ಸ್ಮೃತಿ ಇರಾನಿ
ಪ್ರಜಾವಾಣಿ ಚಿತ್ರ
ನವದೆಹಲಿ: ಆಡಳಿತಾರೂಢ ಆಮ್ ಆದ್ಮಿ ಪಕ್ಷವು (ಎಎಪಿ) ಮಹಿಳೆಯರ ವೈಯಕ್ತಿಕ ಮಾಹಿತಿ ಕಲೆಹಾಕುತ್ತಿದೆ ಎಂದು ಕೇಂದ್ರದ ಮಾಜಿ ಸಚಿವೆ, ಬಿಜೆಪಿ ಸ್ಮೃತಿ ಇರಾನಿ ಆರೋಪಿಸಿದ್ದಾರೆ.
ಓಕ್ಲಾ ಮತ್ತು ರೋಹಿಣಿಯಲ್ಲಿ ಭಾನುವಾರ ನಡೆದ ಸಮಾವೇಶಗಳಲ್ಲಿ ಮಾತನಾಡಿದ ಅವರು, ಫೆಬ್ರುವರಿ 5ರಂದು ನಡೆಯುವ ಚುನಾವಣೆಯಲ್ಲಿ ಕಮಲದ ಗುರುತನ್ನು ಒತ್ತುವ ಮೂಲಕ ತಮ್ಮ ಪಕ್ಷದ ಅಭ್ಯರ್ಥಿಗಳಿಗೇ ಮತ ನೀಡಿ ಎಂದು ಮನವಿ ಮಾಡಿದ್ದಾರೆ.
ಮಹಿಳೆಯರಿಗೆ ಪ್ರತಿ ತಿಂಗಳು ₹ 2,100 ನೀಡುವುದಾಗಿ ಘೋಷಿಸಿರುವ 'ಮಹಿಳಾ ಸಮ್ಮಾನ್ ಯೋಜನೆ'ಗೆ ನೋಂದಣಿ ಮಾಡಿಕೊಳ್ಳುವ ನೆಪದಲ್ಲಿ ಎಎಪಿಯು ವೈಯಕ್ತಿಕ ಮಾಹಿತಿಯನ್ನು ಕಲೆಹಾಕುತ್ತಿದೆ. ಇದು ಸ್ತ್ರೀಯರ ಸುರಕ್ಷತೆಗೆ ಬೆದರಿಕೆಯೊಡ್ಡುತ್ತದೆ ಎಂದು ಇರಾನಿ ಆತಂಕ ವ್ಯಕ್ತಪಡಿಸಿದ್ದಾರೆ.
ನೆರೆದಿದ್ದವರನ್ನು ಉದ್ದೇಶಿಸಿ, 'ಎಎಪಿ ಕಾರ್ಯಕರ್ತರು, ಮಹಿಳೆಯರಿಗೆ ಅರ್ಜಿಗಳನ್ನು ನೀಡಿ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ ಮತ್ತು ಕುಟುಂಬ ಸದಸ್ಯರ ಮಾಹಿತಿ ಕಲೆಹಾಕುತ್ತಿದ್ದಾರೆ. ಇದು ಗಂಭೀರ ಅಪಾಯವನ್ನು ಉಂಟು ಮಾಡಲಿದೆ. ಎಚ್ಚರಿಕೆಯಿಂದ ಹಾಗೂ ಜಾಗರೂಕಾಗಿರುವಂತೆ ನಿಮ್ಮನ್ನು ಒತ್ತಾಯಿಸುತ್ತೇನೆ' ಎಂದು ಹೇಳಿದ್ದಾರೆ.
ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಪ್ರಮುಖ ಭರವಸೆಗಳನ್ನು ಈಡೇರಿಸಲು ಎಎಪಿ ಸರ್ಕಾರ ವಿಫಲವಾಗಿದೆ ಎಂದೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.
70 ಸದಸ್ಯ ಬಲದ ದೆಹಲಿ ವಿಧಾನಸಭೆ ಚುನಾವಣಾ ಫಲಿತಾಂಶ ಫೆಬ್ರುವರಿ 8ರಂದು ಪ್ರಕಟವಾಗಲಿದೆ. 699 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.