ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಉದ್ದಕ್ಕೂ ಪಾಕಿಸ್ತಾನ ಸೇನೆಯು ಡ್ರೋನ್ ಹಾಗೂ ಕ್ಷಿಪಣಿ ದಾಳಿ ನಡೆಸಿದೆ. ಇವುಗಳನ್ನು ಭಾರತೀಯ ಸೇನೆ ವಿಫಲಗೊಳಿಸಿದೆ. ಕಾಶ್ಮೀರದ ಹೆಚ್ಚಿನ ಭಾಗಗಳಲ್ಲಿ ಬ್ಲ್ಯಾಕ್ಔಟ್ ಮಾಡಲಾಗಿದೆ.
ಈ ಎಲ್ಲಾ ಬೆಳವಣಿಗೆಗಳ ನಡುವೆ ಭಾರತೀಯ ಸೈನಿಕರು ಅಳುತ್ತಾ... ತಮ್ಮ ಶಿಬಿರಗಳನ್ನು ತೊರೆಯುತ್ತಿದ್ದಾರೆ ಎಂಬ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಆದರೆ, ಪಾಕಿಸ್ತಾನದ ಪರವಿರುವ ಕೆಲ ಸಾಮಾಜಿಕ ಜಾಲತಾಣ ಖಾತೆಗಳು ಈ ಸುಳ್ಳು ಸುದ್ದಿಯನ್ನು ಪಸರಿಸುತ್ತಿವೆ ಎಂದು ಸರ್ಕಾರ ಶನಿವಾರ ಹೇಳಿದೆ.
ಪಿಐಬಿ ಸತ್ಯಶೋಧನ (ಫ್ಯಾಕ್ಟ್‌ಚೆಕ್) ವಿಭಾಗವು ಈ ಬಗ್ಗೆ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ವಿಡಿಯೊವನ್ನು ಏಪ್ರಿಲ್ 27ರಂದು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಇದು ಭಾರತೀಯ ಸೇನೆಗೆ ಸಂಬಂಧಿಸಿದ್ದಲ್ಲ ಎಂದು ಖಚಿತಪಡಿಸಿದೆ.
ಖಾಸಗಿ ರಕ್ಷಣಾ ತರಬೇತಿ ಸಂಸ್ಥೆಯ ವಿದ್ಯಾರ್ಥಿಗಳು ಭಾರತೀಯ ಸೇನೆಗೆ ಆಯ್ಕೆಯಾಗಿರುವುದಕ್ಕೆ ಸಂಭ್ರಮಾಚರಣೆ ಮಾಡುತ್ತಿರುವ ವೇಳೆ ವಿಡಿಯೊವನ್ನು ಚಿತ್ರಿಸಲಾಗಿದೆ. ಯುವಕರು ಸೇನೆಗೆ ಆಯ್ಕೆಯಾಗಿರುವುದಕ್ಕೆ ಸಂತೋಷದಿಂದ ಭಾವುಕರಾಗಿದ್ದಾರೆ ಎಂದು ತಿಳಿದುಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.