ಚಿತ್ರ: ಎಐ
ಚಳಿಗಾಲ ಪ್ರವಾಸ ಹೋಗಲು ಹೇಳಿ ಮಾಡಿಸಿದ ಋತುವಾಗಿದೆ. ಚುಮು ಚುಮು ಚಳಿ, ಮಂಜು ಮುಸುಕಿದ ವಾತಾವರಣ ಚಾರಣ ಹಾಗೂ ಪಕೃತಿ ಪ್ರಿಯರಿಗೆ ಸಂತೋಷ ನೀಡುತ್ತದೆ. ಇನ್ನೇನೂ ವರ್ಷ್ಯಾಂತ್ಯವಾಗುತ್ತಿರುವುದರಿಂದ ಪ್ರವಾಸ ಹೋಗಲು ಯೋಚಿಸಿದ್ದರೆ ಈ ಸ್ಥಳಗಳಿಗೆ ಭೇಟಿ ನೀಡಬಹುದು. ಚಳಿಗಾಲದಲ್ಲಿಯೇ ವಿಶೇಷವಾಗಿ ಭೇಟಿ ನೀಡಬೇಕಾದ ಪ್ರಮುಖ ಸ್ಥಳಗಳ ಪಟ್ಟಿ ಇಲ್ಲಿದೆ.
ಪುದುಚೇರಿ:
ಪದುಚೇರಿಯು ಕಡಲ ತೀರವಿರುವ ದಕ್ಷಿಣ ಭಾರತದ ಪ್ರಮುಖ ಪ್ರವಾಸಿ ತಾಣವಾಗಿದೆ. ಪುದುಚೇರಿ ಯೂರೋಪಿಯನ್ ಮಾದರಿಯ ನಗರವಾಗಿದೆ. ‘ಪಾಂಡಿಚೇರಿ’ ಎಂತಲೂ ಕರೆಯುವ ಇಲ್ಲಿಗೆ ಚಳಿಗಾಲದಲ್ಲಿ ಭೇಟಿ ನೀಡಲು ಹೇಳಿ ಮಾಡಿಸಿದ ಸಮಯವಾಗಿದೆ. ಬ್ರಿಟಿಷರ ಕಾಲದ ವಸಾಹತುಶಾಹಿ ಪ್ರದೇಶವಾಗಿದ್ದ ಪುದುಚೇರಿ ಇಂದ ಭಾರತದ ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಂದಾಗಿದೆ.
ಪ್ಯಾರಡೈಸ್ ಬೀಚ್, ಶ್ರೀ ಅರಬಿಂದೋ ಆಶ್ರಮ, ಚುನ್ನಂಬಾರ್ ಬೋಟ್ ಹೌಸ್ ಸಸ್ಯೋದ್ಯಾನ, ಹಳೆಯ ದೀಪಸ್ತಂಭ ಹಾಗೂ ರಾಜ್ ನಿವಾಸ್‌ಗೆ ಭೇಟಿ ನೀಡಬಹುದು.
ತಲುಪುವುದು ಹೇಗೆ: ಪುದುಚೇರಿಗೆ ಹತ್ತಿರದ ವಿಮಾನ ನಿಲ್ದಾಣ ಚೆನ್ನೈ ಆಗಿದೆ. ಇಲ್ಲಿಂದ ಪುದುಚೇರಿಗೆ ತಲುಪಬಹುದು. ಭಾರತದ ಎಲ್ಲಾ ಭಾಗಗಳಿಂದಲೂ ಪುದುಚೇರಿ ನಗರಕ್ಕೆ ರೈಲು ಸಂಪರ್ಕವಿದೆ. ಚೆನ್ನೈ, ಬೆಂಗಳೂರು ಹಾಗೂ ಇತರೆ ಸ್ಥಳಗಳಿಂದ ಬಸ್ ವ್ಯವಸ್ಥೆ ಇದೆ.
ಗುಲ್‌ಮಾರ್ಗ್:
ಉತ್ತರ ಭಾರತದ ಪ್ರಮುಖ ಪ್ರವಾಸಿ ತಾಣವಾದ ಗುಲ್‌ಮಾರ್ಗ್ ಜಮ್ಮು ಕಾಶ್ಮೀರದಲ್ಲಿದೆ. ಚಳಿಗಾಲದ ಪ್ರವಾಸಕ್ಕೆ ಇಲ್ಲಿಗೆ ಭೇಟಿ ನೀಡಬಹುದು. ಎತ್ತರದ ಫೈನ್ ಮರಗಳ ಸುಂದರ ನೋಟ, ಹಿಮದ ಜಾರು ಬಂಡೆಗಳು ಹಾಗೂ ತಂಪಾದ ವಾತಾವರಣ ಮನಸ್ಸಿಗೆ ಮುದ ನೀಡುತ್ತದೆ. ಇಲ್ಲಿ ಕೇಬಲ್ ಕಾರಿನ ಸವಾರಿ ಮಾಡಬಹುದು. ಇಲ್ಲಿ ಅಫರ್‌ವತ್ ಶಿಖರ ಹಾಗೂ ಇತರೆ ಸರೋವರಗಳನ್ನು ನೋಡಬಹುದು.
ತಲುಪುವುದು ಹೇಗೆ: ಶ್ರೀನಗರದ ವಿಮಾನ ನಿಲ್ದಾಣದಿಂದ 56 ಕಿ.ಮೀ ದೂರದಲ್ಲಿದೆ. ಶ್ರೀನಗರ ರೈಲು ನಿಲ್ದಾಣಕ್ಕೆ ತಲುಪಿ ಅಲ್ಲಿಂದ ಗುಲ್‌ಮಾರ್ಗ್‌ಗೆ ಖಾಸಗಿ ವಾಹನದಲ್ಲಿ ತಲುಪಬಹುದು.
ಔಲಿ:
ಉತ್ತರಾಖಂಡ ರಾಜ್ಯದಲ್ಲಿರುವ ಈ ಸ್ಥಳ್ಕಕೆ ಚಳಿಗಾಲದಲ್ಲಿ ಹೆಚ್ಚು ಪ್ರವಾಸಿಗರು ಭೇಟಿ ನೀಡುತ್ತಾರೆ. ಹಿಮದಿಂದ ಹೆಪ್ಪುಗಟ್ಟಿ ಇಲ್ಲಿನ ಸರೋವರ ಹಾಗೂ ಹಿಮವೃತ ಸ್ಥಳಗಳು ಮನಸ್ಸಿಗೆ ಉಲ್ಲಾಸವುಂಟು ಮಾಡುತ್ತದೆ. ಈ ಪ್ರದೇಶ ಸಮುದ್ರ ಮಟ್ಟದಿಂದ 2,800 ಮೀ ಎತ್ತರದಲ್ಲಿದೆ. ಇಲ್ಲಿನ ಹಿಮದಲ್ಲಿ ಹಲವು ಸಾಹಸಮಯ ಆಟಗಳನ್ನು ಆಡಬಹುದಾಗಿದೆ.
ತಲುಪುವುದು ಹೇಗೆ: ಡೆಹ್ರಾಡೂನ್ ವಿಮಾನ ನಿಲ್ದಾಣದಿಂದ 270 ಕಿ.ಮೀ ದೂರದಲ್ಲಿದೆ. ಇಲ್ಲಿಂದ ಟ್ಯಾಕ್ಸಿಯಲ್ಲಿ ತಲುಪಬಹುದು. ಹರಿದ್ವಾರ ರೈಲು ನಿಲ್ದಾಣದಿಂದ 290 ಕಿ.ಮೀ ದೂರದಲ್ಲಿದೆ.
ಮುನ್ನಾರ್:
ಯಾವುದೇ ಋತುವಿನಲ್ಲಿ ಭೇಟಿ ನೀಡಿದರು ಒಂದೇ ಅನುಭವ ನೀಡುವ ಕೇರಳದ ಮುನ್ನಾರ್ ಸುಂದರ ಗಿರಿಧಾಮವಾಗಿದೆ. ಇಲ್ಲಿನ ಚಳಿ ಹಾಗೂ ಮಂಜಿನ ಮಿಶ್ರಣದ ನಡುವೆ ಚಾರಣ ಮಾಡುವುದು ನಿಜಕ್ಕೂ ಅದ್ಭುತವಾಗಿರುತ್ತದೆ. ಇಲ್ಲಿನ ಚಹಾ ತೋಟಗಳಲ್ಲಿ ಕಾಲ ಕಳೆಯಬಹುದಾಗಿದೆ.
ತಲುಪುವುದು ಹೇಗೆ: ಇಲ್ಲಿಗೆ ಸ್ವಂತ ವಾಹನಗಳಲ್ಲಿ ಭೇಟಿ ನೀಡಬಹುದು. ಕೊಚ್ಚಿ ವಿಮಾನ ನಿಲ್ದಾಣದಿಂದ 170 ಕಿ.ಮೀ ದೂರದಲ್ಲಿದೆ. ಎರ್ನಾಕುಲಂ ರೈಲು ನಿಲ್ದಾಣದಿಂದ 130 ಕಿ.ಮೀ ದೂರದಲ್ಲಿದೆ.
ಶಿಲ್ಲಾಂಗ್:
ಶಿಲ್ಲಾಂಗ್ ಮೇಘಾಲಯದ ಅತೀ ದೊಡ್ಡ ರಾಜ್ಯವಾಗಿದೆ. ಈ ಸ್ಥಳವು ಬೆಟ್ಟಗಳು, ಆಹ್ಲಾದಕರ ಹವಾಮಾನ ಮತ್ತು ಸುಂದರವಾದ ಭೂದೃಶ್ಯಗಳಿಗೆ ಹೆಸರು ವಾಸಿಯಾಗಿದೆ. ‘ಪೂರ್ವದ ಸ್ಕಾಟ್ಲೆಂಡ್’ ಎಂದೂ ಶಿಲ್ಲಾಂಗ್‌ಗೆ ಹೆಸರಿದೆ. ಇಲ್ಲಿನ ಮಂಜು ಹಾಗೂ ನೈಸರ್ಗಿಕ ಸಂಪತ್ತು ಪ್ರಕೃತಿ ಪ್ರಿಯರಿಗೆ ಉತ್ತಮ ಅನುಭವ ನೀಡುತ್ತದೆ.
ತಲುಪುವುದು ಹೇಗೆ: ಉಮ್ರೋಯ್ ವಿಮಾನ ನಿಲ್ದಾಣದಿಂದು 30 ಕಿ.ಮೀ ದೂರದಲ್ಲಿದೆ. ಗುವಾಹಟಿ ರೈಲು ನಿಲ್ದಾಣದಿಂದ ಬಸ್ ಮೂಲಕ ಶಿಲ್ಲಾಂಗ್‌ಗೆ ತಲುಪಬಹುದು.
ಮನಾಲಿಯ ಹಳೆಯ ಪಟ್ಟಣ:
ಮನಾಲಿಯ ಹಳೆಯ ಪಟ್ಟಣ ಮನಾಲಿ ನಗರಕ್ಕೆ ಹೋಲಿಸಿದರೆ ಬಹಳ ಶಾಂತ ಹಾಗೂ ಕಡಿಮೆ ಜನಸಂದಣಿ ಹೊಂದಿರುವ ಸ್ಥಳವಾಗಿದೆ. ಇಲ್ಲಿನ ಪುರಾತನ ದೇವಾಲಯಗಳು ಪ್ರಮುಖ ಆಕರ್ಷಣೆಯಾಗಿವೆ. ಹಿಮಾಚಲ ಪ್ರದೇಶದ ಮನಾಲಿಗೆ ಚಳಿಗಾಲದಲ್ಲಿ ಭೇಟಿ ನೀಡುವುದು ಸೂಕ್ತ. ಇಲ್ಲಿ ಸುಂದರ ಕಣಿವೆಗಳನ್ನು ನೋಡಬಹುದು. ಹಿಮದ ಮೇಲೆ ಚಾರಣ ಹೋಗಬಹುದು. ಸೇಬು ತೋಟದಲ್ಲಿ ಕಾಲ ಕಳೆಯಬಹುದು.
ತಲುಪುವುದು ಹೇಗೆ: ಮನಾಲಿಗೆ ವಿಮಾನ ಹಾಗೂ ರೈಲಿನ ಮೂಲಕ ತಲುಪಬಹುದು. ಭುಂತರ್ ವಿಮಾನ ನಿಲ್ದಾಣದಿಂದ ಮನಾಲಿ 50 ಕಿ.ಮೀ ದೂರದಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.