೆ ಮತ್ತು ನೈರ್ಮಲ್ಯ: ಮಕ್ಕಳಿಗೆ ಕೈ ತೊಳೆಯುವ ಅಭ್ಯಾಸವನ್ನು ಕಲಿಸಿ. ಸೋಪು ಮತ್ತು ನೀರಿನಿಂದ ಕನಿಷ್ಠ 20 ಸೆಕೆಂಡ್ ಕೈ ತೊಳೆಯುವುದರಿಂದ ಸೋಂಕುಗಳನ್ನು ತಡೆಗಟ್ಟಬಹುದು.
ಸಲಹೆಗಳು:
ಸಾಕಷ್ಟು ನೀರು ಕುಡಿಯುವುದು ಮತ್ತು ವಿಶ್ರಾಂತಿ ಪಡೆಯುವುದು.
ಮಕ್ಕಳಿಗೆ ಬೆಚ್ಚಗಿನ ನೀರು, ಸೂಪ್ ಮತ್ತು ಬಿಸಿ ಹಾಲು ನೀಡುವುದು.
ನೆಗಡಿ, ಕೆಮ್ಮು ಅಥವಾ ಜ್ವರ ಕಾಣಿಸಿಕೊಂಡರೆ, ತಕ್ಷಣ ವೈದ್ಯರ ಸಲಹೆ ಪಡೆಯುವುದು ಸೂಕ್ತ.
(ಡಾ. ಸಾಗರ್ ಭಟ್ಟಾಡ್, ಸಲಹೆಗಾರ , ಶಿಶು ರೋಗ ನಿರೋಧಕ ತಜ್ಞರು, ಆಸ್ಟರ್ ಸಿಎಂಐ ಆಸ್ಪತ್ರೆ, ಬೆಂಗಳೂರು)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.