ಯೋಗ ಗುರು ಸ್ವಾಮಿ ಶಿವಾನಂದ
ಮಹಾಕುಂಭ ನಗರ: ಯೋಗ ಗುರು ಸ್ವಾಮಿ ಶಿವಾನಂದ ಬಾಬಾ ಅವರು ಕಳೆದ 100 ವರ್ಷಗಳಲ್ಲಿ ಜರುಗಿರುವ ಎಲ್ಲಾ ಕುಂಭಮೇಳಗಳಲ್ಲೂ ಪಾಲ್ಗೊಂಡಿದ್ದಾರೆ ಎಂದು ಅವರ ಶಿಷ್ಯರು ಹೇಳಿದ್ದಾರೆ.
ಪದ್ಮಶ್ರೀ ಪುರಸ್ಕೃತರಾದ ಶಿವಾನಂದ ಬಾಬಾ ಅವರು 1896ರ ಆ. 8ರಂದು ಜನಿಸಿದವರು ಎಂದು ಬಾಬಾ ಅವರಿಗಾಗಿ ಸೆಕ್ಟರ್ 16ರಲ್ಲಿ ನಿರ್ಮಿಸಿರುವ ಟೆಂಟ್ ಮುಂದೆ ಬರೆಯಲಾಗಿದೆ. ಬಾಬಾ ಅವರು ತ್ರಿವೇಣಿ ಸಂಗಮದಲ್ಲಿ ಮುಂಜಾನೆಯೇ ಪವಿತ್ರ ಸ್ನಾನ ಮುಗಿಸಿದರು. ಅವರ ದರ್ಶನಕ್ಕೆ ಭಕ್ತರು ಸಾಲುಗಟ್ಟಿ ನಿಂತಿದ್ದರು.
ಬೆಂಗಳೂರು ಮೂಲದವರಾದ ಬಾಬಾ ಅವರ ಶಿಷ್ಯ ಫಲ್ಗುಣ ಭಟ್ಟಾಚಾರ್ಯ ಮಾಹಿತಿ ನೀಡಿ, ‘ಭಿಕ್ಷುಕ ದಂಪತಿಗೆ ಜನಿಸಿದ ಬಾಬಾ ಅವರನ್ನು ಪಾಲಕರು ಓಂಕಾರಾನಂದ ಗೋಸ್ವಾಮಿ ಅವರಿಗೆ ನೀಡಿದರು. ಆರು ವರ್ಷಗಳ ತರುವಾಯ, ಅವರು ತಮ್ಮ ಕುಟುಂಬವನ್ನು ಭೇಟಿಯಾದರು. ಅದೇ ಸಂದರ್ಭದಲ್ಲಿ ಅವರ ಸೋದರಿ ಮೃತಪಟ್ಟರು. ಕೆಲವೇ ದಿನಗಳಲ್ಲಿ ಪಾಲಕರಿಬ್ಬರೂ ನಿಧನರಾದರು. ಹೀಗಾಗಿ ಸ್ವಾಮೀಜಿ ಬಳಿ ಮರಳಿ ಆಶ್ರಯ ಪಡೆದರು’ ಎಂದು ವಿವರಿಸಿದ್ದಾರೆ.
‘ತಮ್ಮ ನಾಲ್ಕು ವರ್ಷದವರೆಗೂ ಹಾಲು, ಹಣ್ಣು ಹಾಗೂ ರೋಟಿಯನ್ನು ಅವರು ಕಂಡಿಲ್ಲ. ಅದೇ ಆಹಾರ ಶೈಲಿಯನ್ನು ಈಗಲೂ ಅವರು ರೂಢಿಸಿಕೊಂಡಿದ್ದಾರೆ. ದಿನಕ್ಕೆ ಅರ್ಧ ಊಟವನ್ನಷ್ಟೇ ಮಾಡುತ್ತಾರೆ. ಬೇಯಿಸಿದ ಆಹಾರಕ್ಕೆ ಎಣ್ಣೆ, ಉಪ್ಪು ಇರುವುದಿಲ್ಲ. ಹಾಲು ಕುಡಿಯುವುದಿಲ್ಲ. ರಾತ್ರಿ 9ಕ್ಕೆ ಮಲಗುತ್ತಾರೆ. ನಸುಕಿನ 3ಕ್ಕೆ ಏಳುತ್ತಾರೆ. ಯೋಗ ಹಾಗೂ ಧ್ಯಾನದಲ್ಲಿ ಮುಂಜಾನೆ ಕಳೆಯುತ್ತಾರೆ. ದಿನದಲ್ಲಿ ಅವರು ಮಲಗುವುದೇ ಇಲ್ಲ’ ಎಂದು ವಿವರಿಸಿದ್ದಾರೆ.
ಕುಂಭಮೇಳದಲ್ಲಿ ಆಶೀರ್ವಚನ ನೀಡಿರುವ ಸ್ವಾಮಿ ಶಿವಾನಂದ ಅವರು, ‘ಮುಂಜಾನೆ ಬೇಗನೆ ಎದ್ದು ಕನಿಷ್ಠ ಅರ್ಧ ಗಂಟೆ ಯೋಗಕ್ಕೆ ಮೀಸಲಿಡಿ. ಒಂದೇ ರೀತಿಯ ಜೀವನಶೈಲಿಯನ್ನು ಅಳವಡಿಸಿಕೊಳ್ಳಿ. ನಿತ್ಯ ಸಾಕಷ್ಟು ನಡಿಗೆಯಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ’ ಎಂದು ಯುವಜನತೆಗೆ ಸಂದೇಶ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.