
ಪಟ್ನಾ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ ಅಧಿಕಾರದಲ್ಲಿ ಮುಂದುವರಿಯುವುದು ನಿಚ್ಚಳವಾಗಿದೆ. ಎನ್‌ಡಿಎ ಬಿಹಾರದಲ್ಲಿ ತನ್ನ ಅಲೆಯನ್ನು ಉಳಿಸಿಕೊಳ್ಳಲು ಮುಖ್ಯಮಂತ್ರಿ ನಿತೀಶ್ ಕುಮಾರ್ ಪ್ರಮುಖ ಕಾರಣ.
ಬಿಹಾರದಲ್ಲಿ ಮತ್ತೆ ಎನ್‌ಡಿಎ ಬಹುಮತ ಸಾಧಿಸಲು ನಿತೀಶ್ ಕುಮಾರ್ ಹೇಗೆ ನೆರವಾಗಿದ್ದಾರೆ ಎಂಬುವುದರ ವರದಿ ಇಲ್ಲಿದೆ.
ಉತ್ತಮ ಆಡಳಿತದ ಚಿತ್ರಣ
ಮುಖ್ಯಮಂತ್ರಿಯಾದಾಗಿನಿಂದ ಉತ್ತಮ ಆಡಳಿತ ನೀಡುವ ವ್ಯಕ್ತಿ ಎನ್ನುವ ಹೆಸರನ್ನು ನಿತೀಶ್ ಕುಮಾರ್ ಬೆಳೆಸಿಕೊಂಡು ಬಂದಿದ್ದಾರೆ. ಕಾನೂನು ಸುವ್ಯವಸ್ಥೆಯ ಮರುಸ್ಥಾಪನೆ, ಅಪರಾಧಗಳ ತಡೆ ಮತ್ತು ಆಡಳಿತ ವ್ಯವಸ್ಥೆಯನ್ನೂ ಅಭಿವೃದ್ಧಿಪಡಿಸಿದ್ದಾರೆ. ಇದರಿಂದಾಗಿ ನಿತೀಶ್ ಕುಮಾರ್ ಪರ ಮತಚಲಾಯಿಸಲು ಜನ ಮನಸ್ಸು ಮಾಡಿದ್ದಾರೆ.
ಕಲ್ಯಾಣ ಯೋಜನೆಗಳು ಮತ್ತು ಮಹಿಳೆಯರ ಪರ ಕೆಲಸ
ಮಹಿಳೆಯರ ಮತಗಳನ್ನು ಗಳಿಸಲು ಸಹಾಯ ಮಾಡಿದ್ದು ನಿತೀಶ್ ಕುಮಾರ್ ಸರ್ಕಾರ ಜಾರಿಗೆ ತಂದ ಯೋಜನೆಗಳು. ಹೆಣ್ಣುಮಕ್ಕಳಿಗೆ ಉಚಿತ ಸೈಕಲ್ ಮತ್ತು ಸಮವಸ್ತ್ರ ವಿತರಣೆ, ಶಾಲಾ ಹಾಜರಾತಿಗಾಗಿ ಪ್ರೋತ್ಸಾಹ ಧನ, ಮಹಿಳಾ ಸ್ವಸಹಾಯ ಸಂಘಗಳ ಮೂಲಕ ಮಹಿಳೆಯರಿಗೆ ನೆರವು ಹೀಗೆ ಅನೇಕ ಯೋಜನೆಗಳು ಎನ್‌ಡಿಎ ಗೆಲುವಿಗೆ ನೆರವಾಗಿವೆ.
ರಾಜಕೀಯ ಮೈತ್ರಿಗಳ ನಿರ್ವಹಣೆ
ನಿತೀಶ್ ಕುಮಾರ್ ಅವರ ದೊಡ್ಡ ಆಸ್ತಿ ಎಂದರೆ ಮೈತ್ರಿಗಳನ್ನು ರೂಪಿಸುವ ಮತ್ತು ತ್ಯಜಿಸುವ ವಿಷಯದಲ್ಲಿ ಅವರು ಎಷ್ಟು ಪ್ರಾಯೋಗಿಕರಾಗಿದ್ದಾರೆ ಎಂಬುದು. ನಿತೀಶ್ ಈ ಹಿಂದೆ ಬಿಜೆಪಿ ತೊರೆದು ಆರ್‌ಜೆಡಿ ನೇತೃತ್ವದ ಮಹಾಘಟಬಂಧನ್‌ಗೆ ಸೇರಿದ್ದರು. ನಂತರ ಮತ್ತೆ ಬಿಜೆಪಿ ಸೇರಿಕೊಂಡಿದ್ದರು. ನಿತೀಶ್ ಪ್ರತೀ ಬಾರಿ ಪಕ್ಷ ಬದಲಾಯಿಸಿದಾಗಲೂ ಬಿಹಾರ ರಾಜಕೀಯದಲ್ಲಿ ಹೊಸ ಗಾಳಿ ಬೀಸಿತ್ತು. ಇದರಿಂದಾಗಿ ಚುನಾವಣೆಯಲ್ಲಿ ಹಿನ್ನೆಡೆಯಾಗುವುದೂ ತಪ್ಪಿತ್ತು.
ಜಾತಿ ಸಮೀಕರಣದ ಲೆಕ್ಕಾಚಾರ
ಬಿಹಾರದಲ್ಲಿ ಜಾತಿ ಸಮೀಕರಣದೊಂದಿಗೆ ವ್ಯವಹರಿಸುವುದನ್ನು ನಿತೀಶ್ ಕುಮಾರ್ ಅರಿತಿದ್ದಾರೆ ಐತಿಹಾಸಿಕ ಕುರ್ಮಿ-ಕೋರಿ-ಯಾದವ್ ಹೊಂದಾಣಿಕೆಗಳಿಂದ ಹಿಡಿದು ಅವರ ಪ್ರಸ್ತುತ ಬೆಂಬಲಕ್ಕೆ ಆಧಾರವಾಗಿರುವ ಆಧುನಿಕ ಒಬಿಸಿ-ಇಬಿಸಿ-ಮೇಲ್ಜಾತಿಯ ಸಮೀಕರಣದವರೆಗೆ ರಾಜ್ಯದಲ್ಲಿ ಹುಟ್ಟಿಕೊಳ್ಳುತ್ತಿರುವ ಸಾಮಾಜಿಕ ಒಕ್ಕೂಟಗಳಿಗೆ ಅನುಗುಣವಾಗಿ ಅವರು ನಿರಂತರವಾಗಿ ತನ್ನ ಸ್ಥಾನವನ್ನು ಬದಲಾಯಿಸಿಕೊಂಡಿದ್ದಾರೆ.
‘ಜಂಗಲ್‌ರಾಜ್’ ಬಗ್ಗೆ ಮಾತು
ಆರ್‌ಜೆಡಿ ಆಡಳಿತದಲ್ಲಿ ‘ಜಂಗಲ್ ರಾಜ್ ಎಂದೇ ಕುಖ್ಯಾತಿ ಪಡೆದಿದ್ದ ಬಿಹಾರವನ್ನು ಮುಖ್ಯಮಂತ್ರಿ ನಿತೀಶ್ ಕುಮಾರ್ ಅಭಿವೃದ್ಧಿ ಪಥದತ್ತ ತರುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನುವುದನ್ನು ಜನರಲ್ಲಿ ಅಚ್ಚಳಿಯದೆ ಉಳಿಯುವಂತೆ ಮಾಡಿದ್ದೂ ಚುನಾವಣೆಯಲ್ಲಿ ಗೆಲ್ಲಲು ಸಹಾಯ ಮಾಡಿದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.