ನವದೆಹಲಿ: ಲಾಲೂ ಪ್ರಸಾದ್ ಅವರ ಆರ್‌ಜೆಡಿಗೆ ಮುಸ್ಲಿಂ–ಯಾದವರು (ಶೇ 32) ಮತ ಬ್ಯಾಂಕ್. ವಿಕಾಸಶೀಲ್ ಇನ್ಸಾನ್ ಪಕ್ಷದ (ವಿಐಪಿ) ಮುಖ್ಯಸ್ಥ ಮುಕೇಶ್ ಸಹಾನಿ ಅವರನ್ನು ಇಂಡಿಯಾ ಮೈತ್ರಿಕೂಟದ ಉಪ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿಸಲು ಒಪ್ಪುವ ಮೂಲಕ ತನ್ನ ಮತ ಬ್ಯಾಂಕ್ ನೆಲೆ ವಿಸ್ತರಿಸಲು ಮತ್ತು ಬಹುಜನ (ದಲಿತರು), ಆದಿವಾಸಿ (ಬುಡಕಟ್ಟು ಜನರು) ಮತ್ತು ಪಿಚ್ಡಾದಂತಹ (ಹಿಂದುಳಿದ, ವಿಶೇಷವಾಗಿ ಅತ್ಯಂತ ಹಿಂದುಳಿದ ವರ್ಗಗಳು) ಗುಂಪುಗಳನ್ನು ತಲುಪುವ ಪ್ರಯತ್ನ ನಡೆಸಿದೆ. ಅಧಿಕಾರದ ಚುಕ್ಕಾಣಿ ಹಿಡಿಯಲು ಇಂಡಿಯಾ ಕೂಟಕ್ಕೆ ನೆಲೆ ವಿಸ್ತರಿಸುವುದು ಅನಿವಾರ್ಯ.
ಎನ್‌ಡಿಎ: ಎನ್‌ಡಿಎ ಮೈತ್ರಿಕೂಟದ ಪ್ರಮುಖ ಪಕ್ಷವಾಗಿರುವ ಬಿಜೆಪಿ ರಾಜ್ಯದಲ್ಲಿ ಈವರೆಗೆ ಸ್ವತಂತ್ರವಾಗಿ ಅಧಿಕಾರದ ಚುಕ್ಕಾಣಿ ಹಿಡಿದಿಲ್ಲ. ಮಿತ್ರಪಕ್ಷಗಳ ಆಸರೆಯಿಂದಲೇ ಅಧಿಕಾರದ ಸುಖ ಅನುಭವಿಸಿದೆ. 20 ವರ್ಷಗಳಿಂದ ರಾಜ್ಯದ ಮುಖ್ಯಮಂತ್ರಿ ಆಗಿರುವ ನಿತೀಶ್ ಕುಮಾರ್ ಅವರಿಗೆ ಅತ್ಯಂತ ಹಿಂದುಳಿದ ವರ್ಗ (ಇಬಿಸಿ) ಹಾಗೂ ಮಹಿಳೆಯರೇ ಪ್ರಮುಖ ಮತ ಬ್ಯಾಂಕ್. ಒಬಿಸಿ ಪಟ್ಟಿಯಲ್ಲಿರುವ ಶೇ 13ರಷ್ಟಿರುವ ಯಾದವೇತರ ಜಾತಿಗಳು (ಕುರ್ಮಿ, ಬನಿಯಾ, ಕುಶ್ವಾಹ) ಜೆಡಿಯು ಜತೆಗೆ ಇವೆ. ಬಿಜೆಪಿಯು ಪ್ರಬಲ ಜಾತಿಗಳ ಮತ ನೆಚ್ಚಿಕೊಂಡಿದೆ. ಚಿರಾಗ್ ಪಾಸ್ವಾನ್ ಹಾಗೂ ಜಿತನ್ ರಾಮ್ ಮಾಂಝಿ ಮೂಲಕ ಮೈತ್ರಿಕೂಟವು ದಲಿತರ ಮತಗಳನ್ನು ಸೆಳೆಯುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.