ಹೈದರಾಬಾದ್ ಜೈಲಿನಿಂದ ಬಿಡುಗಡೆಯಾಗಿ ಮನೆಗೆ ಬಂದ ನಟ ಅಲ್ಲು ಅರ್ಜುನ್ ಅವರು ಮಾಧ್ಯಮಗಳ ಮುಂದೆ ಕಾಣಿಸಿಕೊಂಡಿದ್ದು ಹೀಗೆ
–ಪಿಟಿಐ ಚಿತ್ರ
ಹೈದರಾಬಾದ್: ತೆಲುಗು ನಟ ಅಲ್ಲು ಅರ್ಜುನ್ ವಿರುದ್ಧ ಕಾನೂನಿನನ್ವಯ ಕ್ರಮ ಕೈಗೊಳ್ಳಲಾಗಿದೆ. ಯಾವುದೇ ಸಿನಿಮಾ ನಟರ ಬಗ್ಗೆ ಪಕ್ಷಕ್ಕೆ ಅಸಮಾಧಾನವಿಲ್ಲ ಎಂದು ತೆಲಂಗಾಣದ ಕಾಂಗ್ರೆಸ್ ಅಧ್ಯಕ್ಷ ಬಿ. ಮಹೇಶ್ ಕುಮಾರ್ ಗೌಡ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಅಲ್ಲು ಅರ್ಜುನ್ ವಿರುದ್ಧ ದಾಖಲಾಗಿರುವ ಪ್ರಕರಣಗಳು ಕಾನೂನಿನ ವ್ಯಾಪ್ತಿಗೆ ಒಳಪಟ್ಟಿದ್ದು, ನ್ಯಾಯಾಲಯ ಅವರಿಗೆ ಜಾಮೀನು ನೀಡಿದೆ’ ಎಂದು ಹೇಳಿದ್ದಾರೆ.
‘ಕಾಂಗ್ರೆಸ್‌ಗೆ ಯಾವುದೇ ಸಿನಿಮಾ ನಟರ ಮೇಲೆ ಪ್ರೀತಿ ಇರುತ್ತದೆಯೇ ಹೊರತು ಕೆಟ್ಟ ಭಾವನೆ ಇರುವುದಿಲ್ಲ. 1980ರ ದಶಕದಲ್ಲಿ ಅವಿಭಜಿತ ಆಂಧ್ರಪ್ರದೇಶದ ಕಾಂಗ್ರೆಸ್ ಮುಖ್ಯಮಂತ್ರಿಗಳು ತೆಲುಗು ಚಲನಚಿತ್ರೋದ್ಯಮವನ್ನು ಚೆನ್ನೈನಿಂದ ಹೈದರಾಬಾದ್‌ಗೆ ಸ್ಥಳಾಂತರಗೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ’ ಎಂದು ಗೌಡ್ ಪ್ರತಿಪಾದಿಸಿದ್ದಾರೆ.
ಈಚೆಗೆ ‘ಪುಷ್ಪ–2’ ಚಿತ್ರ ಪ್ರದರ್ಶನ ವೇಳೆ ನಡೆದ ಕಾಲ್ತುಳಿತ ಸಂಭವಿಸಿ ಮಹಿಳೆಯೊಬ್ಬರು ಮೃತಪಟ್ಟಿದ್ದರು. ಈ ಪ್ರಕರಣ ಸಂಬಂಧ ಶುಕ್ರವಾರ ಬಂಧನಕ್ಕೊಳಗಾಗಿದ್ದ ಅಲ್ಲು ಅರ್ಜುನ್ ಅವರು ಶನಿವಾರ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.
ಅಲ್ಲು ಅರ್ಜುನ್ ಬಂಧನ ವಿಚಾರವಾಗಿ ಆಡಳಿತಾರೂಢ ಕಾಂಗ್ರೆಸ್ ಮತ್ತು ಪ್ರತಿಪಕ್ಷ ಬಿಜೆಪಿ ನಡುವಿನ ವಾಕ್ಸಮರ ಜೋರಾಗಿದ್ದು, ಕಾಂಗ್ರೆಸ್ ದ್ವೇಷ ರಾಜಕೀಯ ಮಾಡುತ್ತಿದೆ ಎಂದು ಬಿಜೆಪಿ ನಾಯಕರ ಆರೋಪಗಳನ್ನು ಮಹೇಶ್ ಕುಮಾರ್ ಗೌಡ್ ಅಲ್ಲಗೆಳೆದಿದ್ದಾರೆ.
ಏತನ್ಮಧ್ಯೆ, ಹಿಂದಿನ ಬಿಆರ್‌ಎಸ್ ಆಡಳಿತದಲ್ಲಿ ಹೈದರಾಬಾದ್‌ನಲ್ಲಿ ಫಾರ್ಮುಲಾ-ಇ ರೇಸ್ ನಡೆಸುವ ಸಂಬಂಧ ಬಿಆರ್‌ಎಸ್ ನಾಯಕ ಕೆ.ಟಿ. ರಾಮರಾವ್ ಅವರು ಯಾವುದೇ ಅಕ್ರಮ ಎಸಗಿರುವುದು ಕಂಡುಬಂದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಕಾಂಗ್ರೆಸ್ ಪ್ರಕಟಣೆಯಲ್ಲಿ ತಿಳಿಸಿದೆ.
ತೆಲಂಗಾಣ ಸರ್ಕಾರ ನವೆಂಬರ್‌ನಲ್ಲಿ ರಾಜ್ಯಪಾಲ ಜಿಷ್ಣು ದೇವ್ ವರ್ಮಾ ಅವರಿಗೆ ಪತ್ರ ಬರೆದು ಅಕ್ರಮಗಳ ಆರೋಪದ ಮೇಲೆ ರಾಮರಾವ್ ವಿರುದ್ಧ ಎಫ್‌ಐಆರ್ ದಾಖಲಿಸಲು ಅನುಮತಿ ನೀಡುವಂತೆ ಮನವಿ ಮಾಡಿತ್ತು. ಇದೀಗ ರಾಜ್ಯಪಾಲರು ಒಪ್ಪಿಗೆ ನೀಡಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.