ADVERTISEMENT

ಹೊಸ ಮನೆಯಲ್ಲಿ ನೆಲೆಸುವ ಕನಸು ಕೈಗೂಡಲಿಲ್ಲ; ನಕ್ಸಲ್ ದಾಳಿಗೆ ಯೋಧ ಹುತಾತ್ಮ

ನಕ್ಸಲ್‌ ದಾಳಿಗೆ ಹುತಾತ್ಮರಾದ ಸಮೈಯಾ ಮಡ್ವಿ

ಪಿಟಿಐ
Published 5 ಏಪ್ರಿಲ್ 2021, 12:54 IST
Last Updated 5 ಏಪ್ರಿಲ್ 2021, 12:54 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಜಗದಾಲಪುರ (ಛತ್ತೀಸಗಡ): ಎರಡು ತಿಂಗಳ ಹಿಂದಷ್ಟೇ ಕಟ್ಟಿಸಿದ ಮನೆಯಲ್ಲಿ ಕುಟುಂಬದೊಂದಿಗೆ ಕಳೆಯುವ ಸಮೈಯ ಮಡ್ವಿ ಅವರ ಕನಸು ಕೊನೆಗೂ ಈಡೇರಲಿಲ್ಲ. ದೀರ್ಘ ರಜೆ ಪಡೆದು ಊರಿಗೆ ಹೊರಡುವ ಹುಮ್ಮಸ್ಸಿನಲ್ಲಿದ್ದ ಸಮೈಯ, ಶನಿವಾರ ರಾತ್ರಿ ನಕ್ಸಲರ ದುಷ್ಕೃತ್ಯಕ್ಕೆ ಹುತಾತ್ಮರಾದ 21 ಮಂದಿ ಯೋಧರಲ್ಲಿ ಒಬ್ಬರಾದರು.

ಬಸ್ತಾರಿಯಾ ಬೆಟಾಲಿಯನ್‌ನ ಯೋಧರಾಗಿದ್ದ ಸಮೈಯ ಅವರಿಗೆ ಇನ್ನೂ 25 ವರ್ಷ ತುಂಬಿಲ್ಲ. ಛತ್ತೀಸಗಢದ ಬಿಜಾಪುರ ಜಿಲ್ಲೆಯ ಆವಪಳ್ಳಿ ಗ್ರಾಮದಲ್ಲಿ ಅವರು ಮನೆ ಕಟ್ಟಿಸಿದ್ದರು. ಎರಡು ತಿಂಗಳ ಹಿಂದೆ ಗೃಹಪ್ರವೇಶವೂ ನೆರವೇರಿತ್ತು. ರಜೆ ಪಡೆದು ಈ ಮನೆಯಲ್ಲಿ ಕೆಲಕಾಲ ಉಳಿದುಕೊಳ್ಳಬೇಕೆಂದು ಆಸೆಯಲ್ಲಿದ್ದರು. ಆದರೆ ನಕ್ಸಲರೊಂದಿಗೆ ಬಿಜಾಪುರ– ಸುಕ್ಮಾ ಗಡಿಯಲ್ಲಿ ನಡೆದ ಗುಂಡಿನ ಕಾಳಗದಲ್ಲಿ ಬಲಿಯಾದರು.

ಮಾವೊವಾದಿ ನಕ್ಸಲರ ಉಪಟಳ ಮಟ್ಟ ಹಾಕುವ ಉದ್ದೇಶದೊಂದಿಗೆ ಸಿಆರ್‌ಪಿಎಫ್‌ ಸ್ಥಳೀಯ ಯುವಕರನ್ನು ಒಳಗೊಂಡ ‘ಬಸ್ತಾರಿಯಾ ಬೆಟಾಲಿಯನ್‌’ ಆರಂಭಿಸಿತ್ತು. ಐದು ವರ್ಷಗಳ ಹಿಂದಷ್ಟೇ ಮಡ್ವಿ ಈ ಪೊಲೀಸ್‌ ಬೆಟಾಲಿಯನ್‌ಗೆ ಸೇರ್ಪಡೆಯಾಗಿದ್ದರು ಎಂದು ಅವರ ಕುಟುಂಬ ಸದಸ್ಯರೊಬ್ಬರು ಸೋಮವಾರ ತಿಳಿಸಿದರು.

ADVERTISEMENT

ಅವರಿಗೆ ಹತ್ತು ತಿಂಗಳ ಮಗುವಿತ್ತು. ಮನೆ ಕಟ್ಟಬೇಕೆಂಬ ಕನಸು ಎರಡು ತಿಂಗಳ ಹಿಂದೆ ಸಾಕಾರಗೊಂಡಿತ್ತು ಎಂದು ಅವರ ದೊಡ್ಡಪ್ಪನ ಪುತ್ರ ಶಂಕರ್‌ ಮಡ್ವಿ ತಿಳಿಸಿದರು. ಹೊಸ ಮನೆಯಲ್ಲಿ ಕೆಲ ಕಾಲ ಕಳೆಯಲು ರಜೆ ಹಾಕಿ ಬರುವುದಾಗಿ ಅವರು ಕುಟುಂಬ ಸದಸ್ಯರಿಗೆ ತಿಳಿಸಿದ್ದರು. ಆದರೆ ಅವರು ಬಂದಿದ್ದು ಶವವಾಗಿ.

ನಕ್ಸಲರೊಂದಿಗೆ ಕಾದಾಟದಲ್ಲಿ ಮಡ್ವಿ ಜೊತೆ, ಬಸ್ತಾರ್‌ ವಲಯದ ಬಿಜಾಪುರ ಜಿಲ್ಲೆಯ ಇನ್ನೂ ಏಳು ಮಂದಿ ಯುವ ಯೋಧರು ಹುತಾತ್ಮರಾಗಿದ್ದಾರೆ.

‘ಈ ಯುವಕರನ್ನು ಸಾಯಿಸಿರುವುದು ಮುಂದಿನ ದಿನಗಳಲ್ಲಿ ನಕ್ಸಲರ ಪಾಲಿಗೆ ದುಬಾರಿಯಾಗಲಿದೆ. ಸ್ಥಳೀಯರು ಈಗ ನಕ್ಸಲರ ವಿರುದ್ಧ ಧ್ವನಿ ಎತ್ತತೊಡಗಿದ್ದಾರೆ. ನಕ್ಸಲರು ತಮ್ಮ ಕಾರ್ಯಾಚರಣೆಗೆ ಸ್ಥಳೀಯರ ಬೆಂಬಲ ಪಡೆದುಕೊಳ್ಳುತ್ತಿದ್ದರು’ ಎಂದು ಮೃತ ಯೋಧರೊಬ್ಬರ ಸಂಬಂಧಿ ತಿಳಿಸಿದರು.

ನಕ್ಸಲರ ವಿರುದ್ಧ ಹಳ್ಳಿ ಜನರಲ್ಲಿ ಪ್ರತಿರೋಧ ಹೆಚ್ಚಾಗುತ್ತಿದೆ ಎಂದು ಜಿಲ್ಲಾ ಸಶಸ್ತ್ರ ದಳದ ಮೃತ ಹೆಡ್‌ ಕಾನ್‌ಸ್ಟೆಬಲ್‌ ನಾರಾಯಣ ಸೋಧಿ ಅವರ ಸೋದರ ಭೀಮಾ ಸೋಧಿ ತಿಳಿಸಿದರು. ನಾರಾಯಣ ಸೋಧಿ ಅವರೂ ಆವಪಳ್ಳಿ ಪ್ರದೇಶದ ವ್ಯಾಪ್ತಿಗೆ ಬರುವ ಪುನ್ನೂರು ಗ್ರಾಮದವರು.

‘ಜನರು ಸಿಟ್ಟಿನಿಂದ ಕುದಿಯುತ್ತಿದ್ದಾರೆ. ಅವರಿಗೆ ನೋವಿದೆ. ಆದರೆ ಅವರಲ್ಲಿ (ನಕ್ಸಲರ ಬಗ್ಗೆ) ಭಯವಿಲ್ಲ. ಗ್ರಾಮದ ಅನೇಕ ಯುವಕರು ಪೊಲೀಸ್‌ ಪಡೆ ಸೇರುತ್ತಿರುವ ಕಾರಣ ನಕ್ಸಲರು ಹತಾಶರಾಗುತ್ತಿದ್ದಾರೆ’ ಎಂದು ಭೀಮಾ ಸೋಧಿ ತಿಳಿಸಿದರು.

ಭೀಮಾ ಒಬ್ಬರನ್ನುಳಿದು, ಅವರ ಉಳಿದ ನಾಲ್ವರು ಸೋದರರು ಪೊಲೀಸ್‌ ಪಡೆಯಲ್ಲಿದ್ದಾರೆ. ‘ತಾಯ್ನಾಡಿಗಾಗಿ ಪ್ರಾಣ ತ್ಯಜಿಸಿದ ಸೋದರನ ಬಗ್ಗೆ ನನಗೆ ಹೆಮ್ಮೆಯಿದೆ’ ಎಂದು ಭೀಮಾ ಹೇಳಿದರು.

ಇದನ್ನೂ ಓದಿ:

ಗರಿಯಾಬಂಡ್‌ ಜಿಲ್ಲೆಯ ಮೊಹಡಾ ಗ್ರಾಮಸ್ಥರು, ವಿಶೇಷ ಕಾರ್ಯಪಡೆಯ ಕಾನ್‌ಸ್ಟೆಬಲ್‌ ಸುಖ್‌ಸಿಂಗ್‌ ಫರಾಸ್‌ ಅವರ ಪಾರ್ಥಿವ ಶರೀರದ ಆಗಮನಕ್ಕೆ ಕಾಯುತ್ತಿದ್ದರು. ಒಂದೂವರೆ ವರ್ಷದ ಹಿಂದೆ ವಿವಾಹವಾಗಿದ್ದ ಫರಾಸ್‌, ನಾಲ್ಕು ತಿಂಗಳ ಹಿಂದೆ ತಂದೆಯಾಗಿದ್ದರು.

ನಕ್ಸಲರ ದುಷ್ಕೃತ್ಯಕ್ಕೆ ಬಲಿಯಾದ 22 ಜವಾನರಲ್ಲಿ ಎಂಟು ಮಂದಿ ಸಿಆರ್‌ಪಿಎಫ್‌ ಯೋಧರು. ಕೋಬ್ರಾ ಪಡೆಯ ಏಳು ಮಂದಿ ಕಮಾಂಡೊಗಳು ಇವರಲ್ಲಿ ಒಳಗೊಂಡಿದ್ದಾರೆ. ಮತ್ತೊಬ್ಬರು ಬಸ್ತಾರಿಯಾ ಬೆಟಾಲಿಯನ್‌ ಯೋಧ. ಜಿಲ್ಲಾ ಸಶಸ್ತ್ರ ದಳದ ಎಂಟು ಮಂದಿ, ವಿಶೇಷ ಕಾರ್ಯಪಡೆಯ ಆರು ಜವಾನರೂ ಹುತಾತ್ಮರಾಗಿದ್ದಾರೆ. ಮತ್ತೊಬ್ಬರು ಕಣ್ಮರೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.