
ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಲಖನೌದ ತ್ರಿವೇಣಿನಗರದಲ್ಲಿರುವ ಗಗನಯಾನಿ ಶುಭಾಂಶು ಶುಕ್ಲಾ ಅವರ ಮನೆಗೆ ಭೇಟಿ ನೀಡಿದ್ದರು.
Credit: X/@@yadavakhilesh
ಲಖನೌ: ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್ಎಸ್) ಪ್ರವೇಶಿಸಿ ಇತಿಹಾಸ ನಿರ್ಮಿಸಿದ ಭಾರತದ ಗಗನಯಾನಿ ಶುಭಾಂಶು ಶುಕ್ಲಾ ಅವರ ಮನೆಗೆ ಭೇಟಿ ನೀಡಿ ಪೋಷಕರನ್ನು ಅಭಿನಂದಿಸಿದ್ದಾರೆ.
ಶುಕ್ಲಾ ಕುಟುಂಬಸ್ಥರೊಂದಿಗೆ ಮಾತುಕತೆ ನಡೆಸುತ್ತಿರುವ ಫೋಟೊಗಳನ್ನು ಅಖಿಲೇಶ್ ಯಾದವ್ ತಮ್ಮ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಶುಕ್ಲಾ ನಿವಾಸಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಖಿಲೇಶ್ ಯಾದವ್ ಅವರೊಂದಿಗೆ ಅವರ ಪತ್ನಿ, ಲೋಕಸಭಾ ಸಂಸದೆ ಡಿಂಪಲ್ ಯಾದವ್ ಮತ್ತು ಪಕ್ಷದ ಹಿರಿಯ ನಾಯಕ ರಾಜೇಂದ್ರ ಚೌಧರಿ ಇದ್ದರು.
‘ಆಕ್ಸಿಯಂ–4’ ಕಾರ್ಯಕ್ರಮದ ಭಾಗವಾಗಿ ಶುಕ್ಲಾ ಮತ್ತು ಇತರ ಮೂವರು ಗಗನಯಾನಿಗಳು ಗುರುವಾರ ಐಎಸ್‌ಎಸ್ ತಲುಪಿದ್ದಾರೆ. ಇವರು ಅಲ್ಲಿ 14 ದಿನಗಳವರೆಗೆ ವಾಸ್ತವ್ಯ ಇರಲಿದ್ದು, ಹಲವು ವೈಜ್ಞಾನಿಕ ಸಂಶೋಧನೆಗಳನ್ನು ಕೈಗೊಳ್ಳಲಿದ್ದಾರೆ. ಪ್ರಸ್ತುತ ಐಎಸ್‌ಎಸ್‌ನಲ್ಲಿ ಆರು ದೇಶಗಳ 11 ಗಗನಯಾನಿಗಳು ಇದ್ದಾರೆ.
ಶುಭಾಂಶು ಶುಕ್ಲಾ ಅವರ ತಂದೆ ಶಂಭು ದಯಾಳ್ ಶುಕ್ಲಾ, ತಾಯಿ ಆಶಾ ಶುಕ್ಲಾ, ಸಹೋದರಿ ಸುಚಿ ಮಿಶ್ರಾ ಅವರು ಗುರುವಾರ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರನ್ನು ಸೌಜನ್ಯಪೂರ್ವಕವಾಗಿ ಭೇಟಿಯಾಗಿದ್ದರು.
ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಕೂಡ ಲಖನೌದ ತ್ರಿವೇಣಿನಗರದಲ್ಲಿರುವ ಶುಕ್ಲಾ ಕುಟುಂಬಸ್ಥರನ್ನು ಭೇಟಿಯಾಗಿ ಅಭಿನಂದನೆ ಸಲ್ಲಿಸಿದ್ದರು.
ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಅಜಯ್ ರೈ ಸೇರಿದಂತೆ ಪಕ್ಷದ ಹಿರಿಯ ನಾಯಕರಾದ ನಸೀಮುದ್ದೀನ್ ಸಿದ್ದಿಕಿ ಮತ್ತು ಶ್ಯಾಮ್ ಕಿಶೋರ್ ಅವರು ಸಹ ಶುಕ್ಲಾ ನಿವಾಸಕ್ಕೆ ಭೇಟಿ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.