ADVERTISEMENT

ಭೀಕರ ದುರಂತದ ಬೆನ್ನಲ್ಲೇ ವಿಮಾನ ಸಂಖ್ಯೆ ‘171’ ಬಳಸದಿರಲು ಏರ್ ಇಂಡಿಯಾ ನಿರ್ಧಾರ

ಪಿಟಿಐ
Published 14 ಜೂನ್ 2025, 10:08 IST
Last Updated 14 ಜೂನ್ 2025, 10:08 IST
<div class="paragraphs"><p>ಏರ್ ಇಂಡಿಯಾ</p></div>

ಏರ್ ಇಂಡಿಯಾ

   

(ಚಿತ್ರ ಕೃಪೆ: ಏರ್ ಇಂಡಿಯಾ)

ನವದೆಹಲಿ: ಗುಜರಾತ್‌ನ ಅಹಮದಾಬಾದ್‌ನಲ್ಲಿ ಸಂಭವಿಸಿದ್ದ ಭೀಕರ ವಿಮಾನ ದುರಂತದ ಬೆನ್ನಲ್ಲೇ ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನಗಳು ‘171’ ಸಂಖ್ಯೆಯನ್ನು ಬಳಸದಿರಲು ನಿರ್ಧರಿಸಿವೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಮಾರಕ ಅಪಘಾತಗಳು ನಡೆದ ಸಂದರ್ಭದಲ್ಲಿ ವಿಮಾನಯಾನ ಸಂಸ್ಥೆಗಳು ನಿರ್ದಿಷ್ಟ ಸಂಖ್ಯೆಗಳನ್ನು ಬಳಸುವುದನ್ನು ನಿಲ್ಲಿಸುವುದು ಸಾಮಾನ್ಯ. ಹಾಗಾಗಿ, ಇದೇ 17ರಿಂದ ಅಹಮದಾಬಾದ್‌ನಿಂದ ಲಂಡನ್‌ಗೆ ಹೊರಡುವ ವಿಮಾನ ಸಂಖ್ಯೆ ‘AI 171’ ಬದಲಿಗೆ ‘AI 159’ ಆಗಿರುತ್ತದೆ. ಬುಕಿಂಗ್ ವ್ಯವಸ್ಥೆಯಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಲಾಗಿದೆ ಎಂದೂ ಮೂಲಗಳು ಹೇಳಿವೆ.

‘171’ ವಿಮಾನ ಸಂಖ್ಯೆಯನ್ನು ರದ್ದುಪಡಿಸುವುದು ಅಗಲಿದ ಆತ್ಮಗಳಿಗೆ ಗೌರವ ಸಲ್ಲಿಸುವ ಸಂಕೇತವಾಗಿದೆ ಎಂದು ಏರ್‌ ಇಂಡಿಯಾ ವಿಮಾನಯಾನ ಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

2020ರ ಆಗಸ್ಟ್ 7ರಂದು ಕೋಝಿಕ್ಕೋಡ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಳೆಯಿಂದ ಒದ್ದೆಯಾಗಿದ್ದ ರನ್‌ವೇಯಿಂದ ಜಾರಿ ಕಂದಕಕ್ಕೆ ಬಿದ್ದಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ 1344; ವಿಮಾನದಲ್ಲಿದ್ದ 190 ಮಂದಿ ಪೈಕಿ ಇಬ್ಬರು ಪೈಲಟ್‌ಗಳು ಸೇರಿ 21 ಮಂದಿ ಮೃತಪಟ್ಟಿದ್ದರು. ಈ ದುರಂತದ ಬೆನ್ನಲ್ಲೇ ಏರ್ ಇಂಡಿಯಾ ಎಕ್ಸ್‌ಪ್ರೆಸ್ ‘1344’ ಸಂಖ್ಯೆಯನ್ನು ಬಳಸುವುದನ್ನು ನಿಲ್ಲಿಸಿತ್ತು.

ಗುರುವಾರ ಮಧ್ಯಾಹ್ನ ಅಹಮದಾಬಾದ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್‌ಗೆ ಹೊರಟಿದ್ದ ಬೋಯಿಂಗ್ 787 ಡ್ರೀಮ್‌ಲೈನರ್ (ಏರ್‌ ಇಂಡಿಯಾ 171) ವಿಮಾನವು ಟೇಕಾಫ್‌ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡು, ಗುಜರಾತ್‌ನ ಮಾಜಿ ಮುಖ್ಯಮಂತ್ರಿ ವಿಜಯ್‌ ರೂಪಾನಿ ಸೇರಿದಂತೆ ಕನಿಷ್ಠ 270 ಮಂದಿ ಮೃತಪಟ್ಟಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.