
ಲಘು ವಿಮಾನ ಅಪಘಾತದ ಸ್ಥಳ ಹಾಗೂ ಅಜಿತ್ ಪವಾರ್
ಕೃಪೆ: ಪಿಟಿಐ
ಮುಂಬೈ: ಬಾರಾಮತಿಯಲ್ಲಿ ಲ್ಯಾಂಡ್ ಆಗುವ ವೇಳೆ ಅಪಘಾತಕ್ಕೀಡಾದ ಲಿಯರ್‌ಜೆಟ್–45 ವಿಮಾನದ ಬ್ಲಾಕ್ ಬಾಕ್ಸ್ ಅನ್ನು ಬುಧವಾರ ವಶಕ್ಕೆ ಪಡೆಯಲಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ.
ವಿಮಾನ ಹಾರಾಟಕ್ಕೆ ಸಂಬಂಧಿಸಿದ ಪ್ರತಿಯೊಂದು ಮಾಹಿತಿಯೂ ಬ್ಲಾಕ್ ಬಾಕ್ಸ್‌ನಲ್ಲಿ ಸಂಗ್ರಹವಾಗಿರುತ್ತದೆ. ಹಾರಾಟದ ವೇಗ, ಹಾರುತ್ತಿರುವ ದಿಕ್ಕು, ಎತ್ತರ ಹೀಗೆ ಪ್ರತಿ ವಿಚಾರವೂ ಅದರಲ್ಲಿ ದಾಖಲಾಗಿರುತ್ತದೆ. ಇದರಿಂದಾಗಿ, ಅಪಘಾತಗಳು ಸಂಭವಿಸಿದಾಗ ಕಾರಣ ಕಂಡುಕೊಳ್ಳಲು ಸಹಾಯವಾಗುತ್ತದೆ.
'ತನಿಖೆ ತ್ವರಿತವಾಗಿ ನಡೆಯುತ್ತಿದ್ದು, ಅಪಘಾತಕ್ಕೀಡಾದ ಬ್ಲ್ಯಾಕ್ ಬಾಕ್ಸ್ ಅನ್ನು ವಶಕ್ಕೆ ಪಡೆಯಲಾಗಿದೆ' ಎಂದು ವಿಮಾನಯಾನ ಸಚಿವಾಲಯವು ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದೆ.
ಎಎಐಬಿ ತನಿಖೆ
ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್, ಅವರ ಭದ್ರತಾ ಅಧಿಕಾರಿ ವಿಧೀಪ್ ಜಾಧವ್, ವಿಮಾನ ಸಹಾಯಕಿ ಪಿಂಕಿ ಮಾಲಿ, ಪೈಲಟ್ ಕ್ಯಾಪ್ಟನ್ ಸುಮಿತ್ ಕಪೂರ್, ಸಹ ಪೈಲಟ್ ಶಾಂಭವಿ ಪಾಠಕ್ ಅವರು ಮೃತಪಟ್ಟಿದ್ದಾರೆ. ವಿಮಾನ ಅಪಘಾತ ತನಿಖಾ ಪಡೆ (ಎಎಐಬಿ) ತನಿಖೆ ಆರಂಭಿಸಿದೆ ಎಂದೂ ಸಚಿವಾಲಯ ಹೇಳಿದೆ.
2,250 ಕೆ.ಜಿ ಅಥವಾ ಅದಕ್ಕಿಂತ ಹೆಚ್ಚು ತೂಕದ ವಿಮಾನಗಳ, ಟರ್ಬೊಜೆಟ್‌ಗಳು ಅಪಘಾತಕ್ಕೀಡಾದರೆ, ಅವುಗಳ ತನಿಖೆ ನಡೆಸುವ ಅಧಿಕಾರ ಎಎಐಬಿಗೆ ಇದೆ.
ಎಎಐಬಿಯ ಮೂವರು ಅಧಿಕಾರಿಗಳ ತಂಡ ದೆಹಲಿಯಿಂದ ಹಾಗೂ ಡಿಜಿಸಿಎ ಮುಂಬೈ ಪ್ರಾದೇಶಿಕ ಕಚೇರಿಯ ಅಧಿಕಾರಿಗಳ ಮತ್ತೊಂದು ತಂಡ ದುರಂತ ಸಂಭವಿಸುತ್ತಿದ್ದಂತೆ (ಜ.28) ಬಾರಾಮತಿಗೆ ಧಾವಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.