ಸತ್ಯೇಂದ್ರ ದಾಸ್
–ಪಿಟಿಐ ಚಿತ್ರ
ಲಖನೌ: ಅಯೋಧ್ಯೆಯ ರಾಮ ಮಂದಿರದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಅವರು ಸಂಜಯ್ ಗಾಂಧಿ ವೈದ್ಯಕೀಯ ವಿಜ್ಞಾನ ಸ್ನಾತಕೋತ್ತರ ಸಂಸ್ಥೆಯಲ್ಲಿ (ಎಸ್‌ಜಿಪಿಜಿಐ) ಬುಧವಾರ ನಿಧನರಾಗಿದ್ದಾರೆ ಎಂದು ಸುದ್ದಿಸಂಸ್ಥೆ ‘ಎಎನ್‌ಐ’ ವರದಿ ಮಾಡಿದೆ.
ಪಾರ್ಶ್ವವಾಯುವಿನಿಂದ ಬಳಲುತ್ತಿದ್ದ 85 ವರ್ಷದ ಸತ್ಯೇಂದ್ರ ದಾಸ್ ಅವರನ್ನು ಫೆಬ್ರುವರಿ 3ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು.
1992ರ ಡಿಸೆಂಬರ್ 6ರಂದು ಬಾಬರಿ ಮಸೀದಿಯನ್ನು ಕೆಡವಿದ ಸಂದರ್ಭದಲ್ಲಿ ಸತ್ಯೇಂದ್ರ ದಾಸ್ ಅವರು ರಾಮ ಮಂದಿರದ ಅರ್ಚಕರಾಗಿದ್ದರು.
‘ನಿರ್ವಾಣಿ’ ಅಖಾಡದಿಂದ ಬಂದ ಸತ್ಯೇಂದ್ರ ದಾಸ್ ಅವರು ಅಯೋಧ್ಯೆಯ ಪ್ರಮುಖ ಸಂತರಲ್ಲಿ ಒಬ್ಬರಾಗಿದ್ದರು. ಅಯೋಧ್ಯೆ ಮತ್ತು ರಾಮ ಮಂದಿರದ ಬೆಳವಣಿಗೆಗಳ ಬಗ್ಗೆ ಮಾಹಿತಿಯುಳ್ಳವರಾಗಿದ್ದರು.
ಬಾಬರಿ ಮಸೀದಿಯನ್ನು ಕೆಡವಿದಾಗ ತಾತ್ಕಾಲಿಕವಾಗಿ ನಿರ್ಮಿಸಿದ್ದ ಟೆಂಟ್‌ನಲ್ಲಿ ರಾಮ ಲಲ್ಲಾ ವಿಗ್ರಹವನ್ನು ಇಟ್ಟುಕೊಂಡು ಸತ್ಯೇಂದ್ರ ದಾಸ್ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸಿದ್ದರು.
‘ಶ್ರೀರಾಮನ ಪರಮ ಭಕ್ತ, ಅಯೋಧ್ಯಯ ರಾಮ ಜನ್ಮಭೂಮಿ ದೇವಸ್ಥಾನದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ಕುಮಾರ್ ದಾಸ್ ಜಿ ಮಹಾರಾಜ್ ಅವರ ನಿಧನವು ಅತ್ಯಂತ ದುಃಖಕರ ಮತ್ತು ಆಧ್ಯಾತ್ಮಿಕ ಜಗತ್ತಿಗೆ ತುಂಬಲಾರದ ನಷ್ಟವಾಗಿದೆ’ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸಂತಾಪ ಸೂಚಿಸಿದ್ದಾರೆ.
‘ಸತ್ಯೇಂದ್ರ ದಾಸ್ ಅವರು ಗೌರವಾನ್ವಿತ ವ್ಯಕ್ತಿಯಾಗಿದ್ದರು. ಅಯೋಧ್ಯೆ ಚಳವಳಿಯ ಇತಿಹಾಸವನ್ನು ಹೃದಯದಿಂದ ತಿಳಿದವರಲ್ಲಿ ಒಬ್ಬರು. ಅವರ ಸಾವಿಗೆ ನಾವು ಸಂತಾಪ ಸೂಚಿಸುತ್ತೇವೆ’ ಎಂದು ವಿಶ್ವ ಹಿಂದೂ ಪರಿಷತ್ತಿನ ವಕ್ತಾರ ಶರದ್ ಶರ್ಮಾ ದಾಸ್ ಸಂತಾಪ ಸೂಚಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.