ADVERTISEMENT

AIADMK-BJP ಮೈತ್ರಿ ಕಳಂಕ: ಸ್ಟಾಲಿನ್

ಪಿಟಿಐ
Published 12 ಏಪ್ರಿಲ್ 2025, 16:01 IST
Last Updated 12 ಏಪ್ರಿಲ್ 2025, 16:01 IST
<div class="paragraphs"><p>ಎಂ.ಕೆ. ಸ್ಟಾಲಿನ್ </p></div>

ಎಂ.ಕೆ. ಸ್ಟಾಲಿನ್

   

ಚೆನ್ನೈ: 'ತಮಿಳುನಾಡಿನಲ್ಲಿ ಅಧಿಕಾರದ ದಾಹದಿಂದ ರೂಪಗೊಂಡಿರುವ ಎಐಎಡಿಎಂಕೆ ಹಾಗೂ ಬಿಜೆಪಿ ಮೈತ್ರಿಗೆ ಸೋಲಾಗಲಿದೆ' ಎಂದು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಇಂದು (ಶನಿವಾರ) ಪ್ರತಿಕ್ರಿಯಿಸಿದ್ದಾರೆ.

ಮುಂದಿನ ವರ್ಷ ತಮಿಳುನಾಡು ವಿಧಾನಸಭೆಗೆ ನಡೆಯಲಿರುವ ಚುನಾವಣೆಯಲ್ಲಿ ಡಿಎಂಕೆ ಪಕ್ಷವನ್ನು ಅಧಿಕಾರದಿಂದ ಕಿತ್ತೊಗೆಯಲು ಶಪಥ ಕೈಗೊಂಡಿರುವ ಬಿಜೆಪಿ ಹಾಗೂ ಎಐಎಡಿಎಂಕೆ ಮತ್ತೆ ಮೈತ್ರಿ ಮಾಡಿಕೊಂಡಿವೆ.

ADVERTISEMENT

ಆದರೆ ಎಐಎಡಿಎಂಕೆ-ಬಿಜೆಪಿ ಮೈತ್ರಿಯೂ ರಾಜ್ಯದ ಆದರ್ಶಗಳಿಗೆ ವಿರುದ್ಧವಾಗಿದ್ದು, ಜನರು ಮತ್ತೆ ತಿರಸ್ಕರಿಸುತ್ತಾರೆ ಎಂದು ಸ್ಟಾಲಿನ್ ಹೇಳಿದ್ದಾರೆ.

'ತಮಿಳುನಾಡು ಭೇಟಿಯ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ಯಾವುದೇ ಕಾರ್ಯಕ್ರಮಗಳ ಕುರಿತು ಪ್ರಸ್ತಾಪಿಸಲಿಲ್ಲ. ಬದಲಾಗಿ ಸುದ್ದಿಗೋಷ್ಠಿಯಲ್ಲಿ ಡಿಎಂಕೆ ಸರ್ಕಾರ ಹಾಗೂ ತಮ್ಮನ್ನು ಟೀಕಿಸಲು ಮಾತ್ರ ಯತ್ನಿಸಿದ್ದರು' ಎಂದು ಸ್ಟಾಲಿನ್ ಆರೋಪಿಸಿದ್ದಾರೆ.

'ಡಿಎಂಕೆ ರಾಜ್ಯದ ಹಕ್ಕು, ಭಾಷಾ ಸಂಸ್ಕೃತಿಯನ್ನು ರಕ್ಷಿಸಲು ನಿಂತಿರುವ ಒಂದು ಚಳವಳಿಯಾಗಿದೆ. ಇದಕ್ಕೆ ವ್ಯತಿರಿಕ್ತವಾಗಿ ಬಿಜೆಪಿ-ಎಐಎಡಿಎಂಕೆ ಮೈತ್ರಿಕೂಟವು ಅಧಿಕಾರ ದಾಹದಿಂದ ರೂಪುಗೊಂಡಿದ್ದು, ಎಲ್ಲ ಆದರ್ಶಗಳಿಗೆ ವಿರುದ್ಧವಾಗಿದೆ' ಎಂದು ಹೇಳಿದ್ದಾರೆ.

'ರಾಜ್ಯದಲ್ಲಿ ಹಿಂದಿ ಹೇರಿಕೆಯ ಮೂಲಕ ತಮಿಳನ್ನು ನಿರ್ಮೂಲನೆ ಮಾಡಲು, ರಾಜ್ಯದ ಜನರ ಪ್ರಗತಿಯನ್ನು ತಡೆಯಲು ಮತ್ತು ಕ್ಷೇತ್ರ ಪುನರ್ ವಿಂಗಡಣೆಯ ಮೂಲಕ ರಾಜ್ಯದ ಹಕ್ಕನ್ನು ದುರ್ಬಲಗೊಳಿಸಲು ಬಿಜೆಪಿ ಪಿತೂರಿ ನಡೆಸುತ್ತಿದೆ' ಎಂದು ಅವರು ಆರೋಪಿಸಿದ್ದಾರೆ.

'ಬಿಜೆಪಿ ಏಕಾಂಗಿ ಅಥವಾ ಮೈತ್ರಿಯಾಗಿ ಬಂದರೂ ರಾಜ್ಯದ ಜನತೆ ತಕ್ಕ ಪಾಠ ಕಲಿಸಲು ಸಿದ್ಧರಾಗಿದ್ದಾರೆ. ಸ್ವಾಭಿಮಾನವಿಲ್ಲದೆ ದೆಹಲಿಯಲ್ಲಿ ಮಂಡಿಯೂರಿ ತಮಿಳುನಾಡನ್ನು ಒತ್ತೆ ಇಡಲು ಪ್ರಯತ್ನಿಸುವ ದೇಶದ್ರೋಹಿ ಮೈತ್ರಿಕೂಟವನ್ನು ಜನರು ತಿರಸ್ಕರಿಸುತ್ತಾರೆ' ಎಂದು ಹೇಳಿದ್ದಾರೆ.

'ನೀಟ್ ಬಗ್ಗೆ ಪತ್ರಕರ್ತರು ಪದೇ ಪದೇ ಪ್ರಶ್ನಿಸಿದಾಗ ಕೇಂದ್ರ ಸಚಿವರು ಸ್ಪಷ್ಟವಾಗಿ ಉತ್ತರಿಸಲಿಲ್ಲ. ಜನರನ್ನು ದಿಕ್ಕು ತಪ್ಪಿಸಲು ಯತ್ನಿಸುತ್ತಿದ್ದಾರೆ' ಎಂದು ಸ್ಟಾಲಿನ್ ಟೀಕಿಸಿದ್ದಾರೆ.

ತಮಿಳುನಾಡಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬ ಅಮಿತ್ ಶಾ ಆರೋಪಕ್ಕೆ ಪ್ರತ್ರಿಕ್ರಿಯಿಸಿದ ಸ್ಟಾಲಿನ್, 'ಇದು ಮಣಿಪುರವಲ್ಲ. ತಮಿಳುನಾಡು. ಬಿಜೆಪಿ ಆಡಳಿತದ ಕಣಿವೆ ರಾಜ್ಯದಲ್ಲಿ ಕಳೆದ 18 ತಿಂಗಳಲ್ಲಿ 250ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಅಲ್ಲಿ ಶಾಂತಿ ಪುನಃಸ್ಥಾಪಿಸಲು ವಿಫಲವಾದ ಕೇಂದ್ರದ ಗೃಹ ಸಚಿವರು ಈಗ ತಮಿಳುನಾಡಿನಲ್ಲಿ ಶಾಂತಿ ಕದಡಲು ಯತ್ನಿಸುತ್ತಿದ್ದಾರೆ' ಎಂದು ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.