
ಸೋಲೊ ಪ್ರವಾಸ
ಗುಂಪಿನಲ್ಲಿ ಪ್ರಯಾಣ, ಪ್ರವಾಸ ಮಾಡುವುದು ಮಜವಾಗಿರುತ್ತದೆ. ಆದರೆ ಅನೇಕರು ಒಬ್ಬರೇ ಓಡಾಡಲು ಇಷ್ಟಪಡುತ್ತಾರೆ. ಅವರಿಗೆ ಸೋಲೊ ಟ್ರಾವೆಲರ್ ಎಂದು ಕರೆಯುತ್ತಾರೆ. ಈ ರೀತಿ ಎಲ್ಲಾ ಸ್ಥಳಗಳಲ್ಲಿ ಒಬ್ಬರೇ ಪ್ರಯಾಣ ಮಾಡುವುದಕ್ಕೆ ಸಾಧ್ಯವಿಲ್ಲ. ಅದರಲ್ಲೂ ಮಹಿಳೆಯರು ಸೋಲೊ ಪ್ರವಾಸ ಮಾಡಬೇಕೆಂದರೆ ಸುರಕ್ಷತೆ, ಪ್ರಯಾಣ ಹೀಗೆ ಹಲವು ವಿಚಾರಗಳು ಅಡ್ಡಿಯಾಗುತ್ತವೆ. ಹೀಗಾಗಿ ಸೋಲೊ ಪ್ರವಾಸ ಮಾಡುವಾಗ ಸ್ಥಳಗಳನ್ನು ಆಯ್ಕೆ ಮಾಡುವುದು ಬಹಳ ಮುಖ್ಯ.
ಸೋಲೊ ಪ್ರವಾಸ
ಹಾಗಾದರೆ ಭಾರತದಲ್ಲಿ ಯಾವೆಲ್ಲಾ ಸ್ಥಳಗಳಿಗೆ ನೀವು ಸೋಲೊ ಪ್ರಯಾಣ ಮಾಡಬಹುದು ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ. ಆದರೆ ನೆನಪಿಡಿ ಪ್ರಯಾಣಕ್ಕೂ ಮೊದಲು ಸರಿಯಾದ ಯೋಜನೆ ರೂಪಿಸಿಕೊಳ್ಳಿ, ಉಳಿದುಕೊಳ್ಳುವ ಜಾಗ, ಯಾವ ದಿನದಂದು ಯಾವ ಜಾಗಗಳಿಗೆ ಭೇಟಿ ನೀಡಬೇಕು, ಸಾರಿಗೆ ವ್ಯವಸ್ಥೆ ಹೇಗಿದೆ ಎನ್ನುವುದರ ಸಂಪೂರ್ಣ ಮಾಹಿತಿ ಪಡೆದುಕೊಂಡಿರಿ.
ವರ್ಕಳ
ವರ್ಕಳ ಸಮುದ್ರ ತೀರ
ಒಬ್ಬಂಟಿಯಾಗಿ ಪ್ರವಾಸ ಮಾಡಬೇಕು ಎನ್ನುವ ಮಹಿಳೆಯರಿಗೆ ಕೇರಳದ ವರ್ಕಳ ಉತ್ತಮ ಜಾಗವಾಗಿದೆ. ಸ್ನೇಹಪೂರ್ವಕವಾಗಿರುವ ವರ್ಕಳದ ಸ್ಥಳೀಯರು ಸೋಲೊ ಪ್ರವಾಸಿಗರಿಗೆ ಸುರಕ್ಷಿತ ಅನುಭೂತಿಯನ್ನೂ ನೀಡುತ್ತಾರೆ. ಕಡಿಮೆ ಖರ್ಚಿನಲ್ಲಿ ಆರಾಮದಾಯಕವಾಗಿ ಸಮಯ ಕಳೆಯುವ ಸ್ಥಳ ಇದಾಗಿದೆ. ಇಲ್ಲಿ ಸಮುದ್ರದ ತಟದಲ್ಲಿ ನಿರುಮ್ಮಳವಾಗಿ ಕುಳಿತುಕೊಳ್ಳಬಹುದು. ಸಾಹಸಪ್ರಿಯರಿಗೆ ಸರ್ಫಿಂಗ್ ಆಯ್ಕೆಯೂ ಇದೆ. ಇದರ ಜತೆಗೆ ಆಯುರ್ವೇದ ಚಿಕಿತ್ಸೆ ಮತ್ತು ಯೋಗ ತರಬೇತಿಯ ಅನುಭವವನ್ನೂ ಪಡೆಯಬಹುದು.
ಹಂಪಿ
ಹಂಪಿ
ಪುರಾತನ ದೇವಾಲಯಗಳು, ಕಲ್ಲಿನ ರಥ, ಪ್ರಶಾಂತ ಸೂರ್ಯಾಸ್ತ ಇವೆಲ್ಲವನ್ನೂ ಕಣ್ತುಂಬಿಕೊಳ್ಳಲು ಹಂಪಿಗೆ ಪ್ರಯಾಣ ಬೆಳೆಸಬಹುದು. ಮಹಿಳೆಯರು ಸೋಲೊ ಪ್ರವಾಸ ಕೈಗೊಳ್ಳಲು ಹಂಪಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ಇಲ್ಲಿ ಆಟೊಗಳು, ಬಸ್ ಸೌಲಭ್ಯ ಇರುವುದರಿಂದ ಪ್ರಯಾಣ ಸುಲಭ. ಜತೆಗೆ ಹೋಟೆಲ್, ಹೋಮ್ ಸ್ಟೇಗಳು ಕಡಿಮೆ ದರದಲ್ಲಿ ಸಿಗುತ್ತವೆ.
ಪುದುಚೇರಿ
ಪುದಚೇರಿ ಸಮುದ್ರ ತೀರ
ನಗರದ ಸುತ್ತಲೂ ಸಮುದ್ರ ತೀರಗಳನ್ನೇ ಹೊಂದಿರುವ ಪುದುಚೇರಿ ಸೋಲೊ ಪ್ರವಾಸಿಗರಿಗೆ ಉತ್ತಮ ಜಾಗ. ಪ್ರೆಂಚರ ಆಳ್ವಿಕೆಗೆ ಒಳಪಟ್ಟ ಈ ನಗರದಲ್ಲಿ ಇನ್ನೂ ವಿದೇಶಿಯರ ವಾಸ್ತುಶಿಲ್ಪ, ಕಟ್ಟಡಗಳನ್ನು ಕಾಣಬಹುದು. ಪ್ರೆಂಚ್ ಕಾಲೋನಿ ಫೋಟೊಶೂಟ್‌ಗೆ ಹೆಸರುವಾಸಿಯಾಗಿದೆ. ಸಮುದ್ರ ತೀರಗಳು ಹೊರ ಜಗತ್ತನ್ನೇ ಮರೆಸಬಲ್ಲವು.
ಋಷಿಕೇಶ
ಋಷಿಕೇಶ
ದೈವಿಕ ಅನುಭವದ ಜತೆಗೆ ಉತ್ತರ ಭಾರತವನ್ನು ವೀಕ್ಷಿಸಬೇಕು ಎನ್ನುವ ಮಹಿಳೆಯರಿಗೆ ಋಷಿಕೇಶ ಉತ್ತಮ ಜಾಗವಾಗಿದೆ. ಮಹಿಳೆಯರಿಗೆ ಸುರಕ್ಷಿತ ಜಾಗ ಎನಿಸಿಕೊಂಡಿರುವ ಈ ಸ್ಥಳದಲ್ಲಿ ಆಶ್ರಮ, ಘಾಟ್‌ಗಳಿಗೆ ಭೇಟಿ ನೀಡಬಹುದು.
ಸಿಕ್ಕಿಂ
ಸಿಕ್ಕಿಂ
ಭೂಮಿ ಮೇಲಿನ ಸ್ವರ್ಗ ಎಂದೇ ಕರೆಯುವ ಸಿಕ್ಕಿಂಗೆ ಮಹಿಳೆಯರು ಸೋಲೊ ಪ್ರವಾಸ ಕೈಗೊಳ್ಳಬಹುದು. ಬೌದ್ಧ ಮಠಗಳು, ಹಸಿರು ಕಾಡು, ಹಿಮಾಲಯ ಪರ್ವತ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತೇವೆ. ಸಾಹಸ ಪ್ರಿಯರು ಚಾರಣ, ಮೌಂಟೇನ್ ಬೈಕ್ ರೈಡ್ ಮಾಡಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.