ADVERTISEMENT

ಕರ್ನಾಟಕದ ಎತ್ತರದ ಜಲಪಾತಗಳಿವು: ಜೋಗ ಜಲಪಾತಕ್ಕೆ ಎಷ್ಟನೇ ಸ್ಥಾನ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ನವೆಂಬರ್ 2025, 8:05 IST
Last Updated 4 ನವೆಂಬರ್ 2025, 8:05 IST
<div class="paragraphs"><p>ಎಐ ಚಿತ್ರ</p></div>

ಎಐ ಚಿತ್ರ

   

ಪಶ್ಚಿಮ ಘಟ್ಟದ ಮಡಿಲಿನಲ್ಲಿ ಹಲವು ಜರಿಗಳು ಹಾಗೂ ಜಲಪಾತಗಳು ಉಗಮವಾಗುತ್ತವೆ. ಇವು ಪ್ರಕೃತಿಯ ಸೌಂದರ್ಯ ಹೆಚ್ಚಿಸುವುದಲ್ಲದೆ ಜೀವ ಸಂಕುಲಗಳಿಗೆ ಆಸರೆಯಾಗಿವೆ. ಪರಿಸರ ಪ್ರೇಮಿಗಳಿಗೆ ಹಾಗೂ ಚಾರಣ ಪ್ರಿಯರಿಗೆ ವಿಭಿನ್ನ ಅನುಭವ ನೀಡುತ್ತವೆ. ಕರ್ನಾಟಕ ಅತೀ ಎತ್ತರದ 5 ಜಲಪಾತಗಳು ಯಾವುವು. ಅವು ಇರುವುದು ಎಲ್ಲಿ ಎಂಬ ಮಾಹಿತಿ ಇಲ್ಲಿದೆ.

ಕುಂಚಿಕಲ್ ಜಲಪಾತ:

ಕರ್ನಾಟಕದ ಅತಿ ಎತ್ತರದ ಜಲಪಾತವಾಗಿರುವ ಕುಂಚಿಕಲ್ ಜಲಪಾತ ಶಿವಮೊಗ್ಗ ಜಿಲ್ಲೆಯಲ್ಲಿದೆ. ವಾರಾಹಿ ನದಿ ಕುಂಚಿಕಲ್ ಜಲಪಾತವಾಗಿ 455ಮೀ (1,494 ಅಡಿ) ಎತ್ತರದಿಂದ ಧುಮುಕುತ್ತದೆ. ಇಲ್ಲಿ ಜಲ ವಿದ್ಯುತ್ ಕೇಂದ್ರವಿದೆ. ಇಲ್ಲಿಗೆ ಭೇಟಿ ನೀಡಲು ಪೂರ್ವಾನುಮತಿ ಪಡೆಯಬೇಕು.

ADVERTISEMENT

ತಲುಪುವುದು ಹೇಗೆ?

ಈ ಜಲಪಾತ ತಲುಪಲು ಹುಲಿಕಲ್‌ನಿಂದ ಟ್ಯಾಕ್ಸಿ ಅಥವಾ ಖಾಸಗಿ ವಾಹನಗಳನ್ನು ಬಾಡಿಗೆಗೆ ಪಡೆದು ಹೋಗಬಹುದು ಅಥವಾ ಬೆಂಗಳೂರು, ಮಂಗಳೂರು ಮತ್ತು ಮೈಸೂರಿನಿಂದ ಕುಂಚಿಕಲ್ ಜಲಪಾತಕ್ಕೆ ಬಸ್ ಸೌಕರ್ಯ ಲಭ್ಯವಿದೆ. 

ಪ್ರಜಾವಾಣಿ ಚಿತ್ರ

ಬರ್ಕಣ ಜಲಪಾತ:

ಎರಡನೇ ಎತ್ತರದ ಜಲಪಾತವಾಗಿರುವ ಬರ್ಕಣ ಜಲಪಾತ ಶಿವಮೊಗ್ಗದ ಆಗುಂಬೆಯಲ್ಲಿದೆ. ಸೀತಾ ನದಿ ಬರ್ಕಣ ಜಲಪಾತವಾಗಿ 259 ಮೀ (850 ಅಡಿ) ಎತ್ತರದಿಂದ ಧುಮುಕುತ್ತದೆ.

‌ತಲುಪುವುದು ಹೇಗೆ?

ಉಡುಪಿ ರೈಲು ನಿಲ್ದಾಣ ಹತ್ತಿರವಾಗಿದೆ. ಆಗುಂಬೆಯವರೆಗೆ ಬಸ್ ಸೇವೆ ಇದೆ. ಅಲ್ಲಿಂದ 7 ಕಿಮೀ ದೂರವನ್ನು ತಲುಪಲು ಖಾಸಗಿ ಜೀಪ್, ಆಟೋದಲ್ಲಿ ಹೋಗಬಹುದು. 

ವಸತಿ ವ್ಯವಸ್ಥೆ : ಅಗುಂಬೆಯಲ್ಲಿ ವಸತಿ ಗೃಹಗಳಿವೆ. ತೀರ್ಥಹಳ್ಳಿ ಮತ್ತು ಹೆಬ್ರಿಯಲ್ಲಿಯೂ ಲಭ್ಯವಿದೆ.

ಎಐ ಚಿತ್ರ

ಜೋಗ ಜಲಪಾತ: 

ಜೋಗ ಜಲಪಾತವು ಪಶ್ಚಿಮ ಘಟ್ಟಗಳಲ್ಲಿ ಹುಟ್ಟುವ ಶರಾವತಿ ನದಿಯಿಂದ ಧುಮ್ಮಿಕ್ಕುವ ಜಲಪಾತವಾಗಿದೆ. ‘ಗೆರುಸೊಪ್ಪ’ ಜಲಪಾತ ಎಂತಲೂ ಕರೆಯಲಾಗುತ್ತದೆ. ಭಾರತದ 3ನೇ ಅತೀ ಎತ್ತರದ (253 ಮೀ) ಜಲಪಾತ ಎಂಬ ಹೆಗ್ಗಳಿಕೆಗೆ ಪ್ರಾತ್ರವಾಗಿದೆ.   

ಇದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕ್ಕಿನಲ್ಲಿದೆ. ರಾಜಾ, ರಾಣಿ, ರೋರರ್, ಮತ್ತು ರಾಕೆಟ್ ಎಂಬ ನಾಲ್ಕು ಭಾಗಗಳಾಗಿ ಧುಮುಕುತ್ತದೆ. 

ತಲುಪುವುದು ಹೇಗೆ?

ಬೆಂಗಳೂರಿನಿಂದ ಬಸ್‌ ಸೇವೆ ಇದೆ. ಸಾಗರದಿಂದ ಕಾರು ಅಥವಾ ಟ್ಯಾಕ್ಸಿ ಅಥವಾ ಬಸ್ ಮೂಲಕ ತಲುಪಬಹುದು.

ವಸತಿ ವ್ಯವಸ್ಥೆ: ಜೋಗ ಜಲಪಾತಕ್ಕೆ ಹತ್ತಿರವಾಗಿ  ಹೋಟೆಲ್ ಮಯೂರವಿದೆ. ಜಂಗಲ್ ಲಾಡ್ಜಸ್ ಎಂಬ ಕಾಟೇಜ್ ಶೈಲಿಯ ವಸತಿ ಲಭ್ಯವಿದೆ. ಜೋಗದಿಂದ 35 ಕಿಮೀ ದೂರದ ಸಾಗರದಲ್ಲಿ ಹಲವು ಹೋಂ ಸ್ಟೇಗಳಿವೆ.

ಪ್ರಜಾವಾಣಿ ಚಿತ್ರ

ಮಾಗೋಡು ಜಲಪಾತ: 

ಉತ್ತರ ಕನ್ನಡ ಜಿಲ್ಲೆಯ ಪಶ್ಚಿಮ ಘಟ್ಟಗಳ ನಡುವೆ ಮಾಗೋಡು ಜಲಪಾತವಿದೆ. ಈ ಜಲಪಾತ ಬೇಡ್ತಿ ಹಾಗೂ ಶಾಲ್ಮಲಾ ಎಂಬ ಎರಡು ನದಿಗಳ ಸಂಗಮದಿಂದ ರೂಪುಗೊಂಡಿದೆ. ಈ ಜಲ‍ಪಾತದ ಎತ್ತರ 200ಮೀ ಆಗಿದೆ. 

ಈ ಜಲಪಾತದ ಹಾದಿ ಅತ್ಯಂತ ರೋಮಾಂಚಕಾರಿ ಹಾಗೂ ಸಾಹಸಮಯವಾಗಿದೆ. ‌ಚಾರಣ ಮಾಡುವವರಿಗೆ ಈ ಜಲಪಾತವು ಹೇಳಿ ಮಾಡಿಸಿದ ಸ್ಥಳವಾಗಿದೆ. 

ತಲುಪುವುದು ಹೇಗೆ: ಬೆಂಗಳೂರಿನಿಂದ ಯಲ್ಲಾಪುರಕ್ಕೆ ಬಸ್‌ ಪ್ರಯಾಣ ಮಾಡಬೇಕು. ಅಲ್ಲಿಂದ ಟ್ಯಾಕ್ಸಿ ಅಥವಾ ಖಾಸಗಿ ಕಾರುಗಳ ಮೂಲಕ ತಲುಪಬಹುದು.

ವಸತಿ ವ್ಯವಸ್ಥೆ: ಯಲ್ಲಾಪುರ ನಗರದಲ್ಲಿ ಹೋಟೆಲ್‌ಗಳು ಲಭ್ಯವಿದೆ.

ಪ್ರಜಾವಾಣಿ ಚಿತ್ರ

ಬೆಳ್ಕಲ್ ತೀರ್ಥ : 

ಉಡುಪಿ ಜಿಲ್ಲೆಯ ಕೊಲ್ಲೂರು ಬಳಿಯಿರುವ ಬೆಳ್ಕಲ್ ತೀರ್ಥವು ಸುಂದರವಾದ ಜಲಪಾತವಾಗಿದೆ. ಕೋರ್ಶಿ ಬೆಟ್ಟದ ನಡುವಿನಿಂದ 180ಮೀ ಎತ್ತರದಿಂದ ಈ ಜಲಪಾತ ಧುಮುಕುತ್ತದೆ. ‘ಗೋವಿಂದ ತೀರ್ಥ’ ಎಂತಲೂ ಈ ಜಲಪಾತಕ್ಕೆ ಕರೆಯುತ್ತಾರೆ.  ಚಾರಣ ಪ್ರಿಯರಿಗೆ ಹೇಳಿ ಮಾಡಿಸಿದ ಜಾಗವಾಗಿದೆ. 

ತಲುಪುವುದು ಹೇಗೆ?

ಈ ಜಲಪಾತ ಕೊಲ್ಲೂರಿನಿಂದ 25 ಕಿಮೀ ದೂರದಲ್ಲಿದೆ. ಜಲಪಾತಕ್ಕೆ ಹೋಗುವ ಕೊನೆಯ ಕೆಲವು ಕಿಮೀ ಕಾರುಗಳಿಗೆ ರಸ್ತೆಗಳು ಸಾಕಾಗುವುದಿಲ್ಲವಾದ್ದರಿಂದ ಚಾರಣ ಮಾಡಲೇಬೇಕು. ಜಲಪಾತ ಸಮೀಪ ರಸ್ತೆ ಉತ್ತಮವಾಗಿಲ್ಲದ ಕಾರಣ, ಸುಮಾರು ಒಂದೂವರೆ ಕಿಲೋಮೀಟರ್‌ ಚಾರಣ ಅಗತ್ಯ.

ಭೇಟಿ ನೀಡಲು ಉತ್ತಮ ಸಮಯ: ಜೂನ್ ಮತ್ತು ಡಿಸೆಂಬರ್

ಪ್ರಜಾವಾಣಿ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.