ADVERTISEMENT

ಭಾರತ-ಪಾಕ್ ಕದನ ವಿರಾಮ | ಉನ್ನತ ಸೇನಾಧಿಕಾರಿಗಳೊಂದಿಗೆ ರಾಜನಾಥ ಸಿಂಗ್ ಸಭೆ

ಪಿಟಿಐ
Published 13 ಮೇ 2025, 9:25 IST
Last Updated 13 ಮೇ 2025, 9:25 IST
ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್
ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್   

ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವೆ ಕದನ ವಿರಾಮ ಘೋಷಣೆಯಾದ ಬೆನ್ನಲ್ಲೇ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ದೇಶದ ಉನ್ನತ ಸೇನಾಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ಗಡಿಯಲ್ಲಿ ಭದ್ರತಾ ಪರಿಸ್ಥಿತಿ ಕುರಿತಂತೆ ಚರ್ಚೆ ನಡೆಸಿದ್ದಾರೆ.

ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್, ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ, ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ದಿನೇಶ್ ಕೆ. ತ್ರಿಪಾಠಿ ಮತ್ತು ರಕ್ಷಣಾ ಕಾರ್ಯದರ್ಶಿ ರಾಜೇಶ್ ಕುಮಾರ್ ಸಿಂಗ್ ಅವರು ಸಭೆಯಲ್ಲಿ ಭಾಗವಹಿಸಿದ್ದರು.

ಪಶ್ಚಿಮ ಗಡಿಯಲ್ಲಿನ ಭದ್ರತಾ ಪರಿಸ್ಥಿತಿ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ರಾಜನಾಥ ಸಿಂಗ್ ಚರ್ಚೆ ನಡೆಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ADVERTISEMENT

ಏಪ್ರಿಲ್ 22ರಂದು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ 26 ಪ್ರವಾಸಿಗರು ಮೃತಪಟ್ಟಿದ್ದರು. ಇದರ ಬೆನ್ನಲ್ಲೇ ಭಾರತದ ಸಶಸ್ತ್ರ ಪಡೆಗಳು ‘ಆಪರೇಷನ್‌ ಸಿಂಧೂರ’ದ ಮೂಲಕ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿತ್ತು. ಇದರ ಬೆನ್ನಲ್ಲೇ ಗಡಿಯಲ್ಲಿ ಎರಡೂ ದೇಶಗಳ ನಡುವೆ ಸೇನಾ ಸಂಘರ್ಷ ತೀವ್ರಗೊಂಡಿದೆ.

ಜಮ್ಮು ಮತ್ತು ಕಾಶ್ಮೀರದಿಂದ ಗುಜರಾತ್‌ವರೆಗಿನ ಭಾರತದ 25ಕ್ಕೂ ಹೆಚ್ಚು ಸ್ಥಳಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ಶುಕ್ರವಾರ ರಾತ್ರಿ ಡ್ರೋನ್ ದಾಳಿ ನಡೆಸಿತ್ತು. ವಿಮಾನ ನಿಲ್ದಾಣಗಳು, ವಾಯುನೆಲೆಗಳು ಸೇರಿದಂತೆ ಪ್ರಮುಖ ಕಟ್ಟಡಗಳನ್ನು ಹೊಡೆಯುವ ಶತ್ರುಗಳ ಪ್ರಯತ್ನಗಳನ್ನು ವಿಫಲಗೊಳಿಸಲಾಗಿದೆ ಎಂದು ರಕ್ಷಣಾ ಸಚಿವಾಲಯ ಹೇಳಿತ್ತು.

ಉಭಯ ರಾಷ್ಟ್ರಗಳ ನಡುವೆ ಸೃಷ್ಟಿಯಾಗಿದ್ದ ಯುದ್ಧದ ಸ್ವರೂಪದ ಸಂಘರ್ಷ ಕೊನೆಗೊಳಿಸಲು ಶನಿವಾರ ಒಪ್ಪಂದ

ಎರಡೂ ದೇಶಗಳ ಸೇನಾ ಕಾರ್ಯಾಚರಣೆಗಳ ಮಹಾನಿರ್ದೇಶಕರು (ಡಿಜಿಎಂಒ) ಪರಸ್ಪರ ಮಾತುಕತೆ ನಡೆಸಿ, ಶನಿವಾರ ಸಂಜೆಯಿಂದಲೇ ಸಂಘರ್ಷ ಕೊನೆಗಾಣಿಸಲು ಕದನ ವಿರಾಮ ಘೋಷಣೆಗೆ ಒಪ್ಪಿಗೆ ಸೂಚಿಸಿದ್ದರು. ಆದರೆ ಶನಿವಾರ ರಾತ್ರಿ ಜಮ್ಮು ಮತ್ತು ಕಾಶ್ಮೀರ, ಪಂಜಾಬ್‌, ರಾಜಸ್ಥಾನ ಮತ್ತು ಗುಜರಾತ್‌ ಗಡಿಪ್ರದೇಶಗಳಲ್ಲಿ ಡ್ರೋನ್‌ ದಾಳಿಗೆ ಪಾಕ್‌ ಯತ್ನ ನಡೆಸಿದ್ದು, ಭಾರತ ತಕ್ಕ ಪ್ರತ್ಯುತ್ತರ ನೀಡಿತ್ತು.

ಭಾರತದ ಬಹು-ಪದರದ ವಾಯು ರಕ್ಷಣಾ ವ್ಯವಸ್ಥೆ ಭೇದಿಸಲು ಪಾಕಿಸ್ತಾನಕ್ಕೆ ಯಾವುದೇ ಅವಕಾಶ ಇಲ್ಲ. ಅಗತ್ಯ ಬಿದ್ದಲ್ಲಿ ಪ್ರತಿದಾಳಿಗೆ ಸಿದ್ಧ ಎಂದು ಭಾರತೀಯ ಸೇನೆಯ ಅಧಿಕಾರಿಗಳು ಸೋಮವಾರ ಹೇಳಿದ್ದರು.

‘ಆಪರೇಷನ್‌ ಸಿಂಧೂರ’ ಕಾರ್ಯಾಚರಣೆ ಕುರಿತು ಸೋಮವಾರ ಸುದ್ದಿಗೋಷ್ಠಿ ನಡೆಸಿದ ಮಿಲಿಟರಿ ಕಾರ್ಯಾಚರಣೆಗಳ ಮಹಾ ನಿರ್ದೇಶಕ (ಡಿಜಿಎಂಒ) ಲೆಫ್ಟಿನೆಂಟ್‌ ಜನರಲ್‌ ರಾಜೀವ್‌ ಘಯಿ, ಏರ್‌ಮಾರ್ಷಲ್‌ ಎ.ಕೆ. ಭಾರ್ತಿ ಹಾಗೂ ವೈಸ್‌ ಆಡ್ಮಿರಲ್‌ ಎ.ಎನ್‌. ಪ್ರಮೋದ್‌ ಅವರು ಈ ಮಾತನ್ನು ಹೇಳಿದರು. ‘ಉಗ್ರರ ಪರ ಪಾಕಿಸ್ತಾನ ನಿಂತಿದ್ದೇ ಸಂಘರ್ಷಕ್ಕೆ ಕಾರಣ. ತಾನು ಅನುಭವಿಸಿದ ನಷ್ಟಕ್ಕೆ ಆ ದೇಶವೇ ಹೊಣೆ’ ಎಂದು ಸ್ಪಷ್ಟಪಡಿಸಿದ್ದರು.

ಪಾಕಿಸ್ತಾನದ ಯಾವೆಲ್ಲ ಪ್ರದೇಶಗಳ ಮೇಲೆ ದಾಳಿ ನಡೆಸಲಾಗಿದೆ ಎಂಬ ಪಟ್ಟಿಯನ್ನು ಅವರು ಹಂಚಿಕೊಂಡರು. ಆ ಪಟ್ಟಿಯಲ್ಲಿ ಕರಾಚಿಯೂ ಸೇರಿದೆ. ಭಾರತದ ಮೇಲೆ ದಾಳಿ ಮಾಡುವಾಗ ಪಾಕಿಸ್ತಾನವು ಚೀನಾ ನಿರ್ಮಿತ ಕ್ಷಿಪಣಿಗಳು, ಟರ್ಕಿ ಡ್ರೋನ್‌ಗಳನ್ನು ಹೇಗೆ ಬಳಸಿದೆ ಎಂಬುದನ್ನು ತೋರಿಸುವ ಪುರಾವೆಗಳನ್ನು ಪ್ರಸ್ತುತಪಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.