ನಾರಾ ಲೋಕೇಶ್ ಮತ್ತು ವೈ.ಎಸ್. ಜಗನ್ ಮೋಹನ್ ರೆಡ್ಡಿ
ಅಮರಾವತಿ: ಆಂಧ್ರಪ್ರದೇಶದ ವಿಶಾಖಪಟ್ಟಣದ ರುಷಿಕೊಂಡದ ನೆತ್ತಿಯಲ್ಲಿ ಹಿಂದಿನ ವೈಎಸ್‌ಆರ್‌ಸಿಪಿ ಸರ್ಕಾರ ನಿರ್ಮಿಸಿರುವ ವೈಭವೋಪೇತ ‘ಅರಮನೆ’ಯ ವಿಚಾರ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ.
ವಿಜಯವಾಡ ಬಳಿ ಆಟೊಮೊಬೈಲ್ ಉತ್ಪಾದನಾ ಘಟಕವನ್ನು ಉದ್ಘಾಟಿಸಿ ಮಾತನಾಡಿದ ಐಟಿ ಸಚಿವ ನಾರಾ ಲೋಕೇಶ್, ‘ಇರಾಕ್‌ನ ಮಾಜಿ ಸರ್ವಾಧಿಕಾರಿ ಸದ್ದಾಂ ಹುಸೇನ್ ಸುಂದರವಾದ ಅರಮನೆಗಳನ್ನು ನಿರ್ಮಿಸಿ, ಐಷಾರಾಮಿ ಜೀವನಶೈಲಿಯನ್ನು ಆನಂದಿಸುವುದಕ್ಕೆ ಹೆಸರುವಾಸಿಯಾಗಿದ್ದರು. ಆದೇ ರೀತಿ ಮಾಜಿ ಸಿಎಂ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರು ಪ್ರವಾಸೋದ್ಯಮ ಇಲಾಖೆಯ ವಿಲ್ಲಾಗಳನ್ನು ಅರಮನೆಯನ್ನಾಗಿ ಪರಿವರ್ತಿಸುವ ಮೂಲಕ ಸದ್ದಾಂ ಹುಸೇನ್ ಅವರಂತೆ ವರ್ತಿಸಿದ್ದಾರೆ’ ಎಂದು ವಾಗ್ದಾಳಿ ನಡೆಸಿದ್ದಾರೆ.
‘ಸದ್ದಾಂ ಹುಸೇನ್ ಅವರಂತೆಯೇ ಜಗನ್ ಮೋಹನ್ ರೆಡ್ಡಿ ಅವರು ತಾವು 30 ವರ್ಷಗಳ ಕಾಲ ಅಧಿಕಾರದಲ್ಲಿರುತ್ತೇವೆ ಎಂದು ಭಾವಿಸಿದ್ದರು. ಅದಕ್ಕಾಗಿಯೇ ಈ ಐಷಾರಾಮಿ ಕಟ್ಟಡವನ್ನು ವಾಸದ ಉದ್ದೇಶಕ್ಕಾಗಿ ನಿರ್ಮಿಸಿದ್ದರು. ತಮಗಾಗಿ ಒಂದು ಕೊಠಡಿ, ತಮ್ಮ ಇಬ್ಬರು ಹೆಣ್ಣು ಮಕ್ಕಳಿಗಾಗಿ ಎರಡು ಕೊಠಡಿ ಹಾಗೂ ಪತ್ನಿಗಾಗಿ ವಿಶೇಷ ಕಚೇರಿಯನ್ನು ನಿರ್ಮಿಸಿದ್ದರು’ ಎಂದು ಲೋಕೇಶ್ ಕಿಡಿಕಾರಿದ್ದಾರೆ.
‘ಲಕ್ಷಾಂತರ ರೂಪಾಯಿ ಮೌಲ್ಯದ ಬಾತ್‌ಟಬ್, ಕಮೋಡ್‌ಗಳನ್ನು ಅಳವಡಿಸಿರುವ ಐಷಾರಾಮಿ ಸ್ನಾನಗೃಹಗಳನ್ನು ಹೊಂದಿರುವ ಈ ವಿಲಾಸಿ ಬಂಗಲೆಯನ್ನು ತುಂಬಾ ರಹಸ್ಯವಾಗಿ ₹500 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿತ್ತು. ಜಗನ್ ಯಾವಾಗಲೂ ಭಯದಲ್ಲಿ ವಾಸಿಸುತ್ತಿದ್ದುದರಿಂದ 1,000 ಭದ್ರತಾ ಸಿಬ್ಬಂದಿಯನ್ನು ನೇಮಿಸಿಕೊಂಡಿದ್ದರು. ಅವರಿಗೂ ಬೃಹತ್ ಮನೆಗಳನ್ನು ನಿರ್ಮಿಸಿದ್ದರು. ಜಗನ್ ಅವರ ಶೋಕಿಗಾಗಿ ಹಿಂದಿನ ಸರ್ಕಾರ ಸಾರ್ವಜನಿಕರ ಹಣವನ್ನು ದುರ್ಬಳಕೆ ಮಾಡಿಕೊಂಡಿದೆ’ ಎಂದು ಲೋಕೇಶ್ ಆರೋಪಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಕೂಡ ಅಂತಹ ಭವ್ಯ ಅರಮನೆಯನ್ನು ಹೊಂದಿಲ್ಲ. ಜಗನ್ ಈ ಎಲ್ಲವೂ ಕೇವಲ ನಾಲ್ಕು ಜನರಿಗಾಗಿಯೇ ಮಾಡಿಕೊಂಡಿದ್ದರು. ಆದರೆ, ಅವರ ತಾಯಿ ಮತ್ತು ಸಹೋದರಿಯನ್ನು ಕುಟುಂಬದಿಂದ ಹೊರಗಿಟ್ಟಿದ್ದರು ಎಂದು ಅವರು ಕುಟುಕಿದ್ದಾರೆ.
ಆಂಧ್ರದ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು 2021ರಲ್ಲಿ ರುಷಿಕೊಂಡದ ತುದಿಯಲ್ಲಿದ್ದ ಹರಿತಾ ರೆಸಾರ್ಟ್ ಅನ್ನು ನೆಲಸಮಗೊಳಿಸಿ ಹೊಸ ರೆಸಾರ್ಟ್ ನಿರ್ಮಾಣ ಕಾಮಗಾರಿಯನ್ನು ಆರಂಭಿಸಿತ್ತು. ಈ ವಿಚಾರ ಮುಂದಿಟ್ಟುಕೊಂಡು ವಿರೋಧ ಪಕ್ಷಗಳು ಅಂದಿನ ವೈಎಸ್‌ಆರ್‌ಸಿಪಿ ಸರ್ಕಾರದ ವಿರುದ್ಧ ನಿರಂತರವಾಗಿ ವಾಗ್ದಾಳಿ, ಹೋರಾಟ ನಡೆಸುತ್ತಾ ಬಂದಿದ್ದವು.
ಪರಿಸರ ನಿಯಮಗಳನ್ನು ಉಲ್ಲಂಘಿಸಿ ಕಟ್ಟಡ ನಿರ್ಮಿಸಲಾಗುತ್ತಿದೆ ಎಂದು ಆರೋಪಿಸಿದ್ದ ಟಿಡಿಪಿ ಮತ್ತು ಜನಸೇನಾ ಕಾಮಗಾರಿ ನಡೆಯುತ್ತಿದ್ದ ಸ್ಥಳಕ್ಕೆ ನುಗ್ಗಿ ಪ್ರತಿಭಟನೆ ನಡೆಸಲು ಹಲವು ಬಾರಿ ಯತ್ನಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.