ADVERTISEMENT

AAIB ವರದಿ ಪರಿಶೀಲನೆಗೆ ಪೈಲಟ್‌ಗಳೊಂದಿಗೆ ವಿಶೇಷ ಅಧಿವೇಶನ: ಏರ್ ಇಂಡಿಯಾ

ಪಿಟಿಐ
Published 12 ಜುಲೈ 2025, 16:00 IST
Last Updated 12 ಜುಲೈ 2025, 16:00 IST
ಏರ್ ಇಂಡಿಯಾ ವಿಮಾನ
ಏರ್ ಇಂಡಿಯಾ ವಿಮಾನ   

ಸಾಂದರ್ಭಿಕ ಚಿತ್ರ

ಮುಂಬೈ: ಅಹಮದಾಬಾದ್ ವಿಮಾನ ದುರಂತಕ್ಕೆ ಸಂಬಂಧಿಸಿದ ಪ್ರಾಥಮಿಕ ತನಿಖಾ ವರದಿಯನ್ನು ಪರಿಶೀಲಿಸಲು ಪೈಲಟ್‌ಗಳೊಂದಿಗೆ ಅಧಿವೇಶನ ನಡೆಸಲಾಗುವುದು ಎಂದು ಏರ್‌ ಇಂಡಿಯಾ ಶನಿವಾರ ತಿಳಿಸಿದೆ.

ಅಹಮದಾಬಾದ್‌ನಿಂದ ಲಂಡನ್‌ಗೆ ಜೂನ್‌ 12ರ ಮಧ್ಯಾಹ್ನ ಪ್ರಯಾಣ ಆರಂಭಿಸಿದ್ದ ಏರ್‌ ಇಂಡಿಯಾದ AI171 ವಿಮಾನವು ಟೇಕ್‌ ಆಫ್‌ ಆದ ಸ್ವಲ್ಪ ಹೊತ್ತಿನಲ್ಲೇ ಪತನಗೊಂಡಿತ್ತು. ಅದರಲ್ಲಿದ್ದ 241 ಮಂದಿ ಸೇರಿದಂತೆ ಒಟ್ಟು 260 ಜನ ಮೃತಟಪಟ್ಟಿದ್ದರು.

ADVERTISEMENT

ಈ ಸಂಬಂಧ ತನಿಖೆ ಕೈಗೆತ್ತಿಕೊಂಡಿರುವ 'ವಿಮಾನಗಳ ಅಪಘಾತ ತನಿಖಾ ಸಂಸ್ಥೆ'ಯ (ಎಎಐಬಿ) 15 ಪುಟಗಳ ವರದಿ ಬಿಡುಗಡೆ ಮಾಡಿದೆ.

ವಿಮಾನ ಹಾರಾಟ ಆರಂಭವಾದ ಕೆಲವೇ ಸೆಕೆಂಡುಗಳಲ್ಲಿ ಎಂಜಿನ್‌ಗಳಿಗೆ ಇಂಧನ ಪೂರೈಕೆ ಸ್ಥಗಿತಗೊಂಡಿತ್ತು. ಇದುವೇ ದುರಂತಕ್ಕೆ ಪ್ರಮುಖ ಕಾರಣ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಈ ಕುರಿತು ಏರ್‌ ಇಂಡಿಯಾ ಪ್ರತಿಕ್ರಿಯಿಸಿದೆ.

ಅಹಮದಾಬಾದ್‌ನಿಂದ ಲಂಡನ್‌ನ ಗಾಟ್ವಿಕ್‌ಗೆ ಹೊರಟಿದ್ದ AI171 ವಿಮಾನ ಪತನಕ್ಕೆ ಸಂಬಂಧಿಸಿದ ಪ್ರಾಥಮಿಕ ತನಿಖಾ ವರದಿ ಅಧಿಕೃತವಾಗಿ ಬಿಡುಗಡೆಯಾಗಿದೆ. ದುರಂತವು ವಿಮಾನಯಾನ ಸಿಬ್ಬಂದಿಯ ಮೇಲೆ ಭಾರಿ ಪರಿಣಾಮ ಬೀರಿದೆ ಎಂದು ಏರ್‌ ಇಂಡಿಯಾ ವಿಮಾನಯಾನ ಕಾರ್ಯಾಚರಣೆ ವಿಭಾಗದ ಹಿರಿಯ ಉಪಾಧ್ಯಕ್ಷ ಮನೀಷ್‌ ಉಪ್ಪಳ್‌ ಹೇಳಿದ್ದಾರೆ.

ಎಎಐಬಿ ವರದಿಯು ಪ್ರಾಥಮಿಕ ಮಾಹಿತಿಯನ್ನು ನೀಡುತ್ತದೆ. ಇದೇ ಅಂತಿಮವಲ್ಲ. ಆದರೆ, ದುರಂತವನ್ನು ತಪ್ಪಿಸಲು ಸಾಧ್ಯವಿದ್ದ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿತ್ತೇ ಎಂಬುದನ್ನು ತಿಳಿಯಲು ನೆರವಾಗಲಿದೆ. ವರದಿಯನ್ನು ಒಟ್ಟಾಗಿ ಪರಿಶೀಲಿಸಲು ಮುಂದಿನ ದಿನಗಳಲ್ಲಿ ಪೈಲಟ್‌ಗಳೊಂದಿಗೆ ವಿಶೇಷ ಅಧಿವೇಶನಗಳನ್ನು ನಡೆಸಲಾಗುವುದು ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.