ADVERTISEMENT

ಬಿಜೆಪಿ ನಾಗಾಲೋಟ, ಕಾಂಗ್ರೆಸ್ ದೂಳಿಪಟ

ನಾಲ್ಕು ರಾಜ್ಯಗಳ ಚುನಾವಣೆ ಫಲಿತಾಂಶ: ದೆಹಲಿಯಲ್ಲಿ ಕಾಂಗ್ರೆಸ್ ಗುಡಿಸಿದ ‘ಆಮ್ ಆದ್ಮಿ’

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2013, 11:14 IST
Last Updated 11 ಡಿಸೆಂಬರ್ 2013, 11:14 IST

ನವದೆಹಲಿ (ಪಿಟಿಐ): ಮುಂಬರುವ ಲೋಕ­ಸಭಾ ಚುನಾವಣೆಗೆ ಮುಂಚಿನ ‘ಸೆಮಿ­ಫೈನಲ್‌’ ಎಂದೇ ಹೇಳಲಾದ, ಭಾನು­ವಾರ ಹೊರಬಿದ್ದ ನಾಲ್ಕು ರಾಜ್ಯಗಳ ವಿಧಾನ­ಸಭೆ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿಯು ಕಾಂಗ್ರೆಸ್ಸನ್ನು ‘4–0’ಯಿಂದ ಸದೆಬಡಿದಿದೆ.

ಮಧ್ಯಪ್ರದೇಶ ಮತ್ತು ಛತ್ತೀಸಗಡದಲ್ಲಿ ಬಿಜೆಪಿ ಹ್ಯಾಟ್ರಿಕ್‌ ಗೆಲುವು ಸಾಧಿಸುವ ಮೂಲಕ ಆಡಳಿತವನ್ನು ತನ್ನಲ್ಲೇ ಉಳಿಸಿ­ಕೊಳ್ಳುವಲ್ಲಿ ಯಶಸ್ವಿಯಾಗಿದೆ. ರಾಜಸ್ತಾನ­ದಲ್ಲಿ ದಾಖಲೆಯ ಗೆಲುವು ಸಾಧಿಸಿ ಐದು ವರ್ಷಗಳ ಬಳಿಕ ಆಡಳಿತಕ್ಕೆ ಮರಳಿದೆ. ದೆಹಲಿ­ಯಲ್ಲಿ ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿ ಹೊರ­ಹೊಮ್ಮಿದ್ದರೂ ಸರ್ಕಾರ ರಚನೆ ಸಾಧ್ಯತೆ ಅತಂತ್ರವಾಗಿದೆ.

ರಾಜಸ್ತಾನದಲ್ಲಿ ಕಮಲವು ನಾಲ್ಕನೇ ಮೂರರಷ್ಟು (3/4) ದಾಖಲೆಯ ಬಹು­ಮತ ಪಡೆದಿದೆ. ವಸುಂಧರಾ ರಾಜೆ ಮುಂದಾಳತ್ವ­ದಲ್ಲಿ ಬಿಜೆಪಿಯು 199 ಕ್ಷೇತ್ರ­ಗಳ ಪೈಕಿ 162ರಲ್ಲಿ ಗೆದ್ದಿದೆ. ಇಲ್ಲಿ ಕಾಂಗ್ರೆಸ್‌ ಹಿಂದೆಂದೂ ಕಾಣದಷ್ಟು ಶೋಚನೀಯ­ವಾಗಿ ಸೋಲುಂಡಿದೆ.

ಕಳೆದ ಬಾರಿ ಇಲ್ಲಿ 96 ಸದಸ್ಯ ಬಲ ಹೊಂದಿದ್ದ ಕಾಂಗ್ರೆಸ್‌ನ ಬಲ ಈಗ 21ಕ್ಕೆ ಕುಸಿದಿದೆ. ಇದಕ್ಕೆ ಮುನ್ನ 1977ರಲ್ಲಿ 41 ಸ್ಥಾನ­ಗಳನ್ನು ಪಡೆದದ್ದು ಇಲ್ಲಿ ಕಾಂಗ್ರೆಸ್‌ನ ಅತಿ ಕಳಪೆ ಸಾಧನೆಯಾಗಿತ್ತು.

ದೆಹಲಿಯಲ್ಲಿ ಕಣಕ್ಕಿಳಿಯುವ ಮೂಲಕ ಚುನಾವಣಾ ರಾಜಕೀಯಕ್ಕೆ ಧುಮುಕಿದ ಆಮ್‌ ಆದ್ಮಿ ಪಕ್ಷವು (ಎಎಪಿ) ನಿಬ್ಬೆರಗಾ­ಗಿಸುವ ಸಾಧನೆ ಮೂಲಕ ಕಾಂಗ್ರೆಸ್‌ ಪಕ್ಷ­ವನ್ನು ಮೂರನೇ ಸ್ಥಾನಕ್ಕೆ ದೂಡಿದೆ. ಇದೇ ವೇಳೆ ಇಲ್ಲಿ ಸುಗಮವಾಗಿ ಅಧಿಕಾರ ಸೂತ್ರ ಹಿಡಿಯುವ ಲೆಕ್ಕಾಚಾರದಲ್ಲಿದ್ದ ಬಿಜೆಪಿ ಲೆಕ್ಕಾಚಾರಕ್ಕೂ ತೊಡರುಗಾಲು ಹಾಕಿದೆ.

ದೆಹಲಿಯಲ್ಲಿ ಬಿಜೆಪಿ 31 ಕಡೆ ಗೆದ್ದಿದ್ದರೆ, ಎಎಪಿ 28 ಕಡೆ ಜಯಶಾಲಿಯಾಗಿದೆ. ಇಲ್ಲಿ  ಕಳೆದ ಸಲ 43 ಕಡೆ ಗೆದ್ದಿದ್ದ ಕಾಂಗ್ರೆಸ್‌ ಈ ಸಲ ಕೇವಲ 8 ಕಡೆ ಜಯಿಸಿದೆ. ಬಿಜೆಪಿ ಮಿತ್ರ­ಪಕ್ಷ­ವಾದ ಶಿರೋಮಣಿ ಅಕಾಲಿದಳದ ಒಬ್ಬ ಅಭ್ಯರ್ಥಿ ಒಂದು ಕಡೆ ವಿಜಯಿ­ಯಾಗಿದ್ದಾರೆ.
ಎಎಪಿ ಮುಖ್ಯಸ್ಥ ಅರವಿಂದ್‌ ಕೇಜ್ರಿವಾಲ್‌ ಅವರು ಮೂರು ಅವಧಿಗೆ ಮುಖ್ಯಮಂತ್ರಿ­ಯಾಗಿದ್ದ ಶೀಲಾ ದೀಕ್ಷಿತ್‌ ಅವರನ್ನು ಭಾರಿ ಅಂತರದಿಂದ ಸೋಲಿಸಿದ್ದಾರೆ.

ಮಧ್ಯಪ್ರದೇಶದಲ್ಲಿ ಕೂಡ ಬಲವನ್ನು ಸಾಕಷ್ಟು ಹೆಚ್ಚಿಸಿಕೊಂಡಿರುವ ಬಿಜೆಪಿ ಮೂರನೇ ಎರಡರಷ್ಟು (2/3) ಬಹುಮತ ಪಡೆದಿದೆ. ಇಲ್ಲಿನ 230 ಕ್ಷೇತ್ರಗಳ ಪೈಕಿ ಶಿವರಾಜ್‌ಸಿಂಗ್‌ ಚೌಹಾಣ್‌ ನೇತೃತ್ವದ ಬಿಜೆಪಿಯು 165 ಸ್ಥಾನಗಳಲ್ಲಿ ಗೆದ್ದು ಕಳೆದ ಸಲಕ್ಕಿಂತ 22 ಹೆಚ್ಚು ಕಡೆ ವಿಜಯಿಯಾಗಿದೆ. ಇಲ್ಲಿ ಕಳೆದ ಬಾರಿ 71 ಸ್ಥಾನಗಳನ್ನು ಗೆದ್ದಿದ್ದ ‘ಹಸ್ತ’ ಈಗ 58 ಕಡೆ ಮಾತ್ರ ಜಯ ಕಂಡಿದೆ.

ಛತ್ತೀಸಗಡದ 90 ಸ್ಥಾನಗಳ ಪೈಕಿ ಬಿಜೆಪಿ 49 ಸ್ಥಾನಗಳಲ್ಲಿ ವಿಜಯಿಯಾಗಿದೆ. ತನ್ನ ಮುಖಂಡರನ್ನು ನಕ್ಸಲರು ಹತ್ಯೆ ಮಾಡಿದ ಪ್ರಕರಣದ ಅನುಕಂಪದ ಲಾಭ ಪಡೆಯಲು ಯತ್ನಿಸಿದ ಕಾಂಗ್ರೆಸ್‌ ಇಲ್ಲಿ 39 ಸ್ಥಾನಗಳನ್ನು ಪಡೆದಿದೆ. ಇಲ್ಲಿ ಕಳೆದ ಸಲ ಕಾಂಗ್ರೆಸ್‌ 38 ಸದಸ್ಯ ಬಲ ಹೊಂದಿತ್ತು.

ನಾಲ್ಕು ರಾಜ್ಯಗಳ ವಿಧಾನ­ಸಭೆ ಚುನಾವಣಾ ಫಲಿತಾಂಶಕ್ಕೆ ಸಂಬಂಧಪಟ್ಟ ಮತ್ತಷ್ಟು ಸುದ್ದಿಗಳು...

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.