ಪೊಲೀಸರೊಂದಿಗಿನ ಘರ್ಷಣೆ ವೇಳೆ ಕಾಂಗ್ರೆಸ್ ಕಾರ್ಯಕರ್ತರು
ಪಿಟಿಐ ಚಿತ್ರ
ಭುವನೇಶ್ವರ: ಬಿಜೆಪಿ ಅಧಿಕಾರಕ್ಕೇರಿದಾಗಿನಿಂದ ಮಹಿಳೆಯರ ವಿರುದ್ಧ ಅಪರಾಧ ಪ್ರಕರಣಗಳು ಏರಿಕೆಯಾಗುತ್ತಿವೆ. ಈ ಸಂಬಂಧ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್ ಕಾರ್ಯಕರ್ತರು ನಡೆಸುತ್ತಿದ್ದ ಪ್ರತಿಭಟನಾ ಮೆರವಣಿಗೆಯನ್ನು ಪೊಲೀಸರು ಗುರುವಾರ ತಡೆದಿದ್ದಾರೆ. ಈ ವೇಳೆ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ಘರ್ಷಣೆಯಾಗಿದ್ದು, 25ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ.
ವಿಧಾನಸೌಧಕ್ಕೆ ಪ್ರತಿಭಟನಾ ಮೆರವಣಿಗೆ ಹೊರಟಿದ್ದ ಕಾರ್ಯಕರ್ತರನ್ನು ಪೊಲೀಸರು ಭುವನೇಶ್ವರದ ಮಹಾತ್ಮ ಗಾಂಧೀಜಿ ಮಾರ್ಗದಲ್ಲಿ ತಡೆದಿದ್ದರು. ಬಳಿಕ ಘರ್ಷಣೆಯಾಗಿದೆ. ಗಾಯಗೊಂಡವರಲ್ಲಿ 15 ಮಂದಿ ಪೊಲೀಸರಾಗಿದ್ದು, ಹೆಚ್ಚಿನವರಿಗೆ ಕಲ್ಲೇಟು ಬಿದ್ದಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪೊಲೀಸರು ಹಾಕಿದ್ದ ಬ್ಯಾರಿಕೇಡ್‌ಗಳನ್ನು ಕಾರ್ಯಕರ್ತರು ಮುರಿದು ಮುಂದೆ ಸಾಗಲು ಯತ್ನಿಸಿದಾಗ, ಲಾಠಿ ಚಾರ್ಜ್ ಆರಂಭಿಸಿದ ಪೊಲೀಸರು ಅಶ್ರುವಾಯು ಶೆಲ್, ಜಲಫಿರಂಗಿ ಪ್ರಯೋಗಿಸಿದರು. ಈ ವೇಳೆ, ಭದ್ರತಾ ಸಿಬ್ಬಂದಿಯತ್ತ ಕಲ್ಲುಗಳನ್ನು ತೂರಲಾಗಿದೆ ಎಂದು ಹೇಳಿದ್ದಾರೆ.
ವಿಧಾನಸಭೆಗೆ ಮುತ್ತಿಗೆ ಹಾಕಲು ಮುಂದಾಗಿದ್ದ ಕಾಂಗ್ರೆಸ್ ಕಾರ್ಯಕರ್ತರನ್ನು ತಡೆಯುವ ಸಲುವಾಗಿ, ವಿಧಾನಸಭೆಗೆ ಹೋಗುವ ರಸ್ತೆಗಳಲ್ಲಿ ಮುಂಜಾಗ್ರತೆಯಾಗಿ ಸುಮಾರು 2,400 ಪೊಲೀಸರನ್ನು ನಿಯೋಜಿಸಲಾಗಿತ್ತು.
'ಪ್ರತಿಭಟನಾಕಾರರು ಕಲ್ಲು ತೂರಿದ್ದರಿಂದ 15 ಪೊಲೀಸರು ಗಾಯಗೊಂಡಿದ್ದಾರೆ. ಅವರಲ್ಲಿ ನಾಲ್ವರ ಸ್ಥಿತಿ ಗಂಭೀರವಾಗಿದೆ. ಟಿವಿ ಪತ್ರಕರ್ತನ ತಲೆಗೂ ಪೆಟ್ಟಾಗಿದೆ' ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ (ಎಸಿಪಿ) ನರಸಿಂಗ ಭೋಲಾ ತಿಳಿಸಿದ್ದಾರೆ.
ಕಾಂಗ್ರೆಸ್ ಶಾಸಕರು ಇದೇ ವಿಚಾರವನ್ನು ಕೆಲವು ವಾರಗಳಿಂದ ವಿಧಾನಸಭೆಯಲ್ಲಿ ಪ್ರಸ್ತಾಪಿಸುತ್ತಿದ್ದಾರೆ. ಇದರಿಂದಾಗಿ, ಪಕ್ಷದ ಕೆಲವರು ಅಮಾನತು ಶಿಕ್ಷೆಗೂ ಗುರಿಯಾಗಿದ್ದಾರೆ. ಘರ್ಷಣೆ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್, ಅಪರಾಧಗಳ ಕುರಿತು ಸರ್ವಪಕ್ಷ ಸದನ ಸಮಿತಿ ರಚನೆಗೆ ಒತ್ತಾಯಿಸುತ್ತಿದ್ದ ಪ್ರತಿಭಟನಾಕಾರರ ಮೇಲೆ ಪೊಲೀಸರು ಬಲಪ್ರಯೋಗ ಮಾಡಿದ್ದಾರೆ. ಅದರ ಬದಲು, ಅವರನ್ನು ಬಂಧಿಸಬಹುದಿತ್ತು ಎಂದು ಹೇಳಿದೆ.
ಎಐಸಿಸಿ ಸದಸ್ಯೆ ರೋಸೆಲಿನಾ ಟೆರ್ಕಿ ಸೇರಿದಂತೆ 10 ಕಾರ್ಯಕರ್ತರು ಗಾಯಗೊಂಡಿದ್ದಾರೆ. ಪಕ್ಷದ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಜಯದೇವ್ ಜೆನಾ ಅವರ ಕೈಗಳಿಗೂ ಗಾಯಗಳಾಗಿವೆ ಹೇಳಿದೆ.
ಪೊಲೀಸರ ಮೇಲೆ ದಾಳಿ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಒತ್ತಾಯಿಸಿದೆ.
ಬಿಜೆಪಿ, ಒಡಿಶಾ ವಿಧಾನಸಭೆಗೆ 2024ರ ಜೂನ್‌ನಲ್ಲಿ ನಡೆದ ಚುನಾವಣೆಯಲ್ಲಿ ಬಹುಮತ ಸಾಧಿಸಿ ಅಧಿಕಾರಕ್ಕೇರಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.