ಏಕನಾಥ ಶಿಂದೆ, ನರೇಂದ್ರ ಮೋದಿ ಹಾಗೂ ಉದ್ಧವ್ ಠಾಕ್ರೆ
ಪಿಟಿಐ ಚಿತ್ರಗಳು
ಮುಂಬೈ: ಶಿವಸೇನಾ ಸ್ಥಾಪಕ ಬಾಳಾಸಾಹೇಬ್ ಠಾಕ್ರೆ ಅವರ ಕನಸಿನಂತೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಉದ್ಧವ್ ಠಾಕ್ರೆ ನಿರಂತರವಾಗಿ ಟೀಕಿಸುತ್ತಿದ್ದಾರೆ ಎಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ ಶಿಂದೆ ಕಿಡಿಕಾರಿದ್ದಾರೆ.
ಬಂಡಾರ ಜಿಲ್ಲೆಯಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿರುವ ಶಿಂದೆ, 'ರಾಮ ಮಂದಿರ ನಿರ್ಮಿಸಬೇಕೆಂಬ ಬಾಳಾ ಸಾಹೇಬರ ಕನಸನ್ನು ನನಸು ಮಾಡಿದ ಮೋದಿ ಅವರನ್ನೇ ನೀವು ನಿರಂತರವಾಗಿ ಟೀಕಿಸುತ್ತಿದ್ದೀರಿ. ಮೋದಿ ಅವರು ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ಪಾಕಿಸ್ತಾನಕ್ಕೂ ತಕ್ಕ ಪಾಠ ಕಲಿಸಿದ್ದಾರೆ. ಒಂದುವೇಳೆ ಬಾಳಾಸಾಹೇಬರು ಈಗ ಬದುಕಿದ್ದರೆ, ಮೋದಿಯವರನ್ನು ಹೃತ್ಪೂರ್ವಕವಾಗಿ ಹೊಗಳುತ್ತಿದ್ದರು' ಎಂದು ಹೇಳಿದ್ದಾರೆ.
'ಮುಂಬೈ ಭಯೋತ್ಪಾದನಾ ದಾಳಿ, ಸಂಸತ್ ಮೇಲಿನ ದಾಳಿ ಅಥವಾ ಪುಲ್ವಾಮಾ ದಾಳಿಗೆ ಸಂಬಂಧಿಸಿದಂತೆ ನೀವು ಎಂದೂ ಪಾಕಿಸ್ತಾನವನ್ನು ಹೊಣೆ ಮಾಡಲಿಲ್ಲ. ಅದರ ಬದಲು ಭಾರತೀಯ ಸೇನೆ ಮತ್ತು ಪ್ರಧಾನಿ ಅವರನ್ನು ಪ್ರಶ್ನಿಸುತ್ತಿದ್ದೀರಿ. ಜನರು ನಿಮ್ಮನ್ನು ಎಂದಿಗೂ ಕ್ಷಮಿಸುವುದಿಲ್ಲ' ಎಂದು ವಾಗ್ದಾಳಿ ನಡೆಸಿದ್ದಾರೆ.
2022ರ ಜೂನ್‌ನಲ್ಲಿ ಶಿವಸೇನಾ ನಾಯಕತ್ವದ ವಿರುದ್ಧ ಬಂಡಾಯ ಸಾರಿದ್ದ ಶಿಂದೆ, ತಮ್ಮ ಬೆಂಬಲಿಗ ಶಾಸಕರೊಂದಿಗೆ ಪಕ್ಷ ಹಾಗೂ ಮಹಾ ವಿಕಾಸ ಆಘಾಡಿ (ಶಿವಸೇನಾ, ಎನ್‌ಸಿಪಿ ಹಾಗೂ ಕಾಂಗ್ರೆಸ್) ಮೈತ್ರಿ ಸರ್ಕಾರದಿಂದ ಹೊರನಡೆದಿದ್ದರು. ನಂತರ, ಬಿಜೆಪಿ ಬೆಂಬಲದೊಂದಿಗೆ ಸರ್ಕಾರ ರಚಿಸಿ ಮುಖ್ಯಮಂತ್ರಿಯಾಗಿದ್ದರು. ಅದಾದ ನಂತರ ಉದ್ಧವ್ ಅವರೊಂದಿಗೆ ನಡೆಸಿದ ಕಾನೂನ ಹೋರಾಟದಲ್ಲಿ ಮೇಲುಗೈ ಸಾಧಿಸಿ, ಶಿವಸೇನಾ ಪಕ್ಷದ ಅಧಿಕೃತ ಚಿಹ್ನೆಯನ್ನು ಗಿಟ್ಟಿಸಿಕೊಂಡಿದ್ದಾರೆ.
ಪಹಲ್ಗಾಮ್ ದಾಳಿ ಹಾಗೂ ಪಾಕಿಸ್ತಾನವು ಭಯೋತ್ಪಾದನೆಗೆ ಪ್ರಾಯೋಜಕತ್ವ ವಹಿಸುತ್ತಿರುವುದನ್ನು ಜಗತ್ತಿಗೆ ಸಾರಲು ಹಲವು ರಾಷ್ಟ್ರಗಳಿಗೆ ಸಂಸದರ ನಿಯೋಗಗಳನ್ನು ಕೇಂದ್ರ ಸರ್ಕಾರವು ಇತ್ತೀಚೆಗೆ ಕಳುಹಿಸಿತ್ತು. ಈ ಕುರಿತು ಮಾತನಾಡಿರುವ ಶಿಂದೆ, 'ಡಾ. ಶ್ರೀಕಾಂತ್ ಶಿಂದೆ ಅವರು, ಆಪರೇಷನ್ ಸಿಂಧೂರ ಕುರಿತು ವಿವರಿಸುವ ಸಂಸದರ ನಿಯೋಗದ ನೇತೃತ್ವ ವಹಿಸಿದ್ದರು. ಅದಕ್ಕೆ ಸಂಬಂಧಿಸಿದಂತೆ ಎನ್‌ಡಿಎ ಸಭೆಯಲ್ಲಿ ನಿರ್ಣಯ ಮಂಡಿಸುವ ಹೊಣೆಯನ್ನು ನನಗೆ ವಹಿಸಲಾಗಿತ್ತು. ಒಬ್ಬ ಶಿವ ಸೈನಿಕ ರಾಷ್ಟ್ರಭಕ್ತಿ, ರಾಷ್ಟ್ರೀಯತೆ ಮತ್ತು ಹಿಂದುತ್ವವನ್ನು ಸಾಕಾರಗೊಳಿಸುತ್ತಾನೆ. ಆದಾಗ್ಯೂ, ಅವರಿಗೆ ಅಗೌರವ ತೋರಿದ ನೀವು ಇಂದು ಒಬ್ಬಂಟಿಯಾಗಿದ್ದೀರಿ. ಕಳೆದ ಮೂರು ವರ್ಷಗಳಲ್ಲಿ ಎಷ್ಟು ಮಂದಿ ನಿಮ್ಮ ಪಕ್ಷವನ್ನು ತೊರೆದಿದ್ದಾರೆ ಎಂದು ಯೋಚಿಸಿ' ಎಂದು ತಿವಿದಿದ್ದಾರೆ.
ಉದ್ಧವ್ ಅವರು ಅಧಿಕಾರಕ್ಕಾಗಿ ಹಿಂದುತ್ವ ಹಾಗೂ ಶಿವ ಸೈನಿಕರ ಆದರ್ಶಗಳಿಗೆ ದ್ರೋಹ ಬಗೆದಿದ್ದಾರೆ ಎಂದೂ ಶಿಂದೆ ಆರೋಪಿಸಿದ್ದಾರೆ.
'ಪ್ರತಿಯೊಬ್ಬ ಶಿವ ಸೈನಿಕನೂ ಹಿಂದುತ್ವದ ಜ್ವಾಲೆ ಇದ್ದಂತೆ. ಆದರೆ, ನೀವು ಅವರನ್ನು ನಿಷ್ಪ್ರಯೋಜಕರಂತೆ ನಡೆಸಿಕೊಂಡಿರಿ. ಆ ಕಾರಣಕ್ಕಾಗಿಯೇ ಯಾರೂ ನಿಮ್ಮೊಂದಿಗೆ ಕೈಜೋಡಿಸಲು ಬಯಸುತ್ತಿಲ್ಲ. ನೀವೀಗ ರಾಜಕೀಯವಾಗಿ ಏಕಾಂಗಿಯಾಗಿದ್ದೀರಿ' ಎಂದು ಕುಟುಕಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.