ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಅಭಿಷೇಕ್ ಬ್ಯಾನರ್ಜಿ
–ಪಿಟಿಐ ಚಿತ್ರ
ಕೋಲ್ಕತ್ತ: ತೃಣಮೂಲ ಕಾಂಗ್ರೆಸ್ ಪಕ್ಷವು (ಟಿಎಂಸಿ) ತನ್ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಸಂಸದ ಅಭಿಷೇಕ್ ಬ್ಯಾನರ್ಜಿ ಅವರನ್ನು ಸಂಸದೀಯ ಪಕ್ಷದ ನಾಯಕನನ್ನಾಗಿ ನೇಮಕ ಮಾಡಿದೆ. ಕಳೆದ ಕೆಲವು ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿರುವ ಹಿರಿಯ ನಾಯಕ ಸುದೀಪ್ ಬಂದೋಪಾಧ್ಯಾಯ ಅವರ ಸ್ಥಾನಕ್ಕೆ ಈ ನೇಮಕ ನಡೆದಿದೆ.
ಪಕ್ಷದ ಮುಖ್ಯಸ್ಥೆ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ಸೋಮವಾರ ನಡೆದ ಸಂಸತ್ತಿನ ಉಭಯ ಸದನಗಳ ಟಿಎಂಸಿ ಸಂಸದರ ಸಭೆಯಲ್ಲಿ ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಮಮತಾ ಅವರು ಕೋಲ್ಕತ್ತದಿಂದ ವರ್ಚುವಲ್ ಆಗಿ ಸಭೆಯಲ್ಲಿ ಪಾಲ್ಗೊಂಡರು.
‘ಸುದೀಪ್ ಬಂದೋಪಾಧ್ಯಾಯ ಅವರು ಸಂಪೂರ್ಣವಾಗಿ ಚೇತರಿಸಿಕೊಳ್ಳುವವರೆಗೆ ಅಭಿಷೇಕ್ ಬ್ಯಾನರ್ಜಿ ಲೋಕಸಭೆಯಲ್ಲಿ ಪಕ್ಷವನ್ನು ಮುನ್ನಡೆಸಲಿದ್ದಾರೆ’ ಎಂದು ಮಮತಾ ಅವರು ಸಭೆಯಲ್ಲಿ ಪಕ್ಷದ ಸಂಸದರಿಗೆ ತಿಳಿಸಿದರು ಎಂದು ಮೂಲಗಳು ಹೇಳಿವೆ. ಕೋಲ್ಕತ್ತಾ ಉತ್ತರ ಕ್ಷೇತ್ರದಿಂದ ನಾಲ್ಕು ಬಾರಿ ಸಂಸದರಾಗಿರುವ ಬಂದೋಪಾಧ್ಯಾಯ ಅವರು 2011ರಿಂದಲೂ ಈ ಹುದ್ದೆಯಲ್ಲಿದ್ದರು.
ಮುಖ್ಯ ಸಚೇತಕ ಹುದ್ದೆ ತೊರೆದ ಕಲ್ಯಾಣ್ ಬ್ಯಾನರ್ಜಿ: ಟಿಎಂಸಿ ಹಿರಿಯ ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಲೋಕಸಭೆಯಲ್ಲಿ ಪಕ್ಷದ ಮುಖ್ಯ ಸಚೇತಕ ಹುದ್ದೆಗೆ ಸೋಮವಾರ ರಾಜೀನಾಮೆ ನೀಡಿದ್ದಾರೆ. ಹಾಲಿ ನಡೆಯುತ್ತಿರುವ ಮುಂಗಾರು ಅಧಿವೇಶನದಲ್ಲಿ ಪಕ್ಷದ ಸಂಸದರ ಜತೆ ಸಮನ್ವಯ ಸಾಧಿಸಲು ವಿಫಲರಾಗಿದ್ದಕ್ಕೆ ಅವರು ಟೀಕೆಗೆ ಗುರಿಯಾಗಿದ್ದರು.
‘ಪಕ್ಷದ ಸಂಸದರ ನಡುವೆ ಸಮನ್ವಯದ ಕೊರತೆಯಿದೆ ಎಂದು ದೀದಿ (ಮಮತಾ ಬ್ಯಾನರ್ಜಿ) ಅವರು ವರ್ಚುವಲ್ ಸಭೆಯಲ್ಲಿ ಹೇಳಿದ್ದಾರೆ. ನನ್ನ ಮೇಲೆ ಆಪಾದನೆ ಬಂದಿರುವುದರಿಂದ ಮುಖ್ಯ ಸಚೇತಕ ಹುದ್ದೆಗೆ ರಾಜೀನಾಮೆ ನೀಡಿದ್ದೇನೆ’ ಎಂದು ಕಲ್ಯಾಣ್ ಬ್ಯಾನರ್ಜಿ ಅವರು ಸುದ್ದಿ ವಾಹಿನಿಯೊಂದಕ್ಕೆ ತಿಳಿಸಿದ್ದಾರೆ.
‘ಪಕ್ಷದ ಕೆಲವು ಸಂಸದರು ಸಂಸತ್ ಕಲಾಪಕ್ಕೆ ಬರುವುದೇ ಇಲ್ಲ. ನಾನು ಏನು ಮಾಡಲು ಸಾಧ್ಯ? ಇದರಲ್ಲಿ ನನ್ನ ತಪ್ಪೇನು? ಎಲ್ಲದಕ್ಕೂ ನನ್ನನ್ನೇ ದೂಷಿಸಲಾಗುತ್ತಿದೆ’ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.