ಮುಂಬೈ: ಕೇಂದ್ರ ಚುನಾವಣಾ ಆಯೋಗವು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಬಣಕ್ಕೆ ‘ಶಿವಸೇನಾ’ ಹೆಸರು ಹಾಗೂ ಬಿಲ್ಲು–ಬಾಣ ಒಳಗೊಂಡ ಪಕ್ಷದ ಚಿಹ್ನೆಯನ್ನು ಮಂಜೂರು ಮಾಡಿರುವ ಬಗ್ಗೆ ಅಮರಾವತಿ ಕ್ಷೇತ್ರದ ಪಕ್ಷೇತರ ಸಂಸದೆ ನವನೀತ್ ರಾಣಾ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೊ ಹಂಚಿಕೊಂಡಿರುವ ಅವರು, ‘ಏಕನಾಥ್ ಶಿಂದೆ ಅವರು ‘ಶಿವಸೇನಾ’ ಪಕ್ಷದ ಸಂಸ್ಥಾಪಕ ಬಾಳಾಸಾಹೇಬ್ ಠಾಕ್ರೆ ಅವರ ಜತೆಗಿದ್ದರು. ಪಕ್ಷವನ್ನು ತಳಮಟ್ಟದಿಂದ ಕಟ್ಟಿ ಬೆಳೆಸಿದ್ದಾರೆ. ಹಾಗಾಗಿ ಶಿವಸೇನಾ ಪಕ್ಷದ ಚಿಹ್ನೆ ಮತ್ತು ಅದರ ಪರಂಪರೆಗೆ ಸಂಪೂರ್ಣವಾಗಿ ಅರ್ಹರಾಗಿದ್ದಾರೆ’ ಎಂದು ಹೇಳಿಕೊಂಡಿದ್ದಾರೆ.
‘ಒಮ್ಮೆ ಪಕ್ಷ ವಿಭಜನೆಯಾದರೆ ಶೇ 90 ರಷ್ಟು ಮಂದಿ ಹೊಸ ಬಣದೊಂದಿಗೆ ಹೋಗುತ್ತಾರೆ. ಶಿಂದೆ ಬಣಕ್ಕೆ ಶಿವಸೇನಾ ಪಕ್ಷದ ಹೆಸರು ಮತ್ತು ಚಿಹ್ನೆಯನ್ನು ನೀಡಿರುವ ಚುನಾವಣಾ ಆಯೋಗದ ಕ್ರಮ ಸರಿ ಇದೆ’ ಎಂದು ತಿಳಿಸಿದ್ದಾರೆ.
ಚುನಾವಣಾ ಆಯೋಗವು ಏಕನಾಥ ಶಿಂದೆ ಬಣಕ್ಕೆ ‘ಶಿವಸೇನಾ’ ಹೆಸರು ಹಾಗೂ ಬಿಲ್ಲು–ಬಾಣ ಒಳಗೊಂಡ ಪಕ್ಷದ ಚಿಹ್ನೆಯನ್ನು ಮಂಜೂರು ಮಾಡಿದ ಕೆಲವೇ ಗಂಟೆಗಳಲ್ಲಿ ನವನೀತ್ ರಾಣಾ ಪ್ರತಿಕ್ರಿಯಿಸಿರುವುದು ಅಚ್ಚರಿ ಮೂಡಿಸಿದೆ.
‘ಯಾವುದು ರಾಮ-ಹನುಮಾನ್‌ಗೆ ಸೇರಿದಲ್ಲವೋ, ಅದು ಯಾವ ಉಪಯೋಗಕ್ಕೂ ಬರುವುದಿಲ್ಲ. ಧನುಷ್-ಬಾಣ ಕೂಡ ಅವರದ್ದಲ್ಲ’ ಎಂದು ಮಾಜಿ ಸಿಎಂ ಉದ್ಧವ್ ಠಾಕ್ರೆ ಬಣವನ್ನು ನವನೀತ್ ರಾಣಾ ತರಾಟೆಗೆ ತೆಗದುಕೊಂಡಿದ್ದಾರೆ.
ಇವನ್ನೂ ಓದಿ...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.