ADVERTISEMENT

ನಾಪತ್ತೆಯಾಗಿದ್ದ ನಿರ್ಮಾಪಕ ವಿಮಾನ ದುರಂತದಲ್ಲಿ ಸಾವು; DNA ಪರೀಕ್ಷೆಯಲ್ಲಿ ದೃಢ

ಪಿಟಿಐ
Published 21 ಜೂನ್ 2025, 11:45 IST
Last Updated 21 ಜೂನ್ 2025, 11:45 IST
   

ಅಹಮದಾಬಾದ್‌: ಏರ್ ಇಂಡಿಯಾ ವಿಮಾನ ದುರಂತದ ಬೆನ್ನಲ್ಲೇ ನಾಪತ್ತೆಯಾಗಿದ್ದ ಗುಜರಾತ್‌ನ ಚಲನಚಿತ್ರ ನಿರ್ಮಾಪಕ ಮಹೇಶ್‌ ಜಿರಾವಾಲಾ, ಅದೇ ದುರಂತದಲ್ಲಿ ಮೃತಪಟ್ಟಿರುವುದನ್ನು ಡಿಎನ್‌ಎ ಪರೀಕ್ಷೆ ದೃಢಪಡಿಸಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.

ಜೂನ್‌ 12ರಂದು ಅಹಮದಾಬಾದ್ ವಿಮಾನ ನಿಲ್ದಾಣದಿಂದ ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನವು ಟೇಕಾಫ್‌ ಆದ ಕೆಲವೇ ಕ್ಷಣಗಳಲ್ಲಿ ಮೇಘನಿನಗರದಲ್ಲಿರುವ ವೈದ್ಯಕೀಯ ಸಂಕೀರ್ಣದ ಮೇಲೆ ಅಪ್ಪಳಿಸಿತ್ತು. ಇದೇ ವೇಳೆ ಜಿರಾವಾಲಾ ಅವರು ತಮ್ಮ ದ್ವಿಚಕ್ರ ವಾಹನದಲ್ಲಿ ಆ ಪ್ರದೇಶದಿಂದ ಹಾದು ಹೋಗಿದ್ದರು ಎಂದು ಅವರು ತಿಳಿಸಿದ್ದಾರೆ.

‘ಜಿರಾವಾಲಾ ಅವರು ವಿಮಾನ ಅಪಘಾತದಲ್ಲಿ ಸಾವನ್ನಪ್ಪಿರುವುದನ್ನು ಡಿಎನ್‌ಎ ಪರೀಕ್ಷೆ ದೃಢಪಡಿಸಿದೆ. ಮೊದಲಿಗೆ ಇದನ್ನು ಅವರ ಕುಟುಂಬದ ಸದಸ್ಯರು ನಂಬಲಿಲ್ಲ. ಅವರ ಅನುಮಾನಗಳನ್ನು ನಿವಾರಿಸಲು ಸಿಸಿಟಿವಿ ದೃಶ್ಯಾವಳಿಗಳನ್ನು, ಸುಟ್ಟು ಕರಕಲಾದ ಅವರ ಸ್ಕೂಟರ್‌ ಅನ್ನು ತೋರಿಸಬೇಕಾಯಿತು’ ಎಂದು ಜಂಟಿ ಪೊಲೀಸ್ ಆಯುಕ್ತ ಜೈಪಾಲ್‌ಸಿನ್ಹ್ ರಾಥೋಡ್ ಹೇಳಿದ್ದಾರೆ.

ADVERTISEMENT

‘ಶುಕ್ರವಾರ ಜಿರಾವಾಲಾ ಅವರ ಮೃತದೇಹವನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದೆ. ಸುಟ್ಟು ಹೋದ ಅವರ ಸ್ಕೂಟರ್‌ಅನ್ನು ಸ್ಥಳದಿಂದ ವಶಪಡಿಸಿಕೊಳ್ಳಲಾಗಿದೆ’ ಎಂದು ಹೇಳಿದ್ದಾರೆ.

ದುರಂತ ಅಂತ್ಯ:

ವಿಮಾನ ಅಪಘಾತದ ದಿನ, ಜಿರಾವಾಲಾ ಅವರು ಒಬ್ಬರನ್ನು ಭೇಟಿಯಾಗಲು ಲಾ ಗಾರ್ಡನ್ ಪ್ರದೇಶಕ್ಕೆ ಹೋಗಿದ್ದರು. ಮಧ್ಯಾಹ್ನ 1.14ರ ವೇಳೆ ಪತ್ನಿ ಹೇತಲ್‌ ಅವರಿಗೆ ಕರೆ ಮಾಡಿದ್ದ ಅವರು ಮನೆಗೆ ಹಿಂದಿರುಗುತ್ತಿರುವುದಾಗಿ ಹೇಳಿದ್ದರು.

ಪತಿ ಮನೆಗೆ ಬಾರದೇ ಹೋದದ್ದು ತಿಳಿದು ಹೇತಲ್‌ ಅವರು ವಾಪಸ್‌ ಕರೆ ಮಾಡಿದ್ದಾರೆ. ಆಗ ಜಿರಾವಾಲಾ ಅವರ ಮೊಬೈಲ್‌ ಸ್ವಿಚ್‌ ಆಫ್‌ ಎಂದು ಬಂದಿತ್ತು. ಭಯಭೀತರಾದ ಅವರು ತಕ್ಷಣ ಪೊಲೀಸರಿಗೆ ದೂರು ನೀಡಿದ್ದಾರೆ.

ತನಿಖೆ ಆರಂಭಿಸಿದ ಪೊಲೀಸರಿಗೆ, ಜಿರಾವಾಲಾ ಅವರ ಮೊಬೈಲ್‌ ಲೋಕೇಶ್‌ ಕೊನೆಯದಾಗಿ ಘಟನಾ ಸ್ಥಳದಿಂದ ಸುಮಾರು 700 ಮೀಟರ್‌ ದೂರದಲ್ಲಿ ತೋರಿಸಿದೆ. ಅಲ್ಲದೇ ಸುಟ್ಟ ಸ್ಕೂಟರ್‌ನ ಚಾಸಿಸ್ ಮತ್ತು ಎಂಜಿನ್ ಸಂಖ್ಯೆಗಳು ಸ್ಕೂಟರ್‌ನ ನೋಂದಣಿ ದಾಖಲೆಗಳೊಂದಿಗೆ ಹೊಂದಿಕೆಯಾಗಿವೆ.

ತಕ್ಷಣ ಕುಟುಂಬ ಸದಸ್ಯರ ಡಿಎನ್‌ಎ ಮಾದರಿ ತೆಗೆದುಕೊಂಡು ತನಿಖೆ ನಡೆಸಿದ ಪೊಲೀಸರಿಗೆ, ಜಿರಾವಾಲಾ ಅವರು ದುರಂತದಲ್ಲಿ ಮೃತಪಟ್ಟಿರುವು ದೃಢಪಟ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.