
ಪ್ರಾತಿನಿಧಿಕ ಚಿತ್ರ
ನವದೆಹಲಿ: ದೀಪಾವಳಿ ಹಬ್ಬದ ಬಳಿಕ ದೆಹಲಿ–ಎನ್‌ಸಿಆರ್‌ನಲ್ಲಿ ಗಾಳಿಯ ಗುಣಮಟ್ಟ ತೀವ್ರವಾಗಿ ಕುಸಿದಿದ್ದು, ಮಕ್ಕಳು, ಗರ್ಭಿಣಿಯರು, ವೃದ್ಧರು ಉಸಿರಾಟ ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿರುವವರ ಪ್ರಮಾಣ ಹೆಚ್ಚಾಗಿದೆ ಎಂದು ವರದಿಯಾಗಿದೆ.
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ದತ್ತಾಂಶ ಪ್ರಕಾರ ದೆಹಲಿಯಲ್ಲಿ ಬುಧವಾರ ಗಾಳಿ ಗುಣಮಟ್ಟ ಸೂಚ್ಯಂಕ (ಎಕ್ಯೂಐ) 354 ದಾಖಲಾಗಿದೆ. ಇದು ಈ ಋತುವಿನಲ್ಲೇ ಅಧಿಕ. ಮಂಗಳವಾರ 351 ಎಕ್ಯೂಐ ಹಾಗೂ ಸೋಮವಾರ 345 ಎಕ್ಯೂಐ ದಾಖಲಾಗಿತ್ತು.
ಶ್ವಾಸಕೋಶಶಾಸ್ತ್ರಜ್ಞರು ಹಾಗೂ ಸ್ತ್ರೀ ರೋಗ ತಜ್ಞರ ಪ್ರಕಾರ, ಅಕ್ಟೋಬರ್ 20ರಿಂದ 23ರ ನಡುವೆ ಹೊರರೋಗಿ ಮತ್ತು ತುರ್ತು ಪ್ರಕರಣಗಳೆರಡರಲ್ಲೂ ತೀವ್ರ ಏರಿಕೆ ಕಂಡುಬಂದಿದೆ, ಮಾಲಿನ್ಯದ ಮಟ್ಟವು ಮಿತಿಮೀರಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಹೊಗೆ, ವಿಷಕಾರಿ ಅನಿಲಗಳಿಂದಾಗಿ ವೃದ್ಧರು, ಮಕ್ಕಳು, ಗರ್ಭಿಣಿಯರು ಮತ್ತು ದೀರ್ಘಕಾಲದ ಉಸಿರಾಟ ಅಥವಾ ಹೃದಯ ಸಂಬಂಧಿ ಕಾಯಿಲೆ ಹೊಂದಿರುವವರು ತೀರ ಕಷ್ಟ ಅನುಭವಿಸುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ದೀಪಾವಳಿಯ ಬಳಿಕ ಉಸಿರಾಟದ ಸಮಸ್ಯೆ, ಆಸ್ತಮಾ ಮತ್ತು ಅಲರ್ಜಿಕ್ ಬ್ರಾಂಕೈಟಿಸ್ ರೋಗಿಗಳ ಪ್ರಮಾಣ ಶೇ 30ರಷ್ಟು ಹೆಚ್ಚಳವಾಗಿದೆ ಎಂದು ಡಾ. ಪುಲ್ಕಿತ್ ಅಗರ್ವಾಲ್ ಹೇಳಿದ್ದಾರೆ.
ಗರ್ಭಾವಸ್ಥೆಯಲ್ಲಿ ಕಲುಷಿತ ಗಾಳಿ ಸೇವನೆಯಿಂದ ಅವಧಿಪೂರ್ವ ಜನನ ಮತ್ತು ಕಡಿಮೆ ತೂಕದ ಶಿಶುಗಳ ಜನನದ ಅಪಾಯವೂ ಹೆಚ್ಚಾಗುತ್ತದೆ ಎಂದು ದ್ವಾರಕಾದ ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ನಿರ್ದೇಶಕಿ, ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರದ ಘಟಕ ಮುಖ್ಯಸ್ಥೆ ಡಾ.ಯಾಶಿಕಾ ಗುಡೇಸರ್ ಆತಂಕ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.