ADVERTISEMENT

ಮಹಾ ಕುಂಭಮೇಳ: ಸಾಮಾಜಿಕ ಮಾಧ್ಯಮದಲ್ಲಿ ಸುಳ್ಳು ಸುದ್ದಿ; 53 ಖಾತೆಗಳ ವಿರುದ್ಧ ಕ್ರಮ

ಪಿಟಿಐ
Published 14 ಫೆಬ್ರುವರಿ 2025, 7:19 IST
Last Updated 14 ಫೆಬ್ರುವರಿ 2025, 7:19 IST
<div class="paragraphs"><p>ಮಹಾ ಕುಂಭಮೇಳ</p></div>

ಮಹಾ ಕುಂಭಮೇಳ

   

ಪಿಟಿಐ

ಲಖನೌ: ಪ್ರಯಾಗರಾಜ್‌ನಲ್ಲಿ ನಡೆದ ಮಹಾ ಕುಂಭಮೇಳದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿಗಳನ್ನು ಹರಡಿದ ಆರೋಪದಲ್ಲಿ ಉತ್ತರ ಪ್ರದೇಶ ಪೊಲೀಸರು 53 ಖಾತೆಗಳ ವಿರುದ್ಧ ಕಾನೂನು ಕ್ರಮ ಜರುಗಿಸಿದ್ದಾರೆ.

ADVERTISEMENT

ನಕಲಿ ಸುದ್ದಿ ಹರಡುವುದನ್ನು ತಡೆಯುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ನೀಡಿದ್ದ ನಿರ್ದೇಶನದ ಅನುಸಾರ ಕ್ರಮ ಕೈಗೊಳ್ಳಲಾಗಿದೆ. ಕಿಡಿಗೇಡಿಗಳು, ಕುಂಭ ಮೇಳಕ್ಕೆ ಸಂಬಂಧ ಕಲ್ಪಿಸಿ ಹಳೆಯ ವಿಡಿಯೊಗಳು, ತಪ್ಪು ಮಾಹಿತಿಯನ್ನು ಹಂಚಿಕೊಳ್ಳುವ ಮೂಲಕ ಜನರ ದಿಕ್ಕು ತಪ್ಪಿಸುವ ಪ್ರಯತ್ನ ನಡೆಸಿದ್ದನ್ನು ಪತ್ತೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜನರ ದಿಕ್ಕುತಪ್ಪಿಸುವಂತಹ ಪೋಸ್ಟ್‌ಗಳನ್ನು ಮೇಲ್ವಿಚಾರಣೆ ಮಾಡಲು ಮತ್ತು ಅಂತಹವುಗಳಿಗೆ ಕಡಿವಾಣ ಹಾಕಲು ರಾಜ್ಯ ಪೊಲೀಸ್ ಹಾಗೂ ತಜ್ಞರನ್ನೊಳಗೊಂಡ ಏಜೆನ್ಸಿಗಳು ನಿರಂತರವಾಗಿ ಕೆಲಸ ಮಾಡುತ್ತಿದ್ದು, ಸಮಗ್ರ ಕಾರ್ಯತಂತ್ರಗಳನ್ನು ರೂಪಿಸಲಾಗಿದೆ ಎಂದು ಪೊಲಿಸ್‌ ಮಹಾ ನಿರ್ದೇಶಕ (ಡಿಜಿಪಿ) ಪ್ರಶಾಂತ್‌ ಕುಮಾರ್‌ ಗುರುವಾರ ಹೇಳಿದ್ದಾರೆ.

‌ಈಜಿಪ್ಟ್‌ನ ಕೈರೋದಲ್ಲಿ 2020ರ ಜುಲೈನಲ್ಲಿ ಸಂಭವಿಸಿದ ಅಗ್ನಿ ದುರಂತದ ವಿಡಿಯೊವನ್ನು ಹಂಚಿಕೊಳ್ಳುವ ಮೂಲಕ, ಮಹಾ ಕುಂಭಮೇಳದಲ್ಲಿ ಅನಾಹುತ ಸಂಭವಿಸಿದೆ. 40–50 ಕಾರುಗಳು ಆಹುತಿಯಾಗಿವೆ ಎಂಬುದಾಗಿ ಆತಂಕ ಸೃಷ್ಟಿಸಲಾಗಿತ್ತು. ಹಾಗೆಯೇ, ರಾಷ್ಟ್ರೀಯವಾದಿಗಳು ಹಾಗೂ ಧಾರ್ಮಿಕ ಮುಖಂಡರು ಸೇನಾ ಸಿಬ್ಬಂದಿಯ ಮೇಲೆ ಪಾದರಕ್ಷೆಗಳನ್ನು ಎಸೆದಿದ್ದಾರೆ ಎಂದು ಉಲ್ಲೇಖಿಸಿ ಮತ್ತೊಂದು ವಿಡಿಯೊವನ್ನು ಹಂಚಿಕೊಳ್ಳಲಾಗಿತ್ತು. ಆದರೆ, ಅದು 'ಪುಷ್ಪಾ 2' ಸಿನಿಮಾ ಪ್ರಚಾರ ಕಾರ್ಯಕ್ರಮದ್ದು ಎಂದು ಪ್ರಶಾಂತ್‌ ಕುಮಾರ್‌ ತಿಳಿಸಿದ್ದಾರೆ.

ಈ ರೀತಿ ಸುಳ್ಳು ಸುದ್ದಿಗಳನ್ನು ಹರಡಿ, ಶಾಂತಿ ಕದಡಲು ಯತ್ನಿಸಿದ ಆರೋಪದಲ್ಲಿ ಕಳೆದ ಒಂದು ತಿಂಗಳಿನಿಂದ ಸಾಮಾಜಿಕ ಮಾಧ್ಯಮಗಳ 53 ಖಾತೆಗಳ ವಿರುದ್ಧ ಕಾನೂನು ಕ್ರಮ ಆರಂಭಿಸಲಾಗಿದೆ ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.