
ಅಯೋಧ್ಯೆ ರಾಮಮಂದಿರದಲ್ಲಿ ಹಾರಿಸಿರುವ ಧ್ವಜ
ಚಿತ್ರ: ಪಿಟಿಐ
ಅಯೋಧ್ಯೆ ಭವ್ಯ ರಾಮ ಮಂದಿರ ನಿರ್ಮಾಣ ಪೂರ್ಣಗೊಂಡಿರುವುದರಿಂದ ಇಂದು (ಮಂಗಳವಾರ) ಪ್ರಧಾನಿ ನರೇಂದ್ರ ಮೋದಿಯವರು ಬೃಹತ್ ಧ್ವಜಾರೋಹಣ ನೆರವೇರಿಸಿದ್ದಾರೆ. ಈ ಧ್ವಜ ಅನೇಕ ವಿಶೇಷತೆಗಳನ್ನು ಹೊಂದಿದೆ.
ರಾಮ ಮಂದಿರದ ಮೇಲೆ ಹಾರಿಸುತ್ತಿರುವ ಧ್ವಜವನ್ನು ಅಹಮದಾಬಾದ್ ಪ್ಯಾರಾಚೂಟ್ ತಜ್ಞರು ತಯಾರಿಸಿದ್ದಾರೆ. ಇದು ಅತ್ಯಧಿಕ ವರ್ಷಗಳ ಕಾಲ ಬಾಳಿಕೆ ಬರಬೇಕೆಂದು ಈ ಧ್ವಜಕ್ಕೆ ಪ್ಯಾರಾಚೂಟ್ ನಿರ್ಮಾಣಕ್ಕೆ ಬಳಸುವ ಬಟ್ಟೆ (ನೈಲಾನ್ ಮತ್ತು ರೇಷ್ಮೆ)ಯನ್ನು ಬಳಸಲಾಗಿದೆ.
ರಾಮ ಮಂದಿರದಲ್ಲಿ ಹಾರಿಸಿರುವ ಕೇಸರಿ ಬಣ್ಣದ ಧ್ವಜವು 22 ಅಡಿ ಉದ್ದ ಮತ್ತು 11 ಅಡಿ ಅಗಲವಿದೆ. ಹಿಂದೂ ಸಂಪ್ರದಾಯದ ಪ್ರಕಾರ ಧ್ವಜಾರೋಹಣ ನೆರವೇರಿಸುವುದನ್ನು ಧರ್ಮದ ವಿಜಯ ಎಂದು ಹೇಳಲಾಗುತ್ತದೆ. ಧ್ವಜದ ಮದ್ಯದಲ್ಲಿ ಸೂರ್ಯನ ಆಕೃತಿ ಮತ್ತು ಅದರ ಮೇಲೆ ‘ಓಂ’ ಎಂದು ಬರೆಯಲಾಗಿದೆ. ಈ ಸಂಕೇತಗಳು ರಾಮನ ತೇಜಸ್ಸು, ಶೌರ್ಯ ಹಾಗೂ ವೈಭವವನ್ನು ಪ್ರತಿಬಿಂಬಿಸುತ್ತವೆ.
ಇದನ್ನು ಸಿದ್ಧಪಡಿಸಲು 7 ಕುಶಲಕರ್ಮಿಗಳು ಬರೋಬ್ಬರಿ 25 ದಿನಗಳ ಕಾಲ ಕೆಲಸ ಮಾಡಿದ್ದಾರೆ. ವರದಿಗಳ ಪ್ರಕಾರ ಗಂಟೆಗೆ 60 ಕಿ.ಮೀ ವೇಗದ ಗಾಳಿಯನ್ನು ತಡೆದುಕೊಳ್ಳುವ ಸಾಮರ್ಥ್ಯ ಇದಕ್ಕಿದೆ.
ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಉಲ್ಲೇಖಿಸಿದಂತೆ ಮತ್ತು ರಕ್ಷಣಾ ಸಚಿವಾಲಯದ ಮಾರ್ಗಸೂಚಿಗಳ ಪ್ರಕಾರ, ಈ ಧ್ವಜವು 22 ಅಡಿ ಉದ್ದ ಮತ್ತು 11 ಅಡಿ ಅಗಲ ಇದೆ. ಮಾತ್ರವಲ್ಲ, 2 ರಿಂದ 3 ಕೆ.ಜಿ ತೂಕವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.