ADVERTISEMENT

ಉತ್ತರ ಪ್ರದೇಶ: ‘ಉಚಿತ ಮದ್ಯ’ ನೀಡುತ್ತಿರುವ ಮದ್ಯದಂಗಡಿಗಳ ವಿರುದ್ಧ AAP ಸಮರ

ಪಿಟಿಐ
Published 27 ಮಾರ್ಚ್ 2025, 7:40 IST
Last Updated 27 ಮಾರ್ಚ್ 2025, 7:40 IST
<div class="paragraphs"><p>ಸಂಜಯ್ ಸಿಂಗ್</p></div>

ಸಂಜಯ್ ಸಿಂಗ್

   

ನವದೆಹಲಿ: ಉತ್ತರ ಪ್ರದೇಶದ ಮದ್ಯದಂಗಡಿಗಳಲ್ಲಿ ‘ಉಚಿತ ಮದ್ಯ’ ನೀಡುತ್ತಿರುವುದನ್ನು ಖಂಡಿಸಿ ಮಾರ್ಚ್ 29ರಂದು ರಾಜ್ಯದಾದ್ಯಂತ ಪ್ರತಿಭಟನೆಗಳನ್ನು ನಡೆಸಲು ಆಮ್ ಆದ್ಮಿ ಪಕ್ಷ (ಎಎಪಿ) ನಿರ್ಧರಿಸಿದೆ.

ಈ ಕುರಿತು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಎಎಪಿ ನಾಯಕ ಸಂಜಯ್ ಸಿಂಗ್, ಅಬಕಾರಿ ನೀತಿಗೆ ಸಂಬಂಧಿಸಿ ಬಿಜೆಪಿ ನಾಯಕರು ಬೂಟಾಟಿಕೆ ಪ್ರದರ್ಶಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ADVERTISEMENT

‘ದೆಹಲಿಯಲ್ಲಿ ನಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ಅಬಕಾರಿ ನೀತಿ ಕುರಿತು ಆರೋಪಗಳನ್ನು ಮಾಡಿದ್ದ ಬಿಜೆಪಿ ನಾಯಕರು ಕೇಂದ್ರ ತನಿಖಾ ಸಂಸ್ಥೆಗಳಾದ ಇ.ಡಿ ಮತ್ತು ಸಿಬಿಐ ಬಳಸಿಕೊಂಡು ತನಿಖೆ ನಡೆಸಿದ್ದರು. ಆದರೆ, ಅವರದ್ದೇ ಸರ್ಕಾರ ಅಧಿಕಾರದಲ್ಲಿರುವ ಉತ್ತರಪ್ರದೇಶದಲ್ಲಿ ಉಚಿತ ಮದ್ಯ ವಿತರಣೆ ಮಾಡುತ್ತಿರುವ ಬಗ್ಗೆ ಯಾರೂ ಪ್ರಶ್ನಿಸುತ್ತಿಲ್ಲ’ ಎಂದು ಸಂಜಯ್ ಸಿಂಗ್ ಕಿಡಿಕಾರಿದ್ದಾರೆ.

ಏಪ್ರಿಲ್ 1ರಂದು ಉತ್ತರಪ್ರದೇಶದಲ್ಲಿ ಹೊಸ ಅಬಕಾರಿ ನೀತಿ ಜಾರಿಗೆ ಬರಲಿದೆ. ಇದಕ್ಕೂ ಮುನ್ನ ರಾಜ್ಯದ ಹಲವು ನಗರಗಳಾದ್ಯಂತ ಮದ್ಯದಂಗಡಿಗಳು ಭಾರಿ ರಿಯಾಯಿತಿ ಘೋಷಿಸಿವೆ ಎಂದು ವರದಿಯಾಗಿದೆ. ಹಳೆಯ ಸ್ಟಾಕ್ ಅನ್ನು ಖಾಲಿ ಮಾಡದಿದ್ದರೆ ಅಂಗಡಿ ಮಾಲೀಕರು ಭಾರಿ ನಷ್ಟ ಅನುಭವಿಸಲಿದ್ದಾರೆ ಎಂದು ಸಿಂಗ್ ತಿಳಿಸಿದ್ದಾರೆ.

ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ ನೇತೃತ್ವದ ಬಿಜೆಪಿ ಸರ್ಕಾರವು ರೈತರು, ಶಿಕ್ಷಣ ಮತ್ತು ನಿರುದ್ಯೋಗದಂತಹ ಪ್ರಮುಖ ಸಮಸ್ಯೆಗಳ ಬಗ್ಗೆ ನಿರ್ಲಕ್ಷ್ಯ ತೋರುತ್ತಿದೆ. ಉಚಿತ ಮದ್ಯದಂತಹ ಕೊಡುಗೆಗಳನ್ನು ನೀಡುವ ಮೂಲಕ ಜನರ ಗಮನ ಬೇರೆಡೆ ಸೆಳೆಯಲು ಪ್ರಯತ್ನಿಸುತ್ತಿದೆ ಎಂದು ಸಿಂಗ್ ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.