ADVERTISEMENT

ಅಮೆರಿಕ ದುಃಸ್ವಪ್ನ | ಕೈಗಳಿಗೆ ಕೋಳ...ಅಮೆರಿಕದಿಂದ ಗಡೀಪಾರಾದ ಭಾರತೀಯರ ಕಥೆ–ವ್ಯಥೆ

ಪಿಟಿಐ
ರಾಯಿಟರ್ಸ್
Published 6 ಫೆಬ್ರುವರಿ 2025, 22:38 IST
Last Updated 6 ಫೆಬ್ರುವರಿ 2025, 22:38 IST
   

‘ಅಮೆರಿಕ ಕನಸು’ ನನಸು ಮಾಡಿಕೊಳ್ಳಲು ಮನೆ ಬಿಟ್ಟು, ಬೆಟ್ಟ–ಗುಡ್ಡಗಳ ಮೂಲಕ ಸಾಗಿ, ದಟ್ಟ ಮತ್ತು ಅಷ್ಟೇ ಅಪಾಯಕಾರಿಯಾಗಿರುವ ಪನಾಮ ಅರಣ್ಯವನ್ನು ದಾಟಿ ಅಮೆರಿಕ ತಲುಪಿದವರು ಈಗ ಕೈಗೆ ಕೋಳ ತೊಡಿಸಿಕೊಂಡು ಭಾರತಕ್ಕೆ ವಾಪಸಾಗಿದ್ದಾರೆ. ಅವರ ಬಳಿ ಈಗ ಉಳಿದಿರುವುದು ಬೆಟ್ಟದಷ್ಟು ಸಾಲ ಮಾತ್ರ. ಮುಂದೇನು ಎನ್ನುವ ಬಗ್ಗೆ ಯಾರ ಬಳಿಯೂ ಉತ್ತರವಿಲ್ಲ...

ಮೊದಲ ಬ್ಯಾಚ್‌ನಲ್ಲಿ ಭಾರತಕ್ಕೆ ಬಂದವರಲ್ಲಿ ಹಲವರು ಮೆಕ್ಸಿಕೊ ಗಡಿಯ ಮೂಲಕ ಅಕ್ರಮವಾಗಿ ಅಮೆರಿಕ ತಲುಪಿದವರು. ಇದರಲ್ಲಿ ಹೆಚ್ಚಿನವರನ್ನು ಅಮೆರಿಕ ಗಡಿ ದಾಟುವ ವೇಳೆಯಲ್ಲಿಯೇ ಬಂಧಿಸಲಾಗಿದೆ. ಕೆಲವರೂ 2–3 ತಿಂಗಳ ಹಿಂದಷ್ಟೇ ಗಡಿ ದಾಟಿದವರು ಇದ್ದಾರೆ. ಗಡಿ ದಾಟಲು 6 ತಿಂಗಳು ಕಾದು ಕೂತು ಜನವರಿಯಲ್ಲಷ್ಟೇ ಹೋದವರೂ ಇದ್ದಾರೆ. ಏಜೆಂಟರ ಮಾತು ಕೇಳಿಕೊಂಡು ಅಕ್ರಮವಾಗಿ ಅಮೆರಿಕಕ್ಕೆ ಹೋಗಬೇಡಿ ಎಂದು ವಾಪಸಾದ ಹೆಚ್ಚಿನವರು ಮನವಿ ಮಾಡಿಕೊಂಡಿದ್ದಾರೆ

‘ಪಾಸ್‌ಪೋರ್ಟ್‌ ಕಸಿದುಕೊಂಡರು’

ಉದ್ಯೋಗದ ವೀಸಾದೊಂದಿಗೆ ಪಂಜಾಬ್‌ನ ಸುಖಪಾಲ್‌ ಸಿಂಗ್‌ ಅವರು ಇಟಲಿಗೆ ಹೋಗಿದ್ದರು. ಒಂದು ವರ್ಷ ಅಲ್ಲಿ ಶೆಫ್‌ ಆಗಿ ಕೆಲಸ ಮಾಡಿದ್ದರು. ಇಟಲಿಯಲ್ಲಿ ಸಿಕ್ಕ ಏಜೆಂಟರೊಬ್ಬರು ಅಮೆರಿಕ ತಲುಪಿಸುವ ಕನಸು ಬಿತ್ತಿದರು. ವಿಮಾನದಲ್ಲಿಯೇ ಅಮೆರಿಕ ತಲುಪಿಸುವುದಾಗಿಯೂ ಹೇಳಿದರು. ಸುಖ‍ಪಾಲ್‌ ಮತ್ತು ಆತನ ಕೆಲವು ಸ್ನೇಹಿತರು ಅಮೆರಿಕಕ್ಕೆ ಹೋಗಲು ತಯಾರಾದರು. ತಮ್ಮೆಲ್ಲಾ ಉಳಿತಾಯದ ಹಣ, ಸ್ನೇಹಿತರಿಂದ ಸಾಲ ‍ಪಡೆದುಕೊಂಡು ಪ್ರತಿಯೊಬ್ಬರೂ ₹30 ಲಕ್ಷ ಹಣವನ್ನು ಏಜೆಂಟರಿಗೆ ನೀಡಿದರು.

ADVERTISEMENT

‘ಅಮೆರಿಕಕ್ಕೆ ಕರೆದುಕೊಂಡು ಹೋಗುವ ಬದಲು ನಮ್ಮನ್ನು ನಿಕಾರಾಗುವ ದೇಶಕ್ಕೆ ಕರೆದುಕೊಂಡು ಹೋದರು. ಇಲ್ಲಿ ನಮ್ಮೆಲ್ಲ ಪಾಸ್‌ಪೋರ್ಟ್‌ಗಳನ್ನು ಏಜೆಂಟರು ಕಸಿದುಕೊಂಡರು. ಇಲ್ಲಿಂದ ಹೊಂಡುರಾಸ್‌, ಗ್ವಾಟೆಮಾಲಾ ಮೂಲಕ ಮೆಕ್ಸಿಕೊ ತಲುಪಿಸಲಾಯಿತು. ಅಲ್ಲಿಂದ ಸಮುದ್ರ ಮಾರ್ಗವಾಗಿ ಅಮೆರಿಕದ ಕ್ಯಾಲಿರ್ಫೋನಿಯಾಗೆ ತಲುಪಿಸಲಾಯಿತು. ಒಂದು ಕಡೆ ಬೋಟ್‌ ಮುಳುಗಿತ್ತು. ಈ ಘಟನೆಯಲ್ಲಿ ನಮ್ಮ ಜೊತೆ ಬಂದಿದ್ದ ಒಬ್ಬರು ತೀರಿ ಹೋದರು’ ಎಂದರು. ‘ಅಮೆರಿಕ ಗಡಿ ತಲುಪುತ್ತಿದ್ದಂತೆಯೇ ನಮ್ಮನ್ನು ಬಂಧಿಸಿ, ನಿರಾಶ್ರಿತರ ಕೇಂದ್ರಕ್ಕೆ ಹಾಕಲಾಯಿತು. 12 ದಿನಗಳವರೆಗೆ ಇಲ್ಲಿಯೇ ಇದ್ದೆವು’ ಎಂದು ತಮ್ಮ ಅನುಭವ ಹಂಚಿಕೊಂಡರು ಸುಖಪಾಲ್‌.

‘ಕೈಗೆ ಕೋಳ ಹಾಕಲಾಗಿತ್ತು’

ಭಾರತಕ್ಕೆ ವಾಪಸು ಕರೆತರುವ ವೇಳೆ ಭಾರತೀಯರ ಕೈಗಳಿಗೆ ಕೋಳ ಹಾಕಿ, ಕಾಲುಗಳನ್ನು ಸರಪಳಿಯಿಂದ ಕಟ್ಟಿ ಕರೆತಂದಿದ್ದರ ಬಗ್ಗೆ ದೊಡ್ಡ ವಿವಾದ ಎದ್ದಿದೆ. ‘ನಮ್ಮ ಕೈಗಳಿಗೆ ಕೋಳ ತೊಡಿಸಲಾಗಿತ್ತು’ ಎಂದು ವಾಪಸಾದವರು ಹೇಳಿಕೆ ನೀಡಿದ್ದಾರೆ.

ವಿರೋಧ ಪಕ್ಷಗಳು ಈ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ. ‘ಅಮೆರಿಕವು ತನ್ನ ಕಾನೂನು ಪಾಲಿಸಿದೆ’ ಎಂದು ಭಾರತದ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಹೇಳಿದ್ದಾರೆ. ಈ ನಡುವೆಯೇ ಅಮೆರಿಕದ ಗಡಿ ಗಸ್ತು ಪಡೆಯ ಮುಖ್ಯಸ್ಥ ಮಿಶೆಲ್‌ ಡಬ್ಲ್ಯು ಬ್ಯಾಂಕ್ಸ್‌ ಅವರು ‘ಎಕ್ಸ್‌’ ನಲ್ಲಿ ವಿಡಿಯೊವೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.

‘ಅಮೆರಿಕಕ್ಕೆ ಅಕ್ರಮವಾಗಿ ವಲಸೆ ಬಂದಿದ್ದ ಭಾರತೀಯರನ್ನು ಅವರ ದೇಶಕ್ಕೆ ಬಿಟ್ಟುಬರಲಾಯಿತು. ನೀವು ಅಕ್ರಮವಾಗಿ ನಮ್ಮ ದೇಶಕ್ಕೆ ಬಂದರೆ, ನಾವು ನಿಮ್ಮನ್ನು ವಾಪಸು ಕಳಿಸುತ್ತೇವೆ’ ಎಂದು ಮಿಶೆಲ್‌ ಅವರು ವಿಡಿಯೊದೊಂದಿಗೆ ಪೋಸ್ಟ್‌ ಹಂಚಿಕೊಂಡಿದ್ದಾರೆ.

‘ನಮ್ಮ ಕೈ–ಕಾಲುಗಳಿಗೆ ಕೋಳ ತೊಡಿಸಲಾಗಿತ್ತು. ತಿನ್ನುವಾಗಲೂ ಕೋಳಗಳನ್ನು ಅವರು ತೆಗೆಯಲಿಲ್ಲ’ ಎನ್ನುತ್ತಾರೆ ಪಂಜಾಬ್‌ನ ದಲೇರ್‌ ಸಿಂಗ್‌. ‘ನಿರಾಶ್ರಿತರ ಶಿಬಿರಗಳಲ್ಲಿಯೂ ನಮ್ಮನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗಿದೆ. ಶಿಬಿರಗಳಲ್ಲಿ ನಮಗೆ ಸ್ನ್ಯಾಕ್ಸ್‌ ಮತ್ತು ಗೋಮಾಂಸ ನೀಡಲಾಗುತ್ತಿತ್ತು. ನಾನು ಸ್ನ್ಯಾಕ್ಸ್‌ ಅನ್ನು ಮಾತ್ರ ಸೇವಿಸಿದೆ’ ಎಂದು ಪಂಜಾಬ್‌ನ ಸುಖಪಾಲ್‌ ಅವರೂ ತಮ್ಮ ಅನುಭವ ಬಿಚ್ಚಿಟ್ಟರು.

ಅಮೆರಿಕದಲ್ಲಿ ಯಾರ ಪರವಾಗಿಯೂ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಚಾರ ನಡೆಸಿಲ್ಲ. ಕೆಲವು ಸದಸ್ಯರಿಗೆ ಸಂಸತ್ತಿನಲ್ಲಿ ಸುಳ್ಳು ಹೇಳುವ ಪ್ರವೃತ್ತಿ ಇದೆ. ಮೋದಿ ಅವರು ಯಾರ ಪರವಾಗಿಯೂ ಪ್ರಚಾರ ನಡೆಸಿಲ್ಲ. ಈ ಹೇಳಿಕೆಯನ್ನು ಹಿಂಪಡೆಯಿರಿ.
ಎಸ್‌.ಜೈಶಂಕರ್‌, ವಿದೇಶಾಂಗ ಸಚಿವ (ರಾಜ್ಯಸಭೆಯ ಕಾಂಗ್ರೆಸ್‌ ಸಂಸದ ನಸೀರ್‌ ಹುಸೇನ್‌ ಅವರು ಎತ್ತಿದ ಪ್ರಶ್ನೆಗೆ ಸಚಿವರ ಉತ್ತರ)

‘ಭಾರತಕ್ಕೆ ವಾಪಸು ಕಳುಹಿಸಲಾಗುತ್ತಿದೆ ಎಂದು ನಮಗೆ ತಿಳಿಸಲೇ ಇಲ್ಲ. ವಿಮಾನದಲ್ಲಿ ಕೂರಿಸುವ ಮೊದಲು ನಮ್ಮ ಕೈಗಳಿಗೆ ಕೋಳ ತೊಡಿಸಿದರು. ಅಮೃತಸರಕ್ಕೆ ಬಂದ ನಂತರವಷ್ಟೇ ಕೋಳಗಳನ್ನು ತೆಗೆದರು. ನಮ್ಮ ಸೀಟ್‌ಗಳಲ್ಲಿಯೂ ಅಲುಗಾಡಲು ಬಿಡಲಿಲ್ಲ. ಶೌಚಾಲಯಕ್ಕೆ ಹೋಗಲೂ ಬಿಡುತ್ತಿರಲಿಲ್ಲ. ಅದಕ್ಕಾಗಿಯೇ ನಾನು ನೀರನ್ನೂ ಕುಡಿಯಲಿಲ್ಲ. ಅಮೃತಸರಕ್ಕೆ ತಲು‍ಪಿದ ಮೇಲೆಯೇ ನಾವೆಲ್ಲರೂ ಊಟ ಮಾಡಿದೆವು’ ಎಂದರು.

‘ಮಗಳು ಅಮೆರಿಕಕ್ಕೆ ಹೋಗಿದ್ದೇ ಗೊತ್ತಿಲ್ಲ’

‘ನನ್ನ ಮಗಳು ಸ್ನೇಹಿತರೊಂದಿಗೆ ಯುರೋಪ್‌ ಪ್ರವಾಸ ಹೋಗಿದ್ದಳು. ಆಕೆ ಯಾವಾಗ ಅಮೆರಿಕ ತಲುಪಿದಳು ಎಂದು ನಮಗೆ ತಿಳಿದಿಲ್ಲ. ಜ. 14ರಂದು ಆಕೆಯೊಂದಿಗೆ ಕೊನೆಯದಾಗಿ ಮಾತನಾಡಿದ್ದೆವು’ ಎನ್ನುತ್ತಾರೆ ಗುಜರಾತ್‌ನ ಕನುಭಾಯಿ ಪಟೇಲ್‌. ವಡೋದರಾದ ಜಯಂತಿಭಾಯಿ ಪಟೇಲ್‌ ಮಾತನಾಡಿ, ‘ನಮ್ಮ ಮಗಳು ಅಮೆರಿಕಕ್ಕೆ ಪ್ರವಾಸಿ ವೀಸಾದಲ್ಲಿ ಹೋಗಿದ್ದಳು’ ಎಂದರು.

‘ಡಂಕಿ ಮಾರ್ಗ: ಅಪಾಯಕಾರಿ ಪನಾಮ’

ಪಂಜಾಬ್‌ನ ಹೋಶಿಯಾರ್‌ಪುರದ ಹರವಿಂದರ್‌ ಸಿಂಗ್‌ ಅವರದ್ದು ‘ಡಂಕಿ ಮಾರ್ಗ’ದ ಪ್ರಯಾಣ. ಈ ಮಾರ್ಗವು ಅತ್ಯಂತ ಕಠಿಣ ಮತ್ತು ಅಪಾಯಕಾರಿಯಾದುದು. ಇವರು ಕಳೆದ ಆಗಸ್ಟ್‌ನಲ್ಲಿ ಊರು ಬಿಟ್ಟು ಅಮೆರಿಕಕ್ಕೆ ಹೋಗಲು ಪ್ರಯಾಣ ಬೆಳೆಸಿದ್ದರು. ಏಜೆಂಟರಿಗೆ ₹42 ಲಕ್ಷ ನೀಡಿದ್ದರು. ‘ಕಾನೂನಾತ್ಮಕವಾಗಿಯೇ ಅಮೆರಿಕ ತಲುಪಿಸುತ್ತೇನೆ ಎಂದು ಏಜೆಂಟರು ಮಾತು ಕೊಟ್ಟಿದ್ದರು’ ಎನ್ನುತ್ತಾರೆ ಹರವಿಂದರ್‌.

ಮೋದಿ ಮತ್ತು ಟ್ರಂಪ್ ತುಂಬಾ ಒಳ್ಳೆಯ ಸ್ನೇಹಿತರು ಎಂದು ಹೇಳಲಾಗುತ್ತಿದೆ. ಈ ಘಟನೆ (ವಲಸಿಗರಿಗೆ ಅವಮಾನ) ನಡೆಯಲು ಮೋದಿ ಅವಕಾಶ ನೀಡಿದ್ದೇಕೆ?.
ಪ್ರಿಯಾಂಕಾ ಗಾಂಧಿ, ಕಾಂಗ್ರೆಸ್‌ ಸಂಸದೆ

‘ನಮ್ಮನ್ನು ಮೊದಲು ಕತಾರ್‌ಗೆ ಬಳಿಕ ಬ್ರೆಜಿಲ್‌, ಕೊಲಂಬಿಯಾ, ಪನಾಮ, ನಿಕಾರಾಗುವ ಮೂಲಕ ಮೆಕ್ಸಿಕೊ ಸೇರಿಸಿದರು. ಅಲ್ಲಿಂದ ಅಮೆರಿಕ ಗಡಿ ದಾಟಿದೆವು. ಅದೆಷ್ಟೊ ಬೆಟ್ಟಗಳನ್ನು ದಾಟಿದೆವು. ಸುಮಾರು 40–45 ಕಿ.ಮೀ ನಡೆದಿದ್ದೇವೆ. ಬೋಟ್‌ ಮೂಲಕ 15 ತಾಸುಗಳ ಪ್ರಯಾಣ ಮಾಡಿದೆವು. ಇನ್ನೇನು ಬೋಟು ಮುಳು‌ಗಿಯೇ ಹೋಯಿತು ಎಂದುಕೊಂಡೆವು. ಆದರೆ,‌ ಯಾರಿಗೂ ಏನೂ ಆಗಲಿಲ್ಲ’ ಎಂದು ಅನುಭವ ಬಿಚ್ಚಿಟ್ಟರು.

‘ಪನಾಮ ಅರಣ್ಯವನ್ನು ದಾಟುವುದೇ ಸಾಹಸ. ಇಲ್ಲಿ ಜನರು ಸಾಯುವುದನ್ನು ನೋಡಿದ್ದೇವೆ. ಸಮುದ್ರದಲ್ಲಿ ಮುಳುಗಿದವರನ್ನು ನೋಡಿದ್ದೇವೆ. ಅರಣ್ಯದಲ್ಲಿ ನಡೆಯುವಾಗ ಯಾರಿಗೇ ಪೆಟ್ಟಾದರೂ ನಾವು ಅವರನ್ನು ಅಲ್ಲಿಯೇ ಸಾಯಲು ಬಿಟ್ಟು ಮುಂದೆ ಬಂದಿದ್ದೇವೆ. ನಮಗೂ ಮೊದಲೇ ಇದೇ ಹಾದಿಯಲ್ಲಿ ಸಾಗಿದ ಹಲವರು ಸತ್ತುಬಿದ್ದಿರುವುದನ್ನು ಕಂಡೆವು. ಇವೆಲ್ಲವೂ ಒಂದು ಭಯಾನಕ ಅನುಭವ’ ಎಂದರು. ‘ನಮಗೆ ತಿನ್ನಲು ಏನೂ ಇಲ್ಲದೆ ಹಲವು ದಿನ ಕಳೆದಿದ್ದೇವೆ. ಒಂದೊಂದು ದಿನ ಬರೀ ಬಿಸ್ಕೆಟ್‌ ತಿಂದು ಬದುಕುಳಿದ್ದಿದ್ದೇವೆ. ಕಾಡಿನ ಹಾದಿಯಲ್ಲಿ ₹30 ಸಾವಿರ– ₹35 ಸಾವಿರ ಮೌಲ್ಯದ ಬಟ್ಟೆಗಳನ್ನು ಕಳೆದುಕೊಂಡೆವು’ ಎಂದರು.

‘ಬ್ರೆಜಿಲ್‌ನಲ್ಲಿ 6 ತಿಂಗಳು ಕಾದಿದ್ದೆ’

‘ನಾನು ಸಾಲ ಮಾಡಿ ಏಜೆಂಟರಿಗೆ ₹30 ಲಕ್ಷ ನೀಡಿದ್ದೆ. ವೀಸಾ ಮೂಲಕವೇ ಅಮೆರಿಕ ತಲುಪಿಸುತ್ತೇವೆ ಎಂದು ಏಜೆಂಟರು ಹೇಳಿದ್ದರು. ಕಳೆದ ವರ್ಷದ ಜುಲೈನಲ್ಲಿ ಬ್ರೆಜಿಲ್‌ ತಲುಪಿದ್ದೆ. ಇಲ್ಲಿಂದ ವಿಮಾನದಲ್ಲಿ ಅಮೆರಿಕಕ್ಕೆ ಕರೆದುಕೊಂಡು ಹೋಗುವುದಾಗಿ ಹೇಳಲಾಗಿತ್ತು. ನನ್ನನ್ನು ಅಕ್ರಮವಾಗಿ ಗಡಿ ದಾಟಿಸಿದರು. ಗಡಿ ದಾಟಲು ಬ್ರೆಜಿಲ್‌ನಲ್ಲಿ ಆರು ತಿಂಗಳ ಕಾದು ಕೂತಿದ್ದೆ. ಗಡಿ ದಾಟುತ್ತಿದ್ದಂತೆಯೇ ಅಧಿಕಾರಿಗಳು ನಮ್ಮನ್ನು ಬಂಧಿಸಿದರು’ ಎನ್ನುತ್ತಾರೆ ಪಂಜಾಬ್‌ನ ಜಸ್‌ಪಾಲ್‌ ಸಿಂಗ್‌.

‘ಅಧಿಕ ಬಡ್ಡಿಗೆ ಸಾಲ’

ಪಂಜಾಬ್‌ನ ಕಪುರ್ತಲಾದ ಗುರು‍ಪ್ರೀತ್‌ ಸಿಂಗ್‌ ಅವರ ಕುಟುಂಬವು ತಮ್ಮ ಮನೆಯನ್ನು ಅಡವಿಟ್ಟಿದೆ. ಜೊತೆಗೆ ಅಧಿಕ ಬಡ್ಡಿಗೆ ಸಾಲ ಪಡೆದುಕೊಂಡಿದ್ದರು, ಸಂಬಂಧಿ‌ಕರಿಂದಲೂ ಕೈಸಾಲ ಮಾಡಿದ್ದರು. ಒಟ್ಟು ₹45 ಲಕ್ಷದಷ್ಟು ಖರ್ಚು ಮಾಡಿ ಗುರುಪ್ರೀತ್‌ ಅವರನ್ನು ಅಮೆರಿಕಕ್ಕೆ ಕಳುಹಿಸಿದ್ದರು. ಜಸ್ವಿಂದರ್‌ ಸಿಂಗ್‌ ಎಂಬುವರು ಹೆಚ್ಚಿನ ಬಡ್ಡಿಗೆ ₹50 ಲಕ್ಷ ಸಾಲ ಮಾಡಿ, ಅಮೆರಿಕಕ್ಕೆ ತೆರಳಿದ್ದರು. 

‘ನನ್ನೆಲ್ಲಾ ಉಳಿತಾಯ ಖಾಲಿ’

ಪಂಜಾಬ್‌ನ ದಲೇರ್‌ ಸಿಂಗ್‌ ಎಂಬುವರಿಗೆ ಅಮೆರಿಕ ತಲುಪಲು 6 ತಿಂಗಳು ಬೇಕಾಗಿದ್ದವು. ಇದಕ್ಕಾಗಿ ₹39 ಲಕ್ಷ ಖರ್ಚು ಮಾಡಿದ್ದರು. ಅಮೆರಿಕ ತಲುಪಿ ಮೂರು ವಾರಗಳಲ್ಲಿಯೇ ಈಗ ಭಾರತಕ್ಕೆ ವಾಪಸು ಬಂದಿದ್ದಾರೆ. ‘ನಾನು ನನ್ನ ಇಡೀ ಜೀವನದಲ್ಲಿ ಗಳಿಸಿದ ಹಣವನ್ನೆಲ್ಲಾ ಕಳೆದುಕೊಂಡಿದ್ದೇನೆ. ನನ್ನ ಕನಸು ಕಮರಿ ಹೋಯಿತು. ನಮ್ಮ ಕುಟುಂಬದ ಚಿನ್ನವನ್ನು ಮಾರಿದ್ದೆ. ಮೊದಲು ದುಬೈಗೆ ಕರೆದುಕೊಂಡು ಹೋದರು. ಅಲ್ಲಿಯೇ ಹಲವು ತಿಂಗಳು ಕಳೆದೆ. ಮೆಕ್ಸಿಕೊ ಗಡಿ ದಾಟಿ ಅಮೆರಿಕ ಸೇರಿದೆ. ಜ. 15ರಂದು ಅಧಿಕಾರಿಗಳು ನಮ್ಮನ್ನು ಬಂಧಿಸಿದರು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.