ವಿಜಯ್ ಮತ್ತು ಸ್ಟಾಲಿನ್
– ಪಿಟಿಐ ಚಿತ್ರಗಳು
ನಾಗಪಟ್ಟಣಂ (ತಮಿಳುನಾಡು): ನಮ್ಮ ರಾಜಕೀಯ ಸಭೆಗಳಿಗೆ ಡಿಎಂಕೆ ಸರ್ಕಾರ ಹಲವು ಷರತ್ತುಗಳನ್ನು ವಿಧಿಸಿದೆ ಎಂದು ಆರೋಪಿಸಿರುವ ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಸಂಸ್ಥಾಪಕ, ನಟ ವಿಜಯ್ ಅವರು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಪುತ್ತೂರಿನಲ್ಲಿ ನಡೆದ ಬೃಹತ್ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ‘ಪ್ರಧಾನಿ ನರೇಂದ್ರ ಮೋದಿ ಅಥವಾ ಗೃಹ ಸಚಿವ ಅಮಿತ್ ಶಾ ಭೇಟಿಯ ಸಂದರ್ಭದಲ್ಲಿ ಡಿಎಂಕೆ ಸರ್ಕಾರ ಇಂತಹ ಷರತ್ತುಗಳನ್ನು ವಿಧಿಸಲು ಧೈರ್ಯ ತೋರುತ್ತದೆಯೇ’ ಎಂದು ಪ್ರಶ್ನಿಸಿದ್ದಾರೆ.
‘ಸಿಎಂ ಸರ್ (ಸ್ಟಾಲಿನ್), ಪ್ರಧಾನಿ, ಗೃಹ ಸಚಿವರ ಭೇಟಿಯ ಸಮಯದಲ್ಲಿ ನೀವು ಷರತ್ತುಗಳನ್ನು ವಿಧಿಸುತ್ತೀರಾ ಅಥವಾ ಟಿವಿಕೆಗೆ ಮಾಡಿದಂತೆ ವಿದ್ಯುತ್ ಕಡಿತಗೊಳಿಸುತ್ತೀರಾ? ರಾಜ್ಯ ಸರ್ಕಾರ ನಾನು ಮುಕ್ತವಾಗಿ ಸಂಚರಿಸಲು ಹಲವು ನಿರ್ಬಂಧಗಳನ್ನು ವಿಧಿಸಿದೆ ಮತ್ತು ಸಭೆಯ ವೇಳೆ ವಿದ್ಯುತ್ ಕಡಿತಗೊಳಿಸಲು ಸಹ ಪ್ರಯತ್ನಿಸಿದೆ’ ಎಂದು ವಿಜಯ್ ಆರೋಪಿಸಿದ್ದಾರೆ.
‘ಪ್ರಧಾನಿ ಅಥವಾ ಗೃಹ ಸಚಿವರ ಭೇಟಿಯ ಸಂದರ್ಭದಲ್ಲಿ ಡಿಎಂಕೆ ಸರ್ಕಾರ ಇಂತಹ ತಂತ್ರಗಳನ್ನು ಬಳಸಿದರೆ ತೊಂದರೆ ಎದುರಿಸಬೇಕಾಗುತ್ತದೆ. ಜನರನ್ನು ಭೇಟಿ ಮಾಡಲು ಬಯಸುವ ನನಗೆ ನೀವು ಷರತ್ತುಗಳನ್ನು ಏಕೆ ವಿಧಿಸುತ್ತೀರಿ. 2026ರಲ್ಲಿ ಟಿವಿಕೆ ಮತ್ತು ಡಿಎಂಕೆ ನಡುವೆ ಮಾತ್ರ ನೇರ ಹಣಾಹಣಿ ಇರುತ್ತದೆ ಎಂದು ನಾನು ನಿಮಗೆ ಮತ್ತೊಮ್ಮೆ ಹೇಳುತ್ತೇನೆ’ ಎಂದು ಅವರು ಗುಡುಗಿದ್ದಾರೆ.
ನಾನು ನಿಮ್ಮ (ಡಿಎಂಕೆ) ಬೆದರಿಕೆಗಳಿಗೆ ಹೆದರುವುದಿಲ್ಲ. ಜನರ ಸಂಪೂರ್ಣ ಬೆಂಬಲ ನನಗಿದೆ ಎಂದು ವಿಜಯ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.