ನವದೆಹಲಿ: ಪಾಕಿಸ್ತಾನದೊಂದಿಗಿನ ಸಂಘರ್ಷದ ಬೆನ್ನಲ್ಲೇ, ಉಗ್ರವಾದ ಕುರಿತ ತನ್ನ ನಿಲುವನ್ನು ವಿಶ್ವ ಸಮುದಾಯಕ್ಕೆ ವಿವರಿಸುವ ಉದ್ದೇಶದಿಂದ ವಿದೇಶಗಳಿಗೆ ಕಳುಹಿಸಲಿರುವ ಸರ್ವಪಕ್ಷಗಳ ಸದಸ್ಯರ ನಿಯೋಗವೊಂದರ ನೇತೃತ್ವವನ್ನು ಕಾಂಗ್ರೆಸ್ ಸಂಸದ ಶಶಿ ತರೂರ್ ವಹಿಸುವರು ಎಂದು ಕೇಂದ್ರ ಸರ್ಕಾರ ಶನಿವಾರ ಪ್ರಕಟಿಸಿದೆ.
ನಿಯೋಗದ ಭಾಗವಾಗುವುದಕ್ಕಾಗಿ ತನ್ನ ನಾಯಕರ ಪಟ್ಟಿಯನ್ನು ಕಾಂಗ್ರೆಸ್ ಪಕ್ಷ ಕೇಂದ್ರ ಸರ್ಕಾರಕ್ಕೆ
ಕಳುಹಿಸಿತ್ತಾದರೂ, ಆ ಪಟ್ಟಿಯಲ್ಲಿ ತರೂರ್ ಅವರ ಹೆಸರು ಇರಲಿಲ್ಲ. ಆದಾಗ್ಯೂ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ತರೂರ್ ಅವರನ್ನು ಆಯ್ಕೆ ಮಾಡಿರುವುದು, ಕಾಂಗ್ರೆಸ್ ಹಾಗೂ ಬಿಜೆಪಿ ನಡುವಿನ ಜಟಾಪಟಿಗೆ ಕಾರಣವಾಗಿದೆ.
ಒಟ್ಟು ಏಳು ನಿಯೋಗಗಳನ್ನು ವಿವಿಧ ದೇಶಗಳಿಗೆ ಕಳುಹಿಸಲಾಗುತ್ತಿದೆ. ಈ ನಿಯೋಗಗಳ ನೇತೃತ್ವ ವಹಿಸುವ ಸಂಸದರನ್ನು ಆಯ್ಕೆ ಮಾಡಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಕಾಂಗ್ರೆಸ್ ಆಕ್ರೋಶವೇಕೆ?:
ಸರ್ವಪಕ್ಷಗಳ ಸಂಸದರು ಇರುವ ಏಳು ನಿಯೋಗಗಳು ವಿದೇಶಗಳಿಗೆ ಭೇಟಿ ನೀಡಲಿವೆ ಎಂದು ಕೇಂದ್ರ ಸರ್ಕಾರ ಘೋಷಿಸಿದಾಗ, ಕೇಂದ್ರದ ಈ ನಡೆ ಕುರಿತು ಕಾಂಗ್ರೆಸ್ ಆಕ್ರೋಶ ಹೊರಹಾಕಿದೆ.
ಕೇಂದ್ರವು ನಿಯೋಗದ ಸದಸ್ಯರ ಹೆಸರುಗಳನ್ನು ಪ್ರಕಟಿಸಿರಲಿಲ್ಲ. ಆದರೆ, ತರೂರ್ ಅವರಿಗೆ ನಿಯೋಗವೊಂದರ ನೇತೃತ್ವ ವಹಿಸಿದ ಕೇಂದ್ರದ ನಡೆ ಕಾಂಗ್ರೆಸ್ ಕೆರಳುವಂತೆ ಮಾಡಿದೆ.
‘ಪಕ್ಷದೊಂದಿಗೆ ಸಮಾಲೋಚನೆ ನಡೆಸದೆಯೇ ತರೂರ್ ಅವರನ್ನು ನಿಯೋಗವೊಂದರ ನಾಯಕರಾಗಿ ಘೋಷಿಸಿದ್ದು ನಿರಾಸೆ ಮೂಡಿಸಿದೆ’ ಎಂದೂ ಕಾಂಗ್ರೆಸ್ ಪ್ರತಿಕ್ರಿಯಿಸಿದೆ.
‘ತಮಗೆ ನಿಯೋಗವೊಂದರ ಸಾರಥ್ಯ ವಹಿಸಿರುವ ಕುರಿತು ಕೇಂದ್ರ ಸರ್ಕಾರ ಯೋಜಿಸಿದೆ ಎಂಬ ಬಗ್ಗೆ ತರೂರ್ ಅವರು ಪಕ್ಷಕ್ಕೆ ಮಾಹಿತಿ ನೀಡಿರಲಿಲ್ಲ ಅಥವಾ ಈ ಜವಾಬ್ದಾರಿ ಒಪ್ಪಿಕೊಳ್ಳುವ ಮುನ್ನ ಪಕ್ಷದ ಅನುಮತಿ ಪಡೆದಿರಲಿಲ್ಲ’ ಎಂದು ಕಾಂಗ್ರೆಸ್ ಮೂಲಗಳು ಹೇಳಿವೆ.
ಮತ್ತೊಂದೆಡೆ, ನಿಯೋಗದ ಭಾಗವಾಗುವಂತೆ ಸಲ್ಮಾನ್ ಖುರ್ಷಿದ್ ಹಾಗೂ ಮನೀಷ್ ತಿವಾರಿ ಅವರಿಗೂ ಕೇಂದ್ರ ಸರ್ಕಾರ ಕೋರಿತ್ತು. ಈ ಇಬ್ಬರ ಹೆಸರು ಕೂಡ ಕಾಂಗ್ರೆಸ್ ನೀಡಿದ್ದ ಪಟ್ಟಿಯಲ್ಲಿ ಇರಲಿಲ್ಲ.
‘ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಗೂ ಲೋಕಸಭೆಯಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ಸಚಿವ ಕಿರಣ್ ರಿಜಿಜು ಮಾತನಾಡಿದರು. ನಂತರ, ಪಕ್ಷವು ಆನಂದ ಶರ್ಮಾ, ಗೌರವ್ ಗೋಗೊಯಿ, ಸೈಯದ್ ನಾಸೀರ್ ಹುಸೇನ್ ಹಾಗೂ ರಾಜಾ ಬ್ರಾರ್ ಅವರ ಹೆಸರು ಸೂಚಿಸಿತ್ತು’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ.
ಆದರೆ, ಪಕ್ಷ ನೀಡಿದ್ದ ಪಟ್ಟಿಯಲ್ಲಿ ತರೂರ್ ಅವರ ಹೆಸರು ಇಲ್ಲದಿದ್ದ ಬಗ್ಗೆ ಅವರು ಯಾವುದೇ ವಿವರಣೆ ನೀಡಿಲ್ಲ.
‘ಕೇಂದ್ರದ ಮನವಿಯಂತೆ ಈ ನಾಲ್ವರು ಸಂಸದರ ಹೆಸರುಗಳನ್ನು ಶುಕ್ರವಾರ ಮಧ್ಯಾಹ್ನವೇ ಸಚಿವ ರಿಜಿಜು ಅವರಿಗೆ ಖರ್ಗೆ ನೀಡಿದ್ದರು. ಈಗ ಪಕ್ಷವು ಪಟ್ಟಿಯನ್ನು ಬದಲಿಸುವುದಿಲ್ಲ. ಇತರರ ವಿರುದ್ಧ ಕ್ರಮವನ್ನೂ ತೆಗೆದುಕೊಳ್ಳುವುದಿಲ್ಲ’ ಎಂದು ಹೇಳಿದ್ದಾರೆ.
ನಿರಾಕರಣೆ: ‘ಅಮೆರಿಕಕ್ಕೆ ತೆರಳುವ ನಿಯೋಗದ ಭಾಗವಾಗುವಂತೆ ಸಚಿವ ಕಿರಣ್ ರಿಜಿಜು ಕರೆ ಮಾಡಿ, ಆಹ್ವಾನ ನೀಡಿದ್ದರು. ಆರೋಗ್ಯ ಸಮಸ್ಯೆಯಿಂದಾಗಿ ನಿಯೋಗದ ಭಾಗವಾಗಲು ಸಾಧ್ಯವಾಗುತ್ತಿಲ್ಲ’ ಎಂದು ಲೋಕಸಭೆಯಲ್ಲಿ ಟಿಎಂಸಿ ಸದನ ನಾಯಕ ಸುದೀಪ್ ಬಂಡೋಪಾಧ್ಯಾಯ ಹೇಳಿದ್ದಾರೆ.
ಇಂತಹ ಮಹತ್ವದ ಸಂದರ್ಭದಲ್ಲಿ ಭಾರತ ಒಟ್ಟಾಗಿ ನಿಲ್ಲಲಿದೆ. ಸರ್ವಪಕ್ಷಗಳ ಏಳು ನಿಯೋಗಗಳು ನಮ್ಮ ಪಾಲುದಾರ ರಾಷ್ಟ್ರಗಳಿಗೆ ಶೀಘ್ರವೇ ತೆರಳಲಿವೆ. ಉಗ್ರವಾದ ಕುರಿತು ಭಾರತ ತಳೆದಿರುವ ಶೂನ್ಯ ಸಹಿಷ್ಣುತೆಯ ಸಂದೇಶವನ್ನು ಈ ನಿಯೋಗಗಳು ಹೊತ್ತೊಯ್ಯಲಿವೆ. ರಾಜಕೀಯ ಹಾಗೂ ಭಿನ್ನಾಭಿಪ್ರಾಯಗಳಿಗೂ ಮೀರಿದ ರಾಷ್ಟ್ರೀಯ ಏಕತೆಯ ಪ್ರತಿಬಿಂಬವಾಗಿ ಈ ನಿಯೋಗಗಳು ನಿಲ್ಲಲಿವೆಕಿರಣ್ ರಿಜಿಜು, ಸಂಸದೀಯ ವ್ಯವಹಾರಗಳ ಸಚಿವ
ಸರ್ವಪಕ್ಷಗಳ ನಿಯೋಗವೊಂದರ ನೇತೃತ್ವ ವಹಿಸುವಂತೆ ಕೇಂದ್ರ ಸರ್ಕಾರ ಆಹ್ವಾನ ನೀಡಿರುವುದು ನನಗೆ ಗೌರವದ ವಿಚಾರ. ಐದು ದೇಶಗಳಿಗೆ ತೆರಳುವ ನಿಯೋಗವು, ಇತ್ತೀಚಿನ ವಿದ್ಯಮಾನಗಳ ಕುರಿತು ಭಾರತದ ನಿಲುವನ್ನು ವಿವರಿಸಲಿದೆ. ರಾಷ್ಟ್ರೀಯ ಹಿತಾಸಕ್ತಿ ಹಾಗೂ ನನ್ನ ಸೇವೆಯ ಅಗತ್ಯವಿದೆ ಎಂಬ ವಿಚಾರ ಬಂದಾಗ ನಾನು ಹಿಂದಡಿ ಇಡುವುದಿಲ್ಲ. ಜೈ ಹಿಂದ್ಶಶಿ ತರೂರ್, ಕಾಂಗ್ರೆಸ್ ಸಂಸದ
ಜಾಗತಿಕ ವೇದಿಕೆಯಲ್ಲಿ ಭಾರತದ ನಿಲುವು ತಿಳಿಸಲಿರುವ ಸರ್ವಪಕ್ಷಗಳ ನಿಯೋಗದ ಭಾಗವಾಗಲು ಅವಕಾಶ ಸಿಕ್ಕಿದ್ದು ಗೌರವದ ವಿಷಯ. ಈ ಜವಾಬ್ದಾರಿಯನ್ನು ವಿನಮ್ರತೆಯಿಂದ ಸ್ವೀಕರಿಸುವೆ. ಪ್ರಧಾನಿ ಮೋದಿ, ಸಚಿವ ರಿಜಿಜು ಹಾಗೂ ವಿದೇಶಾಂಗ ಸಚಿವಾಲಯಕ್ಕೆ ಧನ್ಯವಾದ ಅರ್ಪಿಸುವೆ. ಒಂದು ರಾಷ್ಟ್ರವಾಗಿ ನಾವು ಘನತೆಯಿಂದ, ಬಲಿಷ್ಠ ಹಾಗೂ ಅಚಲವಾಗಿ ನಿಲ್ಲುತ್ತೇವೆಸುಪ್ರಿಯಾ ಸುಳೆ, ಎನ್‌ಸಿಪಿ–ಎಸ್‌ಪಿ
ಇದು ನನ್ನ ಪಕ್ಷಕ್ಕೆ ಸಂಬಂಧಿಸಿದ ವಿಷಯವಲ್ಲ, ಇದು ಬಹುಮುಖ್ಯವಾದ ಕಾರ್ಯ. ನನಗೆ ವಹಿಸಿರುವ ಜವಾಬ್ದಾರಿಯನ್ನು ಅತ್ಯುತ್ತಮವಾಗಿ ನಿಭಾಯಿಸಲು ಪ್ರಯತ್ನಿಸುತ್ತೇನೆಅಸಾದುದ್ದಿನ್ ಒವೈಸಿ, ಎಐಎಂಐಎಂ ಸಂಸದ
ತರೂರ್ ವಿರುದ್ಧ ಜೈರಾಮ್ ವಾಗ್ದಾಳಿ
ಸರ್ವಪಕ್ಷಗಳ ನಿಯೋಗದ ನೇತೃತ್ವ ವಹಿಸಲು ಪಕ್ಷದ ಸಂಸದ ಶಶಿ ತರೂರ್ ಅವರ ಹೆಸರನ್ನು ಕೇಂದ್ರ ಸರ್ಕಾರ ಘೋಷಣೆ ಮಾಡಿದರೆ, ಮತ್ತೊಂದೆಡೆ, ತರೂರ್ ವಿರುದ್ಧ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಶನಿವಾರ ವಾಗ್ದಾಳಿ ನಡೆಸಿದ್ದಾರೆ.
ಅಲ್ಲದೇ, ಈ ಇಬ್ಬರು ನಾಯಕರು ನೀಡಿರುವ ಹೇಳಿಕೆಗಳು, ತರೂರ್ ಮತ್ತು ಕಾಂಗ್ರೆಸ್ ಪಕ್ಷದ ನಡುವಿನ ಕಂದಕ ದೊಡ್ಡದಾಗುತ್ತಿರುವುದನ್ನು ಸೂಚಿಸುತ್ತದೆ ಎನ್ನಲಾಗಿದೆ.
‘ಕಾಂಗ್ರೆಸ್ ಪಕ್ಷದಲ್ಲಿ ಇರುವುದಕ್ಕೂ, ಕಾಂಗ್ರೆಸ್ಸಿಗನಾಗುವುದಕ್ಕೂ ವ್ಯತ್ಯಾಸ ಇದೆ’ ಎಂದು ಹೇಳುವ ಮೂಲಕ ಜೈರಾಮ್ ರಮೇಶ್ ಕುಟುಕಿದ್ದಾರೆ.
‘ಪ್ರಜಾತಂತ್ರದಲ್ಲಿ, ಸರ್ಕಾರವು ನಿಯೋಗವೊಂದರ ಭಾಗವಾಗಿ ಸಂಸದರನ್ನು ಕಳುಹಿಸಲು ಬಯಸಿದಾಗ, ಸಂಸದರು ತಾವು ಪ್ರತಿನಿಧಿಸುವ ಪಕ್ಷದ ಅನುಮತಿ ಪಡೆಯಬೇಕು. ಅಲ್ಲದೇ, ಸಂಬಂಧಪಟ್ಟ ಪಕ್ಷದೊಂದಿಗೆ ಸಮಾಲೋಚನೆ ನಡೆಸದೇ ಸರ್ಕಾರವು ಆ ಪಕ್ಷದ ಸಂಸದರನ್ನು ನಿಯೋಗದ ಸದಸ್ಯರನ್ನಾಗಿ ಮಾಡಬಾರದು’ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.
‘ತರೂರ್ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತದೆಯೇ’ ಎಂಬ ಪ್ರಶ್ನೆಗೆ ಅವರು ಉತ್ತರಿಸಿಲಿಲ್ಲ.
ತರೂರ್ ತಿರುಗೇಟು
‘ಕಾಂಗ್ರೆಸ್ ನೀಡಿದ್ದ ಪಟ್ಟಿಯಲ್ಲಿ ನಿಮ್ಮ ಹೆಸರು ಇರಲಿಲ್ಲ. ಇದರಿಂದ ನಿಮಗೆ ಅವಮಾನ ಮಾಡಿದಂತಾಗಲಿಲ್ಲವೇ’ ಎಂಬ ಪ್ರಶ್ನೆಗೆ,‘ನನ್ನನ್ನು ಯಾರೂ ಅಷ್ಟು ಸುಲಭವಾಗಿ ಅವಮಾನಿಸಲು ಸಾಧ್ಯ ಇಲ್ಲ’ ಎಂದು ಶಶಿ ತರೂರ್ ಉತ್ತರಿಸಿದ್ದಾರೆ.
‘ನನ್ನ ಹೆಸರು ಸೂಚಿಸುವುದು ಅಥವಾ ಬಿಡುವುದು ಸರ್ಕಾರ ಮತ್ತು ಪಕ್ಷದ ನಡುವಿನ ವಿಚಾರ. ಇದು ರಾಷ್ಟ್ರೀಯ ಕರ್ತವ್ಯ ಎಂಬ ಕಾರಣಕ್ಕೆ ಸರ್ಕಾರದ ಆಹ್ವಾನ ಸ್ವೀಕರಿಸಿದ್ದೇನೆ’ ಎಂದು ತಿರುವನಂತಪುರದಲ್ಲಿ ಪ್ರತಿಕ್ರಿಯಿಸಿದ್ದಾರೆ.
‘ಸರ್ವಪಕ್ಷಗಳ ನಿಯೋಗದ ನೇತೃತ್ವ ವಹಿಸುವಂತೆ ಕೇಂದ್ರ ನೀಡಿರುವ ಆಹ್ವಾನ ಒಪ್ಪಿಕೊಂಡಿರುವ ಕುರಿತು ನಾನು ಪಕ್ಷಕ್ಕೆ ಈಗಾಗಲೇ ತಿಳಿಸಿದ್ದೇನೆ. ದೇಶ ಉಳಿದರೆ ಮಾತ್ರ ನಾವು ರಾಜಕೀಯ ಮಾಡಬಹುದು’ ಎಂದು ತಿರುಗೇಟು ನೀಡಿದ್ದಾರೆ.
ಅಭದ್ರತೆಯೋ?, ಮತ್ಸರವೋ: ಬಿಜೆಪಿ ಪ್ರಶ್ನೆ
ಉಗ್ರವಾದ ಕುರಿತು ಭಾರತದ ನಿಲುವನ್ನು ರಾಜತಾಂತ್ರಿಕ ಮಾರ್ಗದ ಮೂಲಕ ವಿವಿಧ ರಾಷ್ಟ್ರಗಳಿಗೆ ತಿಳಿಸಲು ಕೇಂದ್ರ ಸರ್ಕಾರ ರಚಿಸಿರುವ ನಿಯೋಗಕ್ಕೆ ಪಕ್ಷ ಸೂಚಿಸಿರುವ ಸಂಸದರ ಹೆಸರುಗಳ ವಿಚಾರವಾಗಿ ಕಾಂಗ್ರೆಸ್‌ಅನ್ನು ಬಿಜೆಪಿ ತರಾಟೆಗೆ ತೆಗೆದುಕೊಂಡಿದೆ.
‘ಸಂಸದ ಶಶಿ ತರೂರ್ ಅವರು ಪಕ್ಷದ ಹೈಕಮಾಂಡ್‌ಗೂ ಮೀರಿ ಹೊರಹೊಮ್ಮಿದ್ದಕ್ಕಾಗಿ ಅವರನ್ನು ಕಾಂಗ್ರೆಸ್ ಸರ್ವಪಕ್ಷಗಳ ನಿಯೋಗಕ್ಕೆ ನಾಮನಿರ್ದೇಶನ ಮಾಡಲಿಲ್ಲವೇ’ ಎಂದು ಬಿಜೆಪಿ ಪ್ರಶ್ನಿಸಿದೆ.
‘ಶಶಿ ತರೂರ್ ಅವರ ವಾಕ್ಚಾತುರ್ಯ, ವಿಶ್ವಸಂಸ್ಥೆಯಲ್ಲಿ ಸುದೀರ್ಘ ಅವಧಿಗೆ ಸೇವೆ ಸಲ್ಲಿಸಿರುವುದು, ಅವರು ಹೊಂದಿರುವ ಅನುಭವ ಹಾಗೂ ವಿದೇಶಾಂಗ ನೀತಿ ಕುರಿತ ಅವರ ಅಗಾಧ ಒಳನೋಟವನ್ನು ಯಾರೂ ಅಲ್ಲಗಳೆಯಲು ಸಾಧ್ಯ ಇಲ್ಲ’ ಎಂದು ಬಿಜೆಪಿ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ, ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ಕಾಂಗ್ರೆಸ್ ಪಕ್ಷ, ಅದರಲ್ಲೂ ವಿಶೇಷವಾಗಿ ರಾಹುಲ್ ಗಾಂಧಿ ಅವರು ತರೂರ್ ಹೆಸರನ್ನು ಯಾಕೆ ನಾಮನಿರ್ದೇಶನ ಮಾಡಲಿಲ್ಲ? ಇದು ಮತ್ಸರವೋ ಅಥವಾ ಅಭದ್ರತೆಯೋ? ಅಥವಾ ಹೈಕಮಾಂಡ್ ಮೀರಿ ಬೆಳೆಯುವವರ ಕುರಿತ ಅಸಹನೆಯೋ’ ಎಂದು ಮಾಳವೀಯ ಪ್ರಶ್ನಿಸಿದ್ದಾರೆ.
‘ನಿಯೋಗದಲ್ಲಿರುವವರ ಕುರಿತು ಕಾಂಗ್ರೆಸ್‌ನ ಆಯ್ಕೆ ಕುತೂಹಲಕಾರಿ ಮಾತ್ರವಲ್ಲ, ಗಹನವಾದ ಹಲವು ಪ್ರಶ್ನೆಗಳನ್ನೂ ಹುಟ್ಟು ಹಾಕುತ್ತದೆ’ ಎಂದು ಮಾಳವೀಯ ಹೇಳಿದ್ದಾರೆ.
‘ಉದಾಹರಣೆಗೆ, ನಿಯೋಗ ಸದಸ್ಯರಾಗಲು ಸೈಯದ್ ನಾಸೀರ್ ಹುಸೇನ್ ಹೆಸರು ಸೂಚಿಸಿರುವುದು ಆಘಾತಕಾರಿ. ನಾಸೀರ್, ರಾಜ್ಯಸಭಾ ಚುನಾವಣೆಯಲ್ಲಿ ಗೆದ್ದಾಗ, ಅವರ ಬೆಂಬಲಿಗರು ವಿಧಾನಸಭೆ ಒಳಗೇ ‘ಪಾಕಿಸ್ತಾನ ಜಿಂದಾಬಾದ್’ ಎಂಬ ಘೋಷಣೆ ಕೂಗಿದ್ದರು’ ಎಂದೂ ಹೇಳಿದ್ದಾರೆ.
‘ಗೌರವ್ ಗೋಗೊಯಿ ಕುರಿತು ಹೇಳುವುದೇ ಬೇಡ. ಗೋಗೊಯಿ 15 ದಿನ ಪಾಕಿಸ್ತಾನದಲ್ಲಿ ಕಳೆದಿದ್ದರು ಎಂದು ಅಸ್ಸಾಂ ಸಿ.ಎಂ ಹಿಮಂತ ಬಿಸ್ವ ಶರ್ಮಾ ಆರೋಪಿಸಿದ್ದಾರೆ. ಅವರ ಆಗಮನ ಮತ್ತು ನಿರ್ಗಮನ ಕುರಿತು ಅಟ್ಟಾರಿ ಗಡಿಯಲ್ಲಿನ ಕಚೇರಿಯಲ್ಲಿ ದಾಖಲಾಗಿದೆ’ ಎಂದು ಟೀಕಿಸಿದ್ದಾರೆ.
ನಿಬಂಧನೆಗಳ ಹೊರತಾಗಿ ಒಪ್ಪಿಗೆ: ಸಿಪಿಎಂ
‘ರಾಷ್ಟ್ರೀಯ ವಿಚಾರಗಳಿಗೆ ಸಂಬಂಧಿಸಿ ತಮ್ಮದೇ ಆದ ನಿಬಂಧನೆಗಳು ಇವೆ. ರಾಷ್ಟ್ರೀಯ ಹಿತಾಸಕ್ತಿ ದೃಷ್ಟಿಯಿಂದ ಕೇಂದ್ರ ಸರ್ಕಾರದ ಈ ನಿಯೋಗದ ಭಾಗವಾಗಲು ಪಕ್ಷ ಒಪ್ಪಿದೆ’ ಎಂದು ಸಿಪಿಎಂ ಹೇಳಿದೆ.
‘ಪಹಲ್ಗಾಮ್‌ನಲ್ಲಿ ಉಗ್ರರ ದಾಳಿ ಹಾಗೂ ನಂತರ ಬೆಳವಣಿಗೆಗಳ ಕುರಿತು ಚರ್ಚಿಸಲು ಪ್ರಧಾನಿ ಮತ್ತು ಅವರ ನೇತೃತ್ವದ ಸರ್ಕಾರ ಸಂಸತ್‌ನ ವಿಶೇಷ ಅಧಿವೇಶನ ಕರೆಯಲು ಒಪ್ಪದಿರುವುದು ದುರದೃಷ್ಟಕರ’ ಎಂದೂ ಪಕ್ಷ ಹೇಳಿದೆ.
ತಂಡಗಳಿಗೆ ಯಾರ ನೇತೃತ್ವ?
ಶಶಿ ತರೂರ್ (ಕಾಂಗ್ರೆಸ್) ಅಲ್ಲದೇ, ರವಿಶಂಕರ ಪ್ರಸಾದ್ (ಬಿಜೆಪಿ), ಸಂಜಯಕುಮಾರ್ ಝಾ (ಜೆಡಿಯು), ಬೈಜಯಂತ ಪಾಂಡ (ಬಿಜೆಪಿ), ಕನಿಮೊಳಿ (ಡಿಎಂಕೆ), ಸುಪ್ರಿಯಾ ಸುಳೆ (ಎನ್‌ಸಿಪಿ–ಶರದ್ ಪವಾರ್) ಹಾಗೂ ಶ್ರೀಕಾಂತ ಶಿಂದೆ (ಶಿವಸೇನಾ–ಶಿಂದೆ ಬಣ) ಅವರು ತಲಾ ಒಂದು ನಿಯೋಗದ ನೇತೃತ್ವ ವಹಿಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.