ADVERTISEMENT

ಬಿಜೆಪಿ ವಿರೋಧಕ್ಕೆ ಬಗ್ಗದೆ ಮಲಿಕ್ ಕುಟುಂಬದ ಮೂವರಿಗೆ ಟಿಕೆಟ್ ನೀಡಿದ ಪವಾರ್

ಮೃತ್ಯುಂಜಯ ಬೋಸ್
Published 29 ಡಿಸೆಂಬರ್ 2025, 7:01 IST
Last Updated 29 ಡಿಸೆಂಬರ್ 2025, 7:01 IST
<div class="paragraphs"><p>ಅಜಿತ್‌ ಪವಾರ್‌, ಬಿಜೆಪಿ ಧ್ವಜ ಹಾಗೂ ನವಾಬ್‌ ಮಲಿಕ್‌</p></div>

ಅಜಿತ್‌ ಪವಾರ್‌, ಬಿಜೆಪಿ ಧ್ವಜ ಹಾಗೂ ನವಾಬ್‌ ಮಲಿಕ್‌

   

ಮುಂಬೈ: ಎನ್‌ಸಿಪಿ ಹಿರಿಯ ನಾಯಕ, ಮಾಜಿ ಸಚಿವ ನವಾಬ್‌ ಮಲಿಕ್‌ ಅವರ ಕುಟುಂಬದ ಮೂವರಿಗೆ ಬೃಹನ್‌ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಚುನಾವಣೆಯಲ್ಲಿ ಸ್ಪರ್ಧಿಸಲು ಪಕ್ಷದ ಮುಖ್ಯಸ್ಥ ಅಜಿತ್‌ ಪವಾರ್‌ ಟಿಕೆಟ್‌ ನೀಡಿದ್ದಾರೆ. ಇದು, ಮೈತ್ರಿಪಕ್ಷ ಬಿಜೆಪಿಗೆ ಇರಿಸುಮುರಿಸು ಉಂಟುಮಾಡಿದೆ.

ಬಿಎಂಸಿಯಲ್ಲಿ ಒಟ್ಟು 227 ವಾರ್ಡ್‌ಗಳಿವೆ.

ADVERTISEMENT

ರಾಜ್ಯದಲ್ಲಿ ಅಧಿಕಾರದಲ್ಲಿರುವ ಮಹಾಯುತಿ–ಎನ್‌ಡಿಎ ಸರ್ಕಾರದ ಮುಂದಾಳತ್ವ ವಹಿಸಿರುವ ಬಿಜೆಪಿ, ಮೈತ್ರಿ ಪಕ್ಷವಾದರೂ ಎನ್‌ಸಿಪಿಯನ್ನು ದೂರವಿಟ್ಟು ಶಿವಸೇನಾ ಹಾಗೂ ರಾಮದಾಸ್‌ ಅಠವಾಳೆ ಅವರ ಆರ್‌ಪಿಐ ಪಕ್ಷ ಜೊತೆ ಸೀಟು ಹಂಚಿಕೆ ಮಾಡಿಕೊಳ್ಳಲು ಸಿದ್ಧತೆ ನಡೆಸಿದೆ.

ನೂರಕ್ಕೂ ಹೆಚ್ಚು ಕಡೆ ಕಣಕ್ಕಿಳಿಯುವ ಯೋಜನೆಯಲ್ಲಿರುವ ಎನ್‌ಸಿಪಿ, ಈಗಾಗಲೇ 37 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಮಲಿಕ್ ಕುಟುಂಬದವರೇ ಮೂವರಿದ್ದಾರೆ.

ಮಲಿಕ್‌ ಸಹೋದರ ಕಪ್ತಾನ್‌ ಮಲಿಕ್‌ (ವಾರ್ಡ್‌ ನಂ.165), ಸಹೋದರಿ ಡಾ. ಸಯೀದ ಮಲಿಕ್‌ (ವಾರ್ಡ್‌ ನಂ. 168) ಹಾಗೂ ಸೊಸೆ ಬುಷ್ರಾ ಮಲಿಕ್‌ (ವಾರ್ಡ್‌ ನಂ.170) ಅವರಿಗೆ ಟಿಕೆಟ್‌ ನಿಗದಿಯಾಗಿದೆ.

ಮಲಿಕ್ ಕುಟುಂಬವು ಕುರ್ಲಾ-ಅನುಶಕ್ತಿ ನಗರ ಪ್ರದೇಶಗಳಲ್ಲಿ ಪ್ರಾಬಲ್ಯ ಹೊಂದಿದೆ. ಮಲಿಕ್ ಪುತ್ರಿ ಸನಾ ಮಲಿಕ್‌ ಅನುಶಕ್ತಿ ನಗರ ಕ್ಷೇತ್ರದಲ್ಲಿ ಎನ್‌ಸಿಪಿ ಶಾಸಕಿಯಾಗಿದ್ದಾರೆ.

ಮಲಿಕ್‌ ನೇಮಕಕ್ಕೆ ವಿರೋಧ
ಪವಾರ್‌ ಅವರು ಎನ್‌ಸಿಪಿಯ ಮುಂಬೈ ಚುನಾವಣಾ ವ್ಯವಹಾರಗಳ ಸಮಿತಿ ಅಧ್ಯಕ್ಷರನ್ನಾಗಿ ಮಲಿಕ್‌ ಅವರನ್ನು ನೇಮಿಸಿದ್ದಾರೆ. ಇದಕ್ಕೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದೆ. ಭೂಗತ ಪಾತಕಿ ದಾವೂದ್‌ ಇಬ್ರಾಹಿಂ ಹಾಗೂ ಆತನ ಸಹಚರರೊಂದಿಗೆ ನಂಟು ಹೊಂದಿರುವ ಮಲಿಕ್‌ ಅವರನ್ನು ನೇಮಕ ಮಾಡಲಾಗಿದೆ ಎಂದು ಟೀಕಿಸಿದೆ.

ಮುಂಬೈ ಬಿಜೆಪಿ ಘಟಕದ ಅಧ್ಯಕ್ಷ ಅಮೀತ್‌ ಸತಾಮ್‌ ಹಾಗೂ ಸಚಿವ ಆಶಿಷ್‌ ಸೆಲಾರ್ ಅವರು ಮಲಿಕ್‌ ನೇಮಕವನ್ನು ವಿರೋಧಿಸಿದ್ದು, ಮೈತ್ರಿ ಕುರಿತು ತೀರ್ಮಾನ ಕೈಗೊಳ್ಳುವಂತೆ ರಾಜ್ಯ ಬಿಜೆಪಿ ಅಧ್ಯಕ್ಷ ರವೀಂದ್ರ ಚವಾಣ್‌ ಮತ್ತು ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಸೇರಿದಂತೆ ಪಕ್ಷದ ಹೈಕಮಾಂಡ್‌ಗೆ ಮನವಿ ಮಾಡಿದ್ದರು.

ಭೂಗತ ಪಾತಕಿ, ಮುಂಬೈನಲ್ಲಿ 1993ರಲ್ಲಿ ನಡೆದ ಸರಣಿ ಸ್ಫೋಟ ಪ್ರಕರಣಗಳ ಮಾಸ್ಟರ್ ಮೈಂಡ್‌ ದಾವೂದ್‌ ಚಟುವಟಿಕೆಗಳಿಗೆ ಹಣಕಾಸಿನ ನೆರವು ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 2022ರ ಫೆಬ್ರುವರಿ 22ರಂದು ಮಲಿಕ್‌ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿತ್ತು ಎಂಬುದು ಗಮನಿಸಬೇಕಾದ ಸಂಗತಿ.

ಈ ಹಿಂದೆ ಎನ್‌ಸಿಪಿಯ ಮುಖ್ಯ ವಕ್ತಾರರಾಗಿದ್ದ ಮಲಿಕ್‌, ಸದ್ಯ ಸುಪ್ರೀಂ ಕೋರ್ಟ್‌ನಿಂದ ಜಾಮೀನಿನ ಮೇಲೆ ಜೈಲಿನಿಂದ ಹೊರಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.